ಹೌದು ಸಂಬಳಕ್ಕಿಂತ ಹೆಚ್ಚು ಮೇಲು ಸಂಪಾದನೆಯನ್ನೇ ನಂಬಿದ್ದ ನನ್ನ ಕೆಲ ಸಹೋದ್ಯೋಗಿಗಳಿಗೆ ನನ್ನ ಮೇಲೆ ಸಿಟ್ಟು. ಆ ಸಿಟ್ಟು ಕ್ರಮೇಣವಾಗಿ ದ್ವೇಷಕ್ಕೆ ತಿರುಗಿತ್ತು. ನಾಗರಹಾವು ಏನೂ ಮಾಡದಿದ್ದರೂ ಹೆಸರು ಕೇಳಿದರೂ ಭಯ ಪಡುವವರು, ಹೆದರಿಕೆಯ ಜಾಗದಲ್ಲಿ ದ್ವೇಷ ಬೆಳೆದಿದ್ದು, ನಾಗರಹಾವು ಕಂಡಕೂಡಲೇ ಕೊಲ್ಲಲು ಪ್ರಯತ್ನಿಸುವುದು ಹೀಗೇಯೋ ಏನೋ?
ನಾನು ಬದುಕುತ್ತಿರುವುದು ಮಾನವರು ಇರುವ ಪ್ರಪಂಚವಲ್ಲ. ಸಮಾಜವೂ ಅಲ್ಲ… ‘ಜನಾರಣ್ಯ’. ಇಲ್ಲಿ ಸಾಧು ಪ್ರಾಣಿಗಳಿಗಿಂತ ಕ್ರೂರ ಮೃಗಗಳೇ ಹೆಚ್ಚಾಗಿರುವುವೋ ಏನೋ? ನಾನು ನನ್ನ ಮನೆ, ನನ್ನ ಮನೆಯವರು ಈ ವೃತ್ತಿ ಎಂದುಕೊಂಡಿದ್ದೆ. ಆದರೆ ಅದರಾಚೆಗೂ ನಾನು ಊಹಿಸದ ಜಗತ್ತೊಂದಿತ್ತು. ಈರ್ಷೆ, ದ್ವೇಷಗಳೊಂದಿಗೆ ಸೇರಿ ಬೆರೆತು ಬದುಕುವ ಹಾಗಿಲ್ಲ. ಯಾವಾಗೆಂದರೆ ಆವಾಗ ಎಲ್ಲೆಂದರಲ್ಲಿ ಹೋರಾಡುವ ಬದುಕು ಮುಂದಿತ್ತು. ಒಮ್ಮೆಲೇ ಮೈ ನಡುಕ ಬಂದಂತಾಗಿತ್ತು!
ನನ್ನ ತಂಗಿ, ಮದುವೆ, ಗಂಡ, ಮಕ್ಕಳು, ಅವ್ವನ ಜೊತೆಯಲ್ಲಿ ಸುಖವಾಗಿದ್ದಳು. ಸುಭದ್ರವಾಗಿದ್ದಳು ಅಂದರೆ ಹೆಣ್ಣಿಗೆ ‘ಮದುವೆ’ ಮಾತ್ರ ಭದ್ರತೆ ನೀಡುವುದೇ? ಊಹೂಂ… ಇಲ್ಲಾ ಇಲ್ಲ… ಕಣ್ಣಾರೆ ಬಾಲ್ಯದಿಂದಲೇ ಅವ್ವನ ಏಕಾಂಗಿ ಬದುಕು, ಅದಕ್ಕಾಗಿ ರಾಮಾಯಣ, ಮಹಾಭಾರತದ ಕಾಲದಿಂದಲೂ ಹೆಣ್ಣಿಗೆ ಇಷ್ಟೇ ಮಹತ್ವ ನೀಡಿದ್ದಾರೆಯೇ? ಸಮಾನತೆ, ಸುರಕ್ಷತೆ ಹೆಣ್ಣಿಗೆ ಬೇಕು ಎಂದು ಅಂದಿನಿಂದಲೂ ಮಾತನಾಡಿದವರು, ಹೋರಾಟ ಮಾಡಿದವರು, ಈಗಲೂ ಇಂತಹ ಮಾತುಗಳನ್ನೇ ಇಂದೂ ಹೆಣ್ಣಿನ ಹೋರಾಟದ ಹಾದಿಯಲ್ಲಿ ಲಾಂಛನ ಹಿಡಿದು ಘೋಷಣೆ ಕೂಗುವುದು ನಡೆದೇ ಇದೆ. ಆದರೆ ಆ “ದನಿ” ಯಾರಿಗೂ ಕೇಳಿಸಿಲ್ಲವೆ? ಜಾಣ ಕಿವುಡೇ? ಅಪಹಾಸ್ಯವೇ? ಏನು? ಏನು?
ಈಗ ಮನೆಯವರನ್ನು ಸಾಕಿ ಬೆಳೆಸಲು ಹೆಣ್ಣು ನೌಕರಿ ಮಾಡಲು ಸಹಕರಿಸಿರುವುದೇ ಒಂದು ಮಹಾ ಭಾವನೆಯೇ?
