“ಇಡ್ಲಿ, ಚಟ್ನಿ, ಇಡ್ಲಿ!” ಎಂತ ಕೂಗಿಕೊಂಡು ಬೈಸಿಕಲ್ ಮೇಲೆ ಬಂದವನು ಹೊರಟು ಹೋಗಬೇಕಾಗಿತ್ತು, ತನ್ನ ಎಡ ಹಿಡಿದು; ಆದರೆ ಅವನು ಹಾಗೆ ಹೋಗಲಿಲ್ಲ. ದಿಲೇರಖಾನ್ ನಿಂತಿದ್ದ ಕಡೆಗೆ ಬಂದ.
ದಿಲೇರ್ ಹೇಳಿದ- “ಖಬರ್‍ದಾರ್ ಇದ್ಲೀಖಾನ್, ರವಾನಿಸಿ ಬಟ್ಟೇನ್ ಪೋಲಿಸ್ ಠಾನ್! ಯಾಕೋ ಬಂದಿ ಇಲ್ಲಿಗೇ? ಸರ್ಕಲ್ ಸ್ಟಾಂಡಲ್ಲಿ, ನಿಂತಿದ್ದಾನೆ ಪೋಲೀಸ್, ಬೆದರಿಕೊಂಡು ಹೋಗೋ ಜನಾಬ್ ಚಟ್ನೀ!”
ಇಡ್ಲೀ ತಂದವನು ನಗುತ್ತ ಹೇಳಿದ- “ಹೊಸದಾಗಿ ಹೂಡಿದ ಹೋರಿಯಾದರೆ ಬೆದರೀತಪ್ಪ, ನಾನು ಹಳೇ ದಫೇದಾರ್ ಹುಲಿ. ನನ್ನ ಮೀಶೆ ನೋಡೋ ಬೆಳ್ಳಗಾಗಿದ್ದರೂ ಬಿರುಸಾಗಿದೆ. ಪಾಪ, ಆ ಹೆಣ್ಣು, ಸಂಕಟ ಪಟ್ಟುಕೊಂಡು ಹೇಳಿತು……..ನಿನಗೆ ಈ ದಿನ ಮೊಟ್ಟೆನೂ ಕೊಡದೆ, ರೊಟ್ಟನೂ ಕೊಡದೆ ಕಳಿಸಿದಳಂತೆ ಹೌದೇನೋ! ಅಯ್ಯೋ ಚಿಗುರು ಮೀಸೆ ಸರ್ದಾರ ಕೈ ಕಾಲು ಸೋಲ್ಲಾವೊ! ಈಗ ಈ ಇಡ್ಲಿ ತಿನ್ನು, ಈ ಕಾಗದದಲ್ಲಿ ಕೈವರಿಸಿಕೊ, ಈ ಚಕ್ಕೋತನ ತೊಳೆ ಬಿಡಿಸಿ ಬಾಯಿಗೆ ಹಾಕೋತಾ ನಿಂತಿರು, ಕಾದುಕೊಂಡಿರು, ಜಟಕ ಬಂದರೆ, ಬಸ್ ನಿಲ್ಲಿಸು, ಹೆಂಗಸರು ಬಂದರೆ ಕಾರ್ ನಿಲ್ಲಿಸು. ವಿಶೀಳ್‌ಮಾಡು ಜೋರಾಗಿ!” ಹೀಗೆಂದು ಒಂದು ಕಟ್ಟು ಬೀಡಿ ಒಂದು ಬೆಂಕಿ ಪೊಟ್ಣ ಕೈಲಿಟ್ಟು ಹೊರಟುಬಿಟ್ಟ.
ದಿನಾರಿ ನೂರ್ ಈ ಸರ್ಕಲ್ ಸರದಾರನ ಹೆಂಡತಿ. ಅವಳೆ ಇಡ್ಲೀ ಕಳಿಸಿದ್ದವಳು. ಇಡ್ಲೀ ತಂದವನು ಕಾಸು ಇಸುಗೊಳ್ಳದೆ ಹೊರಟುಹೋದ. ಮುಂದೆ ಹಿಂದೆ ಎಡಬಲಗಳಿಂದ ಕಾರು, ಸೈಕಲ್ಲು, ಚಕಡಾ, ಲಾರಿ, ರಿಕ್ಷಾ ಮೊದಲಾದ್ದರ ನಡುನಡುವೆ ಚಿಳ್ಳೆ ಪಿಳ್ಳೆ, ತಾಯಿ ತಂದೆ, ಶೆಟ್ಟಿ ಸೋಮಯಾಜಿ, ಮುದುಕ ತದಕ, ಮೊದಲಾಗೆಲ್ಲ ಬರುವರು-ಒಂದು ನಿಮಿಷಕ್ಕೆ ಎಷ್ಟು ಕಾರು, ಎಷ್ಟು ಜನ, ಎಂತ ಲೆಕ್ಕ ಹಾಕಿಟ್ಟು ಕೊಂಡ ದಿಲೇರಖಾನ್, ದಿನ ದಿನವೂ ಇಂಥಿಂಥಾ ಕಡೆಯಿಂದ ಇಷ್ಟಿಷ್ಟೆ ಹೊತ್ತಿನಲ್ಲಿ, ಇಷ್ಟೇ ಕಾರು, ಇಷ್ಟೇ ಜಟಕ, ಇಷ್ಟೆ ಜನ ಬಂದಾರೆಂದು ಊಹಿಸಿಕೊಂಡಿದ್ದ. ಆ ಸರ್ಕಲ್ ನಲ್ಲಿ ಆ ಸಿಮೆಂಟ್ ಗದ್ದುಗೆಯಲ್ಲಿ ಕ್ರೋಟನ್ ಗಿಡಗಳ ನಡುವೆ ಅವನೇ ಸರ್ವಾಧಿಕಾರಿ. ‘ಸ್ಟಾಪ್-ಚಕ್ರ’ ತೋರಿಸಿದರೆ ನಿಲ್ಲಬೇಕು, ಕೈಯಾಡಿಸಿದರೆ ಹೋಗಬೇಕು, ಪೀಪಿ ಊದಿದರೆ ಹಿಂತಿರುಗಬೇಕು, ಯಾರಾದರೂ ಸರಿ. ಆ ದಿವಸ ದಿವಾನ್ ಬಹದ್ದೂರರ ರೋಲ್ಸ್‌ರಾಯ್ ನಂಥಾ ಗಾಡಿ ನಿಲ್ಲಿಸಿ ಬಿಟ್ಟ, ಷೋಫರನ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ! ಆಗ ಪಾಪ ಏನು ಮಾಡುತ್ತಾರೆ ದಿವಾನ್ ಬಹದ್ದೂರ್ ಸಾಹೇಬರು? ಅವರು ತಾವೇ ಇಳಿದು ಬಂದು ತಮ್ಮ ಡ್ರೈವಿಂಗ್ ಲೈಸೆನ್ಸ್ ತೋರಿಸಿ, ಷೋಫರನನ್ನು ಹಿಂದಕ್ಕೆ ಕಳಿಸಿ, ತಾವೇ ಡ್ರೈವ್ ಮಾಡಿಕೊಂಡು ಹೋದರು.
