ಲಾಳಾಸಾಬಿಯೂ ಕುರುಡಿಹಳ್ಳಿಯೂ…..

ಲಾಳಾಸಾಬಿಯೂ ಕುರುಡಿಹಳ್ಳಿಯೂ…..

ಕೆಳಹಟ್ಟಿವರೆಗೂ ಹೋಗಿ ದೂರದಲ್ಲೇ ನಿಂತು ಕೂಗಿ ಕರೆದು ಸತ್ತ ಆಕಳನ್ನು ಎತ್ತಿ ಹೊಯ್ಯಲು ಪರಿಪರಿಯಾಗಿ ಬೇಡಿಕೊಂಡರೂ ಹಣನೀಡುವುದಾಗಿ ಆಶೆ ಹುಟ್ಟಿಸಿದರೂ ಯಾರೋಬ್ಬರು ಬರಲು ನಿರಾಕರಿಸಿದಾಗ ಎಂತಹ ಕಾಲ ಬಂತಪ್ಪ’ ಎಂದು ನಿಟ್ಟುಸಿರಾದರು ಶೇಷಾಚಾರಿ. ಹಟ್ಟಿ ಹುಡುಗರು ಕಾಲೇಜು ಓದಲಿಕ್ಕೆ ಶುರುವಾದ ಮೇಲೆ ಹಟ್ಟಿಮಂದಿಗೂ ಧಿಮಾಕು ಬಂದಿದೆ ಎನಿಸಿತು. ಸಮಾನತೆ ಅಂತಾರೆ ಸಮಬಾಳು ಅಂತಾರೆ/ ಮೇಲ್ಜಾತಿಯವರಿಗೇನು ಕೊಂಬಿದೆಯೇ ಅಂತೆಲ್ಲಾ ಪ್ರಶ್ನೆ ಹಾಕೋ ಮಟ್ಟಕ್ಕೆ ಕೊಬ್ಬಿದ್ದಾರೆಯೇ ಎಂದು ಚಕಿತರಾದರು. ಅರ್‍ಚಕ ಶೇಷಾಚಾರಿಯಂದರೆ ಕೇವಲ ಮೂರುನಾಲ್ಕು ವರ್ಷಗಳ ಹಿಂದೆ ದೇವರ ಸಮಾನ ಅಂತ ಅಂಜಿ ಅದೆಂತಹ ಗೌರವ ತೋರೋರು! ಏನಾಯಿತು ಇವಕ್ಕೆ. ಇವೂ ಈಗ ಸಂಘ ಸಮಿತಿ ಮಾಡಿಕೊಂಡಿವೆ. ವೆಂಕಟರಮಣಸ್ವಾಮಿ ರಥೊತ್ಸವಕ್ಕೆ ಪರಂಪರೆಯಿಂದ ತಮಟೆ ಸೇವೆಯೆಂದು ಬಿಡಿಗಾಸು ಬೇಡದೆ ತಮಟೆ ಬಡಿಯುತ್ತಿದ್ದ ಮಂದಿ ಈಗ ಕಾಸು ಕೊಟ್ಟರೂ ಬರುತ್ತಿಲ್ಲ. ದೇವರ ಭೀತಿ ಕೂಡ ಇಲ್ಲವಾಯಿತೆ? ‘ನಿಮ್ಮ ದ್ಯಾವ್ರಿಗೆ ನೀವೇ ತಮಟೆ ಬಡ್ಕೋಳ್ರಿ’ ಅನ್ನೋವಷ್ಟು ಠೇಂಕಾರ. ಹಟ್ಟಿ ಮುದುಕರಾದರೂ ಹೈಕಳಿಗೆ ತಿಳಿಸಿ ಹೇಳಬೇಡವೆ. ಬಹಿಷ್ಕಾರಕ್ಕೂ ಬಗ್ಗೂಂಗಿಲ್ಲವೆ. ಸರ್ಕಾರದ ಸಪೋರ್‍ಟ್‌, ಉದ್ಯೋಗ ಖಾತ್ರಿಯೋಜನೆ ಕೂಲಿಗಾಗಿಕಾಳು ಐಪಿ‌ಎಲ್‌ ಕಾರ್‍ಡ್‌ ಅಂತ ಬಂದ ಮೇಲಿ ಹಟ್ಟಿ ಜನರ ಪಿತ್ತ ನೆತ್ತಿಗೇರಿದೆ. ಸತ್ತ ಆಕಳನ್ನು ನೀವೇ ಧಪನ್‌ ಮಾಡಿ ಅಂತಿದಾರೆಯೆ. ಮೊದಲೆಲ್ಲಾ ತಿನ್ನೋ ಆಶಗೆ ಓಡಿ ಬರೋವು. ಈಗ ಜಾತ್ಯಾತೀತ ರಾಷ್ಟ್ರ ಅಂತಾರೆ ಅಂಬೇಡ್ಕರ್‌ ಅಂತಾರೆ. ನಮ್ಮ ಎದುರೇ ಬೀಡಿ ಸೇದ್ತಾ ಓಡಾಡ್ತವೆ. ಏನಾದರೂ ಹಾಳು ಬಡಿಸ್ಕೂಳ್ಳಿ ಅಂತ ಸುಮ್ಮನಾದರೂ ಸತ್ತ ಆಕಳನ್ನು ಎತ್ತೋರು ಯಾರು?

ದನಗಿನ ತಿನ್ನಂಗಿಲ್ರಿ ಅಯ್ನೋರಾ, ಸರ್‍ಕಾರದೋರು ಜೈಲಿಗೆ ಹಾಕ್ತಾರ ಅಂಬೋ ಕಾನೂನು ನಮ್ಗೆ ಗೊತ್ತಿಲ್ಲ ಅನ್ಕಂಡಿರೇನು?’ ನನಗೇ ದಬಾಯಿಸಿದ. ‘ಕಾನೂನು ಇನ್ನೂ ಜಾರಿಯಾಗಿಲ್ಲ ಕಣ್ರಯ್ಯ. ಇದು ಸತ್ತದನ…..ತಪ್ಪೇನಾಗೋಲ್ಲ’ ಕಾನೂನು ಬಗ್ಗೆ ವಿವರಿಸಿದ್ದರು ಶೇಷಾಚಾರಿ. ‘ನೀವು ಬಿಡ್ರಿ. ನಿಮಗೆ ಬೇಕಾದಂಗೆ ಕಾನೂನು ತಿದ್ದುಕೊಂತೀರಿ. ಕಾನೂನು ಹೆಂಗಾರ ಇರವಲ್ಲದ್ಯಾಕೆ ನಾವಂತೂ ಇಂಥದ್ದಕ್ಕೆಲ್ಲಾ ಇನ್ನು ಮುಂದೆ ಬರಂಗಿಲ್ರಿ… ಏನ್‌ ನಿಂತೀರಿ ಹೊಂಡ್ರಿನ್ನ’ ಹಟ್ಟಿ ಮುದುಕಪ್ಪನೇ ಹೊತಾರನೆ ಅಂದು ಬಿಟ್ಟಮೇಲೆ ಇನ್ನು ನಿಂತು ಫಲವಿಲ್ಲವೆಂದು ಹಿಂದಿರುಗಿದ್ದರು ಶೇಷಾಚಾರಿ. ಮನೆಗೆ ಬಂದೊಡನೆ ವೃದ್ಧ ತಂದೆ, ಹೆಂಡತಿ ಪುಟ್ಟ ಮಕ್ಕಳು ಬಾಗಿಲಿಗೇ ಬಂದರು. ‘ಬಂದ್ವೇನ್ರಿ ಅವು?’ ದೂರಕ್ಕೂ ಕಣ್ಣು ಕೀಲಿಸಿದಳು ಅಂಬುಜಾಬಾಯಿ. ಇಲ್ಲವೆಂಬಂತ ಗೋಣು ಆಡಿಸುತ್ತಾ ಬಿಸಿಲಿನ ತಾಪಕ್ಕೋ ಬಂದುವಕ್ಕರಿಸಿದ ಪ್ರಸಂಗಕ್ಕೋ ಬಳಲಿದಂತಾದ ಶೇಷಾಚಾರಿ ‘ಹುಸ್’ ಎಂದು ಜಗಲಿಯ ಮೇಲೆ ಕೂತು ವಲ್ಲಿಯಿಂದ ಗಾಳಿ ಬೀಸಿಕೊಂಡರು. ನಿನ್ನೆ ರಾತ್ರಿ ಯಾವಾಗ ಆಕಳು ಜೀವ ಬಿಟ್ಟಿತೋ ಹೊತ್ತು ಏರಿದಂತಲ್ಲಾ ಅದರ ಹೊಟ್ಟೆ ಗುಂಡಾಣದಂತಾಗಿತ್ತು. ಅದರ ಮುಖದತ್ತ ಇರುವೆಗಳು ಸಾಲುಗಟ್ಟಿದ್ದವು. ದಂಡು ಕಟ್ಟಿಬಂದ ನೋಣಗಳು ಕ್ಯಾಂಪ್‌ ಹಾಕಿದ್ದವು. ಗಬ್ಬುನಾತವೂ ಸಮಯಸಂದಂತೆ ಕೊಟ್ಟಿಗೆಯಿಂದ ಜಗಲಿಯವರೆಗೂ ವ್ಯಾಪಿಸಿತ್ತು. ಹಸಿವಾದರೂ ಯಾರಿಗೂ ಊಟಕ್ಕೆ ಏಳುವ ಮನಸ್ಸಿಲ್ಲ. ಮೊದಲಿದನ್ನು ಇಲ್ಲಿಂದ ಸಾಗಿಸಿದರಷ್ಟೆ ಬೇರೆ ಆಲೋಚನೆ ಮಾಡುವ ಶಕ್ತಿ ಮಿದುಳಿಗೆ ಬಂದೀತೆಂಬ ಅಸಹಾಯತೆ ಭೀತಿ ಇಂಚು ಇಂಚಾಗಿ ಮನೆಯವರನ್ನು ತಿಂದು ಹಾಕಲಾರಂಬಸಿತ್ತು.

