-ಪಾಂಡವರ ರಾಜಸೂಯಯಾಗದಲ್ಲಿ ಭಾಗವಹಿಸಿದ್ದ ಕೌರವಪಕ್ಷವು ಅವರ ವೈಭವವನ್ನು ಕಂಡು ಕರುಬಿತ್ತು. ದುರ್ಯೋಧನನಾದರೋ ಮಯಸಭೆಯಲ್ಲಿ ತನಗಾದ ಅಪಮಾನವನ್ನು ನೆನೆಯುತ್ತ ಮನದಲ್ಲೇ ಕೊರಗುತ್ತಿದ್ದನು. ಅಲ್ಲದೆ ಯಾಗಾಂತ್ಯದಲ್ಲಿ ನೇರನುಡಿಗಳಲ್ಲಿ ಮಾತನಾಡಿದ ಶಿಶುಪಾಲನಿಗಾದ ಗತಿಯನ್ನೂ,ಕೃಷ್ಣನ ಕೃತ್ಯವನ್ನು ಸಮರ್ಥಿಸಿಕೊಂಡ ರಾಜರುಗಳನ್ನೂ ನೆನೆದು ಮೈಯಲ್ಲಿ ಉರಿಯೆದ್ದಿತ್ತು. ಇದನ್ನೆಲ್ಲ ಆಲೋಚಿಸುತ್ತ ಹೇಗಾದರೂ ಸರಿ ಅಪಮಾನಕ್ಕೆ ಮುಯ್ಯಿ ತೀರಿಸಲು ಪಾಂಡವರ ವೈಭವವನ್ನು ಸೂರೆಗೊಳ್ಳಲು ನಿರ್ಧರಿಸಿ ದುಶ್ಯಾಸನ, ಕರ್ಣ, ಸೈಂಧವ, ಶಕುನಿಯರೊಂದಿಗೆ ಮಂತ್ರಾಲೋಚನೆಯಲ್ಲಿ ತೊಡಗಿದನು-
ಪಾಂಡವರೇಳಿಗೆ ಸಹಿಸಲು ಆಗದೆ ದುರ್ಯೋಧನ ಚಡಪಡಿಸಿದನು
ದುಷ್ಟಚತುಷ್ಟಯದೊಂದಿಗೆ ಬೆರೆಯುತ ದುಷ್ಟಮಾರ್ಗವನ್ನು ಹುಡುಕಿದನು
ಮಂತ್ರಾಲೋಚನೆ ಸಭೆಯಲ್ಲಿ ಮೆಲ್ಲಗೆ ನುಡಿದನು ಮನಸಿನ ದುಗುಡವನು-
“ಏನೇ ಆಗಲಿ ಹರಿಸಲೇಬೇಕು ದಾಯಾದಿಯ ಐಶ್ವರ್ಯವನು
ಧನಮದದಿಂದಲಿ ಮೆರೆಯುತಲಿರುವ ಅವರ ಅಹಮ್ಮಿಗೆ ಕಡಿವಾಣ
ಹಾಕಿ ಅವರನ್ನು ತುಳಿಯಲೇಬೇಕು ಅಡಗಬೇಕವರ ಬಿನ್ನಾಣ
ಶಕ್ತಿಯೊಳವರನು ಜಯಿಸಲು ಆಗದು ಯುಕ್ತಿಯ ದಾರಿಯು ಯಾವುದಿದೆ?
ಸಪ್ತವ್ಯಸನಗಳ ಜಯಿಸಿದ ಅವರನು ಗೆಲ್ಲುವ ಮಾರ್ಗವು ದೊರೆಯುವುದೆ?”