ರಂಗ್ಸೈಡು, ಓವರ್ ಲೋಡು, ಹೀಗೇ ಏನೇನೋ ಅಪರಾಧಕ್ಕೆಲ್ಲ ಸಿಕ್ಕಿಬಿಟ್ಟಿದ್ದರು ಎಂಥೆಂಥವರೆಲ್ಲ. ಒಂದು ಸಾರಿ ದಿಲೇರನ ಬೆನ್ನಿಗೆ ಸಿಕ್ಕಿದ್ದವರು ಇನ್ನೊಂದು ಸಾರಿ ಅವನನ್ನ ಮರೆಯುವ ಹಾಗೆ ಇರದೆ ಮಮತೆ ಇಟ್ಟಿರುತ್ತಿದ್ದರು. ಕಾನೂನುವಂತನೆಂದು ಇವನಲ್ಲಿ ದ್ವೇಷ ಯಾರಿಗೂ ಇರಲಿಲ್ಲ. ಅದರ ಫಲವಾಗಿ ದಿನಾರಿಯ ಅಡುಗೆಮನೆಯಲ್ಲಿ ಹಣ್ಣು ಹಂಪಲು ಹೂವು ಮೊದಲಾದ ಕಾಣಿಕೆಗಳು ಇಟ್ಟಾಡಿ ಹೋಗುತ್ತಿದ್ದುವು. ದಿಲೇರ ಕಾಸೆಂದೂ ಮುಟ್ಟುತ್ತಿರಲಿಲ್ಲ. ಅದೇ ಅವನ ಹಿರಿತನ.
ಐದು ಹಾದಿ ನಡುವೆ ಮೆಟ್ಟಲುಗದ್ದಿಗೆ ಕಟ್ಟಿ, ಖಾಕಿ ತೊಡಿಸಿ, ಪೇಟ ಇಟ್ಟು, ನಡುವಿನಲ್ಲಿ ಲಠ್ಠ, ಜೇಬಲ್ಲಿ ಪೀಪಿ, ಕಾಲಲ್ಲಿ ಆನೆ ಬೂಡ್ಸು, ಕೈಯಲ್ಲಿ ‘ಸ್ಟಾಪ್-ಚಕ್ರ’ ಕೊಟ್ಟು ನಿಲ್ಲಿಸಿದರೆ ಸುಮ್ಮನೆ ಆಯಿತೆ ಅವನೊಬ್ಬ ಮಹಾ ಅಧಿಕಾರಿ, ಚಲ್ತಿ ದುನಿಯಾದಲ್ಲಿ! ಅಂತರರಾಷ್ಟ್ರೀಯ ಹಾದಿಗಳು ಸೇರುವ ಬಳಿ ನಿಲ್ಲುವ ಯಾವ ಮಹಾಧಿಕಾರಿಗೂ ಆತನು ಸರಿಸಮ.
ಅವನೇ ಪೋಲಿಸ್ ರಾಜ. ದಿನಾರಿಯ ರಾಜ-ಮನೆಯಲ್ಲಿ, ಸಂಚಾರಿ-ಪ್ರಜೆಗಳ-ರಾಜ ಇಲ್ಲಿ. ಗಾಬರಿಯ ಗೌರವಕ್ಕೆ ಗುರುತಾದ ಮೂರ್ತಿ. ಅವನಂಥಾ ಪೋಲಿಸನೇ ಪಾಲಿಸುವಾತ ನಗರವನ್ನು -“ಶಿವಾಸ್ತೆ ಪಂಥಾನಸ್ಸಂತು” – ಎಂಬುದು ದಿಟವಾಗಬೇಕಾದರೆ ಈ ಹಾದಿಯಲ್ಲೇ ಹೋಗಿರಿ! ನಿಮ್ಮ ಕ್ಷೇಮ ಸಂಪಾದನೆಗೆ ನನ್ನ ಕೈ ನೇರದ ಹಾದಿ, ನನ್ನ ಬಲವಂದು ಹೋಗಿ!”
ಈ ರೀತಿಯಾಗಿ ದಾರಿ ತೋರಿಸುವ ಪೊಲೀಸ ಅಧಿಕಾರಿ….ಜನರ ಹೆಜ್ಜೆಯಿಂದಲೇ ಅವರ ಮನೋಗತವನ್ನು ಅರಿಯಬಲ್ಲ! ರಾಜಠೀವಿಯಿಂದ, ನೆಲವನ್ನು ಅನುಗ್ರಹಿಸುತ್ತ ಹೋಗುವವನ್ನು ಅವನು ಮಾತಾಡಿಸುವುದಿಲ್ಲ. ಧಿಕ್ಕಾರದಿಂದ ಭೂಮಿಯನ್ನು ಒದ್ದುಕೊಂಡು ನಡೆವವನು ಎಂದಾದರೊಂದು ದಿನ ತನ್ನ ನಾಶಕ್ಕೆ ಸಿಕ್ಕುವವನಂದು ದಿಲೇರನಿಗೆ ಗೊತ್ತು. ಹಗಲು ಹಿಂಗಾಲಮೇಲೂ ರಾತ್ರಿ ಮುಂಗಾಲಮೇಲೂ ಭಾರ ಊರಿ ನಡೆಯುವಂಥಾ ಕೊರಮನನ್ನು ಕಂಡರೆ ಅವನು ಬಿಡುವುದಿಲ್ಲ. ಪೋಲಿಸನಿಗೆ ವಾಹನಗಳ ಹಿಂಭಾಗ ಮುಂಭಾಗಗಳ ಮೇಲೂ ಹಾಗೇ ತಿರುಗುವವರ ಹಿಮ್ಮಡಿ, ಮುಮ್ಮಡಿಗಳ ಮೇಲೂ ಕಣ್ಣು, ಅಂತೂ ಪೋಲೀಸು ನಗರಕ್ಕೊಂದು ನಯನ.
ಇಂಥಾ ದಿಲೇರಖಾನ್ ಒಮ್ಮೆ ಬೀದಿಯ ಭಿಕಾರಿಯಾಗಿದ್ದನು. ತಂದ ತಾಯಿಯರ ಗುರುತರಿಯದೆ ಚೌಕದ ಚದುರನಾಗಿದ್ದನು. ಬಿಡಿ ಸಿಗರೇಟು ತುಂಡುಗಳು ಸಿಕ್ಕಿದಷ್ಟೆಲ್ಲ ಹರಕಂಗಿಯ ಕಿಸೆಗಳಲ್ಲಿ ತುಂಬಿಕೊಂಡು ಬೆಂಕಿ ಪೆಟ್ಟಿಗೆಗಳನ್ನು ಹುಡುಕಿ ತಿರುಗುತ್ತಿದ್ದು, ಹಸಿವಾದಾಗ ಹಣ್ಣಂಗಡಿಗಳೆದುರಿನಲ್ಲಿ ಹೊಂಚುಹಾಕಿಕೊಂಡು ಕಾದಿದ್ದು, ರೊಟ್ಟಿ ಅಂಗಡಿಗಳಲ್ಲಿಯೂ, ಕಾಕ ಹೋಟಲುಗಳಲ್ಲಿಯೂ ಸರಬರಾಜು ಮಾಡಿ ಹೊಟ್ಟೆ ತುಂಬಿಸಿಕೊಂಡು, ಯಾವುದಾದರೂ ಜಗುಲಿಯಲ್ಲಿ ಪವಡಿಸಿಬಿಡುತ್ತಿದ್ದನು. ಕಾಗೆ ನಾಯಿಗಳ ಕೂಗೇ ಉವಡ ಅವನಿಗೆ. ನಲ್ಲಿಯ ಬಳಿಯೇ ಬಚ್ಚಲು ಮನೆ ಅವನ ಮುಖದಲ್ಲಿ ಯಾವುದೋ ವಿಲಕ್ಷಣ ಮಾಟವಿತ್ತು ಬೆಳಕಿತ್ತು. ಯಾರಾದರೂ ಅವನನ್ನು ಕರೆದು ಏನಾದರೂ ಕೆಲಸಮಾಡಿಸಿಕೊಂಡು ತೃಪ್ತಿ ಪಟ್ಟು ಕೈಲಿದ್ದದ್ದು ಏನಾದರೂ ಕೊಟ್ಟು ಕಳುಹಿಸುತ್ತಿದ್ದರು.
