ಲೋಕನೀತಿಯ ಮೀರಿ
ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ?
ಮೂಕನೋವನು ಸಹಿಸಿ
ನಗೆನಟಿಸಿ ಮಾಡಿಕೋ ಕಲ್ಲೆದೆ
ಎಂಥ ಬೆಂಕಿಯೆ ಪ್ರೀತಿ
ನುಂಗಿ ತಾಳುವ ನೀತಿ
ಚುಚ್ಚುನುಡಿ ಇರಿನೋಟ ಮೂದಲೆ,
ಕರುಣೆಯೇ ಇರದೇನೊ
ಕರಿಯುವುದೆ ಗುರಿಯೇನೊ
ಕಾಯುತಿದೆ ಉರಿ ಎಣ್ಣೆ ಬಾಣಲೆ!
ಯಾರನೂ ನೋಯಿಸದೆ
ಏನನೂ ಆಶಿಸದೆ
ಜೀವಭಾವಕೆ ಬಾಗಿದುದಕೆ
ತಮ್ಮದೇ ಹೆಸರಿಟ್ಟು
ತಮ್ಮ ಕಲ್ಪನೆ ಕೊಟ್ಟು
ಕೊಲ್ಲುವರು ಜೀವ ಇರುವಂತೆಯೇ!
ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ?
ತನಗೆ ತಾನೇ ತಾಯಿ, ತನಗೆ ತಾನೇ ತಂದೆ ಅಲ್ಲದೆ?
*****
ಪುಸ್ತಕ: ನಿನಗಾಗೇ ಈ ಹಾಡುಗಳು