ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ
ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ
ಶಿಲುಬೆಗೇರುವ ಯಾತನಾ ಶಿಬಿರ
ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ
ಗೊಲ್ಲತಿಯರ ಹೆಣ್ಣು ಸಂವೇದನೆಗಳು
ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು
ಮನೆಯಲ್ಲಿ ಹಾವು ಚೇಳು ಬರುವವಂತೆ.
ಗೊಲ್ಲರ ಹಟ್ಟಿಯಲಿ ಸೂತಕದ ಮನೆ
ನಾಗರೀಕ ಲೋಕದ ನಿರ್ಲಜ್ಜತೆಗೆ ಪ್ರತೀಕ
ಸರ್ಕಾರವೂ ಕಟ್ಟಿಸಿದೆ ಸೂತಕದ ಮನೆಗಳು
ಹುಲ್ಲ ಗುಡಿಸಲು ಬದಲಿಗೆ ಇಟ್ಟಿಗೆ ಗಾರೆ
ನೀರಿಲ್ಲ, ಬೆಳಕಿಲ್ಲ, ಕಿಟಕಿ, ಬಾಗಿಲುಗಳಿಲ್ಲ
ಶೌಚಾಲಯಗಳೂ ಇಲ್ಲದ ಗೂಡು
ಎದ್ದು ನಿಂತವು ಊರಾಚೆ ಕೃಷ್ಣಕುಟೀರಗಳು
ಮೌಡ್ಯದ ಆಚರಣೆಗೆ ಕೊನೆಯೇ ಇಲ್ಲವೇ?
ಗೊಲ್ಲರ ಹಟ್ಟಿಯ ಆ ಹೆಣ್ಣು
ಗೊಡ್ಡು ಸಂಪ್ರದಾಯ, ಕಟ್ಟಳೆಗೆ ತಲೆಬಾಗಿ
ಹಿರಿಯರ ಮಾತಿಗೆ ಬೆಲೆ ಕೊಟ್ಟು
ಮಳೆ, ಚಳಿ, ಗಾಳಿ, ಬಿಸಿಲು, ಕಾಡುಪ್ರಾಣಿ
ಹುತ್ತ – ಹಾವಿನ ಹರಿದಾಟ ಸರಪರ
ಇನ್ನೆಷ್ಟು ದಿನ ಸಹಿಸಬೇಕಿದೆಯೋ
ಅನಿಷ್ಟಗಳ ಅಳಿಸುವ ಸಂತರ ಆಗಮನಕ್ಕೆ
ಇನ್ನೆಷ್ಟು ದಿನ ಕಾಯಬೇಕಾಗಿದೆಯೋ ಅವಳು ?
ನೂರಾರು ಆವಿಷ್ಕಾರ, ವಿಜ್ಞಾನ, ಸಾಧನೆ
ಮೆಟ್ಟಿಲ್ಲ ಅವಳು ನಾಗರೀಕ ಮೆಟ್ಟಿಲು
ಮುಟ್ಟು, ಬಸಿರು, ಬಾಣಂತನಗಳ ಮಧ್ಯೆ
ಗೊಲ್ಲರ ಹಟ್ಟಿಯ ಹೆಣ್ಣಿನ ಬದುಕು
ಬೆಂಕಿಯಲಿ ನಲುಗುವ ಕಾಡ ಹೂಗಳು
ಅರಣ್ಯದ ಭಯಂಕರ ಪ್ರಾಣಿಗಳ ಮಧ್ಯೆ
ಕಾಡುಗೊಲ್ಲತಿಯರ ಅಘೋರಿ ವಾಸ.
ಆಗಲೇ ಹುಟ್ಟಿದ ಹಸಿ ಮಾಂಸದ ಮುದ್ದೆಗೆ
ಹೊಕ್ಕಳ ಬಳ್ಳಿಯನ್ನು ಕಚ್ಚಿ ಇಲಿ, ಬೆಕ್ಕು
ಜನರಿಲ್ಲ, ದೀಪವಿಲ್ಲ, ವಿಷಜಂತುಗಳ ಹರಿದಾಟ
ಕಾಡಿನ ಕ್ರೂರ ಮೃಗಗಳ ಘರ್ಜನೆ, ಸದ್ದು, ಸಪ್ಪಳ
ತಾಯಿ ಮಗುವಿನ ಮೌನ ರೋದನದ ಬಿಕ್ಕು
ಅರಿವಿನ ಸೂರ್ಯ ಗೊಲ್ಲರ ಗುಡಿಸಲಿಗೆ ಬರಲಿಲ್ಲ.
ಬೆಳೆದ ನಾಗರೀಕತೆ ಕಿವಿಗೆ ತಟ್ಟಲಿಲ್ಲ.
ದಿನ ದಿನದ ಹಿಂಸೆಗೆ ಕೊನೆ ಹೇಳಿ
ಗರ್ಭಕೋಶಕೇ ಕತ್ತರಿ ಹಾಕಿ ಗೊಲ್ಲತಿ
ಮೌಡ್ಯಕ್ಕೆ ಗರ್ಭವೇ ಬಲಿ
ಮುಟ್ಟಿನ ಕಟ್ಟು ಬಿಡಿಸಿಕೊಂಡಳು
ಮುಕ್ತಿ ಹಾಡಿದಳು ಕೃಷ್ಣ ಕುಟೀರಕೆ
ಮುಟ್ಟು ನಿಂತು ಹುಟ್ಟಿದ….
ಪಿಂಡಗಳಿಗೆ ಹಿಡಿ ಶಾಪ ಹಾಕುತ್ತ
ಕಳಂಕ ಕಳಚಿ ಯಾತನೆಗೆ ಕೊನೆ
‘ಹೆಣ್ಣು ಸಂತಾನವೇ ಪ್ರಾಪ್ತವಾಗದಿರಲಿ’
ಹಿಡಿ ಶಾಪ ಹಾಕಿದಳು ಮೌಡ್ಯಕ್ಕೆ
ಗರ್ಭವನ್ನೇ ಕಿತ್ತು ಬಿಸಾಕಿದಳು.
*****

