ಕಡೆಗೊಬ್ಬ ಜಟಕಗಾಡಿಯ ಮಾಲೀಕನು ಈ ಭಿಕಾರಿಯನ್ನು ತನ್ನ ಬಳಿಯಲ್ಲಿಟ್ಟುಕೊಂಡನು. ಆಗಲೂ ಮನೆ ಸೇರದೆ ಗಾಡಿಯಲ್ಲೇ ಮಲಗುತ್ತಿದ್ದನು, ಒಂದೆರಡು ವರ್ಷಗಳಲ್ಲಿ ಜಟಕ ನಡೆಸುವುದನ್ನು ಚೆನ್ನಾಗಿ ಕಲಿತನು. ತುಂಬ ಬಾಡಿಗೆ ಹಣ ತರುತ್ತಿದ್ದ ಈತನನ್ನು ಬಿಡುವ ಮನಸ್ಸಿಲ್ಲ ಆತನಿಗೆಂದು ತಿಳಿದಾಗ, ಅವನನ್ನು ಬಿಟ್ಟು, ಬಸ್ಸು ತೊಳೆಯುವ ಕೆಲಸಕ್ಕೆ ಸೇರಿಕೊಂಡನು. ಸಾಹುಕಾರನು ಈ ಬಾಲಕನಲ್ಲಿ ಮೆಚ್ಚುಗೆ ತೋರಿಸುವುದಕ್ಕಾಗಿ ಕಂಡಕ್ಟರ ಕೆಲಸಕ್ಕೇರಿಸಿ ಬಿಟ್ಟನು. ನಿರ್ವಾಹವಿಲ್ಲದೆ ರುಜು ಮಾಡುವಷ್ಟು ಅಕ್ಷರ ಕಲಿತನು ಈ ದಿಲೇರ್ ಖಾನ. ಅದೂ ಏನು ಬಹಳವಲ್ಲ ಖಾನ್ ಎಂಬುದು ಮಾತ್ರ ಅವನ ದಸ್ಕತ್ತು. ಖಾನ್ ಆಗಾಗ್ಗೆ ಸ್ಟಿಯರಿಂಗ್ ಹಿಡಿದು ಗಿಯರಿಂಗ್ ಬದಲಾಯಿಸಿಕೊಂಡು ಇಡೀ ಬಸ್ಸನ್ನೇ ತೊಳೆಯುವ ಹಳ್ಳದಿಂದ ರಸ್ತೆಯವರೆಗೆ ನಡೆಸುವುದನ್ನೂ ಕಲಿತನು.
ಅವನು ಖಾನ್ ಆಗಲು ಕಾರಣವೇನು? ಯಾರ ಮಗನೋ, ಮಹಾ ದೇವನ ಯಾವ ಹೆಸರಿನ ಭಕ್ತಿಕಾಸಾರದ ಕಮಲವೋ, ಈಗ ಯಾವ ಮಂದಿರದಲ್ಲಿ ಆ ದೇವನನ್ನು ಕಾಣಬೇಕೋ ಅವನೇ ಅರಿಯನು. ಕಂಡವರು ಇವನ ಚರ್ಯದಿಂದ ಇವನು ಮಹಮದೀಯನಿರಬಹುದೆಂದರು. ಈ ಬಾಲಕನ ದರ್‍ಪವೇ ಇವನಿಗೆ ಖಾನ್ ಎಂಬ ಬಿರುದನ್ನು ತಂದುಕೊಟ್ಟಿತು. ಹೆಸರಿಲ್ಲದ ಈ ಮೂರ್ತಿಯು ‘ಖಾನ್’ ಆಗಿ ಬಿಟ್ಟಿದ್ದನು. ಅಂತು ದಿಲೇರನು ಒಬ್ಬ ವ್ಯಕ್ತಿಯಾದನು.
ಬೀಡಿಯಾಗಲೀ, ಸಿಗರೇಟಾಗಲೀ, ಘನವಾಗಿ ಸೇದಿ, ಗಂಭೀರವಾಗಿ ನಿಂತು ಅದರ ಹೊಗೆಯಲ್ಲಿ ಇಡಿಯ ತನ್ನ ಭವಿಷ್ಯವನ್ನೇ ನೋಡುವಂತೆ ನಿಂತಿರುತ್ತಿದ್ದ. ಹರಕಲು ಪಾಯಿಜಾಮ, ಕೊಳಕಲು ಶರಟು, ಚಿಂದಿ ಚಿಂದಿ ಕೋಟಾದರೂ ಮೋಟಾರು ಸೀಟಿನ ಬುಡದಲ್ಲಿಟ್ಟು ಇಸ್ತ್ರಿ ಮಾಡಿ ಕೊಂಡು ಬಸ್ಸು ನಿಂತ ಹೊಸ ಊರಲ್ಲಿ ತಿರುಗುವನು. ಅವನ ಕ್ರಾಪು, ಅವನ ಮಾತು, ಅವನ ಠೀವಿಗೆ ಯಾರಾದರೂ ಪ್ರಯಾಣಿಕರು ಬೆರಗಾಗಿ ಅವನ ತಿಂಡಿತೀರ್ಥವೆಲ್ಲ ಜರುಗಿಸಿಬಿಡುತ್ತಿದ್ದರು. ಈ ಹುಡುಗನ ಗುಣಕ್ಕೆ ಮೆಚ್ಚಿ ಅವನಿಗೆ ಡ್ರೈವಿಂಗ್ ಲೈಸೆನ್ಸ್ ಕೊಡಿಸಿ ಡ್ರೈವರ್ ಪದವಿಗೆ ಏರಿಸ ಬೇಕೆಂದು ಯಜಮಾನನು ಪ್ರಯತ್ನ ಪಟ್ಟಾಗ, ಆ ಜಾಗವನ್ನೇ ಬಿಟ್ಟು ಕೊಟ್ಟು ಮಾಯವಾದನು : ದಿಲೇರನಿಗೆ ಯಾವ ಬಂಧನವೂ ಸೊಗಸದಿತ್ತು.
