೧
ಬಾಗಿಲಿಲ್ಲದ ಬಯಲೊಳಗಿಂದ
ಮೆಲ್ಲಗೆ ಬಳುಕುತ್ತಾ ಬಂತು
ಬೆಳಕಿನ ಹೊಳೆ
ಅದರಾಳದಿಂದೆದ್ದ ನೂರಾರು ನಿಹಾರಿಕೆಯರು
ಬೊಗಸೆ ತುಂಬಿ ಸುರಿಸುತ್ತಾರೆ
ಬಣ್ಣದ ಬೆಳಕಿನ ಮಳೆ.
ಹೇಳಿಕೊಳ್ಳಲು ಊರಿಲ್ಲದ
ಊರಿಕೊಳ್ಳಲು ಬೇರಿಲ್ಲದ
ಸೋರಿಕೊಳ್ಳಲು ನೀರಿಲ್ಲದ
ಬೆಳಕಿನ ಹೊಳೆಯಲಿ
ಬರಿದೇ ತೇಲುವ
ಮಿನುಗು ತಾರೆಯರ
ಮೈ ತುಂಬಾ ಕಣ್ ಕೋರೈಸುವ ಬೆಳಕು
ಚೆಲುವು – ಒಲವು ಮೇಳೈಸಿ ನಿಂತ ರೂಪು
ಕನಸಿನ ಲೋಕದಿಂದ
ತುಂಡರಿಸಿ ಬಿದ್ದುದೇ ಈ ಮಿಣುಕು!
೨
ಕುತ್ತಿಗೆಗೆ ಬಿಗಿದ
ಹಗ್ಗ ಮತ್ತೆ ಮತ್ತೆ
ತುಂಡರಿಸಿ ಜೀವ ಭಕ್ಷಿಸು ಪಡೆದ
ಮುಗ್ಧ ಕಂದನಿಗೆ ಬೆಳಕಿನಾಸೆ
ಎಂದೂ ಯಾರೊ ಕಾಣದ ಕನಸು ಕಾಣುವಾಸೆ.
೩
ಬೆಳಕು ಬೇಕೆ ಬೆಳಕು?
ಕನಸು ಬೇಕೇ ಕನಸು?
ಸೆರಗಿನ ತುಂಬಾ ಬೆಳಕು – ಕನಸು ಹಿಡಿದು
ಸುಮ್ಮನೆ ಕೆಣಕು
ಮೈನವಿರೇಳುವ ಪಿಸುಗು
ಬೆಳಕಿನ ಗುತ್ತಿಗೆ ಪಡೆದ
ಬೆಡಗಿನ ನಿಹಾರಿಕೆಯೆರದು!
೪
ಬೇಕು – ಬೇಡಗಳ ಪ್ರಶ್ನೆ ನೆವಕ್ಕಷ್ಟೇ
ಬಣ್ಣವಿಲ್ಲದ ಬರೀ ಬೆಳಕಿನ
ನಗೆಗೇ – ಬಗೆಗೇ ಸೋತ ಕಂದನ
ಪ್ರೀತಿಯಿಂದ ತಬ್ಬಿ
ಎದೆಯ ಕಣ್ಣೀರು ಒರೆಸಿ
ಸುಮ್ಮಸುಮ್ಮನೆ ಒಲವು ಹರಿಸಿ
ಬೇಡವೆಂದರೂ ಬೆಳಕಿನ ನೀರು ಸುರಿಸಿ
ಅವನ ತೋಯಿಸುತ್ತಾರೆ
ಮೀಯಿಸುತ್ತಾರೆ
ಲಾಲಿ ಹಾಡಿ ತಬ್ಬಿ ಮೆಲ್ಲಗೆ
ಮಲಗಿಸುತ್ತಾರೆ.
೫
ಹುಷ್! ಸದ್ದು!
ಕಂದನೀಗ ಬೆಳಕಿನಮೃತ ಹೀರುತ್ತಾ
ಬೆಳೆಯುತ್ತಿದ್ದಾನೆ
ಬೆಳಕಾಗುತ್ತಿದ್ದಾನೆ!
ಬೆಳಕಿನ ಕನಸಾಗುತ್ತಿದ್ದಾನೆ!
*****