ಎನ್ನಲು ಶಕನಿಯು ನುಡಿದ- “ಸುಯೋಧನ, ಧರ್ಮನಿಗಿದೆ ದ್ಯೂತದ ವ್ಯಸನ
ಅವನನು ದ್ಯೂತದಿ ತೊಡಗಿಸಿಕೊಂಡರೆ ಗೆಲ್ಲಬಹುದು ಅವರೆಲ್ಲ ಧನ
ಪಗಡೆಯ ಆಟದಿ ಅವನನು ಗೆಲ್ಲಲು ನನ್ನಲಿ ಒಳ್ಳೆಯ ದಾಳವಿವೆ
ದಾಳದ ಒಂದೆಡೆ ಆಂಚನು ಕೊರೆಯುತ ನಾನೇ ಅವುಗಳ ಮಾಡಿರುವೆ
ಹೇಳಿದ ಹಾಗೆಯೆ ಕೇಳುವ ಅವುಗಳು ಒಡ್ಡಿದ್ದೆಲ್ಲವ ಗೆಲ್ಲುವುವು
ಪಾಂಡವ ವೈಭವವೆಲ್ಲವನವುಗಳು ಪಾತಾಳದ ಕಡೆ ತಳ್ಳುವುವು”
ಕರ್ಣನು ನುಡಿದನು- “ಮೋಸದ ಆಟದಿ ದಾಯಾದಿಗಳನ್ನು ಗೆಲ್ಲುವುದೆ?
ಬೇರೇನಾದರೂ ಮಾರ್ಗವ ಹೇಳಿರಿ, ನನ್ನ ಮನಸ್ಸಿಗೆ ಒಪ್ಪದಿದೆ
ಅಧರ್ಮವೆಂದೂ ಅನೀತಿ ಮಾರ್ಗಕೆ ತಳ್ಳಿ ನಮ್ಮನ್ನು ಕೆಡಿಸುವುದು
ಧರ್ಮಮಾರ್ಗದಲಿ ನಡೆದದ್ದಾದರೆ ಕೈಹಿಡಿದೆಮ್ಮನು ನಡೆಸುವುದು”
ಕುರುಪತಿ ಹೇಳಿದ- “ಮಿತ್ರನೆ ಆಲಿಸು, ಗೆಲ್ಲಲು ಆಗದು ಶಕ್ತಿಯಲಿ
ಸಿರಿಮದದಿಂದಲಿ ಮೆರೆಯುತಲಿರುವರು, ಗೆಲ್ಲುವ ಅವರನ್ನು ಯುಕ್ತಿಯಲಿ
ಅಲ್ಲದೆ ದ್ರೌಪದಿ ನನ್ನನು ಛೇಡಿಸಿ ನಕ್ಕಳು ಭೀಮನ ಜೊತೆಯಲ್ಲಿ
ಅವಳಿಗೆ ಪಾಠವ ಕಲಿಸಲೇಬೇಕು ಸಹಕರಿಸೆಮ್ಮೊಡನೀಗಿಲ್ಲಿ”
ಒಡೆಯನ ಮನಸಿನ ಕಹಿಯನು ಗಮನಿಸಿ ಕರ್ಣನು ಮೆತ್ತಗೆ ಹೀಗೆಂದ-
“ಆದರೆ, ಹಿರಿಯರು ಹಲವರು ಇರುವರು ಒಪ್ಪಿಗೆ ಸಿಗುವುದೆ ಅವರಿಂದ?