ರಾತ್ರಿಯಿಡೀ ವಿಪ್ಲವದಲ್ಲಿ ಅಶಾಂತಿಯಿಂದ ಹೊರಳಾಡುತ್ತಿದ್ದ ನನಗೆ ಯಾವಾಗ ನಿದ್ದೆ ಬಂದಿತ್ತೋ ತಿಳಿದಿರಲಿಲ್ಲ.
ಬೆಳಿಗ್ಗೆ ಎದ್ದಾಗ ಮೈ ಯಾಕೋ ಭಾರವೆನಿಸಿತ್ತು. ಮನಸ್ಸು ಅಸ್ತವ್ಯಸ್ತವಾಗಿತ್ತು. ಬರೀ ಕಾಫಿ ಕುಡಿದು ಆಸ್ಪತ್ರೆಯತ್ತ ನಡೆದಿದ್ದೆ. ದೂರದಿಂದಲೇ ಆಸ್ಪತ್ರೆಯನ್ನು ಕಂಡ ಕೂಡಲೇ ನಡಿಗೆ ವೇಗವಾಗಿತ್ತು. ನನಗಾಗಿ ಕಾಯುತ್ತಾ ಕುಳಿತಿದ್ದ ಮಹಿಳಾ ರೋಗಿಗಳು ಅಳುತ್ತಿದ್ದ ಗಲಾಟೆ ಕಂಡ ತಕ್ಷಣ ಎಲ್ಲವೂ ಮರೆತು ಹೋಗಿತ್ತು ದಿನ ಕಳೆದಿದ್ದು, ಹಸಿವು ಯಾವುದೂ ಗೊತ್ತೇ ಆಗಿರಲಿಲ್ಲ. ಎಂದಿನಂತೆ ನನ್ನ ದಿನಚರಿ ಪುಸ್ತಕದಲ್ಲಿ ನನ್ನ ತೊಳಲಾಟ, ನೋವುಗಳನ್ನು ಬರೆದುಕೊಂಡ ನಂತರ ನಿರಾಳವೆನ್ನಿಸಿತ್ತು.
‘ತರಂಗ’ ವಾರಪತ್ರಿಕೆಯಲ್ಲಿ ನನ್ನ ಕಾದಂಬರಿ, ‘ಮುಡಿದಾ ಮಲ್ಲಿಗೆ’ ಆರಂಭವಾಗಲಿದೆಯೆಂದು ಸಂಪಾದಕರಾಗಿದ್ದ ಚಿರಂಜೀವಿಯವರು ಪತ್ರ ಬರೆದು ತಿಳಿಸಿದ್ದರು. ತುಂಬಾ ಖುಷಿಯಾಗಿತ್ತು. ಎರಡು ವರ್ಷಗಳವರೆಗೂ ಸಾಹಿತ್ಯದ ಓದು ಇದ್ದರೂ ಬರವಣಿಗೆಗೆ ತಾತ್ಕಾಲಿಕ ಬಂಜೆತನ ಬಂದಂತಾಗಿತ್ತು. ಚಿರಂಜೀವಿಯವರ ಆ ಒಂದು ಪತ್ರ ನನ್ನ ಬರೆಯುವ ಹಂಬಲವನ್ನು ಜಾಗೃತಗೊಳಿಸಿತು. ಸ್ಫೂರ್ತಿಯಾಗಿತ್ತು. ನಂತರ ಬಿಡುವಿನ ವೇಳೆ ಇಲ್ಲ ರಾತ್ರಿಗಳಲ್ಲಿ ಕತೆಗಳನ್ನು ಆಗಾಗ್ಗೆ ಬರೆಯಲಾರಂಭಿಸಿದೆ. ಅದು ನನ್ನ ಮನಸ್ಸನ್ನು ಸಾಂತ್ವನಗೊಳಿಸುತ್ತಿತ್ತು. ಸುಧಾ, ಮಯೂರ, ತರಂಗ, ತುಷಾರ ಪತ್ರಿಕೆಗಳಲ್ಲಿ ನಾನು ಬರೆದು ಕಳುಹಿಸಿದ ಕತೆಗಳು ಪ್ರಕಟವಾಗತೊಡಗಿದ್ದವು. ಹಾಗೆಯೇ ವೈದ್ಯಕೀಯ ಲೇಖನಗಳನ್ನೂ ಬರೆಯುತ್ತಿದ್ದೆ. ನನ್ನ ವೃತ್ತಿಯಲ್ಲಿಯೂ ಅಷ್ಟೇ ಜನಪ್ರಿಯಳಾಗತೊಡಗಿದ್ದೆ. ಅದೂ ನನ್ನ ಕಾಯಕದಿಂದ.
