ಇಲ್ಲಿ ಈ ನೆಲದಲ್ಲಿ ಕೆಲವರು ಬದುಕಿದ್ದಾಗಲೇ ಸತ್ತಂತಿರುವರು. ಇನ್ನು ಕೆಲವರು ಸತ್ತರೂ ಇನ್ನೂ ಬದುಕಿರುವರು.
ನಾನು ೧೯೯೧ರಿಂದಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ಬರುತ್ತಲೇ ಇದ್ದೇನೆ. ಪ್ರತಿ ಬಾರಿ. ಅಲ್ಲಿ ನನಗೆ ತೀರಾ ಆಕರ್‍ಷಣೆಯೆಂದರೆ…. ತಿರುಮಲ ಮಂದಿರದ ಪ್ರವೇಶ ಬಾಗಿಲಲ್ಲೇ ಶ್ರೀಕೃಷ್ಣ ದೇವರಾಯ ಭಯಭಕ್ತಿಲಿ ಕರ ಮುಗಿದು ಶೋಭಾಯನಮಾನವಾಗಿ ನಿಂತು ನಮ್ಮನ್ನೆಲ್ಲ ಸ್ವಾಗತಿಸುತ್ತಿರುವ ಪರಿಗೆ ತನ್ನ ಎಡ ಮತ್ತು ಬಲಭಾಗದಲ್ಲಿ ಧರ್‍ಮಪತ್ನಿಯರೂ ಕೂಡಾ ಕರ ಮುಗಿದು ಪ್ರಸನ್ನವದನರಾಗಿ ನಿಂತಿರುವ ಭಂಗಿಗೆ ಬೆರಗಾದೆ.
ವಿಜಯನಗರ ನಿರ್‍ಮಾಣ ತೇಜ ಕನ್ನಡ ರಾಜ್ಯ ರಮಾರಮಣನೆಂದೇ ಖ್ಯಾತಿ ಪ್ರಖ್ಯಾತಿ ಪಡೆದಿದ್ದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮುತ್ತುರತ್ನ ವಜ್ರವೈಡೂರ್‍ಯಗಳನ್ನು ರಾಶಿರಾಶಿ ಹಾದಿಬೀದಿಯಲ್ಲಿ ಬಳ್ಳದಿಂದ ಅಳೆದು ಮಾರಿದ ಕಾಲದಲ್ಲಿದ್ದನೆಂಬುದಕ್ಕಿಂತ ಈಗ ಹೇಗೆ ಅಲ್ಲಿ ನಿಂತಿದ್ದಾನೆ. ಅಲ್ಲಿಯು ಸಲ್ಲಿದವ ಇಲ್ಲಿಯೂ ಹೇಗೆ ಸಲ್ಲುತ್ತಿರುವವನೆಂಬುದಿಲ್ಲಿ ಬಹಳ ಮುಖ್ಯವಾಗುವುದು!
ಶ್ರೀಕೃಷ್ಣದೇವರಾಯನಿಲ್ಲಿ ಜೀವಂತವಿದ್ದಾನೆ ಅನಿಸುವುದು, ಬಾಳಿ ಬದುಕಿ ಸತ್ತಿಲ್ಲ. ಸತ್ತು ಇಲ್ಲಿ ಬದುಕಿದ್ದಾನೆ ಎಂದು ನಮ್ಮ ಕಣ್ಣಿದುರಿಗೆ ಮೆರವಣಿಗೆ ಹೊರಡುವನು. ಇದಕ್ಕಿಂತ ಭಾಗ್ಯ ಇನ್ನಿಲ್ಲವೆನಿಸುವುದು.
ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ಪರಮ ಆರಾಧಕನಾಗಿದ್ದನಲ್ಲದೆ, ಇಬ್ಬರು ಸತಿಯರೊಂದಿಗೆ ಪ್ರತಿ ತಿಂಗಳಿಗೊಮ್ಮೆ ಬಂದು ಅಮೂಲ್ಯವಾದ ಪಚ್ಚೆ ಮುತ್ತು ರತ್ನ, ವಜ್ರ, ವೈಡೂರ್‍ಯ, ಚಿನ್ನವನ್ನರ್‍ಪಿಸಿ ತೆರಳಿದ್ದಕ್ಕೆ ಇಲ್ಲಿ ದಾಖಲೆಗಳಿವೆ! ಬರೀ ಚಿನ್ನದಿಂದ ನಿರ್‍ಮಿಸಿಕೊಟ್ಟ ಆನಂದ ನಿಲಯಂ ಕೂಡಾ ಇವರ ಕೊಡುಗೆಯಾಗಿದೆ.
– ಹೀಗೆ ಶ್ರೀಕೃಷ್ಣದೇವರಾಯ ಹಾಗೂ ಇಬ್ಬರು ಧರ್‍ಮಪತ್ನಿಯರೂ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇಂದಿಗೂ ಜೀವಂತಿರುವರು. ಎಲ್ಲರ ಮನೆ ಮನಗಳಲ್ಲಿ ನೆಲೆ ನಿಂತಿರುವರು, ಜೀವನವೆಂದರೆ… ಇದಕ್ಕಿಂತ ಹೆಚ್ಚಿನದು ಇರುವುದಿಲ್ಲವಲ್ಲವೇ??
*****