ಜನಮೆಚ್ಚಿನ ಹರೆಯನಾಗಿ ಬೆಳೆದ ಈತನು ಒಮ್ಮೆ ವಿಮಾನ ನಿಲ್ದಾಣಕ್ಕೆ ಹೋದನು. ಅಲ್ಲಿ ಆ ದಿನ ಬಹು ಗದ್ದಲ. ಹೋಗಿಬರುವ ಮೋಟಾರುಗಳ ಹೂಂಕಾರಗಳು, ಹ್ಯಾಟೆತ್ತಿ ಇಳಿಸಿ ಕೈ ಕುಲುಕಿ ಮಾತಾಡಿಸಿ ಓಡಾಡು ವವರ ಸಡಗರ. ಖಾನನು ನೋಡುತ್ತ ನಿಂತಿದ್ದವನು, ಅದಾರೋ ಬಂದವರಿಗೆ ಯಾವುದೋ ಧ್ಯಾನದಲ್ಲಿ ಸೆಲ್ಯೂಟ್ ಮಾಡಿದನು. ಆಗ ಹೊಸದಾಗಿ ಕಾರಲ್ಲಿ ಬಂದಿಳಿದಾತ “ಮೈ ಹೂಂ ಗುಲಾಮ್ ಷಾ !”
– ಹಾಂ ! ಧನ್‍ದೌಲತ್ ಹೈ!
– ದೇರ್ ಹೋಗಯಾ!
– ಯಶ್ !
– ಆಪಕಾ ಅರ್ಜಂಟ್ ಕಾಂ ಹೈ ?
– ನೋ!
– ಯೇ ಕಾರ್ ಮೇ ಬೈಟ್ ಕರ್…….. ಜರ್ರಾ…….
– ಸೈಡ್ ಮೇ ಪಾರ್ಕ್ ಕರ್‍ನಾ?
– ಎಸ್. ಎಸ್. ಗುಡ್ ಯಂಗ್ ಮ್ಯಾನ್!
– ಥ್ಯಾಂಕ್ಯೂ ಸರ್ !
ಖಾನಿಗೆ ಬಂದಿದ್ದ ಇಂಗ್ಲೀಷೂ ಅಷ್ಟೆ! ಆದರೆ ಕಾರ್ ನಡೆಸುವುದಂತೂ ಚೆನ್ನಾಗಿ ಗೊತ್ತು. ಗುಲಾಮ್ ಷಾ ಬೇಗ ಹಿಂತಿರುಗಿದನು ವಾಡಿಕೆ ಯಂತೆ ಸ್ಟಿಯರಿಂಗ್ ಚಕ್ರ ಕೈಗೆ ತೆಗೆದುಕೊಳ್ಳಲಿಲ್ಲ. ಏನೋ ಯೋಚಿಸುತ್ತ ಹಿಂದುಗಡೆ ಮೆತ್ತೆಯಲ್ಲಿ ಕುಳಿತುಬಿಟ್ಟರು. ಖಾನ್ ಮಾತಾಡದೆ ಗಾಡಿಯನ್ನು ಹೊರಡಿಸಿದನು. ಒಳ್ಳೆ ಗಾಡಿ ಝಂ ಎಂತ ಎದ್ದು ಬಿಟ್ಟಿತು. “ಪೋಲೀಸ್ ಹೆಡ್ ಕ್ವಾರ್ಟರ್‍ಸ್ ಜಾನಾ ಹೈ ?” ಎಂದು ಗುಲಾಂ ಷಾ ಕೇಳುತ್ತಾ ಸಿಗರೇಟ್ ಹಚ್ಚಿಬಿಟ್ಟರು. ತಾನೆ ಗಾಡಿ ನಿಧಾನಿಸಿದನು. ಗುಲಾಂಷಾ ಕೇಳಿದರು- “ಕ್ಯಾಹೊ?” ನಮ್ಮ ಖಾನನೆಂದನು-“ಲೈಸೆನ್ಸ್ ನೈ ಹೈ!” ಗುಲಾಂಷಹರಿಗೆ ಆಗ ನೆನಪಾಯಿತು, ಈತನು ಎಂದಿನ ಡ್ರೈವರಲ್ಲವೆಂದು, ಅವರೆಂದರು- “ಪರವಾ ನೈ, ಮೈ ದಿಲಾತುಂ ಲೈಸೆನ್ಸ್, ಮೆಹರ್‌ಬಾನ್ಸೆ ಚಲಾವ್!”
ಗಾಡಿ ಎಲ್ಲೆಲ್ಲೋ ಹೋಗಿ ಏನೇನೆಲ್ಲ ಮಹತ್ತರದ ಕೆಲಸಮಾಡಿ ಕೊಂಡು ರಾತ್ರಿಗೆ ಹಿಂತಿರುಗಿತು. ಇಷ್ಟು ದಿನಕ್ಕೆ ಈಗ, ಖಾನನಿಗೆ ಮನಸಾಮುಟ್ಟ ಆನಂದವಾಯಿತು. ಹೇಗಾದರೂ ಮಾಡಿ ಈ ಕಾರನ್ನು ಬಿಡದಂತೆ, ಇಲ್ಲಿಯೇ ಕೆಲಸಕ್ಕೆ ನಿಲ್ಲೋಣವೆಂದು ಯೋಚಿಸುತ್ತಿರುವಾಗ ಸಾಹುಕಾರರು ಮನೆಯೊಳಕ್ಕೆ ಹೋಗಿ ಹಿಂತಿರುಗಿ ಬಂದು, ಮೋಟಾರೊಳಗಿದ್ದ ಹರೆಯ ಖಾನನನ್ನು ಕೂಗಿ ಕರೆದರು. ದಿಲೇರನು ಒಳಗೆ ಹೋದ ಕೂಡಲೆ, ಒಬ್ಬಳು ಹರೆಯದ ಹೆಣ್ಣು ಟೀ, ಟೋಸ್ಟ್, ಹಣ್ಣುಗಳನ್ನು ತಂದು ಪುಟ್ಟ ಮೇಜಿನ ಮೇಲಿಟ್ಟಳು. ತಿಂಡಿ ತೀರ್ಥವಾದ ನಂತರ ಗುಲಾಂಷಾರು, ಅವಸರದ ಕೆಲಸವಿದೆಯೆಂದು ಹೊರಡುವ ಮುನ್ನ, ತಮ್ಮನೆಯ ಆ ಹೆಣ್ಣಿಗೆ ಏನೋ ಹೇಳಿಹೋದರು.
“ಮೇರ ನಾಮ ಹೈ ದಿನಾರಿ!”- ಎಂತ ಆ ಹೆಣ್ಣು ಆರಂಭಮಾಡಿ ತನ್ನ ತಂದೆಯ ಹೆಸರನ್ನೂ, ಖ್ಯಾತಿಯನ್ನೂ ವಿವರಿಸಿ ಖಾನನ ಹೆಸರು, ಕುಲಗೋತ್ರಗಳನ್ನು ಕೇಳಿದಳು. ಈ ಹರೆಯನಿಗೆ ತುಂಬಾ ಲಜ್ಜೆ ಆವರಿಸಿತು. ಏನೂ ಹೇಳಲಾರದೆ ಬೆಳಗ್ಗೆ ಬರುವೆನೆಂದು ಹೇಳಿ ಹೊರಬಿದ್ದನು. ಆ ದಿನದ ಊಟ ಕಳೆದಿತ್ತು. ರಾತ್ರಿಗೆ ಠಿಕಾಣಿಯಿರಲಿಲ್ಲ. ಆದುದರಿಂದ ಸ್ವಲ್ಪ ಅಲ್ಲಿ ಇಲ್ಲಿ ಅಡ್ಡಾಡಿ ಬಂದು ಅರ್ಧರಾತ್ರಿ ಸುಮಾರಿಗೆ ಅದೇ ಗುಲಾಂ ಷಾಹರ ಜಗುಲಿಯಲ್ಲಿದ್ದ ಸೋಫಾದಲ್ಲಿ ಮಲಗಿದನು.
