ಶರಣ
ದೊಡ್ಡ ದೀಪದ ಕೆಳಗ ಉದ್ದ ಭಾಷಣ ಬಿಗಿದು
ಚಪ್ಪಾಳಿ ಹೊಡೆಸಿದರ ಶರಣನಲ್ಲ
ಕುಡ್ಡ ದೀಪದ ಕೆಳಗ ಬಿದ್ದ ಆತ್ಮರ ಹುಡಿಕಿ
ಶಿವನ ತೋರುವ ಶರಣ ಮುದ್ದುಕಂದ
ವ್ಯಾಖ್ಯಾನ
ಬಲುದೊಡ್ಡ ಜುಟ್ಟಿನಲಿ ರುದ್ರಾಕ್ಷಿ ಸರ ಬಿಗಿದು
ವ್ಯಾಖ್ಯಾನ ಕುಟ್ಟುವವ ಶರಣನಲ್ಲ
ಹಾದಿಬೀದಿಗೆ ಬಂದು ಬಿದ್ದವರ ಬಳಿ ನಿಂದು
ಸೇವೆಗೈದವ ಶರಣ ಮುದ್ದುಕಂದ
ತ್ಯಾಗ
ಹೆಣ್ಣು ಹೊನ್ನನು ಬಿಟ್ಟೆ ಮಣ್ಣು ಕಲ್ಲನ್ನು ಬಿಟ್ಟೆ
ಬಿಟ್ಟೆನೆಂಬುವ ಭಾವ ಬಿಡಲೆ ಇಲ್ಲ
ತ್ಯಾಗ ಮಾಡಿದೆನೆಂಬ ಭಾವ ತ್ಯಾಗವ ಮಾಡು
ಇದುವೆ ಶರಣನ ಹ್ಯಾವ ಮುದ್ದುಕಂದ
ಮೋಹ
ನಾನು ನನ್ನಯ ಮನೆಯು ನನ್ನ ಹೆಂಡತಿ ಬಳಗ
ನನ್ನ ಮಕ್ಕಳ ಮೋಹ ಎಲ್ಲಿ ತನಕ
ಅವರವರ ಸಾಧನೆಗೆ ಅವರವರೆ ಆಧಾರ
ಯಾಕೆ ಹೆಣಹೊರು ಭಾರ ಮುದ್ದುಕಂದ
*****