ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ
ನನಸೋ ಕನಸೋ ಎಂತರಿವೆ?
ವರುಷವೆ ತುಂಬದ ಕೂಸಾಗಿರೆ ನಾ
ಎನಗಿದ್ದಿತು ಹಿರಿಯನ ಪರಿವೆ.
ಎಳೆಯನ ಮುದ್ದಿಡುತಿದ್ದಳು ತಾಯಿ
ತುಟಿಗಿಳಿಯುತ್ತಿರೆ ಕಣ್ಣೀರು.
ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ
ಆ ರುಚಿಯನು ಬಣ್ಣಿಪರಾರು!
ಒಲಿದನುಪೇಕ್ಷೆಯೊ ಕರುಬಿನ ಭಿಕ್ಷೆಯೊ-
‘ನೀನಲ್ಲದೆ ನನಗಿಲ್ಲೆ’ಂಬ
ಅನನ್ಯಶರಣೆಯ ಭಾವದೊಳಬ್ಬೆಯು
ನನ್ನನು ಮುದ್ದಿಟ್ಟಳು ತುಂಬ.
ಹೊಳಪಿನ ಕಣ್ಣಿನ ಹೊಳಪೇ ಹರಿವೊಲು,
ಮುತ್ತಿನ ಹರಳೇ ಕರಗಿದೊಲು,
ನೋವಿನ ಪದದಿಂದಿಳಿಯುವ ಗಂಗೆಯೆ
ಕಂದನ ತುಟಿಯೊಳು ತಂಗುವೊಲು,
ಮುದ್ದಿನೊಳಿಳಿವಾ ಕ್ಷಾರದ ನೀರನು
ಕೆನ್ನೆಯ ತಟ್ಟುತ ಚಪ್ಪರಿಸಿ
ಕುಡಿದೆನು ಕೇಗುತ ಜನನಿಯ ಮೊಗದೊಳು
ಮಂಗಳಮೃದುಹಾಸವ ತರಿಸಿ.
ನನಸಿನಾಳದಿಂ ಕನಸಿಗೆ ಸುಳಿದೀ
ಅನುಭೂತಿಯ ಚಿಂತಿಸುತಿರುವೆ
ನಗೆ ಹೊಗರಿಟ್ಟಾ ಕಂಬನಿಯೆದೆವಾ-
ಲೀಂಟುತ ಬೆಳೆದೆನು ಎಂದರಿವೆ.
*****