ರಾತ್ರಿ ನಿದ್ದೆ ಬರಲಿಲ್ಲ. ಪರಪುಟ್ಟನಾಗಿ ಬೆಳೆದವನು ಇಂದು ಯಾವ ಮನೆತನದ ಹೆಸರನ್ನೂ ಅರಿಯದವನಾಗಿದ್ದನು. ಅವನ ಹೆಸರೇ ಅವನಿಗೆ ಅರಿಯದು. ಬೆಳಗ್ಗೆ ಗುಲಾಂಷಾಹ ಸಾಹುಕಾರರು ಕೇಳಿದರೆ ಏನೆನ್ನ ಬೇಕೆಂದೆಲ್ಲ ಯೋಚಿಸಿದನು. ಬಗೆಹರಿಯಲಿಲ್ಲ. ಆದ್ದರಿಂದ ಹೆಸರೊಂದಾದರೂ ಗಟ್ಟಿಯಾಗಿರಲೆಂದು ಯೋಚಿಸಿ, ದಿನಾರಿಯ ಹೆಸರಿಗೆ ಸಮೀಪವಾಗಿ ತನ್ನ ಮನಸಿದ್ದುದರಿಂದ ದಿಲೇರಖಾನ್ ಎಂತ ಹೇಳಿಕೊಂಡರೆ ಸರಿ ಹೋಗ ಬಹುದೆಂದು ಸ್ಥಿರಮಾಡಿ, ಉಳಿದೆಲ್ಲವನ್ನು ಇದ್ದಕ್ಕಿದ್ದಂತೆ ಹೇಳಿದರಾಯಿತೆಂದುಕೊಂಡು, ಕಣ್ಣು ಮುಚ್ಚಿದವನಿಗೆ. ದಿನಾರಿಯ ಕರೆಯಿಂದಲೇ ಮಾರನೇ ದಿನ ಎಚ್ಚರವಾಯಿತು. ಹರೆಯನಿಗೆ ಇಂಥಾ ಅವಸ್ಥೆಗಳೆಲ್ಲ ಪಾಟವಾಗಿದ್ದರೂ, ಗುಲಾಂ ಸಾಹೇಬರಿಗೂ, ದಿನಾರಿಗೂ, ಈತನನ್ನು ಕಂಡು ತುಂಬಾ ಕನಿಕರ ಪಡುವಂತೆ ಆಯಿತು.
ದಿಲೇರನು ಗುಲಾಂಷಾಹರ ಮನೆಯಲ್ಲಿ ನೆಂಟನಂತೆ ನಿಂತರೂ, ತನ್ನ ಎಚ್ಚರಿಕೆಯನ್ನು ಬಿಡದೆ ಅಲ್ಪ ಸ್ವಲ್ಪ ಅಕ್ಷರಾಭ್ಯಾಸ ಮಾಡಿದನು. ಗುಲಾಂಷಹರು ದಿಲೇರನನ್ನೂ ದಿನಾರಿಯನ್ನೂ ಕರೆದುಕೊಂಡು ಹಿಂದೂಸ್ತಾನದ ಅನೇಕ ನಗರಗಳಲ್ಲಿ ವ್ಯಾಪಾರಕ್ಕಾಗಿ ನಿಂತಿದ್ದು ಬರಬೇಕಾಯಿತು. ಅವಕಾಶ ಸಿಕ್ಕಿದಾಗಲೆಲ್ಲ ದಿಲೇರನು ತನ್ನ ಓದಿನ ಜತೆಗೆ ಮೋಟಾರು ಮತ್ತು ವಿಮಾನಗಳ ಒಳ ಹೊರಗನ್ನೆಲ್ಲ ಅತ್ಯಾಸಕ್ತಿಯಿಂದ ಗಮನವಿಟ್ಟು ನೋಡುತ್ತಿದ್ದನು. ಇದರಿಂದ ಅವನ ಲೋಕಾನುಭವ ಬಳೆಯಿತು.
ಗುಲಾಂ ಷಾಹರು ತಮ್ಮ ದೇಶಕ್ಕೆ ಹಿಂತಿರುಗಿದರು. ತಮ್ಮ ಸ್ವಂತ ಮನೆಯಲ್ಲೆ ನಿಂತರು. ಆದರೆ ದಿಲೇರನಿಗೆ ಏನುಮಾರ್ಗ ತೋರಿಸ ಬೇಕೆಂದು ಅರಿಯದಾದರು. ಅವರ ಮಗಳೂ ಹರೆಯನೂ ಇದುವರೆಗೂ ಕೇವಲ ಅವ್ಯಾಜ ಮೈತ್ರಿಯಲ್ಲಿ ಬೆಳೆದರು. ಈಗ ಅವರನ್ನು ಬೇರೆಮಾಡುವುದು ಸರಿಯಲ್ಲ. ಅವರೀರ್ವರಿಗೆ ವಿವಾಹ ಸಂಬಂಧವಾದರೆ ಹೇಗಾದೀತು? ಮತ್ತು ಆತನಿಗೆ ಸರ್ಕಾರಿಯ ಕೆಲಸವೊಂದನ್ನು ಕೊಡಿಸಿದರೆ ಸರಿಹೋದೀತೆ ಎಂದು ಯೋಚಿಸಿದರು.
ಕೆಲವುದಿನಗಳನಂತರ ದಿನಾರಿಯ ಇಷ್ಟದಂತೆ ದಿಲೇರನ ಸಂಗಡ ವಿವಾಹವಾಯಿತು. ದಿಲೇರನ ಇಷ್ಟದಂತೆ ಪೋಲಿಸು ಇಲಾಖೆಯಲ್ಲಿ ಕೆಲಸವಾಯಿತು. ದಿಲೇರನಿಗೆ ಮೊದಲಿಂದ ಪೋಲೀಸು ಇಲಾಖೆಯಲ್ಲಿ ಬಹಳ ಗೌರವಿದ್ದುದರಿಂದ, ಅಲ್ಲಿ ಕಾನ್‍ಸ್ಟೆಬಲ್ ಆದರೂ ಆಗಿರಲು ಒಪ್ಪಿದನು. ಗುಲಾಂ ಷಾಹ ಹಿರಿಯ ನೌಕರರಿಗೆಲ್ಲ ಗೌರವದ ಗೆಳೆಯನಾಗಿದನು. ಆತನ ಮಾತು ನಡೆಯುವಂತಿತ್ತು ; ಆದುದರಿಂದ ದಿಲೇರನನ್ನು ಟ್ರಾಫಿಕ್ ಕಂಟ್ರೋಲ್ ಮಾಡುವ ಕೆಲಸದಲ್ಲಿ ನಿಯೋಗಿಸಬೇಕೆಂದು ಕೇಳಿ ಕೊಂಡಿದ್ದನು. ಕಾರಣವಿಷ್ಟೆ – ಚೌಕದಲ್ಲಿ ಅವನು ಸಂಚಾರಿ ವಾಹನಗಳ ಮೇಲೆ ಎಚ್ಚರಿಕೆಯಿಟ್ಟು ಕೆಲಸಮಾಡುವುದನ್ನು, ಯಾವಾಗಲಾದರೂ ನೋಡುತ್ತಿರಬಹುದೆಂದೂ ಮತ್ತು ಅಧಿಕಾರಿಗಳ ಕಣ್ಣಿಗೆ ಅವನು ಬೀಳುತಿರುವನೆಂದೂ ಹಾಗಾದರೆ ದಿಲೇರನ ಭವಿಷ್ಯದ ಆಗುಹೋಗುಗಳಿಗೆ ಅನು ಕೂಲವೆಂದೂ ಭಾವಿಸಿದ್ದರು.
