ಮಳೆಯ ನಾಡಿಗೆ ಚಳಿಯ ನಾಡಿಗೆ
ಹಸಿರ ಕಾಡಿಗೆ ಬಂದೆನೆ
ಹೂವು ಹೂವಿಗೆ ದುಂಬಿ ದುಂಬಿಗೆ
ಮುತ್ತು ಕೊಡುವುದ ಕಂಡೆನೆ
ಚಿತ್ರ ಚಲುವಿಯ ಕಂಡೆನೆ ||
ನೀಲ ಗಗನದಿ ಮೇಘ ಮಯೂರಿ
ಕುಣಿವ ರಾಸವ ಸವಿದೆನೆ
ಒಣಗಿ ಹೋದಾ ಕಣ್ಣ ಹೊಂಡದಿ
ಬಣ್ಣ ತುಂಬಿಸಿ ನಲಿದೆನೆ
ಕಣ್ಣು ಕಣ್ಣೊಳು ಬೆರೆದೆನೆ ||
ಕರಿಯ ಮಣ್ಣಿನ ಕಪ್ಪು ಹುಡಿಗಿಯ
ಕೆಂಪು ಮಣ್ಣಿಗೆ ತಂದೆನೆ
ಜೋಳ ಸಜ್ಜಿಯ ಗಟ್ಟಿ ಹುಡುಗನು
ರಾಗಿ ರೊಟ್ಟಿಯ ತಿಂದೆನೆ
ಹಳೆಯ ಹುಡಿಗಿಯ ಬಿಟ್ಟೆನೆ ||
ಏನು ಏನೊ ಹಾಗೆ ಇದ್ದವ
ಹೀಗೆ ಕೊಳಲನು ಊದಿದೆ
ರಸದ ಬಾಳೆಯ ಗಾನ ತರುಣಿಯ
ಕದ್ದು ಮುಚ್ಚಿ ನೋಡಿದೆ
ಹುಚ್ಚನಾಗಿ ಕೂಡಿದೆ ||
*****