ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ,
ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ
ಪಾತದದ್ಭುತ ಭೀಮಕಾಂತ ಕಮನೀಯತೆಗೆ
ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ;
ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ,
ಈ ನದಿಯ ಚಿತ್ರತರ ಭ್ರಗುಪತನ ಘೋಷವನು-
ಮೌನದಳತೆಗೆ ಶಬ್ದ ಬೆಳೆಯುವೀ ಮಾಟವನು!
ಕೇಳೆ ಕಿವಿ ಬೆದರುತಿರೆ, ನಾದವಾಹಿನಿ ಎಂತು,
ದೊರೆಯ ಬಿಡುಗಡೆಗೆಂದು ನಡೆತರುವ ಪಡೆಯಂತೆ,
ಕರಣಗಳ ಜರ್ಝರಿಸಿ, ಮತಿ ಮುತ್ತಿ, ಅರಿವಳಿಸಿ,
ಸೆರೆ ಸಿಲುಕಿದಾತ್ಮವನು – ತನ್ನ ಹಿರಿಮೆಗು ಮೀರೆ-
ದೊರೆತನದಿ ನಿಲಿಸುತಿದೆ ಸೃಷ್ಟಿ ಸಿಂಹಾಸನದಿ!
ಶಶಿ, ತಾರೆ, ಜಲಧಾರೆ, ಈ ಮೋದವಿಭವದಂತೆ
ತೋರುತಿವೆ-ಘೋಷ, ಕೃತಕೃತಿಯ ಜಯಘೋಷದಂತೆ.
*****