ಆ ಸುತ್ತಲಿನ ಎಲ್ಲಾ ಗ್ರಾಮಗಳಲ್ಲಿ ನನ್ನ ಹೆಸರು ಚೆನ್ನಾಗಿ ಕೇಳಿ ಬರುತ್ತಿತ್ತು. ರಾತ್ರಿಯಾಗಲೀ ಹಗಲಾಗಲೀ ಬಂದು ನೋಡುತ್ತಾರೆ, ಚಿಕಿತ್ಸೆ ನೀಡುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿದ್ದವು. ಇದನ್ನು ತಿಳಿದುಕೊಂಡ ಜಿಲ್ಲಾ ವೈದ್ಯಾಧಿಕಾರಿಗಳು ನನಗೆ ಅನುಕೂಲಗಳನ್ನು ಮಾಡಿಕೊಡುತ್ತಿದ್ದರು. ನನ್ನ ಕೋರಿಕೆಯಿಂದಾಗಿ ಆಸ್ಪತ್ರೆಗೆ ಮೊದಲ ಬಾರಿ ತುರ್ತು ಚಿಕಿತ್ಸೆಗೆ ಬೇಕಾದ ರೋಗಿಗಳನ್ನು ಸಿಟಿಗೆ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ ಹೊಸದಾದ ಆಂಬುಲೆನ್ಸನ್ನು ಕೂಡ ಕೊಟ್ಟಿದ್ದರು. ಇದರಿಂದ ನನಗೆ ಕೃತಜ್ಞತೆಗಳನ್ನು ಹೇಳುವ ಬದಲು ನನ್ನ ಸಹೋದ್ಯೋಗಿ ಹೆಚ್ಚಾಗಿ ಹಿರಿಯ ವೈದ್ಯಾಧಿಕಾರಿಯೊಬ್ಬರಿಗೆ ‘ಆ್ಯಸಿಡ್’ ಕುಡಿದ ಹಾಗಾಗಿತ್ತು.
ಚಿನ್ನೂ, ಮೊದಲು ಮೊದಲು ನಾನು ನನ್ನ ಜನಪ್ರಿಯತೆ ಯಶಸ್ಸನ್ನು ಆನಂದಿಸಿದ್ದೆ. ಇನ್ನು ಹೆಚ್ಚು ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡಿದಂತಾಗಿತ್ತು. ಆದರೆ ಜನಪ್ರಿಯತೆಯು “ನಂಜು” ಎಂದು ತಿಳಿಯಲು ನನಗೆ ನಿಧಾನವಾಗಿ ಅರ್ಥವಾಗಿತ್ತು. ಪ್ರಮುಖ ರಾಜಕಾರಿಣಿಯೊಬ್ಬರು ನನ್ನ ಜನಪ್ರಿಯತೆಯನ್ನು ಅಂದು ನಡೆಯಲ್ಲಿದ್ದ ಚುನಾವಣೆಗೆ ನಿಲ್ಲಿಸಲು ಸಜ್ಜಾಗಿದ್ದರು. ಬಂದು ನನ್ನನ್ನು ಕೇಳಿದ್ದರೂ ಕೂಡಾ.
“ನೀವು ನಿಮ್ಮ ಸೇವೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಬಹುದು. ನೀವು ಚುನಾವಣೆಗೆ ಸ್ಪರ್ಧಿಸಿ. ಎಲ್ಲಾ ಖರ್ಚು-ವೆಚ್ಚಗಳ ಬಗ್ಗೆ ಚಿಂತಿಸಬೇಡಿ. ನಾವೇ ನೋಡಿಕೊಳ್ಳುತ್ತೇವೆ…” ಎಂದು ಬಂದು ಕೇಳಿದ್ದರು.
ನಾನು… “ಇಲ್ಲಾ ಸರ್… ನನಗೇ ವೃತ್ತಿಯೇ ಸಾಕು. ನನಗೆ ರಾಜಕೀಯ ಇಷ್ಟವಿಲ್ಲ. ರಾಜಕಾರಣಿಯಾಗೋದಂತೂ ಸಾಧ್ಯವೇ ಇಲ್ಲ” ಎಂದು ನವಿರಾಗಿ ನನ್ನ ‘ನ’ಕಾರವನ್ನು ತಿಳಿಸಿದ್ದೆ.
ಈ ವಿಷಯ ಹೇಗೋ ಎಲ್ಲರಿಗೂ ತಿಳಿದು ಹೋಗಿತ್ತು. ಆದರೆ ಅಲ್ಲಿದ್ದ ವೈದ್ಯಾಧಿಕಾರಿಯೊಬ್ಬರ ಕನಸು ರಾಜಕಾರಣಿಯಾಗುವುದು. ಅದಕ್ಕಾಗಿ ಆಗಲೇ ಪ್ರಯತ್ನಗಳನ್ನು ನಡೆಸಿದ್ದರು. ನನಗದು ತಿಳಿದಿರಲಿಲ್ಲ! ನನ್ನ ಈ ಅಜ್ಞಾನ ನನಗೆ ಶಾಪವಾಗಿತ್ತು.
ಒಂದು ದಿನ ಇದ್ದಕ್ಕಿದ್ದ ಹಾಗೆ ಆಘಾತಕರ ಸುದ್ದಿಯೊಂದು ವಿಷಜ್ವಾಲೆಯಂತೆ ಊರ ತುಂಬಾ ಹರಡಿತ್ತು. ಎಲ್ಲರೂ ಹೆದರುವಂತಹ, ಗಾಬರಿಯಾಗುವಂತಹ ಸ್ಫೋಟಕಾರಕ ಸುದ್ದಿ!
“ಲೇಡಿ ಡಾಕ್ಟರಮ್ಮನಿಗೆ Gang Rape ಆಗಿದೆ. ತುಂಬಾ ಸೀರಿಯಸ್ಸಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಟೋ ಡ್ರೈವರುಗಳಿರಬಹುದು ಅನ್ನೋ ಸಂದೇಹವಿದೆ”.
