ಒಂದಿಷ್ಟೇ ಹೀರಿ
ಪಕ್ಕಕ್ಕಿಟ್ಟಿದ್ದ
ಕಾಫಿ ಕಪ್ಪಿನೊಳಗೆ
ಭರ್ರನೆ ಹಾರಿ ಬಂದ
ಪಾಪದ ನೊಣ
ಸರ್ರನೆ ಬಿದ್ದಾಗ
ಕರುಳು ಚುರ್ರೆಂದು
ಎರಡೇ ಬೆರಳು
ಕಾಫಿಯಲ್ಲಿ ಅದ್ದಿ
ನೊಣ ಹೊರತೆಗೆದೆಸೆದು
‘ಜೀವ ಉಳಿಸಿದೆ’
ಎಂದು ಬೀಗುವಾಗ
ರೆಕ್ಕೆ ಕೊಡವಿ
ಫಕ್ಕನೆದ್ದ
ಅದೇ ನೊಣವು ಮತ್ತೆ
ಮತ್ತೆ ಕಾಫಿ ಕಪ್ಪಿನೊಳಗೇ
ಹಾರಿಬಿದ್ದು
ರೆಕ್ಕೆಯಾಡಿಸಿ
ಮೀಸೆ ತಿರುವಿ
ನಗುವಾಗ
ಇದೇನು
ಮನರಂಜನೆಗಾಗಿ ಈಜೋ
ಕಾಫಿ ಕುಡಿಯುವ ಮೋಜೋ
ಮನೋವ್ಯಥೆಯಿಂದ
ಆತ್ಮಹತ್ಯೆಯೋ
ಕಾಫಿ ಕಪ್ಪಿಗೆ ಬಿದ್ದು
ಗೆಲ್ಲುವ ಚಾಲೆಂಜೋ?
ಅರ್ಥೈಸುವುದು ಹೇಗೆ?
*****