ಹಿರಿಯರ ಒಪ್ಪಿಗೆ ಸಿಕ್ಕುವುದಾದರೆ ನಡೆಯಲಿ ಎಲ್ಲರ ಎದುರಲ್ಲಿ
ಆದರೆ ಮೋಸವು ಸೇಡಿನ ಮರಿಗಳ ಹೆರುವುದು ಮುಂದಕೆ ನೆನಪಿರಲಿ”
ದಾಯಾದಿಗಳಲಿ ಮತ್ಸರವೆಂಬುದು ಆದಿಯಿಂದಲೂ ಇದ್ದದ್ದೇ
ಮಾಯೆಯ ತೆರದಲಿ ಮೋಹಿಸುತಿರುವುದು ಎಲ್ಲರು ಎದ್ದೂಬಿದ್ದದ್ದೆ
ದಾಯಾದಿ ಮತ್ಸರ ಪೋಷಿಸಿ ಬೆಳೆಸುವ ಮಂದಿಯು ಇದ್ದರು ಮೊದಲಿಂದ
ದಯೆ, ದಾಕ್ಷಿಣ್ಯಗಳಿಲ್ಲದೆ ಕಾಟವ ನೀಡಿದ್ದರು ನಿರ್ದಯದಿಂದ
ಶಕುನಿಯು ಹೇಳಿದ- “ಕೇಳು ಸುಯೋಧನ, ಮೊದಲಿಗೆ ತಂದೆಯ ಒಪ್ಪಿಸಿಕೋ
ಮನಸಿನ ದುಗುಡವನವನಿಗೆ ತಿಳಿಸುತ ಮಾತಿಗೆ ಸಿಕ್ಕದೆ ತಪ್ಪಿಸಿಕೋ
ದುಗುಡವ ತಣಿಸಲು ತಪ್ಪದೆ ತಂದೆಯು ಮನದಲಿ ನಿಶ್ಚಯ ತಾಳುವನು
ಹೇಳಿದ ಹಾಗೆಯೆ ಚಾಚೂ ತಪ್ಪದೆ ನಿನ್ನಯ ಮಾತನು ಕೇಳುವನು”
ಶಕುನಿಯ ಮಾತಲಿ ನಂಬಿಕೆಯಿರಿಸಿದ ದುರ್ಯೋಧನನೂ ಮುನ್ನಡೆದ
ತಂದೆಯ ಮಂದಿರದಲ್ಲಿಯೆ ಅವನನು ಸಂಧಿಸಿ ದುಗುಡವ ಪಿಸುನುಡಿದ
“ತಂದೆಯೆ, ಜೀವನ ದುಸ್ತರವಾಗಿದೆ ಬದುಕೇ ಬೇಡೆನಿಸುತ್ತಲಿದೆ
ಪಾಂಡವರೇಳಿಗೆ ಸಹಿಸಲು ಆಗದು ಒಡಲಲಿ ಬೆಂಕಿಯು ಉರಿಯುತ್ತಿದೆ
ಮಯಸಭೆಯಲ್ಲಿನ ಅಪಮಾನದ ಕಿಡಿ ನನ್ನ ಮನಸ್ಸನ್ನು ದಹಿಸುತಿದೆ
ಬದುಕುವ ಆಸೆಯು ದೂರಕೆ ಸರಿಯುತ ದೇಹವು ಸಾವನು ಬಯಸುತಿದೆ
ಅಪ್ಪಣೆ ಕೊಟ್ಟರೆ ಇಂದೇ ಈಗಲೆ ಅಗ್ನಿಪ್ರವೇಶವ ಮಾಡುವೆನು
ಕುದಿಯುತಲಿರುವ ದೇಹ-ಮನಸ್ಸಿಗೆ ಕೂಡಲೆ ಮುಕ್ತಿಯ ನೀಡುವೆನು”
ಪ್ರೀತಿಯ ಪುತ್ರನ ಮಾತನು ಆಲಿಸಿ ಧೃತರಾಷ್ಟ್ರನ ಮನ ಕಳವಳಿಸಿ
ಹೇಳಿದ- “ಮಗನೇ! ಒಳಿತನು ನುಡಿಯೈ, ಸಾವಿನ ಮಾತನು ಬದಿಗಿರಿಸಿ
ಕಣ್ಣುಗಳಿಲ್ಲದ ಕುರುಡನ ಬದುಕಿಗೆ ಕಣ್ಣಾಗಿರು ನೀ ಎಂದೆಂದೂ
ನನ್ನೀ ಕತ್ತಲೆ ಬಾಳಿಗೆ ನಿತ್ಯವೂ ಬೆಳಕಾಗಿರು ಬಾ ನೀನೆಂದೂ
ನಿನ್ನ ಮನಸ್ಸಿಗೆ ನೋವುಂಟಾದರೆ ನನ್ನ ಮನಸ್ಸಿಗೆ ಹಿತವೇನು?
ನೀನಿಲ್ಲದ ಮೇಲೇನಿದೆ? ಲೋಕದೊಳೇನಿದ್ದರೆ ತಾನೇ ಏನು?
