ಸುಪ್ತಿಯೊಳು ಭವವಿಲ್ಲ ಸ್ವಪ್ನದೊಳು ಋತವಿಲ್ಲ
ಜಾಗರದಿ ಋತಜುಷ್ಟ ಭವವೇಳ್ವುದು
ಜಾಗರದಿ ರಸದತ್ತ ಕುಡಿವರಿವ ಭವದೊಳಗೆ
ಹಿಂಜರಿದು ಋತ ಸತ್ಯಕೆಡೆಗೊಡುವುದು
ಭಾವಾವಲಂಬಿಯೀ ಸತ್ಯವೆಂಬಿಹದ ಬೆಲೆ
ಸ್ವರ್ಗಾದಿ ಲೋಕಗಳಿಗದುವೆ ತಲವು
ಇಂದ್ರಾಗ್ನಿವರುಣರನು ದೇವರನು ಹೊರೆವುದದು
ಅದರಿನಪ್ಪುದು ನರಗೆ ಚೆಲುವಿನರಿವು
ಸತ್ಯ ರಸದುಪನಗರ, ಎದೆಯೆಲ್ಲ ಕಳೆಗಳೂ ಹೊಳೆವವಲ್ಲಿ
ರಸಪದದೊಳೋ ಬರಿಯ ನಲವಿಹುದು ತುಂಬಿನೊಳು ಸತ್ಯವನೆ ಚೆಲ್ಲಿ.
*****

