ದಿನಾರಿಯ ಇಷ್ಟದಂತೆ ಗುಲಾಂಷಾಹರ ಬಂಗಲೆಗೆ ಸ್ವಲ್ಪ ದೂರದಲ್ಲಿ ಪುಟ್ಟ ಮನೆ ಬಾಡಿಗೆಗೆ ತಗೆದುಕೊಂಡು ಅಲ್ಲೊಂದು ಪುಟ್ಟ ಸಂಸಾರ ಹೂಡಿಯಾಯಿತು. ಅದೇ ಸಂಸಾರ ಸಾತೆಯಲ್ಲಿ ಪುಟ್ಟದಾದ ಒಂದು ಗುಲಾಬಿಯು ಉದ್ಭವವಾಗಿ “ಛೋಬಿ” ಎಂಬ ಹೆಸರಿಗೆ “ಮೀ” ಎನ್ನುತಿತ್ತು.
“ಛೋಬೀ” ಮಾಡದ ತುಂಟತನವಿಲ್ಲ. ಒಂದು ದಿನ ಪೋಲೀಸ್-ಪೇಟ ಬಿಚ್ಚಿ ಅದರಮೇಲೆ ಜೇನುತುಪ್ಪ ಸುರಿದು, ಸಿಹಿಯೇ ನೋಡೆಂದು ಅಪ್ಪನ ಬಾಯಿಗೆ ತುರುಕಿತ್ತು. ಆ ದಿನ ಅ ಅಪರಾನ್ಹ ಮೂರು ಗಂಟೆ ಹೊಡೆದಾಗಿತ್ತು. ಸರ್ಕಲ್ ಡ್ಯೂಟಿಗೆ ಪುನಹಾ ಬರಬೇಕೆಂದು ಕರೆ ಬಂದಿತ್ತು. ಹೇಗೆ ಹೋಗುವುದು ? ಪೋಲೀಸು ಇಲಾಖೆಯಲ್ಲಿ ನಿರ್ಬಂಧ ಬಹಳ. ಹೇಳಿದ ತಕ್ಷಣವೇ ಹುಕುಂ ಪಾಲಿಸಬೇಕು. ಅದರೆ ಈಗ ಸರಿಯಾದ ಡ್ರೆಸ್ಸೇ ಇರಲಿಲ್ಲ.
“ಅಯ್ಯೋ ಏನುಮಾಡಿ ದಯೇ ಛೋಬಿ!” ಎನ್ನುತ್ತ ದಿಲೇರ ಅಳಲಾರಂಬಿಸಿಬಿಟ್ಟ. ಆಗ ಯಾವನಾದರೂ ಅಗಸನನ್ನ ಹುಡುಕಿ ಪೇಟಾ ಒಗೆಯಿಸಿ ಅನಂತರ ಇಸ್ತ್ರಿ ಮಾಡಿಸಿ ಮತ್ತದನ್ನು ಯಾರ ಕೈಲಾದರೂ ಸುತ್ತಿಸಿಕೊಂಡು ಬರಬೇಕಾಗಿತ್ತು. ಈ ದಿನ ಹೊರಗಿನಿಂದ ಬರುವ ಅಧಿಕಾರಿಗಳ ಸಂಗಡ ಯಾರು ಯಾರು ಹಿರಿಯರೆಲ್ಲ ಓಡಾಡುವರೋ ಕಾಣದಾಗಿತ್ತು. ಸ್ವಯಂ ಗುಲಾಂಷಾಹರೇ ಬರಬಹುದು. ಏನುಮಾಡಿದರೆ ಸರಿಹೋದೀತೆಂದು ಪರದಾಡುತ್ತಿದ್ದಾಗ, ದಿನಾರಿಯು ಒಂದು ಸಲಹೆ ಕೊಟ್ಟಳು. ಆಗ ದಿಲೇರನು ಸ್ವಲ್ಪ ತೃಪ್ತನಾಗಿ ಅಗಸನ ಮನೆಗೆ ತೆರಳಿದನು-ಪೇಟದ ಪುನರವತಾರಕ್ಕೆ,
ಇತ್ತ ದಿನಾರಿಯು ಸರ್ಕಲ್ ಡ್ಯೂಟಿಗೆ ಇನ್ಯಾರನ್ನಾದರೂ ಕಳುಹಿ ಸೋಣವೆಂದು ತನ್ನ ನೆರೆಹೊರೆಯವರನ್ನೆಲ್ಲ ವಿಚಾರಿಸಿದಳು. ಸರ್ಕಲ್ ಸರದಾರರು ಯಾರೂ ಇರಲಿಲ್ಲ. ಇದ್ದವರೂ ಮನೆಯಲ್ಲಿರಲಿಲ್ಲ. ಆಗ ದಿನಾರಿಯು ತನಗಾಪ್ತಳಾದ ಬೀಬಿಯೊಬ್ಬಳ ಬಳಿ ಛೋಬಿಯನ್ನು ಬಿಟ್ಟು ತನ್ನಾತನ ಬಟ್ಟೆಗಳನ್ನು ಗಂಟುಕಂಟಿಕೊಂಡು ಹುಕುಂ ಕಾಗದವನ್ನು ಕೈಗೆ ತಗೆದುಕೊಂಡು ತಂದೆಯ ಮನೆಗೆ ವೇಗವಾಗಿ ಹೋದಳು.
ಅಲ್ಲಿ ಅವಳಿಗೆ ಹಿಡಿತಡೆಯಿಲ್ಲ. ಅಲ್ಲಿ ಒಳಗೆ ಹೋಗಿ ಮೈತೊಳದು, ಸಂಜೆಯ ಸೂರ್ಯನ ಕಡೆ ತಿರುಗಿ, ನಮಾಜ್ ಮಾಡಿ ಖುದಾ ಗಂಡಾಗುವ ಶಕ್ತಿ ಕೊಡೆಂದು ಬೇಡಿಕೊಂಡು ಗಂಡನ ಪೋಷಾಕನ್ನು ಧರಿಸಿ, ಅದರ ಮೇಲೆ ತನ್ನ ಕೂದಲನ್ನೂ ಹಣೆಯನ್ನೂ ಮುಚ್ಚುವಂಥ ಹ್ಯಾಟೊಂದನ್ನು ಇಟ್ಟು ಕೊಂಡು ಹೊರಟಳು.
ಸರ್ಕಲ್ಲಿಗೆ ತಲುಪುವ ವೇಳೆಗೆ ಡ್ಯೂಟ ಸಮಯ ಮೀರಿತ್ತು. ಯಾರೋ ಹೊಸ ಕಾನ್‍ಸ್ಟೆಬಲ್ಲೊ ಏನೋ, ಎಂದುಕೊಂಡು ಅಲ್ಲಿದ್ದವನು ಆರ್ಡರ ಚೀಟನೋಡಿ ದಾರಿಕೊಟ್ಟು, ಸೀಟಿಹಾಕುತ್ತಾ ಬೀಡಿ ಹಚ್ಚಿ ಕೊಂಡು ಸಂತೋಷವಾಗಿ ಹೊರಟುಹೋದನು.
ಸಂಜೆ ಆರರಿಂದ ಏಳರವರೆಗೆ ನಿಲ್ಲುವುದೇ ಕಷ್ಟವಾಯಿತು. ಬೂಡ್ಸು ಕಚ್ಚಿದ ನೋವೂ, ಸೀರೆಯಮೇಲೆ ಡ್ರೆಸ್ ಹಾಕಿದ ಸೆಖೆಯೂ, ಕೈ ಅಲು ಗಾಡಿಸಿದ ದಣಿವೂ ಬಹಳವಾಗಿತ್ತು. ಆಗಲೇ ಬರಬೇಕೇ ಪೋಲೀಸ್ ಸೂಪರ್ ಇಂಟೆಂಡೆಂಟ್, ತನ್ನ ತಂದೆ ಗುಲಾಂಷಾಹರ ಸಂಗಡ! ಕಾರು ಬಿಟ್ಟು ಕೊಂಡು ಹೋದವರು ಸ್ವಲ್ಪ ದೂರದಲ್ಲಿ ನಿಂತು “ಹ್ವಿಸಲ್” ಮಾಡಿದರು. ಸೂಪರ್ ಆಫೀಸರು ಪೀಪಿ ಊದಿದರೆ ಹೋಗಬೇಕೆಂದೇನೊ ಈಕೆಗೆ ಗೊತ್ತು, ಆದರೆ ಹೋಗುವುದು ಹೇಗೆ? ಆ ಸರ್ಕಲ್ ಗದ್ದುಗೆ ಬಿಟ್ಟರೆ ಅವಳು ಗಂಡಾಳಲ್ಲ-ಈ ನೂತನ ಪೋಲೀಸ್! ಇನ್ನೊಮ್ಮೆ “ಹ್ವಿಸಲ್‌ಮಾಡಿ” ಸೂಪರ್ ಇಂಟೆಂಡೆಂಟರೇ ಕಾರಿಳಿದು ಬಂದರು. ಪೋಲೀಸ್ ವೇಶದ ದಿನಾರಿಯು ತನ್ನ ಮನಸ್ಸಿಗೆ ತುಂಬ ಧೈರ್ಯ ಹೇಳಿ ಕೊಂಡು, ದೇಹವನ್ನು ಹತೋಟಿಗೆ ತಂದುಕೊಂಡು ಗದ್ದುಗೆಯ ಒಂದು ಹಂತ ಇಳಿಯುವವೇಳೆಗೆ ಆಫೀಸರ್ ಬಂದೇಬಿಟ್ಟರು ಅಲ್ಲಿಗೆ!
ದಿನಾರಿ ತನ್ನ ತಂದೆಯನ್ನು ನೆನೆದುಕೊಂಡು ನೆಟ್ಟಗೆನಿಂತು ಸೆಲ್ಯೂಟ್ ಹೂಡೆದು ಜೇಬಿನಿಂದ ತೆಗೆದು ಆರ್ಡರ ಕಾಗದವನ್ನು, ಅವರ ಮುಂದೆ ಹಿಡಿದಳು ಹ್ಯಾಟೊಂದು ಜಗುಲಿಯ ಟೋಪಿಯಾಗಿದ್ದುದರಿಂದ ದಿನಾರಿಯ ಕಾಡಿಗೆ ಕಣ್ಣಾಗಲೀ ಹಣೆಯಾಗಲೀ ಆಫೀಸರಿಗೆ ಕಾಣಿಸಲಿಲ್ಲ. ಆದರೆ ಆಗತಾನೆ ಶರಟು ತೋಳಿನಿಂದ ನುಸುಳಿಕೊಂಡು ಬಂದು ಕರೀ ಪಟ್ಟಿ ಬಳೆಯೊಂದು ಮುಂಗೈ ಮೇಲೆ ತುಂಟ ಛೋಬಿಯ ಹಾಗೆ ನಿಂತಿತು. ಆಫೀಸರು ಆ ತುಂಟಬಳೆಯನ್ನು ನೋಡದಿರಲಿಲ್ಲ, ದಿನಾರಿಯು ತನ್ನ ಕಂಬದ ಬಳಿಗೆ ತಿರುಗಿಬಂದು, ಒರಗಿನಿಂತು, ಆ ಬಳೆಗೆ ಒಂದು ಮುತ್ತು ಕೊಟ್ಟು ತೋಳಿನೊಳಕ್ಕೆ ನೂಕಿಬಿಟ್ಟು, ನೆಟ್ಟಗೆ ನಿಂತು ಸಲಾಂ ಮಾಡಿದಳು……..
ಇತ್ತ ಸೂಪರ್ ಸಾಹೇಬರು ಕಾರೊಳಗೆ ಹೋಗುತ್ತಿರುವಾಗ ಹೀಗೆಂದರು- “ಗಲ್ಲಿ ಹೋಗಯಾ ! ಏಬೀ ಎಕ್ ಸಿಕ್ ಪೀ. ಸೀ. ಹೈ? ನೈತೋ ಏ ಕೋನ್!”-ಕಾರು ಹೊರಟುಹೋಯಿತು. ಇತ್ತ ಇನ್ನೊಬ್ಬ ಕನ್‌ಸ್ಟೇಬಲ್ ಬರುತ್ತಿರುವುದನ್ನು ಕಂಡು ದಿನಾರಿಯು ತನ್ನ ಮನೆಗೆ ಹೊರಟಳು. ಹೊಸಬನು ಸರ್ಕಲ್ ಮೂರನೇ ರಾಜನಾದನು.
ಇತ್ತ ದಿಲೇರನು ಮನೆಗೆ ಬಂದು, ನೆರೆಮನೆಯಿಂದ ಛೊಟೀ ಗುಲಾಬಿಯನ್ನು ತಂದಿಟ್ಟುಕೊಂಡು ದಿನಾರಿಗಾಗಿ ಕಾದನು. ತನ್ನ ಡ್ರೆಸ್ಸಿಗಾಗಿ ಹುಡುಕಿದನು ಅಯ್ಯೋ ಇನ್ನೇನುಗತಿ ಇವಳೆಲ್ಲಿ ತನ್ನನ್ನು ಹುಡುಕುತ್ತ ಅಗಸನ ಮನೆಗೆ ಹೋದಳೋ ಎಂದು ಮನದಲ್ಲಿ ಕುದಿಯುತ್ತ ಕುಳಿತಿದ್ದನು.
ಆಗ ಬಾಗಿಲಲ್ಲಿ ಯಾರೋ ಕೂಗಿದರು. ಮಬ್ಬು ಮಬ್ಬು, ರಾತ್ರಿಯ ಮುಂದಿನ ಮಂಕು ಮಬ್ಬು. ದನಿಯ ಪರಿಚಯವಾಗುವಂತಿದ್ದರೂ ಹ್ಯಾಟ್ ವಾಲ ಹೊಸವ್ಯಕ್ತಿ.
