ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು
‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು
ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು
ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು,
ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ
ಮಾನವಗೆ; ಮತ್ತೆ ಮಂಜು ಮುಸುಕಿದ ಮುಡಿಯು
ಮೂಡಿಸಿದ ನಗೆ, -ನರನ ಭಾವನೆಯ ವರಿಹಾಸ!’
ವಿಂಧ್ಯೆ ನುಡಿಯಿತು ’ನಾಳೆ ನಾನಿಹೆನು,
ನೀ ಹುಡಿಯು.’
ಗಿರಿಯ ಕಂದರವಾಗಿ ಕಂದರವ ಗಿರಿಯಾಗಿ
ಪಲ್ಲಟಿಸಿದಾ ಕಾಲನೆತ್ತಿದ ಹಿಮಾಲಯವ,
ವಿಂಧ್ಯೆಯನು ಸದೆಬಡಿದು ಮುಂದೆ ಹಿಮಗಿರಿ ಬಾಗಿ,
ವಿಂಧ್ಯಯುನ್ನತಿ ಮೆರೆಯೆ, ಭೋಗಿಸಿರದೇ ಲಯವ?
ಮೂಜಗದಿ ಯೂರೋವದಿಂದು ಮೆರೆದಿರಲೇನು ?
ಏಸಿಯವದಿರಬಹುದು ನಾಳಿನಾ ಸುರಧೇನು
*****