೧
ಹಿಮಂತದೆಳೆದಿನ ಕಳಕಳಿಸಿತ್ತು,
ಬಿಸಿಲೋ ಬೆಚ್ಚನೆ ಬಿದ್ದಿತ್ತು;
ಬಿಡುವೆಲ್ಲೆಲ್ಲಿಯು ಮೈದೋರಿತ್ತು,
ಸದ್ದೋ ಮೌನದಿ ಕೆಡೆದಿತ್ತು.
ಹೊಲದೊಳು ತೋಟದಿ ಗದ್ದೆಯ ಬಯಲೊಳು
ಅನ್ನ ಸಮೃದ್ಧಿಯ ಸಿರಿಯಿತ್ತು,
ತಿರೆಯಂದಿನ ಆ ಪ್ರಶಾಂತ ಭಾವದಿ
ಕೃತಕೃತ್ಯತೆಯಾ ಗೆಲವಿತ್ತು.
“ಕ್ಲೇಶವ ತೊರೆ ಬಾ, ಶಾಂತಿಯ ಕೊಳು ಬಾ,
ಚಿಂತೆಗು ಬಿಡುವಿರಲೀ ಹೊತ್ತು:
ಎಲ್ಲರಿಗೆಲ್ಲಕು ಬಿಡುಎಂದೆ”ನ್ನುತ
ಕೆರೆದಡ ಪಾಂಥನ ಕರೆದಿತ್ತು.
ಕಾಯದ ಚಿಂತೆಯೆ ಕರಣದ ಚಿಂತೆಯೆ
ಕರ್ಮದ ಚಿಂತೆಯೆ, ಈವೊತ್ತು,
ಎಲ್ಲದಕೆಲ್ಲಕು ಬಿಡುವಿರಲೆನ್ನುತ
ಕುಳಿತನು ಶಾಂತಿಗೆ ಮನತೆತ್ತು.
೨
ನಾಡಧಿದೈವದ ಮೃದು ನಿಃಶ್ವಾಸಕೆ
ಕೆರೆಯೆದೆ ತುಸ ತುಸ ಚಲಿಸಿತ್ತು;
ಕಿರು ಕಿರುದೆರೆಯೊಳು ಸೂರ್ಯನ ಬೆಳುನಗೆ
ಮುಕ್ಕಾಗದವೊಲು ಹಂಚಿತ್ತು.
ಈಷಚಂಚಲ ಜಲದರ್ಪಣದೊಳು
ಹರಿತಶ್ಯಾಮ ತಮಾಲತರು
ತನ್ನಂದಕೆ ತಾ ತಲೆಯನು ತೂಗಲು,
ಸೈ ಸೈ ಎಂದಿತು ಮೆಲ್ಲೆಲರು.
ಝಗಿ ಝಗಿ ಕೆಂಪಿನ ನಿಗಿ ನಿಗಿ ನೀಲದ
ಹೊಳೆ ಹೊಳೆ ಹೊನ್ನಿನ ತೊಡವಿನೊಲು,
ಹಕ್ಕಿಯ ಸೋಜಿಗ- ಅದೊ, ಮೀಂಚುಳ್ಳಿ!
ಎಂತಳವಟ್ಟಿದೆ ರೆಂಬೆಯೊಳು!
ಮಲೆ ಕೆರೆ ಹೊಲ ಬನ ಬುವಿ ಬಾನೆಲ್ಲಕು
ಮನವಿಂದೊಲಿದಿದೆ- ಎಲ್ಲಕ್ಕು;
ಸೃಷ್ಟಿಯ ಶಾಂತಿಯ ತಿರುಳೆನೆ ಇರುವೀ
ಹಕ್ಕಿಗೊ- ಎಲ್ಲಕು ತುಸಮಿಕ್ಕು.
೩
ತ್ರಿಗುಣೆಯ ತ್ರಿಗುಣಗಳಿಂತೀ ಸ್ಥಾಯಿಯೊ-
ಳೊದವುತ ಶಾಂತಿಯ ಸಮೆದಿರಲು,
ಅವಳೊಳಗನು ನಾನರಿತೆನೊ ಎಂಬೊಲು
ತಿಳಿವಿನ ನೆಮ್ಮದಿ ನನಗಿರಲು;
ಸರ್ರನೆ ಬಣ್ಣದ ಮಿಂಚೊಂದೆದ್ದಿತು,
ದುಃಸ್ವಪ್ನಕೆ ದಿನ ಬೆಚ್ಚಿದೊಲು-
ಕೆರೆಯೊಳು ಮರದಡಿ ಸಪ್ಪುಳವಾಯಿತು,
ಮೌನವೆ ನಿದ್ದೆಯೊಳೆದ್ದವೊಲು!