ನನಗೆ ಆ ಸುದ್ದಿಯ ಅರಿವೆ ಇರಲಿಲ್ಲ. ಆಸ್ಪತ್ರೆಯ ಮುಂದೆ ಎಲ್ಲಾ ಆಟೋ ಡ್ರೈವರ್‌ಗಳು, ತಮ್ಮ ಆಟೋ ರಿಕ್ಷಾದೊಂದಿಗೆ ಬಂದಿದ್ದರು. ಎಲ್ಲರೂ ಕೋಪದಿಂದ ವ್ಯಗ್ರರಾಗಿದ್ದರು. ನಾನು ಪರೀಕ್ಷಿಸುತ್ತಿದ್ದ ರೂಮಿನ ಮುಂದೆ ಬಂದು ನಿಂತುಬಿಟ್ಟಿದ್ದರು. ಯಾವುದೋ ಗಂಭೀರ ಸ್ಥಿತಿಯಲ್ಲಿರೋ ರೋಗಿಯನ್ನು ಹೊತ್ತುಕೊಂಡು ಬಂದಿರಬೇಕೆಂದು ಹೊರಗೆ ಬಂದೆ. ನನ್ನನ್ನು ನೋಡಿ ದಂಗಾದರು. ಅವರಲ್ಲಿ ಗುಜು ಗುಜು ಮಾತು ಶುರುವಾಗಿತ್ತು.
“ಏಕೆ? ಏನಾಯ್ತು? ಯಾರಾದ್ರೂ ಸೀರಿಯಸ್ಸಾ?” ಎಂದೆಲ್ಲಾ ಕೇಳತೊಡಗಿದ್ದೆ. ಒಬ್ಬರೂ ಏನನ್ನೂ ಹೇಳದೇ ನನ್ನನ್ನ ನೋಡುತ್ತಾ ನಿಂತಿದ್ದರು.
“ಏನಾಯ್ತುರಿ? ಯಾಕಿಷ್ಟು ಜನ?” ನನ್ನ ಪ್ರಶ್ನೆಗೆ ಆಸ್ಪತ್ರೆಯ ಸಿಬ್ಬಂದಿಯವರೂ ಅಲ್ಲಿಗೆ ಬಂದಿದ್ದರು. ಬಹಳ ಧೈರ್ಯ ತಂದುಕೊಂಡು ಮುಂದೆ ಬಂದು, ಅವರು ಗಾಬರಿಯಾದ ಕಾರಣವನ್ನು ತಡವರಿಸುತ್ತಾ ಹಿಂಜರಿಕೆಯಿಂದ ಹೇಳಿದ್ದ.
“ಏನು!?” ನಾನು ನಂಬಲಾರದವಳಂತೆ ಕೇಳಿದ್ದೆ.
“ಅಲ್ಲಾ ಅಮ್ಮಾವ್ರೇ… ನೀವು ನಮ್ಮೆಲ್ಲರಿಗೂ ಅಕ್ಕ ಇದ್ದ ಹಾಗೆ… ಇಂಥಾ ಹಲ್ಕಟ್ ಸುದ್ದಿ ಹಬ್ಬಿಸಿದ್ದಾರಂತ ಗೊತ್ತಾದ್ರೆ ಅವರ ಮನೆಗೆ ಬೆಂಕಿ ಹಾಕಿಬಿಡ್ತೀವಿ…” ಸುದ್ದಿ ಸುಳ್ಳೆಂದು ತಿಳಿದು ಆಸ್ಪತ್ರೆಯಲ್ಲಿಯೇ ಕೆಲಸ ಮಾಡಿಕೊಂಡಿರುವುದನ್ನು ಕಂಡು ಅವರ ಆಕ್ರೋಶ ಹೆಚ್ಚಾಗಿತ್ತು.
ಸಾವರಿಸಿಕೊಂಡು ನಿಧಾನವಾಗಿ ನಾನು ಅವರ ಮುಂದೆ ಕೈಮುಗಿದು ನಿಂತು ಹೇಳಿದ್ದೆ.
“ದಯವಿಟ್ಟು ಈತರದ ಸಿಟ್ಟು… ನನಗೇನೂ ಆಗಿಲ್ಲ. ನಿಮ್ಮಂತಹ ತಮ್ಮಂದಿರುವಾಗ ಯಾರಿಗೆ ತಾನೆ ನನಗೆ ಅಪಾಯ ಮಾಡಲು ಸಾಧ್ಯ?… ನಾನು ಆರಾಮವಾಗಿದ್ದೇನೆ. ಯಾರೋ ತಮಾಷೆಗಾಗಿ ಹೇಳಿರಬೇಕು…”
“ತಮಾಷೆಗಾಗ್ಲೀ ಇಂಥಾ ಸುದ್ದಿ ಹಬ್ಬಿಸೋದು ಸರೀನಾ? ಯಾರೂಂತ ಗೊತ್ತಾದ್ರೆ ಮಾತ್ರ…”
“ಯಾರಿಗೂ ಏನೂ ಮಾಡ್ಬೇಡಿ. ನನಗಾವ ತೊಂದರೆಯೂ ಆಗಿಲ್ಲ. ಆಗೋದೂ ಇಲ್ಲ. ನನ್ನನ್ನಿರಲಿ ನನ್ನ ನೆರಳನ್ನು ಮುಟ್ಟೋ ಧೈರ್ಯ ಯಾರಿಗೂ ಇಲ್ಲ…” ಎಂದಿದ್ದೆ ಗಂಭೀರವಾಗಿ ನನಗಾದ ಆಘಾತವನ್ನು ಸ್ವಲ್ಪವೂ ತೋರಿಸಿಕೊಂಡಿರಲಿಲ್ಲ.