ಏನನು ಮಾಡಲಿ ಹೇಳೆಲೆ ಮಗನೇ, ನನ್ನಯ ಜೀವವು ನೀನೇನೆ
ನಿನಗೊಳಿತಾಗುವುದಾದರೆ ತಿಳಿಸಿರು, ನಡೆಸಿಕೊಡುವೆ ನಾ ನನ್ನಾಣೆ”
ತಂದೆಯ ದೈನ್ಯದ ಮಾತನು ಕೇಳಿದ ದುರ್ಯೋಧನ ತಾ ಹೀಗೆಂದ-
“ತಾಂಡವವಾಡುವ ಪಾಂಡವ ಸಿರಿಯನು ಲೀಲಾಜಾಲದಿ ಅವರಿಂದ
ಕೈವಶಗೈಯಲು ಜೂಜನು ಆಡಲು ಅನುಮತಿ ಬೇಕಿದೆ ನಿನ್ನಿಂದ
ಮನದಪಮಾನದ ಬೆಂಕಿಯ ತಣಿಸುವೆ, ಆಗಲೆ ಮನಸಿಗೆ ಆನಂದ
ಇಲ್ಲದೆ ಹೋದರೆ ಸಾವಿಗೆ ಅಂಜೆನು ಹೇಳಿದ ಹಾಗೆಯೆ ಮಾಡುವೆನು
ನೋವಿನ ಮನಸಿಗೆ ನೆಮ್ಮದಿ ನೀಡಲು ಸಾವಿನ ಮನೆಯೆಡೆ ನಡೆಯುವೆನು”
ಧೃತರಾಷ್ಟ್ರನು ಬಲು ಯೋಚನೆ ಮಾಡುತ ಒಪ್ಪಿಗೆಯಿತ್ತನು ದುಗುಡದಲಿ
ಮಗನ ಮನಸ್ಸಿಗೆ ಹಿತವನು ಮಾಡಲು ಬಲವಂತದ ಒಣ ಮನಸಿನಲಿ
ಪಾಂಡವರಲಿ ಅನುಕಂಪವು ಇರುವುದು ತಂದೆಯಿರದ ತಬ್ಬಲಿಯೆಂದು
ಕೊಟ್ಟಿದ್ದನ್ನೇ ಪಡೆದು ಏಳಿಗೆಯ ಹೊಂದಿದಂಥ ಗುಣದವರೆಂದು
ತಮ್ಮನ ಮಕ್ಕಳು ತನಗೂ ಮಕ್ಕಳೆ ಎಂದೆನಿಸುತ್ತದೆ ಒಮ್ಮೊಮ್ಮೆ
ಆದರೂ ಅವರ ವೈಭವ ಬದುಕೂ ಕಣ್ಣು ಕುಕ್ಕುವುದು ಮತ್ತೊಮ್ಮೆ
ಮಗನ ಬೇಡಿಕೆಯ ಈಡೇರಿಸುವುದು ತಂದೆಯಾದೆನ್ನ ಕರ್ತವ್ಯ
ಇಲ್ಲದೆಹೋದರೆ ದುರ್ಯೋಧನನಿಗೆ ಇಲ್ಲದಾಗುವುದು ಭವಿತವ್
ಮನಸಿನಲ್ಲಿಯೇ ಚಿಂತನೆ ಮಾಡುತ ಜೂಜಿಗೆ ಅನುಮತಿ ನೀಡಿದನು
ದುಡುಕಿ ದುರಾಸೆಯ ಮಾರ್ಗದಿ ನಡೆಯದಿರೆನ್ನುತ ಮಗನಿಗೆ ಹೇಳಿದನು
ದುರ್ಯೋಧನನೋ ಹಿಗ್ಗುತ ನಡೆದನು ದುಷ್ಟಚತುಷ್ಟಯ ಕೂಟದೆಡೆ
ಮಂತ್ರಾಲೋಚನೆ ಮಾಡಲು ತನ್ನಯ ಹಿತಚಿಂತಕರಿಹ ತಾಣದೆಡೆ!
