ಗಂಡ ಹೆಂಡಿರು ಕೂಡಿಕೊಂಡು ನೆರೆಯೂರಿನ ಸಂತೆಗೆ ಹೋಗಿ, ತಮಗೆ ಬೇಕಾದ ಅರಿವೆ ಅಂಚಡಿ, ಕಾಳುಕಡ್ಡಿ ಕೊಳ್ಳುವುದರಲ್ಲಿ ತೊಡಗಿದರು. ಜವಳಿಸಾಲಿನಿಂದ ಕಿರಾಣಿ ಸಾಲಿನ ಕಡೆಗೆ ಸಾಗಿದಾಗ ಅಲ್ಲೊಬ್ಬ ಕುರುಡ ಮುದುಕನು ಹೊರಟಿದ್ದನು. ಆತನ ಕಣ್ಣು ಕಾಣದೆ ಮುಳ್ಳು ಕಲ್ಲು ತುಳಿಯುತ್ತ ತೋಟದ ಬೇಲಿಯಲ್ಲಿಯೇ ಸಾಗಿದ್ದನು – “ಯಾರಾದರೂ ನನ್ನನ್ನು ಹಾದಿಗೆ ಹಚ್ಚಿರಪ್ಪೋ. ನಾನು ಕಣ್ಣು ಕಾಣದ ಕುರುಡ. ಮುಳ್ಳುಬೇಲಿಯಲ್ಲಿ ಹೋಗಿ ಬೀಳುತ್ತೇನೆ. ಒಂದಿಷ್ಟು “ಪುಣ್ಯ ಕಟ್ಟಿಕೊಳ್ಳಿರೆಪ್ಪ ಪುಣ್ಯಾತ್ಮಯಾ” ಎಂದು ಹಲಬುತ್ತಿದ್ದನು.
ಕುರುಡನ ಸ್ಥಿತಿಯನ್ನು ಕಂಡು ಗಂಡನು ಕನಿಕರಿಸಿ ಹೆಂಡತಿಗೆ ಹೇಳಿದನು “ಆ ಮುದುಕನ ಕೈ ಹಿಡಿದು ದಾರಿಗೆ ಹಚ್ಚು.”
ಗಂಡನಪ್ಪಣೆಯಂತೆ ಹೆಂಡತಿಯು ಕುರುಡನ ಕೈಹಿಡಿದು ಮೆಲ್ಲನೆ ಹೊರಳಿಸಿ ಸರಿದಾರಿಗೆ ಹಚ್ಚಿ, ಕೈಬಿಡಬೇಕೆಂದರೆ ಕುರುಡನು ಕೈಬಿಡದೆ ಕೂಗಿಕೊಳ್ಳತೊಡಗಿದನು – “ನನ್ನ ಹೆಂಡತಿ ನೋಡಿರೋ ಅಪ್ಪಾ ಈಕೆ. ನನ್ನ ಕೈಬಿಟ್ಟು ಇನ್ನಾವನೋ ಗೆಳೆಯನ ಕೂಡ ಓಡಿಹೋಗಬೇಕೆನ್ನುತ್ತಾಳೆ. ನ್ಯಾಯ ಮಾಡಿರೋ ಅಪ್ಪಾ ಕುರುಡನದು” ಎನ್ನುತ್ತಾ ಗಟ್ಟಿಯಾಗಿ ಬೊಬ್ಬಿಟ್ಟನು. ಜನ ನೆರೆಯಿತು.
ತನ್ನ ಹೆಂಡತಿಯನ್ನು ಕುರುಡನ ಕೈಯೊಳಗಿಂದ ಬಿಡಿಸಿಕೊಳ್ಳಲು ಗಂಡನು ಪ್ರಯತ್ನಿಸಿದರೆ ಮತ್ತಿಷ್ಟು ಬೊಬ್ಬಾಟವೇ ಆಗತೊಡಗಿತು. ಆಕೆ ತನ್ನ ಹೆಂಡತಿಯೆಂದು ಕುರುಡ ಹೇಳುವನು ; ನನ್ನ ಹೆಂಡತಿಯೆಂದು ಆತ ಹೇಳುವನು. ಆತನು ನನ್ನ ಗಂಡನೆಂದು ಹೆಂಡತಿ ಹೇಳಿದೆರೆ, ತನ್ನನ್ನು ಬಿಟ್ಟು ಹೊರಟಿದ್ದರಿಂದ ಹಾಗೆ ಹೇಳುತ್ತಾಳೆಂದು ಕುರುಡನ ಕೂಗಾಟ.