ಈ ಸಮಯದಲ್ಲಿ ಲಾಳಾಸಾಬಿ ಇದ್ದಿದ್ದರೆ ಎಷ್ಟೋ ಚಲೋಯಿತ್ತು ಅನ್ನಿಸಿತು ಶೇಷಾಚಾರಿ ಕುಟುಂಬಕ್ಕೆ. ಕುರುಡಿಹಳ್ಳಿಯೇನು ದೊಡ್ಡ ಗ್ರಾಮವಲ್ಲ ಎಲ್ಲಾ ಕುಲದವರ ಮನೆ ಸೇರಿಸಿ ಲೆಕ್ಕ ಹಾಕಿದರೂ ಮುನ್ನೂರರ ಆಚೆ ಈಚೆಯೇ, ಇದ್ದದ್ದೇ ಎರಡು ಸಾಬರ ಮನೆಗಳು. ಅವೂ ಅಣ್ಣ ತಮ್ಮಂದಿರ ಮನೆಗಳೆ. ಊರಾಚೆಗೆ ಕೆಳಹಟ್ಟಿ ಜನರಿದ್ದರು. ಬ್ರಾಹ್ಮಣರ ಮನೆ ಇದ್ದದ್ದು ಒಂದೆ. ಉಳಿದವಲ್ಲಾ ಹಿಂದುಳಿದವರ ಮನೆಗಳು. ಆದರೆ ಎಂದೂ ಒಗ್ಗಟ್ಟಿಗೆ ಭಂಗ ಬಂದಿರಲಿಲ್ಲ. ಎಲ್ಲಾ ಸೇರಿಯೇ ಜಾತ್ರೆ ಪರಸೆ ಮಾಡೋರು. ಅಂದು ಎಲ್ಲರ ಮನೆಯಲ್ಲೂ ಸೀಪ್ರ. ರಥೋತ್ಸವದಂದು ತಮಟೆ ಬಡಿದು ಕುಣಿವ ಕೆಳಹಟ್ಟಿಗರಿಗೆ ರಸ್ತೆಯ ಬದಿ ಸಾಲಾಗಿ ಕೂರಿಸಿ ಊಟ ಬಡಿಸುವ ಸಂಪ್ರದಾಯ. ಆದರೆ ಈ ಜನವೇಕೋ ತಟ್ಟಂತ ಬದಲಾದರು. ‘ನಾವ್ಫ಼್ ಯಾಕ್ರಿ ಬೀದಿಮ್ಯಾಗೆ ಉಣ್ಣಬೇಕು? ಅಂತೆಲ್ಲಾ ಕಿತಾಪತಿಗೆ ಶುರುಹಚ್ಚಿಕೊಂಡರು. ತಮಟೆ ಬಡಿಯಲೂ ನಕಾರ. ಪೇಟೆಯಿಂದ ಬ್ಯಾಂಡ್‌ನವರು ಬಂದರು. ಇದೆಲ್ಲಾ ಹೆಂಗೋ ಮಾಡಿಕೂಳ್ಳ ಬಹುದು. ಆದರೆ ಸತ್ತದನ ಎತ್ತೋರು ಯಾರು? ಕಂಗೆಟ್ಟರು ಆಚಾರಿ. ತಡೆಯಲಾರದ ಹಸಿವು ಬೇರೆ- ‘ಈಗೇನ್ರಿ ಮಾಡೋದು?’ ಅಂಬುಜಮ್ಮನದು ವಿಲಿವಿಲಿ ಒದ್ದಾಟ. ‘ಸುಮ್ನೆ ಕುಂತ್ರಾಗಲ್ಲವೆ ಶೇಷ. ಆ ಲಾಳಾಸಾಬಿ ಮನೆ ತಾವಾರ ಹೋಗಿ ಬಾರೋ’ ಅಂದರು ಶೇಷಾಚಾರಿ ತಂದೆ ವೆಂಲಕಟಾಚಾರಿ. ‘ಲಾಳಾಸಾಬಿ ಊರೂರು ತಿರುಗೋನು… ಅವನೆಲ್ಲಿ ಇದ್ದಾನು. ಊರುಬಿಟ್ಟೆ ಮೂರು ತಿಂಗಳಾಯ್ತು ಮನೇಲಿ ಹಣ್ಣು ಮಕ್ಕಳಿರ್‍ತಾರೆ. ಅವೇನ್‌ ಮಾಡ್ಯಾವು’ ಗೊಂದಲಕ್ಕೀಡಾಗಿದ್ದರು. ಶೇಷಚಾರಿ. ‘ಹೌದಲ್ವೆ, ಈಗೇನಯ್ಯ ಮಾಡೋದು? ಪಕ್ಕದ ಹಳ್ಳಿಗಾದ್ರೂ ಹೋಗಿ ವಿಚಾರಿಸಿಸ್ಕೊಂಡು ಬರೋಕೆ ಸಾಧ್ಯವೇನಯ್ಯ?’ ವೆಂಕಟಾಚಾರಿ ತೊಳಲಾಟ. ‘ಅಲ್ಲಿ ಸಾಬರ ಮನೆಗಳಿಲ್ಲ ಅಪ್ಪಯ್ಯ. ಕೆಳಹಟ್ಟಿಯವರಿದ್ದರೂ ಅವರು ಬರೋಲ್ಲ ಬಿಡು. ತಮಟೆ ಬಡಿಯೋಕೆ ಕರದ್ರೆ ನಿಮ್ಮ ಹಟ್ಟಿ ಹೈಕಳೆ ಅದಾರಲ್ಲ. ನಾವು ಬಂದ್ರೆ ಬೈತಾರೆ ಅಂದವರು, ಇದಕ್ಕೆ ಬರ್‍ತಾರ್‍ಯೇ?’ ನಿಡುಸುಯ್ದರು ಆಚಾರಿ. ‘ಕತ್ತಲಾಗೋದರಲ್ಲಿ ಈ ಕೆಲಸ ಮುಗಿಸಬೇಕಲ್ಲೋ ಶೇಷಾ’ ವೆಂಕಟಾಚಾರಿಯ ಮೋರೆ ಕಪ್ಪಿಟ್ಟಿತು. ಲಾಳಸಾಬಿ ಇದ್ದಿದ್ದರೆ ಚೆಂದಿತ್ತು. ಅವನಿದ್ದಿದ್ದರೆ ತನ್ನ ಮಾತನ್ನು ಎಂದೂ ಮೀರುತ್ತಿರಲಿಲ್ಲವೆಂದು ಚಡಪಡಿಸಿದರು ಆಚಾರಿ. ಹೊಟ್ಟೆಪಾಡಿಗಾಗಿ ಹಳ್ಳಿ ಹಳ್ಳಿ ತಿರುಗಿ ದನಗಳಿಗೆ ಲಾಳಾಕಟ್ಟುವುದು, ಹಳಪಾತ್ರೆ ಪಡುಗಗಳಿಗೆ ಕಲಾಯಿ ಮಾಡುವುದವನ ಕಸಬು. ತಮ್ಮ ಹುಸೇನಿಯೂ ಅವನಿಗೆ ಸಹಾಯಕನಾಗಿ ಹೋಗಿಬಿಡುತ್ತಿದ್ದ. ಲಾಳಸಾಬಿಯ ಒರಿಜಿನಲ್‌ ಹೆಸರೇನೆಂದು ಯಾರಿಗೂ ಗೊತ್ತಿಲ್ಲ. ಎಲ್ಲರೂ ಲಾಳಸಾಬಿ ಅಂತಲೆ ಕರಯೋದು. ಹಳ್ಳಿಯಲ್ಲಿ ಕೂತುಣ್ಣಲು ಅವನಿಗೇನು ಹೊಲವೆ ಜಮೀನೆ. ಹೀಗಾಗಿ ಹಳ್ಳಿ ತಿರುಗೋದು ಮಾಮೂಲು. ಸಾಬಿ ಬಲು ಸರಳ ಮನುಷ್ಯ. ‘ಸಲಾಮ್‌ ಸಾಬ್‌’ ಎಂದೇ ಮಾತು ಶುರುಮಾಡುವ ಮಾತು ಮಾತಿಗೂ ‘ಅಚ್ಚಿಬಾತ್ ಹೈ ಸಾಬ್‌’ ಅನ್ನುವ ವಿನಯವಂತಿಕೆ. ಸಾಬರ ಜಾತೀಲಿ ಹುಟ್ಟೋನೇ ಅಲ್ಲ ಅಂತಹ ನಿಗರ್‍ವಿ ಸೀದಾಸಾದಾ ಎಂದು ಮೇಲ್ಜಾತಿಯವರು ಸರ್ಟಿಫಿಕೇಟ್‌ ಬೇರೆ ಕೊಟುಬಿಟ್ಟಿದ್ದಾಗಿದೆ. ಕಲಾಯಿ ಮಾಡೋದು ಲಾಳಾ ಕಟ್ಟೋದು ಕೆಲಸವಿಲ್ಲದಿದ್ದಾಗ ಊರವರ ಹೊಲಗದ್ದೆಗಳಲ್ಲಿಯೂ ಕೂಲಿನಾಲಿಮಾಡಿ ಹೊಟ್ಟೆ ಹೂರೆದಾನೆಯೇ ಹೊರತು ಒಬ್ಬರ ಬಳಿ ಕೈ ಚಾಚಿದವನಲ್ಲ. ಮಸೀದಿ ಇಲ್ಲದಿದ್ದರೂ ಮನೆಯಲ್ಲೇ ಕಾಲ ಕಾಲಕ್ಕೆ ನಮಾಜು ಮಾಡ್ಕೊಂಡು ಅಣ್ಣ ತವ್ಮಂದಿರೇ ತಮ್ಮ ಹಬ್ಬ ಮಾಡ್ಕೊಂಡು ಖುಷಿ ಪಡುವಾಗ ಈವತ್ತು ಬಕ್ರಿದ್ದೋ ರಂಜಾನೋ ಇರಬೇಕಂತ ಹಳ್ಳಿ ಜನಕ್ಕೂ ಖುಷಿ. ಎಲ್ಲರಿಗೂ ಬೇಕಾದ ಸಾಬಿಯನ್ನು ಕಂಡರೆ ಆಗದವರೂ ಇದ್ದರು. ಮಂದಿರ ಮಸೀದಿ ಜಗಳದ ದುರ್‍ನಾತ ಹಳ್ಳಿಗಳಲ್ಲೂ ಹರಡಿತ್ತು. ‘ಪೂರಾ ಜಾಗ ನಮಗೇ ಕೊಡಬೇಕಿತ್ತು. ಸಾಬರಿಗೆ ಬೇರೆ ಪಾಲು ಕೊಟ್ಟಿದ್ದಾರೆ’ ಎಂದು ಬೈದಾಡಿಕೊಂಡು ಓಡಾಡುವ ಕುಂಕುಮಧಾರಿ ಯುವಕರ ಗುಂಪೂ ಕುರುಡಿಹಳ್ಳಿಯಲ್ಲಿಯೂ ಇತ್ತು. ಇದೆಲ್ಲಾ ಚುನಾವಣೆಯ ಮಹತ್ತು ರಾಜಕಾರಣಿಗಳ ಹಿಕಮತ್ತು ಎಂದು ಶೇಷಾಚಾರಿಯಂತಹ ಕೆಲವರು ಮಾತ್ರ ಮುಜುಗರ ಪಡುವುದಿತ್ತು. ಲಾಳಾಸಾಬಿ ದನಗಳ ಗೊರಸುಗಳಿಗೆ ಲಾಳಾ ಕಟ್ಟೋದು ಕಲಾಯಿಯಷ್ಟೇ ಮಾಡುವವನಾಗಿದ್ದಿದ್ದರೆ ಎಲ್ಲರಿಗೂ ಬೇಕಾದವ ನಾಗುತ್ತಿರಲ್ಲವೇನೋ. ಅವನಿಗೆ ಸಣ್ಣಪುಟ್ಟ ಕಾಯಿಲೆಗಳಿಗೆ ವೈದ್ಯಮಾಡಿಯೂ ಗೊತ್ತಿತ್ತು. ಐದು ಕಿ.ಮೀ. ದೂರದಲ್ಲಿನ ಆಸ್ಪತ್ರೆಗೆ ಹೋಗಲಾದವರ ಪಾಲಿಗೆ ಸಾಬಿಮನೆಯೇ ದವಾಖಾನೆ. ಇಷ್ಟಕ್ಕೂ ಅವನಂದೂ ಕಾಸಿಗಾಗಿ ಔಷಧಿ ಕೊಡುವನಲ್ಲ. ಮುಫತ್ತಾಗಿ ಕೊಡದೆ ದುಡ್ಡು ಪಡದರೆ ಔಷಧಿ ಪವರ್ರೇ ಹೊಂಟೋತದೆ ಅಂತ ನಮ್ಮ ಮುಲ್ಲಾಸಾಬಿಯೋರು ತಾಕೀತು ಮಾಡೋರೆ ಅನ್ನೋನು. ನಮ್ದು ಬೀಬಿ ಬಚ್ಜೆಗೆ ಒಳ್ಳೇದಾಗಂತ ಸಾಬ್‌ ಎಂದೆಲ್ಲಾ ಅಂಜುವನು. ಮನೇಲಿ ಗಂಜಿಗೂ ಗತಿಯಿಲ್ಲದಿರುವಾಗಲೂ ಸಾಬಿ ನಯಾ ಪೈಸೆನೂ ಮುಟ್ಟಿದವನಲ್ಲ. ಹೀಗಾಗಿ ಹಳ್ಳಿಮಂದಿ ಕಾಯಿಲೆ ಬಿದ್ದರೆ ಸಾಬಿಯ ಮನೆಕಡೆ ಸವಾರಿ ಹೊರಡುತ್ತಿತ್ತು. ಸರಿರಾತ್ರಿ ಕರೆದರೂ ಬೇಸರಪಡದೆ ತನ್ನ ಔಷಧಿ ಗಂಟು ಹಗಲಿಗೇರಿಸಿಬಿಡುತ್ತಿದ್ದ. ಅದು ಗೌಡರ ಮನೆಯಾದರೂ ಸೈ ಕೆಳಹಟ್ಟಿ ಕೆಂಚನ ಮನೆಯಾದರೂ ಸೈ ಅವನಿಗೆ ಭೇದವಿಲ್ಲ. ಈ ಕಾರಣದಿಂದಾಗಿ ಅವನು ಸರ್‍ವರ ಪ್ರೀತಿಗೆ ಕಾರಣನಾಗಿದ್ದರೂ ಕೆಳಹಟ್ಟಿ ಜನರ ಸೇವೆಗೆ ನಿಲ್ಲುವ ಅವನ ಬಗ್ಗೆ ಹಲವರಲ್ಲಿ ಒಳಗೇ ಅಸಮಾಧಾನವಿಲ್ಲದಿರಲಿಲ್ಲ. ಕುಂಕುಮಧಾರಿ ಹುಡುಗರು ಒಂದೆರಡು ಸಲ ಗದರಿಸಿದ್ದರೂ ಸಾಬಿ ಕ್ಯಾರೆ ಎಂದಿರಲಿಲ್ಲ ಕೇರು ಮಾಡಿರಲಿಲ್ಲ. ‘ಅಲ್ಸಾಮಿ, ನೀವು ಈಗಿನ ಕಾಲದ ನವಜವಾನ್‌ ಅದಿರಾ. ಪ್ರಾಣಿಗಳದ್ದೆಲ್ಲಾ ಒಂದೇ ಜಾತಿ. ಪಕ್ಷಿಗಳೂ ಒಂದು ಜಾತಿ ಹಂಗೆ ನರಮನುಷ್ಯಾರ್‍ದೆಲ್ಲಾ ಒಂದೇ ಜಾತಿ ಅಲ್ರಾ ಸಾಬ್‌? ಅದರಾಗೆ ನಾವು ಮುಸಲ್ಮಾನ್ರು ಬಿಡ್ರಿ. ಹಿಂದೂಲೋಗ್‌ ಅಲ್ಲ. ಆದರೆ ಸಾಬ್‌ ಕೆಳಹಟ್ಟಿ ಜನ ನಿಮ್ಮೋರೇ ಅಲ್ರಾ ಸಾಬ್‌? ಅವರು ಹಿಂದೂಲೋಗ್ ನಂಹಿ ಕ್ಯಾ. ನಮ್ಗೆ ಮುಟ್ಟಸ್ಕೋತೀರಿ! ಅವರ್‍ಗೆ ಯಾಕೆ ದೂರ ಇಟ್ಟೀರಿ ಸಾಬ್?’ ನಗುನಗುತ್ತಲೇ ಕೇಳಿ ಕವಳ ತುಂಬಿದ ಬಾಯಿವರಸಿಕೊಳ್ಳುತ್ತಿದ್ದ. ಅವನು ಮಾತುಕೇಳುವಾಗ ಶೇಷಾಚಾರಿಗೂ ಅವನು ಹೇಳೋದು ಸರಿಯಲ್ಲವೆ ಅನ್ನಿಸಿ ಗೊಂದಲಕ್ಕೆ ಉಂಟಾದದ್ದಿದೆ. ಸಾಬರನ್ನ ಕ್ರಿಸ್ತರನ್ನು ಮುಟ್ಟಿಸಿಕೊಳ್ಳೋ ನಾವು ‘ಹಿಂದು ಒಂದು ಬಂಧು’ ಅನ್ನೋದನ್ನ ಚುನಾವಣೆಯ ಸ್ಲೋಗನ್‌ ಮಾಡಿಕೊಂಡಿದ್ದೇವಷ್ಟೇ ಅನ್ನಿಸಿದೆ. ನೋಡಯ್ಯ ಪಕ್ಷಿಗಳದೆಲ್ಲಾ ಒಂದು ಜಾತಿ ಅಂತಾನೆ ಸಾಬಿ. ಕಾಗೆ, ಕೋಗಿಲೆ, ನವಿಲು, ಕೆಂಬೂತ ಒಂದೆ ಅಂತಿಯೇನಯ್ಯಾ? ಪ್ರಾಣಿಗಳಲ್ಲಿ ಸಸ್ಯಾಹಾರಿ ಮಾಂಸಹಾರಿಗಳಿಲ್ಲವೆ? ಇವೆಲ್ಲಾ ಒಂದೇ ಅಂತಿಯಾ ಶೇಷಾ ಪ್ರಕೃತಿನೇ ಭೇದಮಾಡಿದೆ. ಯಾರು ಎಲ್ಲಿರಬೇಕು ಹೇಗಿರಬೇಕೋ ಹಂಗಿದ್ದರೇ ಚೆನ್ನ ಅದೇ ನಿಯಮ’ ತಂದೆ ವೆಂಕಟಾಚಾರಿಯ ತರ್‍ಕಕೂಡ ತಪ್ಪೆನ್ನಿಸುವುದಿಲ್ಲ. ಶೇಷಾಚಾರಿ ಜಿಜ್ಞಾಸೆಗೆ ಬಿದ್ದಿದಿದೆ. ಇದೇ ತನ್ನ ತಂದೆ ಹೊಲೇರ ನಾಗಿಯೊಂದಿಗೆ ವೆಂಕಟರಮಣನ ಆಲಯದ ಹಿಂಬದಿಯ ಪೌಳಿಯಲ್ಲಿ ಮಲಗಿದ್ದನ್ನು ಚಿಕ್ಕಂದಿನಲ್ಲಿ ಕುತೂಹಲದಿಂದ ಕದ್ದು ನೋಡಿದ್ದುಂಟು. ವಯಸ್ಸಿಗೆ ಬಂದ ಮೇಲೆ ಅದರ ಅರ್ಥ ಅರಿವಾಗಿದೆ. ಐವತ್ತರ ಆಸುಪಾಸಿನಲ್ಲಿ ವಿಧುರನಾದ ತಂದೆ ದಾರಿಬಿಟ್ಟಿರಬಹುದು. ಪದೇ ಪದೇ ತಂದೆ ಜನಿವಾರ ಬದಲಾಯಿಸುತ್ತಿದ್ದುದರ ಅರ್‍ಥವೀಗ ಸ್ಪಷ್ಟವಾಗಿದೆ. ಆದರೆ ಇದೆಲ್ಲಾ ಹಳೆ ಸಂಗತಿ. ತಂದೆಯನ್ನೆಂದೂ ಪ್ರಶ್ನಿಸುವ ಪ್ರಮೇಯವಾಗಲಿ ಎದೆಗಾರಿಕೆಯಾಗಲಿ ಎದುರಾದುದ್ದಿಲ್ಲ. ಆ ವಿಷಯದಲ್ಲಿ ತಾನು ಮಾತ್ರ ಕಚ್ಚೆ ಕೈ ಬಾಯಿ ಶುದ್ಧ ಎಂಬ ಹೆಮ್ಮ ಶೇಷಾಚಾರಿಗಿದೆ.

‘ಏನ್ರಿ, ಸುಮ್ಮೆ ಕುಂತುಬಿಟ್ರಿ?’ ಒಳಗಿನಿಂದ ಧಾವಿಸಿಬಂಂದ ಅಂಬುಜಬಾಯಿ ಗರಂ ಆದಾಗ ಇಹಕ್ಕೆ ಬಂದ ಶೇಷಾಚಾರಿ. ನನ್ನನ್ನೇನು ಮಾಡು ಅಂತಿಯೆ ಎಂಬಂತೆ ದುರುಗಟ್ಟಿದರು. ‘ಸರಿಸರಿ.. ಮಕ್ಕಳಿಗಾದ್ರೂ ಊಟಕ್ಕ ಹಾಕೆ’ ಅಂದರು. ‘ಅವೂ ಮೂಗು ಮುಚ್ಚಿ ಕೂತಿವೆ. ಮೊದಲು ಈ ಅನಿಷ್ಠಾನ ಇಲ್ಲಿಂದ ಸಾಗಿಸಿ ಮಾರಾಯ’ ತಳಮಳಿಸಿದಳಾಕೆ. ತಾನು ಒಬ್ಬನ ಸಾಗಿಸಲು ಶಕ್ಯವೆ. ತಂದೆಗೆ ನಡಯೋದೇ ತ್ರಾಸ್. ಚಿಂತೆಗೆ ಬಿದ್ದ ಆಚಾರಿ ರೇಗಿದರು. ‘ಅನಿಷ್ಠ ಅನ್ಬೇಡ್ವೆ, ಬಾಯಲ್ಲಿ ಹುಳ ಬಿದ್ದೀತು. ಈ ತನಕ ಅದರ ಹಾಲು ಮೊಸರು ಬೆಣ್ಣೆ ತಿಂದಿದ್ದೀವಿ. ಮುದಿ ಆಯ್ತು ರೋಗಬಂತು ಸತ್ತಿದೆ. ಲಾಳಸಾಬಿ ಇದ್ದಿದ್ದರೆ ಏನಾದ್ರೂ ಮದ್ದು ಮಾಡಿರೋನು. ಯಾವುದಕ್ಕೂ ಲಭ್ಯವಿರಬೇಕು, ಆಚಾರಿ ಮರುಗಿದರು. ಆಕಸ್ಮಾತ್ತಾಗಿ ಲಾಳಸಾಬಿ ಏನಾದರೂ ಊರಿಗೆ ಬಂದಿದ್ದಾನೆ ಎಂದು ಜನಿವಾರದಿಂದ ಬೆನ್ನು ತುರಿಸಿಕೊಳ್ಳುತ್ತಾ ಮೇಲೆದ್ದ ಆಚಾರಿ ಸಾಬಿಮನೆಯತ್ತ ಸರಸರನೆ ಹಜ್ಜೆಕಿತ್ತಿಟ್ಟ.

