ಹರಿದಿದೆ ನೋಡಿ ಕನ್ನಡ ರಥವು
ಅಮೇರಿಕಾ ಕಡೆಗೆ
ಕಾಣದಾಗಿವೆ ಕಪ್ಪು ದೇಶಗಳು
ಪೊರೆ ಬಂದಿದೆ ಕಣ್ಗೆ! || ಪ ||
ನಮ್ಮಲಿ ಏಳು ಜ್ಞಾನಪೀಠಗಳು
ಕನ್ನಡಕೇನು ಬರ?
ಕವಿತೆಯೆ ಸಾಕು ಇನ್ನೇನು ಬೇಕು
ಕನ್ನಡವು ಅಮರ!
ಹೃದಯವು ಕನ್ನಡ ಮನಸು ಸಂಸ್ಕ ತ
ನಾವು ಕಲಿತ ಪಾಠ
ಇಂತಹ ರಕ್ತಕೆ ತರುವುದೆ ಮುಜುಗರ
ಇಂಗ್ಲೀಷಿನ ಕೂಟ!
ಝಣಝಣಝಣ ಡಾಲರ್ರಿನ ತಾಳಕೆ
ಕುಣಿದಿದೆ ಕನ್ನಡವು
ಸಂಸ್ಕ ತಿ ಚರಿತೆ ಎಲ್ಲವು ಬಿಕರಿಗೆ
ಮುನ್ನಡೆದಿದೆ ಜಗವು!
ಕನ್ನಡ ಕಾಯುವ ಭಟರಿಗೆ ಕೊರತೆಯೆ
ಬೀದಿ ಬದಿಯ ಫ್ಲೆಕ್ಸುಗಳಲ್ಲಿ
ಆದರೂ ಕನ್ನಡ ಉಳಿದೇ ಉಳಿವುದು
ಮುಂದಿನ ಸಂಶೋಧನೆಗಳಲಿ!
*****