ಮತ್ತರೆಚಣದೊಳೆ ಸುಷುಪ್ತವಾಯಿತು
ಜಾಗೃತ ನಿಶ್ಯಬ್ದತೆ ತಿರುಗಿ;
ಮತ್ತದೆ ತಾಣದಿ ಸುಸ್ಥಿತವಾಯಿತು
ಮರದೊಳು ಮಿಂಚುಳ್ಳಿಯು ತಿರುಗಿ.
ಆದೊಡೆ ನನ್ನೀ ಪ್ರಶಾಂತಲೋಕದೊ-
ಳೇನಾಯಿತೊ ಅದ ಪೇಳಿದನೆ-
ಕೊಕ್ಕಿನ ಮೀನಿನ ನಸು ನಸು ನುಲಿತವೆ
ಶಾಂತಿಪ್ರಳಯವನೆಸಗಿತೆನೆ.
೪
ಇಂತೀ ತೆರದೊಳು ನೆಮ್ಮದಿಗೆಡಿಸುತ,
ನನ್ನನು ಮಾಕರಿಸುವ ತೆರದಿ,
ಮಾಟದ ಮೌನದ ನಗುವನು ನಗುವೀ
ನಿಯತಿಗೆ ತರಗುಟ್ಟಿದೆ ಭಯದಿ.
ಜೀವದ ಬೆನ್ನೊಳು ಸಾವನು ಹತ್ತಿಸಿ
ನಲ್ಮೆಯ ಬೆನ್ನೊಳು ಪೊಲ್ಲಮೆಯ
ಭಯವಾನಂದದ ನೆಳಲಂತಾಗಿಸಿ
ಕಾಡುವ ಕಠೋರನಾರಿವನು?
“ಆನಂದದೂಳೇ ಜನಿಸಿತು ಜೀವವು
ಆನಂದದೊಳೇ ಇದರಿರವು,
ಆನಂದವನೇ ಕುರಿತೋಡುವುದಿದು
ಆನಂದದೊಳೇ ಇದರಳಿವು”-
ಈ ತೆರ ನುಡಿದವ ಗಾವಿಲನೇ ಸರಿ!
ತುಸ ಕಂಡವನಾ ವನವಾಸಿ,
ರಕ್ಕಸರಾಜ್ಯದ ನಲ್ಮೆಯ ಮಾತೇ-
ಕೆನ್ನುತ ಪಲ್ಕಡಿದೆನು ರೋಸಿ.
೫
ಈ ಪರಿ ನೆಮ್ಮದಿಯಾಕಡೆ ತುದಿಯಿಂ
ಸಂದೆಗದಂಜಿಕೆಯಾ ತುದಿಗೆ
ತಡೆಬಡೆದಾಡಲು ಮನ ದೆಸೆಗೆಡುತಲೆ,
ತಿಳಿವಿಲಿ ಕಗ್ಗತ್ತಲೆಯೊಳಗೆ-
ಕರ್ಮಠ ವಿಪ್ರನ ವಿಸ್ಫುಟ ವಾಣಿಯೊ-
ಳೀ ಪರಿ ಮೈಗೊಳ್ಳುತಲಿಂದು
ನನ್ನುತ್ತರಿಸಲು ಮುಗಿಲಿಂದಿಲ್ಲಿಗೆ
ಅವತರಿಸಿತೊ ಕರುಣಾ ಸಿಂಧು-
ಎನ್ನುವ ತೆರದೊಳು ಮಂಟಪದೆಡೆಯಿಂ-
ದೊಯ್ಯನೆ ಸಾರುತ ಗಾಯನವು
ಸೋಜಿಗವೇನನು ಗೈಯಿತೊ ಗೀತಾ-
ತಾರಕಮಂತ್ರೋಚ್ಚಾರಣವು!
ಕೀಲಿಯನೇನನು ಮುಟ್ಟಿತೊ ಭಿತ್ತಿಯೊ-
ಳಾವ ಕಪಾಟವ ತೆರೆಯಿಸಿತೊ,
ನೆಲೆಯನದಾವುದ ನಿಲುಕಿಸುತಾತ್ಮಗೆ
ಕಣಸದನಾವುದ ತೋರಿಸಿತೊ!