ಧೃತರಾಷ್ಟ್ರನ ಮನ ಕಳವಳಗೊಂಡಿತು ನುಡಿದನು ತನ್ನಯ ಮಡದಿಯಲಿ-
“ಎಂಥ ಅನಾಹುತವಾಗುವುದೋ ನಾನರಿಯೆನು ಮುಂದಿನ ದಿನಗಳಲಿ
ಮನದಲಿ ಕೇಡಿನ ವಾಸನೆ ಸುಳಿವುದು ಮಾರ್ಗವು ಏಕೋ ಕಾಣದಿದೆ
ಜೂಜಿನ ಜಾಲಕೆ ಮಕ್ಕಳ ಸಿಲುಕಿಸೆ ಮನವೇಕೋ ಹಿಂಜರಿಯುತಿದೆ
ಅನ್ಯಮಾರ್ಗ ಇನ್ನಾವುದು ಇದ್ದಿತು? ನಿನ್ನ ಮನಕೆ ತೋರುವುದೇನು?
ಅರ್ಧಾಂಗಿಯು ನೀನನ್ನ ಮನಸ್ಸಿನ ದುಗುಡವ ಪರಿಹರಿಸುವೆಯೇನು?”
ಗಾಂಧಾರಿಯು ತಡಮಾಡದೆ ನುಡಿದಳು- “ದುಷ್ಕಾರ್ಯಕೆ ಕೈ ಹಾಕಿರುವೆ
ಹಿಂದು-ಮುಂದುಗಳ ಯೋಚನೆ ಮಾಡದೆ ಜೂಜಿಗೆ ಒಪ್ಪಿಗೆ ನೀಡಿರುವೆ
ಕುಂತಿಯ ಮಕ್ಕಳ ಚಿಂತೆಯ ತೊರೆಯುತ ನಿನ್ನ ಮಕ್ಕಳಿಗೆ ಸಹಕರಿಸು
ಮುಂದೇನಾದರೂ ಆಗುವುದಿದ್ದರೆ ಯೋಚಿಸಿ ಹೆಜ್ಜೆಯ ನೀನಿರಿಸು”
ಗಾಂಧಾರಿಗೂ ಮಗನ ವರ್ತನೆ ಏಕೋ ವಿಚಿತ್ರವಾಗಿದೆ ಎನಿಸಿತ್ತು
ದಾರಿತಪ್ಪಿ ಅನಾಹುತ ಮಾಡುವನೇನೋ ಎಂಬುವ ಅಳುಕಿತ್ತು!
ಧೃತರಾಷ್ಟ್ರನು ಸತಿಯೊಂದಿಗೆ ನುಡಿದನು- “ಆದದ್ದಾಗಲಿ ಎದುರಿಸುವೆ
ಸುತನಿಗೆ ಹಿತವನು ಬಯಸುವೆನೆಂದೂ ಹಿಂದಡಿಯಿಡದೆಲೆ ನಡೆಯಿಸುವೆ
ಸಮಸ್ತ ರಾಜರ ಎದುರಲಿ ನಡೆಯಲಿ, ಪಗಡೆಯಾಟ ಅರಮನೆಯಲ್ಲಿ
ಮೋಸದ ವಾಸನೆ ಸುಳಿಯದ ತೆರದಲಿ ಒಪ್ಪಬೇಕು ಹಿರಿಯರು ಅಲ್ಲಿ”
ಎಲ್ಲೂ ಇಲ್ಲದ ಬುದ್ಧಿಯು ಬರುವುದು ವಿನಾಶ ಕಾಲಕೆ ವಿಪರೀತ
ಅಲ್ಲೇ ಮನಸಿಗೆ ಮಂಪರು ಕವಿವುದು ಅದುವೇ ಅಲ್ಲವೆ ವಿಧಿಯಾಟ!