ಹೀಗೆ ಕೆಲ ಹೊತ್ತು ಮಾತನಾಡಿದ ನಂತರ ಅವರೆಲ್ಲರೂ ಸಮಾಧಾನದಿಂದ ಹೋದರು. ಅಷ್ಟರಲ್ಲಾಗಲೇ ನನ್ನ ಸಹೋದ್ಯೋಗಿಗಳು ಸೂಪರಿಂಟೆಂಡೆಂಟ್ ರೂಮಿನಲ್ಲಿ ಬಂದು ಕುಳಿತಿದ್ದರು. ಹೊರಗಡೆ, ಸಿಬ್ಬಂದಿಯವರು, ಬಂದಿದ್ದ ರೋಗಿಗಳು ರೋಗಿಯ ಕಡೆಯವರು ಗುಂಪು ಗುಂಪಾಗಿ ನಿಂತುಕೊಂಡು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು. ನನಗೆ ಬುಲಾವ್ ಬಂದಿತ್ತು.
ನಾನು ಯಾವ ಅಳುಕಿಲ್ಲದೇ ಸಹಜವಾಗಿಯೆಂಬಂತೆಯೇ ಸೂಪರಿಂಟೆಂಡೆಂಟ್ ಅವರ ರೂಮಿಗೆ ಹೋದೆ. ಎಲ್ಲರೂ ಗಂಭೀರವಾಗಿ ಕುಳಿತಿದ್ದರು. ನನ್ನನು ನೋಡಿದವರೇ,
“ಏನಮ್ಮಾ ಇದೆಲ್ಲಾ?” ಎಂದು ಕೇಳಿದ್ದರು.
“ಅಂಥಾದ್ದೇನೂ ಇಲ್ಲ ಸರ್. ಅವರಿಗೇನೋ ಅನುಮಾನ ಬಂದಿತ್ತು. ಕೇಳಲು ಬಂದಿದ್ದರು. ಸಮಾದಾನವಾಯಿತೋ ಏನೋ ಎಲ್ಲರೂ ಹೊರಟು ಹೋದರು”.
“ಅದೇ ಏನು ವಿಷಯಾ?”
“ಇಡೀ ಊರಿಗೆ ಗೊತ್ತಿದೆಯಂತೆ. ನಿಮ್ಮೆಲ್ಲರಿಗೂ ಗೊತ್ತೇ ಇರುತ್ತೆ. ಮತ್ತೆ ಮತ್ತೆ ಹೇಳೋದರಲ್ಲಿ ಕೇಳೋದರಲ್ಲಿ ಯಾವ ಸ್ವಾರಸ್ಯವೂ ಇರೋಲ್ಲ”.
“…..”
“ಅಷ್ಟಕ್ಕೂ ನಾನೇನು ವಿಶ್ವಸುಂದರೀನಾ? ಒಣಗಿದ ಜಾಲಿ ಮರದ ಬಡ್ಡೆಯಂತಿದ್ದೀನಿ. ನನ್ನನ್ನು ಏನು ಮಾಡಲು ಸಾಧ್ಯ? ಯಾರೋ ವಿಕೃತ ಮನೋಸ್ಥಿತಿಯಿರುವವರು ತಮ್ಮ ನಾಲಿಗೆಯ ಚಟ ತೀರಿಸಿಕೊಂಡಿದ್ದಾರೆ. ನನಗೇನೂ ಆಗಿಲ್ಲ. ಆಗುವುದೂ ಇಲ್ಲ. ಗಟ್ಟಿ ಪಿಂಡ ನಾನು…” ಎಂದೆ.
“ನಾನಿನ್ನು ಹೋಗಲಾ ಸರ್? ತುಂಬಾ ಪೇಶಂಟ್ಸ್‌ಗಳಿದ್ದಾರೆ…” ಎಂದು ಹೊರಟು ನಿಂತಿದ್ದ ನನ್ನ ತಡೆದು,
“ಟೀ ಕುಡ್ಕೊಂಡ್ ಹೋಗಿ” ಎಂದಿದ್ದ ಅವರ ಮುಖವನ್ನು ನೋಡಿ ಹೇಳಿದ್ದೇ. “ಹಾಲು ಕುಡಿಯಿರಿ…” ರಪ್ಪನೆ ಎಲ್ಲರ ಮುಖಕ್ಕೆ ಹೊಡೆದಂತೆ ಹೇಳಿ ನನ್ನ ಛೇಂಬರಿಗೆ ಬಂದಿದ್ದೆ.