ಆ ನ್ಯಾಯ ಚಾವಡಿಯ ಕಟ್ಟೆಯೇರಿತು. ಅಲ್ಲಿಯೂ ಬಗೆಹರಿಯಲಿಲ್ಲ. ಬಳಿಕ ಗೌಡನು ಸಿಟ್ಟಗೇರಿ ಆ ಮೂವರನ್ನೂ ಮೂರು ಬೇರೆ ಬೇರೆ ಕೋಣೆಗಳಲ್ಲಿ ಹಾಕಿಸಿ ಒಂದೆಂದು ಕೋಣೆಯ ಮುಂದೆ ಒಬ್ಬೊಬ್ಬ ಓಲೆಕಾರನನ್ನು ಕಾವಲಿಟ್ಟನು.
ಮರುದಿವಸ ಗೌಡನು ಆ ಮೂವರೂ ಕಾವಲುಗಾರನನ್ನು ಬೇರೆ- ಬೇರೆಯಾಗಿ ಕರೆಯಿಸಿಕೊಂಡು, ಒಳಗಿದ್ದವರು ಒಡನುಡಿಯುತ್ತಿದ್ದ ಮಾತುಗಳಾವವೆಂದು ಕೇಳಿದನು. ಅವರು ಕ್ರಮವಾಗಿ ಹೀಗೆ ಹೇಳಿದರು –
ಕುರುಡನ ಕೋಣೆಯ ಕಾವಲುಗಾರ – “ಮನಸ್ಸಿನಂತೆ ಮಹಾದೇವ ! ಮನಸ್ಸಿನಂತೆ ಮಹಾದೇವ ! ಎನ್ನುತ್ತ ಕುಣಿದಾಡುತ್ತಿದ್ದನು ಆ ಕುರುಡ.”
ಹೆಂಗಸಿನ ಕೋಣೆಯ ಕಾವಲುಗಾರ – “ಗಂಡನಪ್ಪಣೆ ಮೀರಬಾರದೆಂದು ತಂದೆಗೆ ಸಮಾನನಾದ ಆ ಕುರುಡ ಮುದುಕನ ಕೈಹಿಡಿದು ಸರಿದಾರಿಗೆ ಹಚ್ಚಿದರೆ, ‘ಹೆಂಡತಿ ಕೈಕೊಸರಿಕೊಂಡು ಓಡಿಹೋಗುವಳೋ ಅಪ್ಪಾ’ ಎಂದು ಹೊಯ್ಕೊಂಡರೆ ನಾನೇನು ಹಣೆಹಣೆ ಗಟ್ಟಿಸಿಕೊಳ್ಳಲಾ ? ಎಂಥ ವೇಳೆ ತಂದೆಯೋ ದೇವರೇ” ಎನ್ನುತ್ತ ಆಕೆ ಬೆಳತನಕ ಗೋಳಾಡಿ ಅತ್ತಳು.
ಗಂಡನ ಕೋಣೆಯ ಕಾವಲುಗಾರ – “ಆ ಕುರುಡನನ್ನು ನೋಡಿ ನನಗೇಕೆ ದಯೆ ಬಂದಿತೋ ಏನೋ. ಆತನಿಗೆ ಸರಿದಾರಿಗೆ ಹಚ್ಚುವ ಕೆಲಸವನ್ನು ಹೆಂಡತಿಗೆ ಹೇಳದೆ ನಾನೇ ಮಾಡಿದ್ದರೆ ಎಷ್ಟು ಚೆನ್ನಾಗಿತ್ತಲ್ಲ!” ಎಂದು ಗಳಿಗೆಗೊಮ್ಮೆ ಮಿಡುಕುತ್ತಿದ್ದನು.
ಆ ಎಲ್ಲ ಹೇಳಿಕೆಗಳನ್ನು, ಕೇಳಿ ಗೌಡನು, ಆ ಹೆಣ್ಣು ಮಗಳು ಕುರುಡನ ಹೆಂಡತಿ ಅಲ್ಲವೆಂದು ನಿರ್ಣಯಿಸಿ ಆಕೆಯನ್ನು ಆಕೆಯ ಗಂಡನೊಡನೆ ಕಳಿಸಿದನು.
ಕುರುಡ ಮುದುಕನನ್ನು ಬಯ್ದು ಬೆದರಿಸಿ ಊರಹೊರಗೆ ಹಾಕಿಸಿದನು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು