ಮೋಡಿ ಹಲವು ಮಾಯೆ ಹಲವು
ಮೋಡಿಕಾರನೊಬ್ಬನೇ
ಮಾಯಕಾರನೊಬ್ಬನೇ
ಚಿತ್ರ ಹಲವು ಬಣ್ಣ ಹಲವು
ಚಿತ್ರಕರನೊಬ್ಬನೇ
ಎಂಥ ಚಿತ್ರ ರಚಿಸುತಾನೆ
ಬಾನಿನಂಥ ಮೋಡದಂಥ
ಬೆಟ್ಟದಂಥ ಕಣಿವೆಯಂಥ
ಹೂದೋಟದಂಥ ವನದಂಥ
ಸೂರ್‍ಯೋದಯ ಸೂರ್‍ಯಾಸ್ತ
ಬೆಳಗು ಬೈಗು ಸಂಧ್ಯೆಯಂಥ
ಅದ್ಭುತದ ಚಿತ್ರಗಳ
ರಚಿಸುತಾನೆ ಚಿತ್ರಕಾರ
ಒಂದರಂತೆ ಒಂದು ಇಲ್ಲ
ರೂಪ ಬೇರೆ ರೇಖೆ ಬೇರೆ-ಆದರೂ
ಚಿತ್ರಕಾರನೊಬ್ಬನೇ
ಕಂಠ ಹಲವು ನಾದ ಹಲವು
ಹಾಡುಗಾರನೊಬ್ಬನೇ
ಎಂಥ ಹಾಡು ಹಾಡುತಾನೆ
ಮಳೆಯಂಥ ಹೊಳೆಯಂಥ
ಗಾಳಿಯಂಥ ಝರಿಯಂಥ
ಹಕ್ಕಿಯಂಥ ತುಂಬಿಯಂಥ
ಬಿದಿರ ದಟ್ಟ ಮೆಳೆಯಂಥ
ಅದ್ಭುತದ ಹಾಡುಗಳ
ಹಾಡುತಾನೆ ಹಾಡುಗಾರ
ಒಂದರಂತೆ ಒಂದು ಇಲ್ಲ
ಆಲಾಪ ಬೇರೆ ಏರಿಳಿತ ಬೇರೆ-ಆದರೂ
ಹಾಡುಗಾರನೊಬ್ಬನೇ
ನಾಟ್ಯ ಹಲವು ನಟನೆ ಹಲವು
ನಾಟ್ಯಕಾರನೊಬ್ಬನೇ
ಎಂಥ ನೃತ್ಯ ಮಾಡುತಾನೆ
ಮಿಂಚಿನಂಥ ಬೆಂಕಿಯಂಥ
ಸಮುದ್ರದಂಥ ಭೂಕಂಪದಂಥ
ನವಿಲಿನಂಥ ಚಿಗರೆಯಂಥ
ತುಂಬಿ ತೊನೆವ ಹೊಲದಂಥ
ಅದ್ಭುತ ನೃತ್ಯಗಳ
ಮಾಡುತಾನೆ ನಾಟ್ಯಕಾರ
ಒಂದರಂತೆ ಒಂದು ಇಲ್ಲ
ತಾಳ ಬೇರೆ ಭಂಗಿ ಬೇರೆ-ಆದರೂ
ನಾಟ್ಯಕಾರನೊಬ್ಬನೇ
ಶಬ್ದ ಹಲವು ಭಾಷೆ ಹಲವು
ಮಾತುಗಾರನೊಬ್ಬನೇ
ಎಂಥ ಮಾತು ನುಡಿಯುತಾನೆ
ಕವಿತೆಯಂಥ ಕಾವ್ಯದಂಥ
ಗಾದೆಯಂಥ ಶ್ಲೋಕದಂಥ
ಗದ್ಯದಂಥ ಪದ್ಯದಂಥ
ಆಡುವಂಥ ಹಾಡುವಂಥ
ಅದ್ಭುತ ಮಾತುಗಳ
ನುಡಿಯುತ್ತಾನೆ ಮಾತುಗಾರ
ಒಂದರಂತೆ ಒಂದು ಇಲ್ಲ
ಶೈಲಿ ಬೇರೆ ಅರ್ಥ ಬೇರೆ-ಆದರೂ
ಮಾತುಗಾರನೊಬ್ಬನೇ
*****