ತವಸಿ ಶಿವ ಪಾರ್ವತಿಯ ನಸು ನೋಡುತೆವೆ ಮುಚ್ಚಿ-
ದಂದದೂಳು ಸಂಜೆಯಚ್ಚರಿ ಹೊನ್ನ ಬೆಳಕು
ಮಲೆ ಕಣಿವೆ ಬನ ಸರಸಿಯೆಲ್ಲವೂ ತೇಜಗೊಳೆ
ತುಸಕಾಲ ಬೆಳಗುತಳಿಯಿತು, ಆಯ್ತು ನಸುಕು.
ಕತ್ತಲೆಲ್ಲೆಡೆ ಈಗ-ಇದಿರುಮಲೆ ಕರಗಿತಿಗೊ
ಬಾನಿನೊಳು ಕದಡಿತಿಗೊ-ಬರಿ ಧೂಳುಗುಪ್ಪೆ;
ಇರುಳ ಹಾವಸೆಯಂತೆ ರೂವಳಿದು ತೇಲುತಿವೆ
ಕೆರೆಯ ಕರೆ ಮಾವು ನೇರಿಳೆ ಹೊಂಗೆ ಹಿಪ್ಪೆ.
ಜಗ ಮೆಲ್ಲನಳಿಯುತಿದೆ, ಮುಗಿಲ ಮರೆಯೊಳಗಾರೊ
ನಗುವ ತೆರವಾಯ್ತು ತಾರೆಗಳಟ್ಟಹಾಸ,
ಜೀವಕ್ಕೆ ಬಯಲಾಸೆ ತೀರಿದುದು, ಜನವಿಡುವ
ದೀಪದಿಂ ದೇಶಕ್ಕೆ ಕಿಂಚಿದವಕಾಶ.
ಕಮಲಕೊಕ್ಕರೆಯಿಂದ ಚೆಂದವಿದು, ಬಳಕೆಯಿಂ-
ದೆನಗಿನಿದು ಈ ಸರಸಿ-ಎಂತಾಗುತಿಹುದು!
ಬೂತವಾಡಿಸುತ್ತಿರುವ ರಾಜಕುವರಿಯ ತೆರದಿ
ನೀರ ಜಡೆ ಬಿಚ್ಚಿ ಹರಡಿರೆ ಭೀತಿಯಹುದು!
ಬೆಟ್ಟ ಕೆರೆ ಬನ ಬಾನು ಬಯಲೆಲ್ಲವೊಂದೀಗ,
ನನಗಿವಕು ಮುದದ ಬೇಹರ ತೀರಿತೀಗ.
ಸುತ್ತ ನೋಡೆನ್ನೆ ದೆಗು ದಾಳಿಯಿಡೆ ಸಾರುವೀ
ತಮಕೆ ನಾನೆದೆಗೆಟ್ಟು ಕಾಲ್ತೆಗೆವೆ ಬೇಗ!
*****