ನನ್ನ ಮನಸ್ಸಿನೊಳಗಾಗುತ್ತಿದ್ದ ತಲ್ಲಣ, ಸಿಟ್ಟು ನೋವನ್ನು ತೋರಿಸಿಕೊಳ್ಳದಿರಲು ಪ್ರಯತ್ನ ಮಾಡುತ್ತಿದ್ದೆ. ನನಗೆ ಹೆಚ್ಚು ಚಿಂತೆಯಾಗಿದ್ದು ಹತ್ತಿರದ ದಾವಣಗೆರೆಯಲ್ಲಿದ್ದ ನನ್ನ ಮನೆಯವರಿಗೇನಾದರೂ ಈ ಸುದ್ದಿ ತಿಳಿದರೆ ಅದೆಷ್ಟು ಭಯ, ಗಾಬರಿಪಟ್ಟಿರಬಹುದೆಂದು ಯೋಚಿಸತೊಡಗಿದ್ದೆ.
“ಸದ್ಯ… ನನ್ನ ಅವ್ವನ ಕಿವಿಗೆ ಈ ಸುದ್ದಿ ಮುಟ್ಟುವ ಮೊದಲೇ ಹೋಗಿ ಅವ್ವನ ಮುಂದೆ ನಿಲ್ಲಬೇಕು. ಎಲ್ಲವನ್ನೂ ಹೇಳಬೇಕು…” ಎಂದುಕೊಂಡಿದ್ದೆ.
ಅಂದೇ ಡ್ಯೂಟಿಯ ನಂತರ ದಾವಣಗೆರೆಗೆ ಹೋಗಿದ್ದೆ. ಮನೆಯಲ್ಲಿ ಯಾರಿಗೂ ಏನೂ ಗೊತ್ತಿರಲ್ಲ. ಅವ್ವನ ಬಳಿ ಹೋಗಿ ಎಲ್ಲಾ ವಿಷಯ ತಿಳಿಸಿ, ತನಗೇನೂ ಆಗಿಲ್ಲ. ಆಸ್ಪತ್ರೆಗೆ ಸೇರಿದ್ದರೆ ಈಗ ಹೀಗೆ ಬಂದು ನಿಲ್ಲಲು ಹೇಗೆ ಎಂದೆಲ್ಲಾ ಹೇಳಿ ಊಟ ಮಾಡಿ ಆ ರಾತ್ರಿ ಮನೆಯಲ್ಲಿಯೇ ಉಳಿದೆ. ಅವ್ವ ಎದೆ ಗುಂದಿದವಳಂತೆ ಕಂಡಳು.
“ಸರ್ಕಾರಿ ಕೆಲ್ಸ ಬಿಟ್ಬಿಡು. ಇಲ್ಲೇ ಒಂದು ಕ್ಲಿನಿಕ್ ಶುರು ಮಾಡು… ನಾವೆಲ್ಲಾ ಇದ್ದೀವಲ್ಲ…” ಅವ್ವ ಯಾವುದೋ ಭಯದಿಂದ ಆತಂಕದಿಂದ ಹೇಳಿದ್ದಳು.
“ಈ ತರಹದ ಜನ ಎಲ್ಲಾ ಊರಲ್ಲಿಯೂ ಇದ್ದಾರೆ. ಒಂದು ಹೆಣ್ಣು ಮಗಳು ಅವರಿಗಿಂತ ಧೈರ್ಯವಂತೆ ಜಾಣೆ ಎಂದೆನ್ನಿಸಿದ್ರೆ ಈ ತರಹದ ಕಾಟ ಕೊಡ್ತಾರೆ… ಅದಕ್ಕೇ ಯಾಕೆ ಹೆದರಬೇಕವ್ವಾ? ನಂಗೇನೂ ಆಗಿಲ್ಲ. ಆಗೋದಿಲ್ಲಾ. ಧೈರ್ಯದಿಂದಿರು…” ಎಂದು ನಾನೇ ಸಮಾಧಾನ ಹೇಳಿದ್ದೆ.
ಅವ್ವ ಅದೆಷ್ಟು ಕೇಳಿಸಿಕೊಂಡಳೋ ಬಿಟ್ಟಳೋ ಗೊತ್ತಿಲ್ಲ. “ಆ ದೇವರೆ ಕಾಪಾಡ್ಬೇಕು…” ಎಂದಿದ್ದಳು ನಿಟ್ಟುಸಿರುಬಿಟ್ಟು.
ನನ್ನ ಜನಪ್ರಿಯತೆ, ನನ್ನ ವೃತ್ತಿ ಮತ್ತದರ ಕೆಲಸ, ಜನರ ಪ್ರೀತಿ ಕೆಲವರಿಗೆ ನುಂಗಲಾರದ ತುತ್ತಾಗಿತ್ತು. ಎಲ್ಲರೂ ಬಂದು ನನ್ನನ್ನು ಕಂಡು ಮಾತನಾಡಿಸುವವರೇ ಆಗಿದ್ದರು. ನನ್ನ ನಗುಮುಖ, ಸಮಾಧಾನದ ಉತ್ತರ ಬಂದವರಿಗೆ ಸಮಾಧಾನ ತಂದಿತ್ತು.
“ಈ ಸುಳ್ಳು ಸುದ್ದಿ ಹಬ್ಬಿಸಿದವನಿಗೆ ಆ ದ್ಯಾವ್ರು ಒಳ್ಳೇದು ಮಾಡಲ್ಲ. ನೀವು ನೋವು ಪಟ್ಟ ಹಂಗೆ ಅವನೂ ನೋವು ಪಡ್ತಾನೆ. ಅವನ ಮನೆತನ ಹಾಳಾಗಿ ಹೋಗುತ್ತೆ ನೋಡ್ತಾಯಿರಿ. ಅವನೆಂದೂ ಉದ್ಧಾರ ಆಗೋಲ್ಲ…” ಹಿರಿಯ ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದರು. ಕೆಲವರಂತೂ, ನೀರು ತುಂಬಿದ ಕಣ್ಣುಗಳಿಂದ ನನ್ನನ್ನು ನೋಡಿ ಮೈ ಕೈ ಸವರಿ ನೋಡಿ ಸಮಾಧಾನ ಪಡುತ್ತಿದ್ದರು.
