ಎಲ್ಲಿಂದ ಬರುತ್ತವೆಯೋ
ಹಾಳಾದ ಕಣ್ಣೀರು?
ಏಕೆ ಹರಿಯುತ್ತವೆಯೋ
ಬಳಬಳನೆ ಸುಮ್ಮನೆ!
ಗೋರಿಗಳ ಕೇರಿಯಲ್ಲಿ
ಮಸಣ ಸಮಾಧಿಯಲಿ
ಅಂತರಂಗದ ಏಕಾಂತ
ದೂರದೂರದ ತನಕ
ಹಬ್ಬಿರುವ ಮೌನದಲಿ
ಕುಟುಕುತ್ತಿದೆ ಗೋರಿಕಲ್ಲು
ಗಾಳಿಯಲಿ ಕನಸ ತೂರಿ!
ಏಕೆ ಹರಿಯುತ್ತಿದೆ
ಕಣ್ಣೀರು ಧಾರೆಧಾರೆ
ಹೇಳಿ ಹನಿಗಳೇ
ಧಾರೆ ಹಿಡಿದು ನೇರ
ಕಣ್ಣ ಕಿಂಡಿಯಿಂದ ಉಕ್ಕಿ
ಮೂಗಿನ ನೇರಕ್ಕೆ ಬಂದು
ಕಣ್ಣರೆಪ್ಪೆಯ ಕೆಳಗೆ
ಕೋಡಿಯನು ಕಟ್ಟಿ
ಹಿಡಿದಿಡಬಾರದೇ
ಉಪ್ಪು ನೀರಿನ ಬೆಳಕ
ಸ್ವಚ್ಛಂದ ಬೆಳ್ಳಕ್ಕಿ ಸಾಲಿನಲಿ
ಆ ಜನುಮದ ನೋವ
ಹರಿಯ ಬಿಡಬಾರದೇ
ಒತ್ತೊತ್ತು ಕನಸುಗಳ ಬಿತ್ತು.
*****