ಸಾಬಿಮನೆ ಬಳಿ ನಿಂತು ‘ಲಾಳಸಾಬಿ’ ಎಂದು ಎರಡು ಮೂರು ಸಲ ಕೂಗಿದ ಮೇಲೆ ತಲೆತುಂಬಾ ದುಪಟ್ಟಾ ಬೂಬಮ್ಮ ಬಾಗಿಲ ಸಂದಿನಲ್ಲಿ ಮುಖ ತೂರಿಸಿದಳು. ಆಚಾರ್‍ಯರನ್ನು ಕಂಡೂಡನೆ ‘ನಮಸ್ತೆಸಾಮಿ’ ಅಂದಳು. ‘ಅವರು ಊರ್‍ನಾಗಿಲ್ಲ. ಹಳ್ಳಿ ಮೇಲೆ ಕಾಮ್‌ ಹುಡುಕ್ಕೊಂಡು ಹೋಗ್ತಾರೆ. ತಮಗೇ ಗೊತ್ತಲ್ಲ ಸಾಮಿ’ ಅಂದ ಬೂಬಮ್ಮ ಈವತ್ತು ನಾಳದ್ರಾಗೆ ಬತ್ತೀನಿ ಅಂತ ಕಾಲ್ಡು ಹಾಕವರೆ’ ಅಂತಲೂ ಸೇರಿಸಿದಳು. ‘ಹಂಗಾರೆ ಈವತ್ತು ನಾಳೆದ್ರಾಗೆ ಬಂದಾನು ಅಂತಿಯಾ? ಶೇಷಾಚಾರಿ ಮೈಯಲ್ಲಿ ಇದ್ದಕ್ಕಿದ್ದಂತೆ ಶಕ್ತಿಯ ಅವಾಹನೆ. ನೋಡಮ್ಮ, ಅವನು ಬಂದ ತಕ್ಷಣ ನಮ್ಮ ಮನೆಗೆ ಕಳಿಸು… ನಮ್ಮ ಆಕಳು ತುಂಗೆ ಗೊತ್ತಲ್ಲ. ಅದು ಹೋಗಿ ಬಿಡ್ತು..? ಅಂದರು. ಭೂಬಮ್ಮ ತಲೆ ಆಡಿಸಿ ಪರದೆ ಹಿಂದೆ ಸರಿದಳು. ಹುರುಪಿನಿಂದ ಮನೆಯತ್ತ ಹೆಜ್ಜೆ ಹಾಕಲಾರಂಭಿಸಿದ ಶೇಷಾಚಾರಿಗೆ ಸಾಬಿ ಬಂದಷ್ಟೇ ಖುಷಿಯಾಯಿತು. ‘ಎಲ್ಲಾ ಗೋವಿಂದನ ಕೃಪೆ’ ಎನ್ನುತ್ತಾ ಬಿಸಿಲು ತಡೆಯಲಾರದೆ ನೆತ್ತಿಯ ಮೇಲೆ ವಲ್ಲಿಸರಿಸಿಕೊಂಡ ಆಚಾರ್‍ಯರಿಗೆ ಗಡಿಬಿಡಿಯಲ್ಲಿ ದೇವಸ್ಥಾನದ ಬಾಗಿಲನ್ನೇ ತೆರೆಯದಿದ್ದದು ನೆನಪಿಗೆ ಬಂತು. ತುಂಗೆ ಆಕಳಾದರೇನು ನಮ್ಮ ಮನೆಯ ಒಬ್ಬಳಂತಲ್ಲವ. ಅದರ ವಿಲೇವಾರಿ ಮಾಡದೆ ದೇವರಿಗೆ ಹೂ ಏರಿಸಲಾದೀತೆ ಎಂದು ಸಂತೈಸಿಕೊಂಡರು. ಲಾಳಸಾಬಿ ಹಳ್ಳಿಗೆ ಬಂದರೆ ತಮ್ಮ ಮನೆಯ ಮುಂದೆಯೇ ಹಾದುಹೋಗಬೇಕಲ್ಲವೆ. ಎರಡು ಕಿ.ಮೀ ದೂರದಲ್ಲಿರುವ ಬಸ್‌ಸ್ಟ್ಯಾಂಡ್‌ನಲ್ಲಿ ಇಳಿದ ಯಾರೇ ಹಳ್ಳಿಗೆ ಬಂದರೂ ಮೊದಲು ಸಿಗೋದು ದೇವಸ್ಥಾನ. ನಂತರದ್ದು ತಮ್ಮ ಮನಯೇ. ಮುಂದೆ ಹಾದು ಹೋದರೆನೇ ಸಮಸ್ತಹಳ್ಳಿ ತೆರೆದುಕೂಳ್ಳೋದು ಅನ್ನಿಸಿದಾಗ ಬಿರಬಿರನೆ ಹಜ್ಜೆ ಹಾಕುತ್ತಾ ಮನೆಯತ್ತ ಬಂದು ಜಗಲಿ ಮೇಲೆ ಕೂತರು. ಮನಯಲ್ಲಿ ಇರಲಕ್ಕಾಗದಷ್ಟು ದುರ್‍ವಾಸನೆಯಾಗಲೆ ಹಬ್ಬಿತ್ತು. ವಾಕರಿಕ ಬರೋದೊಂದೇ ಬಾಕಿ. ‘ಏನಂದ್ರೋಶೇಷ?’ ತಂದೆ ಬಾಗಿಲಲ್ಲಿ ಇಣುಕಿದರು. ‘ಈವತ್ತೋನಾಳೆಯೋ ಬರ್‍ತಿನಿ ಅಂತ ಕಾರ್‍ಡು ಹಾಕಿದಾನಂತೆ. ಅಂದಮೇಲೆ ಈವತ್ತು ಬಂದಾನು. ಬಂದರೆ ಇಲ್ಲಿಂದಲೇ ಹೋಗಬೇಕಲ್ಲ. ನಾನಿಲ್ಲೇ ಕಾದುಕೂರ್‍ತೀನಿ ಅಪ್ಪಯ್ಯ’ ಬೆವರೊರೆಸಿಕೊಂಡರು ಆಚಾರಿ. ‘ಕಾಪಿನಾರ ಕುಡೀರಿ’ ಕಕ್ಕುಲಾತಿಯಿಂದ ಲೋಟ ಹಿಡಿದು ಬಂದಳು ಅಂಬುಜಾಬಾಯಿ. ‘ಏನೋ ಒಂದು ಸುರ್‍ಕೋಬೇಕಲ್ಲ ಹಾಳುಜೀವಕ್ಕ’ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತ ಲೋಟ ಕೈಗೆತ್ತಿಕೊಂಡು ಗುಟುಕರಿಸಿದರು. ಹೋದಜೀವ ಬಂದಂತಾಯಿತು. ‘ಖಣ್‌ಖಣ್‌ ಲೊಳಕ್‌ ಲೊಳಕ್‌’ ಶಬ್ಬ ಕೇಳಬರುವಾಗ ಅದು ಲಾಳಸಾಬಿಯ ಗೋಣಿಚೀಲದೊಳಗಿಂದ ಬರುವ ಕಬ್ಬಿಣದ ಸಾಮಾಗ್ರಿಗಳ ಸದ್ದೇ ಎಂಬುದನ್ನು ಆಚಾರಿಯ ಕರ್‍ಣಗಳು ಗ್ರಹಿಸಿದವು. ಪಕ್ಕದ ದಾರಿಯತ್ತ ಗೃಧ್‌ನೋಟ ಬೀರಿದರು. ಹಗಲ ಮೇಲೆ ಗೋಣಿಚೀಲ ಹಾಕಿಕೊಂಡ ಸಾಬಿ ಮತ್ತು ಅವನ ತಮ್ಮ ಹುಸೇನಿ ಬರುವುದು ಕಂಡಾಗ ಸಾಕ್ಷಾತ್‌ ವಂಕಟರಮಣನನ್ನೇ ಕಂಡಷ್ಟು ಹಿಗ್ಗು. ದಿಗ್ಗನೆ ಎದ್ದರು. ‘ಲಾಳಸಾಬಿ ಬಂದಕಣೆ’ ಒಂದು ರೀತಿಯಲ್ಲಿ ಕೂಗಿಕೂಂಡರು. ಮನೆಯವರೆಲ್ಲಾ ಈಗ ಆಚೆ ಬಂದರು. ಮನೆಯವರೆಲ್ಲಾ ಹೊರಬಂದದ್ದನ್ನು ಕಾಣುತ್ತಲೇ ನಡೆದು ಬಂದ ಲಾಳಸಾಬಿ ‘ಸಲಾಂ ಸಾಬ್‌ ಸಲಾಂ’ ಎಂದು ನಜರುಮುಜರೆ ಸಲ್ಲಿಸುತ್ತಲೇ ಸನಿಯವಾದ. ‘ಮನಯಾಗೆ ಎಲ್ಲಾ ಆರಾಮಿದಾರೆ ಸಾಬ್?’ ಎಂದು ಯೋಗಕ್ಷೇಮ ವಿಚಾರಿಸಿದ. ‘ಚಿನ್ನಾಗಿದ್ದಾರೆ ಸಾಬಣ್ಣ ನಾವು ನಿನ್ನ ದಾರಿನೇ ಕಾಯ್ತಾ ಇದ್ವು, ದೇವರು ಬಂದಂಗೆ ಬಂದೆ ಕಣಪ್ಪ’. ಅಷ್ಟೂಂದು ಮರ್‍ಯಾದೆ ಕೊಟ್ಟು ಎಂದೂ ಮಾತನಾಡಿದವರೇ ಅಲ್ಲ ವಂಕಟಾಚಾರಿ. ಯಾರಿಗೋ ಜಡ್ಡಾಗಿರಬಹುದೆಂದೇ ಸಾಬಿ ಭಾವಿಸಿದನಾದರೂ ಇವರೆಲ್ಲಾ ಪೇಟೆ ಆಸ್ಪತ್ರೆ ಹೋಗಿ ಬರೋ ವಿದ್ಯಾವಂತ ಮಂದಿ ಎಂದಾಲೋಚಿಸುವಾಗಲೇ ಗಬ್ಬುನಾತ ಅವನ ಮೂಗಿಗೆ ಅಡರಿತು. ಅಲ್ಲಿನ ಪರಿಸ್ಥಿತಿಯ ಗಂಭಿರತೆ ಅರಿವಿಗೆ ಬಂತು. ‘ಯಾಕ್ರಿಸಾಬ್‌ ದೊಡ್ಡಮಾತು, ನಾವು ನಿಮ್ಮ ಮನೆಯ ಬೇಟಾ ಇದ್ದಂಗೆ, ಹೇಳಿಸಾಬ್‌ ನನ್ನಿಂದ ಏನಾಗಬೇಕು’ ಅಂದ ಸಾಬಿ. ಶೇಷಾಚಾರಿ ಬಾಯಿಬಿಟರು ‘ಏನ್‌ ಹೇಳ್ಳೋ ಸಾಬಿ. ನಿನ್ನೆ ರಾತ್ರಿ ತುಂಗೆ ಸತ್ತು ಹೋದ್ಳು. ಹೋದ್ಸಲ ನೀನೇ ಇಲಾಜು ಮಾಡಿದ್ಯಲ್ಲ… ಈಗ ಅದನ್ನು ನೀನು ತಗೊಂಡು ಹೋಗಬೇಕಲ್ಲಪಾ’ ದನಿಯಲ್ಲಿ ಆಜ್ಞೆಯ ಬದಲು ವಿಜ್ಞಾಪನೆಯಿತ್ತು. ‘ಅರೆ ಇಸ್ಕಿ! ಆಯ್ತುಬುಡಿಸಾಬ್‌ ಹಂ ದೋನೋ ಮನೆತಾವ ಹೋಗಿ ಮಾರಿ ತೋರ್‍ಸಿ ಬಂದು ಬಿಡ್ತೀವಿ’ ಅಂದ ಲಾಳಸಾಬಿ.

ಅರೆಬಯ್ಯಾ ಈಗ ದನಗಿನ ತಿನ್ನಂಗಿಲ್ಲ ಸರ್‍ಕಾರದ ಆಲ್ಡರ್‌ ಆಗೇತೆ. ಆಮೇಲೆ ನಾವು ಕಂಬಿ ಎಣಿಸಬೇಕಾಗ್ತದಷ್ಟೆಯಾ’ ಹುಸೇನಿ ಎಚ್ಚರಿಸಿದ. ‘ಅದು ಹಂಗಲ್ಲಕಣ್ರಯ್ಯ ಬದುಕಿರೋ ದನ ಕಡಿಬಾರ್‍ದು. ಸತ್ತದನ ತಿಂದ್ರೆ ತಪ್ಪೇನಿಲ್ಲ. ಅಷ್ಟಕ್ಕೂ ಸರ್‍ಕಾರದ ಆರ್‍ಡರ್‌ ಇನ್ನು ಪಕ್ಕಾ ಆಗಿಲ್ಲಪ್ಪ ಸಾಬಣ್ಣ’ ತಿಳಿವಳಿಕೆ ಹೇಳಿದರು ಆಚಾರಿ. ‘ಆಯ್ಯೋ ಅದ್ರಾಗೂ ಸತ್ತಿರೋದು ಆಕಳ ಸಾಮಿ. ಅದ್ರಾಗೆ ನಿಮ್ದು ಕೋಟಿಗಟ್ಟಲೆ ದೇವರುಗಳು ಇರ್‍ತಾವಂತೆ. ಎಲ್ಲೆ ಉಸಾಬರಿ ತೆಗಿರಿ’ ಅಂದ ಹುಸೇನಿ ನಿಜಕ್ಕೂ ಹೆದರಿದ್ದ. ‘ಅಲ್ಲಾಸಾಬ್‌, ನೀವು ನಮ್ದು ಕೆಳಹಟ್ಟಿ ಜನಕ್ಕೆ ಹೇಳಿದ್ದರೆ ಖುಷಿ ಆಗಿ ತಕ್ಕೊಂಡು ಹೋಗಿ ಈಟು ಹೊತ್ಗೆ ಖಲಾಸ್‌ ಮಾಡಿರೋರಲ್ಲ’ ಅಂದ ಲಾಳಸಾಬಿ ಹುಬ್ಬೇರಿಸಿದ. ‘ಅವರೀಗ ಮೊದಲಿನ ಹಂಗಿಲ್ಲ ಸಾಬು. ಅದಕ್ಕೆ ನಿನ್ನ ದಾರಿನೇ ಕಾಯ್ತಾ ಇದ್ವು, ನೀನೇ ದೊಡ್ಡಮನ್ಸು ಮಾಡ್ಬೇಕು’ ಶೇಷಾಚಾರ್ರು ಕೃಮುಗಿದುಬಿಟ್ಟರು. ಸಾಬಿ ಗಾಬರಿಯಾದ, ‘ಅರೆಇಸ್ಕಿ. ನೀವು ದ್ಯಾವ್ರ… ನಮ್ಗೆಕೈಮುಗಿಯೋದಾ. ಸೋಚ್ನಾಮತ್‌ಸಾಬ್‌ ಅಭಿಗಯಾ ಅಭಿ‍ಆಯಾ…ಚಲ್ರೆ’ ಅಂದವನೆ ಹುಸೇನಿ ಜೊತೆಗೆ ಬಿರಬಿರನೆ ಹಜ್ಜೆಹಾಕಿದ ಲಾಳಸಾಬಿ.