“ನಂಗೇನೂ ಆಗಿಲ್ಲ… ಯಾರೂ ಏನು ಮಾಡಿಲ್ಲ…” ಎಂದು ಹೇಳಿ ಹೇಳಿ ನನಗೆ ಸಾಕಾಗಿ ಹೋಗಿತ್ತು.
ನನ್ನ ಹೆಸರು ಕೆಡಿಸಿ ಹಾಳು ಮಾಡಬೇಕೆಂದವರಿಗೆ ಈ ಪ್ರೀತಿ ಜನರ ಪ್ರತಿಕ್ರಿಯೆಯಿಂದ ಮುಖಭಂಗವಾಗಿತ್ತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕೆಲಸ ನಿರ್ವಹಿಸುತ್ತಿದ್ದ ನನ್ನನ್ನು ಕಂಡು ಕಂಗಾಲಾಗಿದ್ದಿರಬೇಕು.
ಭ್ರಷ್ಟಾಚಾರ ವಿರೋಧಿಸಿದ್ದಕ್ಕೆ, ನನ್ನ ಜನಪ್ರಿಯತೆಗೆ ಒಂದೊಂದೇ ಹಂತದಲ್ಲಿ ಹಿಂಸೆ ಕೊಡಲಾರಂಭಿಸಿದ್ದರು. ನಾನು ಎಲ್ಲದಕ್ಕೂ ಧೈರ್ಯವಾಗಿ ಎದೆಯೊಡ್ಡಿ ನಿಂತಿದ್ದೆ, ಎದುರಿಸಿದ್ದೆ ಕೂಡಾ. ನನ್ನ ಭಂಡ ಧೈರ್ಯವಾಗಿತ್ತಾ? ಸತ್ಯದ ಮೇಲಿನ ನನ್ನ ನಂಬಿಕೆ ದೃಢವಾಗಿತ್ತಾ? ಗೊತ್ತಿರಲಿಲ್ಲ. ತಮ್ಮ ಜೀವ ಕಾಪಾಡುವ ವೈದ್ಯರಿಗೂ ಅದು ಮಹಿಳೆಗೆ ಇಷ್ಟೊಂದು ನೀಚ ಕಾರ್ಯಗಳನ್ನು ಮಾಡಿ ಹೆದರಿಸುವ ಅಗತ್ಯವೇನಿತ್ತು? ತುಂಬಾ ಅಸಹ್ಯವಾಗಿತ್ತು ಅವರ ನಡವಳಿಕೆಗೆ.
ಹೆಣ್ಣಿಗೆ ಅತ್ಯಾಚಾರವಾದರೆ ಆಕೆ ಸತ್ತು ಹೋದಹಾಗೆ. ಆಕೆಗೆ ಭವಿಷ್ಯದಲ್ಲಿ ಬದುಕಲು ಯಾವ ಅರ್ಹತೆಗಳು ಇಲ್ಲ.
ಇನ್ನೂ ಮದುವೆಯಾಗದ ನನ್ನ ಬದುಕು ಅಲ್ಲಿಗೆ ಮುಗಿದೇ ಹೋಗಿಬಿಡುತ್ತದೆಂದು ಕೊಂಡಿದ್ದರೇನೋ? ನಾನೆಂದೂ ಮದುವೆ, ಗಂಡ, ಮಕ್ಕಳು ಸಂಸಾರವೇ ಹೆಣ್ಣಿಗೆ ಅಂತಿಮವೆಂದು ತಿಳಿದವಳೂ ಅಲ್ಲ. ಅದೂ ಒಂದು ಘಟ್ಟವಷ್ಟೇ. ಅದಿಲ್ಲದಿದ್ದರೆ ಬದುಕು ಮುಗಿದೇ ಹೋಗಿಬಿಡುತ್ತದೆಂದು ನಾನೆಂದೂ ಅಂದುಕೊಂಡಿರಲಿಲ್ಲ. ಹೀಗಾಗಿಯೋ… ಏನೋ… ನಾನು ಬದುಕಿಗೆ ಆ ಅಪಪ್ರಚಾರಕ್ಕೆ, ಸುಳ್ಳು ಸುದ್ದಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಎಂತಹುದೇ ಬರಲಿ ಏನೇ ಬರಲಿ ಎದುರಿಸುವ ಧೈರ್ಯ ಶಕ್ತಿ ಕೊಡು ದೇವರೇ ಎಂದಷ್ಟೇ ನಾನು ಕಾಣದ ದೇವರಲ್ಲಿ ಒಮ್ಮೊಮ್ಮೆ ಕೇಳಿಕೊಳ್ಳುತ್ತಿದ್ದೆ.
