ಮೂಲ: ವಿಲಿಯಂ ಬಟ್ಲರ್ ಏಟ್ಸ್
ಬಾಳಿನ ಸಫಲತೆಯನ್ನೋ
ಕೃತಿಯ ಪರಿಪೂರ್‍ಣತೆಯನ್ನೋ
ಆಯಬೇಕು ಒಂದನ್ನೇ ಮನುಷ್ಯಮತಿ ಇಲ್ಲಿ,
ಆಯ್ದರೆ ಎರಡನೆಯದನ್ನು
ಬಿಟ್ಟುಕೊಡಬೇಕು ದೇವಸೌಧವನ್ನು,
ಕುದಿಯಬೇಕು ತಡಕಾಡುತ್ತ ಕತ್ತಲಲ್ಲಿ.
ಎಲ್ಲ ಕಥೆ ಕೊನೆಗಂಡು
ಉಳಿಯುವುದಾದರೂ ಏನು?
ಗೆಲುವೋ, ಸೋಲೋ, ಒಟ್ಟು ಪಟ್ಟಪಾಡಿನ ಗುರುತು:
ಖಾಲಿ ಜೇಬಾದವನ ಕಂಗಾಲು ನೋಟ,
ಹಗಲಿನ ನಿರರ್‍ಥಕತೆ, ರಾತ್ರಿಯ ವಿಲಾಪ.
*****
ಸಫಲವಾದ ಜೀವನ ಮತ್ತು ಸಾರ್‍ಥಕವಾದ ಕೃತಿರಚನೆ ಈ ಎರಡೂ ಒಟ್ಟಿಗೇ ಮನುಷ್ಯನಿಗೆ ದಕ್ಕುವುದಿಲ್ಲ. ಕೃತಿಯ ಸಾಫಲ್ಯತೆಗೆ ಬಾಳಿನ ಎಲ್ಲ ಬಗೆಯ ಸಾಕ್ಷಾತ್ತಾದ ಅನುಭವ ಅಗತ್ಯ. ಕೃತಿಕಾರ ತನ್ನ ಬಾಳನ್ನು ಬಲಿಕೊಟ್ಟಲ್ಲದೆ ಅದನ್ನು ಪಡೆಯಲು ಸಾಧ್ಯವಿಲ್ಲ.