ನನ್ನ ಕಾದಲಳಿವಳು ನಿತ್ಯವಿಹಳೆನ್ನ ಸೂರ್‍ಯ
ಅವಳನ್ನು ಸುತ್ತುತಿಹ, ನುತಿಸುತಿಹ ಪೃಥ್ವಿ ನಾನು!
ನನ್ನ ಮನದನ್ನೆ ಕಲ್ಪದ್ರುಮದ ದಿವ್ಯ ಕುಸುಮ,
ದೇವನಿಂದವಳನ್ನು ವಡದ ನೇಹಿಗ ನಾನು!
ನಲ್ಲೆಯಿವಳೆನ್ನ ಕಣ್ಮನವ ತುಂಬಿರುವ ಬೆಳಕು,
ಅವಳ ಕಾಂತಿಯನಿಳೆಗೆ ಬಿಂಬಿಸುವ ಚಂದ್ರ ನಾನು !
ಅಹುದವಳು ದೇವನೊಡನುಡಿವ ಇಡಿಯಾದ ವಾಣಿ,
ಅದರ ಸಂದೇಶವನು ಬೀರ್‍ವ ಮಾರುತ ನಾನು !
ನನ್ನವಳು ಸೌಂದರ್ಯದನನುಕರಣಿಯ ಮೂರ್‍ತಿ,
ಅವಳ ನಲುಮೆಯ ವಡೆದ ಚಿರಮುಕ್ತ ಭಕ್ತ ನಾನು!
ಅವಳ ಕರುಣೆಯಲಿಹುದು ನಂಜೀವಿಸಿರುವ ಶಕ್ತಿ,
ಅದರ ಮಹಿಮೆಯನುಸುರುತಿಹ ವಾಣಿ-ವೀಣೆ ನಾನು!
ಬಣ್ಣನೆಯು ಸಾತಿಶಯವಿರಬಹುದು, ಇದ್ದರೇನು?
ಸತ್ಯ ಸೌಂದರ್‍ಯಗಳು ನುಡಿಸಿಹವು, ಧನ್ಯ ನಾನು!
*****