ಪ್ರಿಯ ಸಖಿ,
ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು ಮೂಡಿಸುವಂತಹ ಉತ್ತಮ ಶಿಕ್ಷಣವನ್ನು ನೀಡಬೇಕಿತ್ತು. ಆದರೆ ಯೋಚನೆ ಮಾಡದೇ ಅಂಧರಾಗಿ ಮೂರ್‍ಖರ ಪೆಟ್ಟಿಗೆಯನ್ನು ನೀಡಿಬಿಟ್ಟಿದ್ದೇವೆ ಎಂದು ವಿಷಾದಿಸಿದರು.
ದೂರದರ್‍ಶನ ಹಾವಳಿಯಿಂದ ಇಂದು ಮನೆಗಳಲ್ಲಿ ಆರೋಗ್ಯ ಪೂರ್‍ಣ ಮಾತುಕತೆ, ಚರ್‍ಚೆ, ನಗುಹರಟೆಗಳು ಹೆಚ್ಚು ಕಡಿಮೆ ನಿಂತೇ ಹೋಗಿವೆ. ಕಿರಿಯರಲ್ಲಿ ಬುದ್ಧಿ ಕೌಶಲ್ಯವನ್ನು ಹೆಚ್ಚಿಸುತ್ತಿದ್ದ ನಮ್ಮ ಅನೇಕ ಒಳಾಂಗಣ ಆಟಗಳಾದ ಚೌಕಾಬಾರ, ಪಗಡೆ, ಅಳುಗುಳಿ ಮನೆ, ಹುಲಿ ಕುರಿ, ಇತ್ಯಾದಿ ಆಟಗಳು ಎಂದೋ ಮೂಲೆ ಸೇರಿವೆ. ಇಂದಿನ ಪೀಳಿಗೆಯ ಮಕ್ಕಳು ಬಹುಶಃ ಈ ಆಟಗಳ ಹೆಸರನ್ನೂ ಕೇಳಲಿಲ್ಲವೇನೋ? ಜೊತೆಗೆ ದೂರದರ್‍ಶನ ಈ ಪೀಳಿಗೆಯವರಿಂದ ಅತ್ಯಂತ ಮಹತ್ವದ ಓದಿನ ಹವ್ಯಾಸವನ್ನೇ ನುಂಗಿಬಿಟ್ಟಿದೆ. ಅಗಾಧ ಸಾಹಿತ್ಯ ಭಂಡಾರವನ್ನು ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರ, ಓದುವವರು ಕಡಿಮೆಯಾಗಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ಜನಪದರಿಂದ ಬಳುವಳಿ ಬಂದ ಒಗಟು, ಗಾದೆ, ನುಡಿಗಟ್ಟು, ಒಡಪಿನ ಹಾಡುಗಳು ಮಕ್ಕಳಿಗಿರಲಿ ದೊಡ್ಡವರಿಗೇ ಬೇಡವಾಗುತ್ತಿದೆ.
