ಪಡುವ ಮಲೆಯ ಕಣಿವೆಯಾಚೆ
ಹೊತ್ತು ಹಾರಿಹೋಗುತಿತ್ತು,
ಮೂಡ ಮಲೆಯ ಹಲ್ಲೆ ಹತ್ತಿ
ಇರುಳ ದಾಳಿ ನುಗ್ಗುತಿತ್ತು;
ಬಿದ್ದ ಹೊನ್ನ ಕೊಳ್ಳೆ ಹೊಡೆದು
ಕಳ್ಳಸಂಜೆಯೋಡುತಿತ್ತು,
ತಲೆಯ ಬಾಗಿ ಪುರದ ದೀಪ
ಜೀವದೊಂದಿಗಿದ್ದಿತು.
ಪಾನಭೂಮಿಯಲ್ಲಿ ಮತ್ತ-
ಜನದ ಮಾತಿನಲ್ಲಿ ಚಿತ್ತ
ಗೋತಹಾಕುತಿತ್ತು ಭರದಿ
ಸೂತ್ರಕೆಟ್ಟ ಪಟದ ತೆರದಿ.
ಮದ್ಯತುಷ್ಟ ಮುದಿಯ ಚೆನ್ನ
‘ಕುಡಿಲ ಕುಡಿಲ’ ಎಂದು ತನ್ನ
ಮರಿಯಮಗನ ಮೂಗ ಹಿಡಿದು
ಬಾಯ ತೆರೆಸಿ, ಕಳ್ಳ ಸುರಿದು,
ತನ್ನ ಜೀವಕಾದ ನಲವ
ತನ್ನವನಿಗು ಹಂಚಿಕೊಡುವ
ಯತ್ನದಲ್ಲಿ ತೋರುತಿತ್ತು-
ವಿಕೃತ ವ್ಯಂಗ್ಯವೇಷವೆತ್ತು
ಪ್ರೇಮ, ಮನುಜ ಧರ್ಮವು.
ಭಾವವೇನು ಭಂಗಿಯೇನು
ಹಾಸ್ಯವೇನು ಲಾಸ್ಯವೇನು,
ಎಂತಂದರಂತು ತೋರಿ,
ಬವಣೆಯಸಯ ನುಣಚಿ ಜಾರಿ,
ಮರೆವುಕಿಂಡಿಯಿಂದ ದೂರಿ,
ಮುಕ್ತಿಯುನ್ಮಾದದಿಂದ
ವ್ಯಕ್ತವಾಯಿತಾನಂದ-
ಭೂತಧರ್ಮವು-ಸರ್ವ-
ಭೂತಧರ್ಮವು.
ಪಡುಬಡಗಲ ಮೂಲೆಯಲ್ಲಿ
ಕಾಳಿಯಿರುವ ತಾಣದಲ್ಲಿ
ಕಿಚ್ಚು ಇರುಳ ನೊಣೆಯುತಿತ್ತು,
ಭಯವ ಮೂಡಿ ಮಸಗುತಿತ್ತು,
ಜೀವ ಹೌಹಾರುತಿತ್ತು,
ಡುಮ್ಮಿ ಡುಕಿಟಿ ನಾನ ತತ್ತು
ಎನುತ ತಮಟೆ ದುಡಿಯುತಿತ್ತು-
ತನುವೊಳಾದ ಬೇನೆಗಾಗಿ
ವಿಶ್ವಜೀವ ಮೂಕವಾಗಿ
ವಿಣ್ಣವಿಣ್ಣ ದುಡಿವ ತೆರದಿ,
ಗಾಯಗೊಂಡ ತಾಣದಿ.
*****