“ವಾರಿಧಿಯ ತೆರೆಗಳನು ತಬ್ಬಿ ಚುಂಬಿಸಿದ ರವಿ.
ಇರುಳು ಬರೆ ಪೆರೆಯ ದೌತ್ಯದಿ ತನ್ನ ಸಂದೇಶ-
ವರುಹಿದನು ಸಂತಸದೊಳುಬ್ಬೆ ಸಾಗರದೆದೆಯು.
ಮಾರನೆಯ ದಿನ ಸೂರ್ಯ ಪ್ರಿಯೆಗೆ ಹೊಂಗಿರಣಗಳ
ಸೀರೆಯುಡಿಸುತ ನಲಿದ. ತೆರೆಗೊಂದು ರವಿಯಾಗಿ
ನೀರ ಕೇಳಿಯನಾಡಿ ಸುಖಿಸಿ ತೂರಾಡಿದನು.
ಬಾರಿಬಾರಿಗು ತನ್ನ ಕಾದಲೆಯ ಮುತ್ತುಗಳ
ಧಾರೆಯಿಂ ಕೆಂಪಾಗಿ, ಸಂಜೆ ಬರೆ, ಅಗಲಿದನು.
ಇತ್ತ ಪೊರೆಯೇರುತಿರೆ ಪ್ರಿಯತನುನ ಸಂಗದಿಂ,
ಚಿಂತಿಸುತಲಾತನನೆ, ಆವಿಯಭಿಸಾರಿಕೆಯು
ಮುಂತ ಕಾಣದೆ ನಭದಿ, ಗಾಳಿಗೂ ಅದುರುತ್ತ,
ಸುತ್ತುತ ನಿರಾಶೆಯಿಂ, ದುಗುಡದಿಂ ಕಪ್ಪಾಗಿ
ಅತ್ತು ಕಣ್ಣೀರ ನೆರೆ ಸುರಿಸುತಿರೆ, ತೊಯ್ದಿತಿಳೆಯು”
ಎಂಬವೊಲು ಮೊದಲಾಯ್ತು ತಿರೆಯೊಳೆಲ್ಲೆಡೆಯು ಮಳೆಯು!
*****

