ಕ್ರೌರ್‍ಯ, ಹಿಂಸೆ, ಅನೈತಿಕ ಸಂಬಂಧಗಳನ್ನು ವೈಭವೀಕರಿಸುವ ಚಲನಚಿತ್ರ, ದೂರದರ್‍ಶನ ಧಾರಾವಾಹಿಗಳು ನೂರೆಂಟು ಚಾನೆಲ್ಗಳಲ್ಲಿ ಹರಿದು ಬರುವ ಹಾಡು ಕುಣಿತಗಳು ನಮ್ಮ ಸಂಸ್ಕೃತಿಯ ಔನ್ನತ್ಯವನ್ನು ಕ್ರಮೇಣ ನುಂಗಿಹಾಕುತ್ತಿವೆ. ಒಂದಾದ ನಂತರ ಒಂದು ಹರಿದು ಬರುವ ಧಾರಾವಾಹಿಗಳನ್ನು ನೋಡುತ್ತಾ ಅಮೂಲ್ಯ ಸಮಯ, ಕಲೆಗಾರಿಕೆ, ಹವ್ಯಾಸಗಳು, ಹೊಸದನ್ನು ಆವಿಷ್ಕರಿಸುವ ಮನೋಭಾವವನ್ನು ನಮ್ಮ ಪೀಳಿಗೆಯವರು ಕಳೆದುಕೊಳ್ಳುತ್ತಿರುವುದು ಅರಿವಿಗೆ ಬರುವುದು ಯಾವಾಗ ? ಧಾರಾವಾಹಿಗಳು ಬರುತ್ತಿರುವಾಗ ಮನೆಗೆ ಬಂದ ಅತಿಥಿ, ಸ್ನೇಹಿತರನ್ನು ಮಾತನಾಡಿಸುವ ತಾಳ್ಮೆ, ವ್ಯವಧಾನವೂ ಮನೆಯವರಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಮಾಜಿಕ ಸಮ್ಮಿಲನದ ಮೂಲ ಕೊಂಡಿಯೂ ಈ ಮೂಲಕ ಕಳೆದುಕೊಳ್ಳುತ್ತಿರುವುದು ತಿಳಿಯುತ್ತದೆ. ದೂರದರ್‍ಶನದ ನಿರಂತರ ನೋಡುವಿಕೆಯಿಂದ ಇತ್ತೀಚಿನ ದಿನಗಳಲ್ಲಿ ನೇತ್ರ ಸಂಬಂಧಿ ರೋಗಗಳು ಹೆಚ್ಚಿರುವುದನ್ನು, ಅವರ ಮುಂದೆ ಕುಳಿತು ಏಕಾಗ್ರತೆಯಿಲ್ಲದೆ ಊಟ, ತಿಂಡಿ ಮಾಡುವುದರಿಂದ ಜೀರ್‍ಣ ಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ.
ಸಖಿ, ದೂರದರ್‍ಶನದ ಕಪಿಮುಷ್ಠಿಗೆ ಸಿಲುಕಿರುವ ನಮ್ಮ ಸಮುದಾಯ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಮಾನಸಿಕ ದಾಸ್ಯಕ್ಕೆ ಒಳಗಾಗಿಬಿಟ್ಟಿದೆ. ಇಂದು ಕಣ್ಣಿಗೆ ಕಾಣದಂತಹ ಆದರೆ ನಾಳೆ ನಮ್ಮ ಸುಂದರ ಭವಿಷ್ಯವನ್ನು ಸದ್ದಿಲ್ಲದಂತೆ ನಿರ್‍ನಾಮ ಮಾಡಬಲ್ಲ ಶಕ್ತಿ ದೂರದರ್‍ಶನಕ್ಕಿದೆ. ಹಾಗೆಂದು ಅದರಲ್ಲಿ ಬರುತ್ತಿರುವ ಒಳಿತು, ಮಾಹಿತಿ, ತಿಳುವಳಿಕೆ, ಅವಶ್ಯವಿರುವಷ್ಟು ಆರೋಗ್ಯ ಪೂರ್‍ಣವಾದ ಮನರಂಜನೆಯನ್ನಷ್ಟೇ ತೆಗೆದುಕೊಂಡು ಮಿಕ್ಕಿದ್ದನ್ನು ಬಿಟ್ಟು ಬಿಡುವ ವಿವೇಚನೆ ನಮ್ಮಲ್ಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಸಖಿ, ಮೂರ್‍ಖರ ಪೆಟ್ಟಿಗೆಯನ್ನು ನೋಡುತ್ತಾ ಮೂರ್‍ಖರೂ ಆಗಬಹುದು, ಅದರಲ್ಲಿ ಬೇಕಷ್ಟನ್ನು ನೋಡಿ ಜಾಣರೂ ಆಗಬಹುದು. ಆಯ್ಕೆ ನಮ್ಮ ಮುಂದಿದೆ. ಮೂರ್‍ಖರಾಗದೇ ಉಳಿಯೋಣ ಆಲ್ಲವೇ ?
*****