ಎಲ್ಲಾ ಕಾಲಕೆ ಸುಳ್ಳೇ ನಿಲ್ಲದು ಸುಳ್ಳು ನಿಧಾನಕೆ ಅಳಿಯುವುದು
ಒಳ್ಳೆಯತನದೆದುರೆಲ್ಲವು ಅಳಿವುದು, ಒಳ್ಳೆಯತನವೇ ಉಳಿಯುವುದು
ಮರುದಿನ ಮತ್ತೆ ಕುಮಾರನು ಬಂದನು ಪ್ರೀತಿಯ ತಂದೆಯ ಅರಮನೆಗೆ
ಆದರದಿಂದಲಿ ವಂದನೆ ಹೇಳಿದ, ತೋರ್ಪಡಿಸುತ್ತಲಿ ಕೃತಕ ನಗೆ
ಹೇಳಿದ- “ತಂದೆಯೆ, ಸಕಲ ವ್ಯವಸ್ಥೆಯ ಮಾಡಿರುವೆನು ಅರಮನೆಯೊಳಗೆ
ವಿದುರನ ಕಳುಹಿಸಿ ಅವರನು ಕರೆಯಿಸು” ಬೇಡಿಕೆಯಿಟ್ಟನು ಮರುಘಳಿಗೆ!
ಮಗನ ಮನಸ್ಸಿನ ಉತ್ಸಾಹವನ್ನು ಕಂಡು ಆಶ್ಚರ್ಯ ರಾಜನಿಗೆ
ನಡೆಯಬಾರದುದು ಏನೋ ನಡೆವುದು ಅನ್ನಿಸಿತ್ತು ಮನದೊಳಗೊಳಗೆ
ಅಂತಹುದೇನೂ ನಡೆಯದೇ ಇರಲಿ, ಎಂದು ಆಶಿಸುತ ಮನದಲ್ಲಿ
ವಿದುರನನ್ನು ಬರಹೇಳಿದ ಕೂಡಲೆ ಕಾಣಲೆನ್ನ ಮಂದಿರದಲ್ಲಿ!
ವಿದುರನು ರಾಜನ ಬಳಿಯಲಿ ಬಂದವ ವಿಷಯದ ಮರ್ಮವ ಮನಗಂಡು
‘ಜೂಜಿನ ಮೋಜಿಗೆ ಮನಗೊಡಬೇಡ’ ಹಿತವನು ನುಡಿದನು ಭಯಗೊಂಡು
ವಿದುರನು ಮತ್ತೂ ಹೇಳಿದ- “ರಾಜನೆ, ನಿನ್ನ ಮಗನನ್ನು ನಿಯಂತ್ರಿಸು
ದುಷ್ಟಕೂಟದಲಿ ಬೆರೆತು ಕೆಟ್ಟಿರುವ ಅವನನು ದಾರಿಗೆ ನೀ ಬರಿಸು
ಶಕುನಿಯ ಮಾತನು ಕೇಳಿ ಕೆಡದಂತೆ ಅವನಿಗೆ ಬುದ್ಧಿಯ ನೀ ಹೇಳು
ಇಲ್ಲದೆ ಹೋದರೆ ಎಲ್ಲಾ ಕೆಡುವುದು ಒಳ್ಳೆಯ ನಿರ್ಧಾರವ ತಾಳು
ಜೂಜನಾಡುವುದು ಮೋಜು ಮಾಡುವುದು ರಾಜರಲ್ಲಿರುವ ಕೆಟ್ಟ ಚಟ
ವ್ಯಸನವಾದಾಗ ನಾಶವಾಗುವುದು, ಎಲ್ಲ ಕಾಲದಲ್ಲಿ ಇದುವೇ ದಿಟ”
ವಿದುರನ ಮಾತುಗಳೊಂದೂ ರಾಜನ ಹೃದಯದ ಆಳಕೆ ತಲುಪಿಲ್ಲ
ಧೃತರಾಷ್ಟ್ರನ ಅತಿ ಕುರುಡು ಪ್ರೇಮಕ್ಕೆ ಕೊನೆಮೊದಲೆಂಬುದು ಇರಲಿಲ್ಲ!