ಲಾಳಸಾಬಿಯನ್ನು ಕಂಡೊಡನೆ ಹಳ್ಳಿಮಂದಿ ಹಿರಿಹಿರಿ ಹಿಗ್ಗಿದರು. ರೈತರಿಗೋ ತಮ್ಮ ದನಗಳಿಗೆ ಲಾಳಾ ಹಾಕಿಸುವ ಉಮೇದು. ಕಾಯಿಲೆ ಬಿದ್ದವರಂತೂ ದಡಬಡಿಸಿ ಎದ್ದು ಬಂದರು. ಗೂರಲು ಮುದುಕನೊಬ್ಬ ಕವಕವ ಕೆಮ್ಮುತ್ತಲೇ ಸಾಬಿಯನ್ನು ಹಿಂಬಾಲಿಸಹತ್ತಿದ. ಚೆಂದಾಗಿದಿರಾ ರಾಮಣ್ಣ ಸಾಬ್‌? ಸಲಾಂ ಲಕ್ಷ್ಮೀದೀದಿ, ಹೊಟ್ಟೆ ಬ್ಯಾನಿ ಹಂಗೈತೀಗ? ಗೌಡರಿಗೆ ಅಡ್ಡಬಿದ್ದೆ. ಹರಿಗೆ ಆತಾ ಸೊಸೇದು ರಂಗಮ್ಮ? ಎಲ್ಲರ ರೋಗರುಜಿನಗಳ ಕುರಿತು ವಿಚಾರಿಸುತ್ತಲೇ ಸಾಗಿದ. ‘ಲಾಳಸಾಬಿಬರತ್ಲು ಕುರುಡಿಹಳ್ಳಿಗೇ ಕಣ್ಣುಬಂತು ನೋಡಿ ಶಂಕ್ರಣ್ಣ’ ಅನ್ನುತ್ತ ಜ್ವರ ಹಿಡಿದು ಮಲಗಿದ್ದ ಬಸಪ್ಪನೂ ಎದ್ದು ಸಾಬಿಯ ಹಿಂದೆಯೇ ಹೂರಟ. ಸಾಬಿಗೋ ಗಡಿಬಿಡಿ, ಮನೆಗೆ ಅವನು ರೋಗಿಗಳ ಹಿಂಡಿನ ಜೊತೆಗೇ ಕಾಲಿಟ್ಟ ನಾಡಿ ಪರೀಕ್ಷೆ ನಡೆಸಿದ. ಬಂದವರಿಗೆಲ್ಲಾ ಸಮಾಧಾನ ಹೇಳಿದ. ಪೆಠಾರಿಯಲ್ಲಿದ್ದ ಮದ್ದು ಕಟ್ಟಿಕೂಟ್ಟ. ‘ಉಳಿದೋರು ನೀವು ನಾಳಿಕೆ ಬರ್ರಿ. ಈಗ ಪೂಜಾರಪ್ಪ ಕರದವರೆ’ ಎಂದು ಸಬೂಬು ಹೇಳಿ ಎಲ್ಲರನ್ನು ಸಾಗುಹಾಕಿದ ಸಾಬಿ ನಂತರವೇ ಬೀಬಿ ಬಚ್ಚೆಗಳ ಕಡೆ ನಿಗಾಕೊಟ್ಟ.

‘ಇವನು ಬರ್‍ತಾನೇನ್ರ್‍ಇ? ಕಾದುಕಾದು ಬೇಸತ್ತ ಅಂಬುಜಾಬಾಯಿ ಬಾಯಿ ಮಾಡಿದಳು. ‘ಬರ್‍ತಾನೆ ಕಣ. ಸಾಬಿ ಆಡಿದ ಮಾತಿಗೆ ತಪ್ಪೋನಲ್ಲ’ ಆಚಾರಿಗೆ ನಂಬಿಕೆಯಿತ್ತು. ಹೇಳಿದಂತಯೇ ಹಗ್ಗ ಬೊಂಬು ಹತಾರಗಳ ಸಮೇತ ಹುಸೇನಿಯೊಂದಿಗೆ ಲಾಳಸಾಬಿ ಬಂದ. ಬೊಂಬುಗಳಿಗೆ ಆಕಳ ಕಾಲುಗಳನ್ನು ಕಟ್ಟಿ ಅದನ್ನು ಎತ್ತಿ ಕೊಟ್ಟಿಗೆಯಿಂದಾಚೆಗೆ ತಂದಿಟ್ಟರಲ್ಲದ ಕೊಟ್ಟಿಗೆ ಗುಡಿಸಲು ನಿಂತರು, ನೂಣಗಳು ಗೊಂಯ್‌ ಎಂದು ಎದ್ದು ಆಕಳತ್ತ ಕ್ಯಾಂಪ್‌ ಬದಲಿಸಿದವು-‘ಬೇಡಸಾಬು, ನಾವು ಕ್ಲೀನ್‌ ಮಾಡ್ಕೋತೀವಿ. ನೀನು ಅದನ್ನು ಸಾಗಿಸಪ್ಪ ಮೊದ್ಲು; ಅಂತ ಶೇಷಾಚಾರಿಯೇ ದುಂಬಾಲು ಬಿದ್ದರೂ ಬಿಡದೆ ಕೂಟ್ಟಿಗೆ ಗುಡಿಸಿದ ಸಾಬಿ, ಬಕೀಟಿನಲ್ಲಿ ನೀರು ಪಡೆದು ಪೂರಕೆಯಿಂದ ಶುಚಿಮಾಡಿದ ನಂತರವೆ ಬೊಂಬಿಗೆ ಹಗಲು ಕೊಟ್ಟು ಆಕಳನ್ನು ನೇತಾಡಿಸಿಕೂಂಡು ಅಣ್ಣ ತಮ್ಮ ಸಾಗಿದರು. ಬೀದಿಜನ ನಿಂತು ನೋಡಿ ಅಸಹ್ಯಪಟ್ಟು ಕೊಂಡು ಮೂಗು ಮುಚ್ಚಿಕೊಂಡಿತು.

