ವರುಷ ವರುಷಕೆ ಮಳೆಯು ಬಾರದಿರೆ ನೊಗಗುಂದಿ
ಬಿಸಿಲಿಗೆದೆಯೆಲ್ಲ ನಿಗಿನಿಗಿಯಾಗಿ ಮಲಗಿಹುದು
ಮರುಭೂಮಿ ಕಂರಗತ ಪ್ರಾಣ ತಾ ಹಲುಬಿಹುದು
ಗಂಗೋದಕವ ಬೇಡಿ ಸಸ್ಯಗಳು ಕಳೆಗುಂದಿ
ನಿಶ್ಚೇಷ್ಟವಿರೆ ಹೆಮ್ಮರಗಳು ನಿಂತಿವೆ ಹೊಂದಿ
ನೂರಾರು ಕೆಳಗಿರುವ ಜೀವನವ, ತೊಲಗಿಹುದು
ಜೀವಕಳೆ ಪಕ್ಷಿ ಚಾತಕವಕ್ಷಿಯನಬಹುದು.
ಇಂಥ ಮರುಳ್ನೆಲ ಜಗದಿ ವಿರಲವೆನವರು ಮಂದಿ!
ದೇವದೇವನ ಕರುಣೆ ಮಳೆಯಾಗಿ ಬಿದ್ದೊಡನೆ
ಮೊಳಕೆಯೊಡೆಯುವುದು ಮರುಭೂಮಿಯೊಳು
ಕಣಕಣದಿ
ನೆಲೆಗೊಂಡ ರಣರಣಿಕೆ ಮಾಯವಾಗಲು, ವೃಕ್ಷ
ಚಿಗಿಯುವವು ಪಕ್ಷಿಸಂಕುಳವೊರೆಯುವದು ಮುದದಿ
ಸುಗ್ಗಿ ಗಿಹ ಜಾತಕವ ಪ್ರಾಣ ತಿರುಗಿತು ಮೃಡನೆ
ಬುವಿಯೊಳವತರಿಸಿದೊಲು – ತೆರೆಯೆ ಮನದ ಗವಾಕ್ಷ.
*****