ಧೃತರಾಷ್ಟ್ರನು ಬಲು ವಿನಯದಿ ಹೇಳಿದ- “ಮಾತು ಕೊಟ್ಟಿರುವೆ ಪುತ್ರನಿಗೆ
ಕೊಟ್ಟ ವಚನಕ್ಕೆ ಕಟ್ಟುಬಿದ್ದಿರುವ ಬೇರೆಯ ದಾರಿಯು ಇಲ್ಲೆನಗೆ
ಪಾಂಡುಕುಮಾರರು ರಾಜಸೂಯದಲಿ ಗೌರವ ಕೊಟ್ಟರು ಎಲ್ಲರಿಗೆ
ಬೇರೆಯೆ ಅವರುಗಳೆಲ್ಲರು ಒಂದೇ, ಭೇದ-ಭಾವಗಳು ಬೇಡೆಮಗೆ
ಕೌರವರಾಯನ ಆತಿಥ್ಯವನ್ನು ಸ್ವೀಕರಿಸಲು ಕರೆ ಅವರನ್ನು
ನಡುವೆ ವಿನೋದಕೆ ನಡೆಯಲಿ, ಸವಿಯಲಿ ಜೂಜಾಟದ ಸಂಭ್ರಮವನ್ನು
ನನ್ನ ವಿನಂತಿಯ ಈಗಲೆ ನಡೆಯಿಸು, ಕರೆದುತಂದು ಪಾಂಡವರನ್ನು
ಅವರಿಗೆ ಏನೂ ಆಗದ ತೆರದಲಿ ಕಾದುಕೊಳುವೆ ನಾನವರನ್ನು”
ಕಟ್ಟುನಿಟ್ಟು ಆದೇಶವನಲ್ಲಿಯೆ ಆಗಲೆ ಜಾರಿಯ ಮಾಡಿದನು
ವಿದುರನು ಏನೂ ಹೇಳಲು ತೋಚದೆ ಮನದಲ್ಲಿಯೆ ಪೇಚಾಡಿದನು!
ರಾಜನ ಆಜ್ಞೆಯ ಪಾಲಿಸಬೇಕಿದೆ ಎಂಬುದು ಮನಸಿಗೆ ಬಂದಿರಲು
ವಿದುರನು ಹೊರಟನು ಇಂದ್ರಪ್ರಸ್ಥಕೆ ಕುಂತಿಸೂನುಗಳ ಕರೆತರಲು
ಧರ್ಮನ ಸಂಧಿಸಿ ಚಾಚೂ ತಪ್ಪದೆ ತಿಳಿಸುತ ಕೂಡಲೆ ಎಲ್ಲವನು
ರಾಜಾತಿಥ್ಯಕೆ ಎಲ್ಲರ ಕರೆದನು ರಾಜನೀತಿಯನು ಬಲ್ಲವನು
ಜೂಜಿನ ವಿಷಯದ ಪ್ರಸ್ತಾಪವನೂ ತಪ್ಪದೆ ಮಾಡಿದ ಧರ್ಮನಲಿ
ಜೂಜಾಡುವ ಚಟ ಧರ್ಮನಿಗಿದ್ದಿತು ಸಂತಸವಾಯಿತು ಮನಸಿನಲಿ
ಜೂಜಿನ ಕ್ರೀಡೆಗೆ ಕರೆದರೆ ಹೋಗದೆ ಹೇಡಿಗಳಂದದಿ ಹೆದರುವುದೆ?
ಒಲ್ಲೆನು ಎಂದರೆ ಬಲ್ಲವರಿರುವ ಆರ್ಯಧರ್ಮವದು ಒಪ್ಪುವುದೆ?
ಧರ್ಮಜ ಕೂಡಲೆ ಒಪ್ಪಿಗೆ ನೀಡಿದ ತಮ್ಮಂದಿರ ಜೊತೆ ಮಾತಾಡಿ
‘ದ್ರೌಪದಿಯೊಂದಿಗೆ ಎಲ್ಲರು ಹೋಗುವ’ ಎಂದನು ಮನವಿಗೆ ಬೆಲೆ ನೀಡಿ
ವಿದುರನ ಮನ್ನಿಸಿ ‘ಮುಂದಿನ ವಾರವೆ ಬರುವೆವು’ ಎಂದನು ವಿನಯದಲಿ
ಹಸ್ತಿನಪುರವನು, ಎಲ್ಲ ಹಿರಿಯರನು ಮತ್ತೂ ಕಾಣುವ ತವಕದಲಿ!
*****