ಹಾಗೆಂದ ಮಾತ್ರಕ್ಕೆ ನಾನು ಗಾಬರಿಯಾಗಿರಲಿಲ್ಲ ಎಂದರೆ ಸುಳ್ಳಾಗುತ್ತದೆ ಚಿನ್ನೂ… ನಾನೂ ಮನುಷ್ಯಳಲ್ಲವೇ? ಇಂತಹ ನೀಚ ಕೆಲಸಗಳನ್ನು ಮಾಡಿ ದ್ವೇಷ ಮಾಡಲು ಸಾಧ್ಯ ಎಂದರಿವಾದಾಗ ಕಲ್ಲಿನಂತೆ ಕುಳಿತು ಬಿಟ್ಟಿದ್ದೆ. ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ಈ ವಿಧವಾದ ಕೆಟ್ಟ ಯೋಚನೆಗಳೂ ಬರುತ್ತವೆಯೇ? ಅಂತಹ ಕಾರ್ಯಗಳನ್ನು ಅಷ್ಟು ಸುಲಭವಾಗಿ ಮಾಡಿ ದಕ್ಕಿಸಿಕೊಳ್ಳುತ್ತಾರಾ? ಈ ವಿಧವಾಗಿ ಹೆಣ್ಣಿಗೆ ಮಾಡಿದರೆ ಹೆದರಿ ಮೂಲೆ ಸೇರಿಬಿಡುತ್ತಾಳೇಂತಾನಾ? ಅಷ್ಟಕ್ಕೂ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿರುವ, ಯೋಚಿಸುತ್ತಿರುವ ನನ್ನ ಮೇಲೇನೇ ಯಾಕೆ ಅವರುಗಳಿಗೆ ಅಷ್ಟು ದ್ವೇಷ? ಬೇರೆಯವರಾರೂ ಆಗಿರಲಾರರು. ನಮ್ಮ ಆಸ್ಪತ್ರೆಯ ಸಿಬ್ಬಂದಿಯವರದ್ದೇ ಈ ಕೆಲಸವೆಂದು ಮೇಲ್ನೋಟಕ್ಕೆ ಕಾಣುವಂತಿತ್ತು.
ಒಂದು ಪುಟ್ಟ ಮನೆಯಲ್ಲಿ ಎಲ್ಲರೂ ಇದ್ದೂ ಇಲ್ಲದವಳಂತೆ ಬದುಕುತ್ತಾ, ರಾತ್ರಿ-ಹಗಲು, ಊಟ-ತಿಂಡಿಗಳನ್ನು ಲೆಕ್ಕಿಸದೇ ಆಸ್ಪತ್ರೆಯಲ್ಲಿ ದುಡಿಯುತ್ತಾ, ಆಸ್ಪತ್ರೆಗೆ ಹೆಚ್ಚು-ಹೆಚ್ಚು ರೋಗಿಗಳು ಬರುವಂತಾಗಿದ್ದು, ಒಳ್ಳೆಯ ಹೆಸರು ಬರುವುದರಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದ ನನಗ್ಯಾಕೆ ಈ ಅವಮಾನ? ಒಂದು ವೇಳೆ ಈ ಸುಳ್ಳು ಸುದ್ದಿಯು ನಿಜವಾಗಿಯೂ ನಡೆದು ಹೋಗಿದಿದ್ದರೆ? ಇಡೀ ದೇಹ ನಡುಗಿತ್ತು. ಹೆದರಿಕೆಯಿಂದ ನಾಲಿಗೆ ಬಾಯಿ ಒಣಗಿ ಬಂದಂತಾಗಿತ್ತು… ಈ ಊರಿನಲ್ಲಿ… ಈ ಪುಟ್ಟ ಮನೆಯಲ್ಲಿ ತನಗೇನೇ ಆದರೂ ಯಾರೂ ಬರಲಾಗುತ್ತಿರಲಿಲ್ಲ. ಬರುವವರು ಗಲಾಟೆ ಮಾಡಿಕೊಂಡೇನು ಬರೋಲ್ಲವಲ್ಲಾ? ನ್ಯಾಯ, ಸತ್ಯ, ಧರ್ಮ ಅಂತ ಹೋಗೋರಿಗೆ ಕಷ್ಟಗಳು ಜಾಸ್ತಿ. ಅಡಚಣೆಗಳು ಜಾಸ್ತಿಯಂತೆ… ಹಾಗಂತ ನಾನು ಮೈಸೂರಿನಲ್ಲಿದ್ದಾಗ, ರಾಮಕೃಷ್ಣಾಶ್ರಮಕ್ಕೆ ಹೋಗುತ್ತಿದ್ದಾಗ ಓದುತ್ತಿದ್ದ ಸಾಲುಗಳು… ಪೂರ್ತಿಯಾಗಿ ಆಧ್ಯಾತ್ಮಕ್ಕೇ ಪೂರ್ತಿಯಾಗಿ ಒಪ್ಪಿಸಿಕೊಳ್ಳುವ ವಯಸ್ಸೂ ನನ್ನದಾಗಿರಲಿಲ್ಲ… ಕಷ್ಟ- ನಷ್ಟಗಳು ಸ್ವಯಂ ಅನುಭವಕ್ಕೆ ಬಂದಾಗ ಮಾತ್ರ ಆ ವಾಕ್ಯಗಳ, ಪದಗಳ ಅರ್ಥವಾಗುವುದು.
*****
ಮುಂದುವರೆಯುವುದು