ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ
ಯಾವ ಭಾಗ್ಯದಿಂದಿಲ್ಲಿಗೆ ಬಂದೆ?
ನಿನ್ನ ಕಂಡು ಧನ್ಯನಾದೆ ತಂದೆ!
ಇನ್ನಾದಡಮೆನಿಸೆನ್ನೆದೆಯಿಂದೆ-
ಜಯ ಜಯ ಪಂಢರಿನಾಥ ವಿಠೋಬಾ! ||೧||
ತುಕಾರಾಮ ನಾಮದೇವರಿಲ್ಲಿ
ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ
ನಿನ್ನ ನಾಮಮೆದೆಯೊತ್ತುವೆನಲ್ಲಿ-
ಜಯ ಜಯ ಪಂಢರಿನಾಥ ವಿಠೋಬಾ! ||೨||
ನಡುವಲಿ ಕೆಯ್ಮಡಗುತ ನಿಡುನಿಂತೆ
ಕೃತಕೃತ್ಯನೊಲೆನ್ನ ಕಾವ ಮುಂತೆ
ಮುಗಿವುದೆಂತು ನಿನ್ನ ಕೆಲಸದಂತೆ?
ಜಯ ಜಯ ಪಂಢರಿನಾಥ ವಿಠೋಬಾ! ||೩||
೨ಬಬ್ಬುಳಿಯ ಮುಳ್ಳ ಮೆಳೆಯಲಿ ನಿಲ್ಲೆ,
ಏಕೆ ವಿಷಯವಿಷಮ ಮನಮನೊಲ್ಲೆ?
ನೀತಿಯಿದೇಂ, ದೇವ, ನೀನೆ ಬಲ್ಲೆ!
ಜಯ ಜಯ ಪಂಢರಿನಾಥ ವಿಠೋಬಾ ||೪||
ಸಕೂಬಾಯಿಯೊಡಬೀಸಿದೆ ಕಲ್ಲಂ,
ಗೋಮಾಯಿಯ ೩ಕಡಸಲಾಂತೆ ಜಲ್ಲಂ-
ನನ್ನ ಕಡೆಗೆ ಕಣ್ಣೆತ್ತಿದುದಿಲ್ಲಂ!
ಜಯ ಜಯ ಪಂಢರಿನಾಥ ವಿಠೋಬಾ ||೫||
೪ಹಳಸಿರದೆ ೫ಅಂದಿನಿಟ್ಟಿಗೆ ನಿನ್ನ?
ನೋಡ ಜೀಯ ತಂದಿಹೆ ಹೊಸತನ್ನ-
ಮೆಟ್ಟಿ ನಿಲ್ಲು ನಿಷ್ಠುರ ಮನಮೆನ್ನ,
ಜಯ ಜಯ ಪಂಢರಿನಾಥ ವಿಠೋಬಾ! ||೬||
ಪುಣ್ಯಸಲಿಲೆ ತಾಯೆ ಚಂದ್ರಭಾಗೆ,
ತೊಳಸೆನ್ನ ಮನದ ಶಂಕೆಯ ನೀಗೆ,
ಗುಳುಗುಳಿಸೊಡೆಯನ ನೆನವೆದೆ ಬೀಗೆ-
ಜಯ ಜಯ ಪಂಢರಿನಾಥ ವಿಠೋಬಾ! ||೭||
ಪೊರೆಯ! ತೊರೆಯ! ಇನ್ನೆರೆಯ ನೀನೆನ್ನ-
ಧನ್ಯನಾದೆ ಕಂಡೆನೆಂದೆ ನಿನ್ನ!
ನೀ ಮರೆವೊಡಮಿನ್ನಿದೆ ಮರೆಯೆನ್ನ-
ಜಯ ಜಯ ಪಂಢರಿನಾಥ ವಿಠೋಬಾ! ||೮||
ಗೆಯ್ದ ಪಾಪಮನಿತುಂ ನಿನಗರ್ಪಣ,
ಗೆಯ್ಯದ ಪುಣ್ಯಮದುಂ ನಿನಗರ್ಪಣ,
ಕಳೆದುಳಿದ ಜೀವಿತಂ ನಿನಗರ್ಪಣ,
ಜಯ ಜಯ ಪಂಢರಿನಾಥ ವಿಠೋಬಾ! ||೯||
ನಿನ್ನನೊಡೆಯ ಮತ್ತೇನನು ಬೇಡೆ-
ಬೇಡಲೇಕೆ ನೀ ಬೇಡದೆ ನೀಡೆ?
ಸಾಕಂತ್ಯವರಂ ನಾಲಗೆಯಾಡೆ –
ಜಯ ಜಯ ಪಂಢರಿನಾಥ ವಿಠೋಬಾ! ||೧೦||
*****
೧ ಮರುಧ್ವನಿಸು
೨ ಜಾಲೀಗಿಡ
೩ ಕಡವನ್ನು ದಾಟಿಸು
೪ ಹಳತಾಗು
೫ ದೇವರು ತನ್ನ ಭಕ್ತನಾದ ಪುಂಡರೀಕನ ಮನೆಗೆ ಬಂದಾಗ, ತಾಯಿತಂದೆಯವರ ಸೇವೆಯಲ್ಲಿ ನಿರತನಾಗಿದ್ದ ಆತನು ತಾನದನ್ನು ಮುಗಿಸಿ ಬರುವ ವರೆಗೆ ಇದರಲ್ಲಿರು ಎಂದು ಕೊಟ್ಟ ಇಟ್ಟಿಗೆ.