“ಕೊನ್‍ಹೈ ಘರ್ ಮೇ ! ದಿಲೇರ್ ಹೈ ಘರ್ ಮೇ? ಉನ್ಸೇ ಬೋಲೋ ಅಬೀಚ್ ಜಾನಾಪಡ್ ತಾಹೈ, ಸರ್ಕಲ್ಕೇಪಾಸ್……. ಸೂಪರ್ ಸಾಹೇಬ್!…….” ಈ ಮಾತುಗಳನ್ನು ಕೇಳಿದೊಡನೆಯೇ ಒಳಗಿನ ಶಬ್ದವೆಲ್ಲ ನಿಂತುಬಿಟ್ಟಿತು.
ಹೊಸ ವ್ಯಕ್ತಿಯು ಒಳಗೆ ಕಾಲಿಟ್ಟಿತು. ಛೊಬಿ ದುರ ದುರ ನೋಡಿ ಆ ವ್ಯಕ್ತಿಯ ಕಾಲುಗಳನ್ನು ಅಪ್ಪಿಕೊಂಡು “ಮಾ, ಮಾ,” ಎಂದು ಕೂಗಿ ಕೊಂಡಿತು.
ಪೋಲೀಸು ವೇಶಧಾರಿಯು ಮಗುವನ್ನು ಎತ್ತಿಕೊಂಡು ಅಡುಗೆ ಕೋಣೆಯ ಬಾಗಿಲಿಗೆ ಹೋಗಿ ನಿಂತಿತು. ಒಳಗೆ ನಿಶ್ಯಬ್ಬ, ಮಗು ಛೋಟೀ ಗುಲಾಬಿಯು ಕೊಂಕುಳಿಂದ ಇಳಿದುಹೋಗಿ ಒಳಗಿದ್ದ ವ್ಯಕ್ತಿಯನ್ನು ಹಿಡಿದೆಳೆದು ತಂದಿತು. ಆತ ತಲೆತಗ್ಗಿಸಿಕೊಂಡಿದ್ದನು. ಛೋಬಿಯು ಪುನಹಾ ಹೊಸವೇಶಧಾರಿಯ ಮೈ ಮೇಲೆ ಹತ್ತಿ ತಲೆಯಮೇಲಿನ ಹ್ಯಾಟನ್ನು ತಾನಿಟ್ಟುಕೊಂಡಿತು. ಆಗ ಕಿಲಕಿಲ ನಗುವಿನ ಶಬ್ದ ಕೇಳಿತು.
ದಿಲೇರನು ತಲೆಯೆತ್ತಿ ನೋಡುತ್ತಾನೆ. ಎದುರಲ್ಲಾರು? ಇನ್ನಾರು – ದಿನಾರಿನೂರ್! ಆಗ ಆತನಿಗೆ ಆಗಿದ್ದ ಭಯವೆಲ್ಲ ಕರಗಿಹೋಗಿ ಆನಂದದ ಹೊಳಹಿಟ್ಟಿತು.
ಹೀಗೆ ದಿನಾರಿಯು ತನ್ನ ಗಂಡನ ಸೇವೆಮಾಡಿ, ಅತನ ಗೌರವವನ್ನು ಉಳಿಸಿದಳು……..
ಕೊಂಚಕಾಲವಾದನಂತರ ದಿಲೇರಖಾನನಿಗೊಂದು ಪತ್ರ ತಲುಪಿತು. ಅದರಲ್ಲಿ :-
“ದಿಲೇರ, ನೀವಿಬ್ಬರೂ ಆನಂದವಾಗಿದ್ದೀರಿ. ನನಗೆ ಅಷ್ಟೇ ಬೇಕಾಗಿತ್ತು. ನಾನು ಇನ್ನು ಮುಂದೆ ಪರದೇಶಗಳಿಗೆ ಹೋಗಬೇಕಾಗಿದೆ. ನೀನೂ ದಿನಾರಿಯೂ ಇಲ್ಲೇ ಬಂದು ನಿಲ್ಲಬೇಕು. ಈ ಬಂಗಲಿಯೆಲ್ಲ ನಿಮ್ಮದು ನಾನೂ ನಿಮ್ಮವನೇ ಆಗುತ್ತೇನೆ-ನೀವಿಬ್ಬರೂ ಒಪ್ಪಿದರೆ ನೀನಿನ್ನು ಪೋಲೀಸ್ ನೌಕರಿಯಲ್ಲಿರಬೇಕಾಗಿಲ್ಲ. ನಾಳೆ ಶುಕ್ರವಾರ ನಿನ್ನ ಡ್ಯೂಟೀ ಮುಗಿಸಿ, ನಾನು ಕಳುಹಿಸಿರುವ ಈ ಹೊಸ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ನಮಾಜ್ಮಾಡಿ ಆಫೀಸಿನಲ್ಲಿ ನಿನ್ನ ಹಿರಿಯಧಿಕಾರಿಗಳಿಗೆ ಹೇಳಿ ಹೊರಟು ಬಾ, ನಿನಗೆ ಇಷ್ಟವಿದ್ದರೆ, ಒಂದು ಆಕಾಶವಿಮಾನವನ್ನೆ ಕೊಂಡು ಕೊಳ್ಳುವಿಯಂತೆ, ನನ್ನ ಸಂಗಡ ಪ್ರಪಂಚದಲ್ಲೆಲ್ಲ ತಿರುಗಿ ಬರುವೆಯಂತೆ, ದಿನಾರಿಯನ್ನು ಮಾತ್ರ ನೋಯಿಸಬೇಡ. ಅವಳು ತಾಯಿಯನ್ನೇ ಕಂಡರಿಯಳು, ಅವಳೊಂದು ದಡ ಹತ್ತಿದುದನ್ನು ಕಾಣಬೇಕೆಂದಿದ್ದ ನನ್ನಾಸೆ ಪೂರೈಸಿತು. ಛೋಟೀ ಗುಲಾಬೀ ಎದುರಿಗಿದ್ದರೆ ನನಗೆ ಪರಮಾನಂದ, ನನ್ನ ಐಶ್ವರ್ಯ ನಿನ್ನದು. ನಿಮಗೆ ಇನ್ನು ಮುಂದೆ ಬದುಕಿ ಬಾಳಲು ತುಂಬಾ ದಿನಗಳಿವೆ. ಖುದಾ ನಿಮಗೆ ಪರೋಪಕಾರದಲ್ಲಿ ಮಸ್ಸು ಕೊಡಲಿ.” ಈ ಕಾಗದವನ್ನು ಓದಿಕೊಂಡವರು, ಅವರಿಬ್ಬರೂ ಗುಲಾಂ ಷಾಹರ ಬಂಗಲಿಗೆ ಶುಕ್ರವಾರ ಸಂಜೆ ತಲುಪಿದರು.
ಬಡವರ ಬಡತನದ, ಪಾಪಿಗಳ ತಬ್ಬಲಿತನದ, ಕುಂದುಕೊರತೆಗಳನ್ನು ಅರಿತವನಾದ ದಿಲೇರಖಾನನು ಅಲ್ಲಿ ವಾಸವಾಗಿದ್ದಾನೆ. ಅದೇ ಮನೆ! ಹಸಿದವರು ನೊಂದವರು ಅಲ್ಲಿಗೆ ಹೋಗಿ! ಅಲ್ಲಿ ಕಚ್ಚುವ ನಾಯಿಗಳಿಲ್ಲ! ಇದೇ ಅವರ ಮನೆಯ ತಂತಿ ವಿಳಾಸ :-
“ಮಹಲ್ ದಿನಾರಿ ಗುಲಾಂ.”
*****