ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು
ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು
ತಾರೆಗಳ ಬಳಗವನು ಚದರಿಸುತ ಬಳಸುವದು,-
ಮುಗಿಲ ಮಂಡಲದೀಚೆ ಕಾರ್‍ಮುಗಿಲೊ ಎನೆ ನಿಂದು,
ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು.
ಕಾರಣವನರಿಯದಲೆ ಲೋಕ ಕಳವಳಿಸುವುದು,
ಹೊಳೆಯದಿರೆ ಗೂಢವಿದು ಮನವು ಹಳಹಳಿಸುವುದು.
ಆಗ ಕಂಡಿತು ನೊಂದ ಕಾದಲರ ಜೋಡೊಂದು.
ಎಲೆಲೆ! ಚಿತ್ರವಿದೆನಲು ನಿಕಟ ಕಲಹವನೆಸಗಿ
ಕಡುನೊಂದ ಕಾದಲರು ಒಮ್ಮಿಗಿಲೆ ಒಂದಾಗಿ
ತಬ್ಬುವರು, ಮುತ್ತಿಡುವರಲ್ಲ ರೋದನವಳಿಯೆ!
ಬರುತಿಹುದು ಮತ್ತಾಗ ಬೆಳುದಿಂಗಳದು ಮಸಗಿ,
ಹೋಗಿಹುದು ಮುಗಿಲೋಳಿ ತಾನಿಲ್ಲದಂತಾಗಿ
ಚಿಕ್ಕೆಗಳು ಮಿನುಗುವವು, ನಗುತ ನಿಂತಿಹಳಿಳೆಯೆ!
*****