“ಕೊಲ್ಲುವುದಿದು ಎಂದಾರಿದ ತಿಳಿವರೊ
ಕೊಲ್ಲಲ್ಪಡುವುದು ಇದು ಎಂದೂ,
ಇವರಿಬ್ಬರಿಗೂ ತಿಳಿವಿನಿತಿಲ್ಲವು-
ಇದು ಕೊಲ್ಲದು, ಕೊಲ್ಲಲ್ಪಡದು.
“ಜಗಮೆಲ್ಲವನಾವುದು ತುಂಬಿಹುದೋ
ಅದನರಿ – ಅಳಿವಿಲ್ಲದುದೆಂದು.
ಅವ್ಯಯಮಾದಿದ ನಾಶವ ಗೈಯಲು
ಆವನಿಗಾದರುಮಳವಲ್ಲ.
“ಈತನ ಶಸ್ತ್ರಂಗಳು ಕತ್ತರಿಸವುಯ,
ಈತನ ಸುಡಲರಿಯದು ಬೆಂಕಿ
ಈತನ ತೋಯಿಸೆ ನೀರಿಗುಮಾಗದು,
ಗಾಳಿಯುಮೀತನನೊಣಗಿಸದು.
“ಸಕಲ ಚರಾಚರ ಸೃಷ್ಟಿಯ ಮೊದಲನು
ಕಾಣೆವು, ಕಾಂಬೆವು ಮಧ್ಯವನು:
ಅ೦ತೆಯೆ ಕಂಡರಿಯೆವು ಕೊನೆಯಿರವನು –
ದುಃಖಿಪುದೇತಕೆ ಈ ಕತಕೆ?”
೬
ಜೀವ ಮಹಾಬ್ದಿಯ ಸಾವಿನ ಮೊಗೆಯಿಂ,
ಆನಂದವ ನೋವಳೆಗೋಲಿಂ,
ಅಳೆಯುತ, ಇಷ್ಟೇ ಎಂಬೆಯ, ಹುಂಬಾ,
ಮಮತಾ ಮೋಹದ ಕಣ್ಸೋಲಿಂ!
ಮೀನಿನ ದೃಷ್ಟಿಯೊಳಾಯಿತು ವಿಲಯಂ,
ಹಕ್ಕಿಯ ದೃಷ್ಟಿಯೊಳಭ್ಯುದಯಂ;
ಸಮಷ್ಟಿ ಜೀವದ ದೃಷ್ಟಿಯೊಳೇನಿದು?
ನೀನೆಂತರಿಯುವೆ ಆ ಪರಿಯಂ!
ನೋವಿಂ ನಲ್ಮೆಯ, ಸಾವಿಂ ಬಾಳ್ವೆಯ-
ನಾಗಿಪ ಧರ್ಮದ ಮರ್ಮವನು,
ಸೃಷ್ಟಿಯ ಕರ್ತನ ನಿಲುವಂ ನಿಲುಕದೆ,
ಅರಿಯಲು ಸಾಧ್ಯವೆ ಮಾನವನು?
ಮೀನೊಳು ನೋಯಿಸಿ ಖಗದೊಳು ನಲಿಯಿಸಿ
ಇಂತೆಯೆ ದೇಹದಿ ದೇಹದೊಳು
ವಿಧ ವಿಧ ರಸಗಳನೊಸರಿಸಿ, ಪಾಕವ-
ನೇನನು ಅಡುವನೊ ಸೃಷ್ಟಿಯೊಳು!
ಇತ್ತೆಡೆ ಕಾಯುತ, ಅತ್ತೆಡೆ ಕರಗುತ,
ಉತ್ತೆಡೆ ತಾಡನಕೀಡಾಗಿ,
ಕತಮರಿಯದೆ ಮಾರ್ಪಡುವುದು ಲೋಹಂ
ಯಾಂತ್ರಿಕನಿಚ್ಛೆಗೆ ವಶಮಾಗಿ.
ನೊಂದುದದಾವುದು? ನಲಿದುದದಾವುದು?
ಬಲ್ಲವರಿಗೆ ಭ್ರಮೆಯೇ ಇಲ್ಲಿ!
ಅಂತರ್ಯಾಮಿಯ ಯಂತ್ರಿಯ ನೋಟದಿ
ಮರುಗಲು ಕಾರಣಮೇನಿಲ್ಲಿ?
ಇಂತೀ ಪರಿಯೊಳು ಪರಿತರ್ಕಿಸುತಲಿ
ಪ್ರಶಾಂತನಾದೆನು ನಾನಂದು,
ಏತಕು ಒಲಿಯದೆ ಏನನು ಹಗೆಯದೆ
ಜ್ಞಾನದ ಯೋಗದಿ ನೆಲೆನಿಂದು.
*****