ಶೇಷಾಚಾರಿ ಸ್ನಾನದ ಮನೆಗೆ ಹೋದರು. ನಂತರ ಒಬ್ಬೊಬ್ಬರದೂ ಸ್ನಾನಗಳಾದವು. ನೆಮ್ಮದಿಯಿಂದ ಊಟಕ್ಕೆ ಕುಳಿತಾಗ ಸಂಜಿಗತ್ತಲು. ಹಸಿದ ಅಬ್ಬರ ತಣಿಯುವಾಗಲೆ ಹೂರಗಡ ಬೀದಿಯಲ್ಲಿ ಗದ್ದಲಕೇಳಬಂತು. ಗದ್ದಲ ಹೆಚ್ಚಾದಾಗ ಕೈತೊಳೆದು ಲಗುಬಗೆಯಿಂದ ಹೊರಬಂದರು ಆಚಾರಿ. ಅಲ್ಲಲ್ಲಿ ಗುಂಪುಕಟ್ಟಿ ಜನಮಾತನಾಡುತ್ತಿದ್ದಾರೆ. ಬರೀ ಗೌಜುಗದ್ದಲ ಒಂದೂ ಅರ್‍ಥವಾಗುತ್ತಿಲ್ಲ. ಹುಡುಗನೊಬ್ಬನ ಮೊಬೈಲ್‌ರಿಂಗ್‌ ಆಗುತ್ತಿದೆ. ಎಲ್ಲೋ ನೋಡಿದ ಮುಖ ಅನುಮಾನವೇ ಇಲ್ಲ, ಅವಾ ಕೆಳಹಟ್ಟಿ ಕೆಂಚನೆ. ಅವನ ಬಡಬಡಿಕೆ ಕೇಳುತ್ತದೆ. ‘ಹಲೋ ಹಾದು ಸಾ. ತಾವು ಎಲ್ಲಿದ್ದೀರಿ? ಬಸ್‌ಸ್ಟ್ಯಾಂಡ್‌ನಿಂದ ಎಲ್ಡು ಕಿಲೋಮೀಟರ್‌ ಅಷ್ಟೆಯಾ. ಭಾರಿ ಗದ್ದಲ ನಡೆದೈತೆ ಸಾ. ನಾನು ಊರಬಾಗಿಲ್ಲೇ ಅವ್ನಿ. ಹುಂಸಾ.. ಬಂದುಬಿಡಿಸಾ’. ಕುಂಕುಮಧಾರಿ ಹುಡುಗರ ಗುಂಪಿನಲ್ಲಿ ವಿಚಿತ್ರ ಸಡಗರ. ‘ಏನಯ್ಯ ಅದು ಗಲಾಟೆ?’ ಶೇಷಾಚಾರಿ ಒಂದೆರಡು ಹೆಜ್ಜೆ ಮುಂದೆ ಹೋಗಿ ವಿಚಾರಿಸಿದರು. ‘ಪ್ರಜಾರ್ರೆ, ಆನನ್ಮಗ ಲಾಳಸಾಬಿ ಅವನಲ್ಲ… ಆಕಳ ಚರ್‍ಮ ಸುಲತಾ ಇದ್ದಾಗ ಸಿಕ್ಕಿಬಿದ್ದ ನೋಡಿ. ಅವನಿಗೂ ಅವನ ತಮ್ಮಂಗೂ ಬಟ್ಟೆಬಿಚ್ಚಿ ಬಡಿದಿದೀವಿ. ಗೋವು ದೇವರ ಸಮಾನ ಕಣ್ರಲೆ ಬೋಸುಡಿಮಕ್ಳಾ ಅಂದ್ರೆ ತಿಂತಾರಲ್ಲ ಸ್ವಾಮಿ? ಜೀವ ಇರೋಗಂಟ ಮಾಂಸ ಮುಟ್ಟಬಾರ್‍ದು ಹಂಗೆ ಇಕ್ಕೀದೀವಿ. ಯುವಕನೊಬ್ಬ ಸಂಭ್ರಮಿಸಿದ. “ಛೆ ಛೆ…. ಎಂಥ ಕೆಲಸ ಮಾಡಿದಿರಪ್ಪಾ ಸತ್ತ ಆಕಳ ಚರ್‍ಮ ಸುಲಿಯೋದು, ತಿನ್ನೋದು ತಪ್ಪೆ? ಅದವನ ಕುಲಾಚಾರ’ ಶೇಷಾಚಾರಿ ಅಲವತ್ತುಕೊಂಡರು. ‘ಅದು ಸತ್ತ ದನ ಅಂತ ನಿಮಗ್ಯಾವನ್ರಿ ಹೇಳ್ದ?’ ಧಡಿಯನೊಬ್ಬ ಗುರಾಯಿಸಿದ, ‘ಅಯ್ಯೋ ಅದು ನಮ್ಮ ಮನೆದೇ ಆಕಳಪ್ಪ ಸತ್ತುಹೋಗಿದ್ದನ್ನ ಇಟ್ಕೊಂಡು ನಾವೇನು ಮಾಡೋದು? ತಿನ್ನೋಜನಕ್ಕಾದ್ರೂ ಉಪಯೋಗವಾಗ್ಲಿ ಅಂತ ಕೊಟ್ಟೆವು’ ಆಚಾರಿ ಕನಿಕರ ತೋರಿದರು. ‘ಮುಚ್ಚರಿ ಬಾಯಿ. ಸತ್ತದನಾನೇ ಕೊಟ್ಟಿರೋ? ಇಲ್ಲ ಮುದಿಯಾಯ್ತು ಅಂತ ನೀವೇ ಮಾರಿಕೊಂಡ್ರೋ? ಹಂಗಂತ ನಿಮ್ಮ ಮೇಲೂ ಪೂಲೀಸರಿಗೆ ದೂರ ಕೂಡಬೇಕೇದ್ರಿ ಪೂಜಾರಪ್ಪ? ಊರುಸಾಬರಿ ನಿಮಗ್ಯಾಕ್ರಿ ಸುಮ್ಗೆ ಒಳಾಕ್‌ನಡೀರಿ’ ಬಾಯೋಬಾಯಿ ಮಾಡುತ್ತಾ ತೋಳುಮಡಿಚಿದನೊಬ್ಬ ಕುಂಕುಮದವ. ‘ಶೇಷಾ, ನೀನು ಒಳಗೆ ಬಾ’ ವಂಕಟಾಚಾರಿ ಗದರಿಕೂಂಡರು. ‘ಅಲ್ಲಪ್ಪಾ… ಪಾಪ ಆ ಸಾಬಿ’ ಶೇಷಾಚಾರಿ ಪೇಚಾಟ. ‘ಅವನ ಕರ್‍ಮಕ್ಕೆ ನಾವೇನಯ್ಯ ಮಾಡೋಕಾಗುತ್ತೆ’ ಊರಿನ ಮಂದಿನಾ ಎದುರು ಹಾಕ್ಕೊಂಡು ಬಾಳೋಕಾಗುತ್ತೇನೋ ದಡ್ಡಾ’ ಮಗನನ್ನು ಓಳಗೆಳದುಕೊಂಡು ಬಾಗಿಲಿಕ್ಕಕೊಂಡರು ವಂಕಟಾಚಾರಿ.

ಸ್ವಲ್ಪ ಹೊತಿನಲ್ಲೆ ‘ವಂಯ್‌ವಂಯ್‌’ ಶಬ್ದ ಮಾಡುತ್ತಾ ಬಂದ ಪೊಲೀಸ್‌ವ್ಯಾನ್ ಶಬ್ದ ಶೇಷಾಚಾರಿಯ ಕಿವಿಯನ್ನಪಳಿಸಿತು. ಜೈಶ್ರೀರಾಮ್‌, ಬೋಲೋ ಭಾರತ್‌ ಮಾತಾಕಿ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ತಡಯಲಾರದಾದ ಆಚಾರಿ ಕಿಟಕಿಯಲ್ಲಿ ಮುಖವಿಟ್ಟರು. ಹಳ್ಳಿಜನ ನಿಂತು ನೋಡುತ್ತಿರುವಾಗಲೇ ಅರೆಬೆತ್ತಲೆಗೊಂಡು ರಕ್ತಸಿಕ್ತರಾದ ಲಾಳಸಾಬಿ ಅವನ ತಮ್ಮ ಹುಸೀನಿಯನ್ನು ಎತ್ತಿ ವ್ಯಾನಿಗೆ ಎಸೆದರು ಪೊಲೀಸರು. ಮನೆಯ ಮುಂದೆಯೇ ವ್ಯಾನ್‌ ಶಬ್ದ ಮಾಡುತ್ತಾ ಬಂತು. ವ್ಯಾನಿನ ಪಂಜರದಂತಹ ಕಿಟಕಿಯಲ್ಲಿ ಮುಖವಿಟ್ಟ ಲಾಳಸಾಬಿ ತಮ್ಮ ಮನೆಯ ಕಡಗೇ ನೋಡುತ್ತಿರುವಂತೆ ಭಾಸವಾಯಿತು. ಆಚಾರಿ ನಡುಗಿದರು. ಒಂದಿಷ್ಟುಹೊತ್ತು ನಿಂತು ನೋಡಿದ ಗುಜುಗುಜು ಮಾತನಾಡಿದ ಹಳ್ಳಿಜನ ಏನೂ ನಡದೆಯಿಲ್ಲವೆಂಬಂತೆ ತಮ್ಮ ತಮ್ಮ ಕಲಸ ಕಾರ್‍ಯಗಳಲ್ಲಿ ತೂಡಗಿಸಿಕೊಂಡಿದ್ದನ್ನು ಕಂಡ ಶೇಷಾಚಾರಿ ಇದೀಗ ಪಡಸಾಲೆಗೆ ಬಂದರು. ಟಿವಿ ಧಾರವಾಹಿ ನೋಡುತ್ತಾ ಕೂತ ಮನೆಯವರೊಂದಿಗೆ ತಾವೂ ಕೂತರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಎಳೆ ಬಾಲೆ
Next post ಎದೆಯ ಬಡಿತ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…