ಬಯಲಾಟದ ಒಂದು ಮೇಳದಲ್ಲಿ ಸಂಕಣ್ಣ, ಹುಣಸಿಕ್ಕ ಹಿಮ್ಮೇಳದ ಹಾಡುಗಾರರಾಗಿದ್ದರು. ಸಂಕಣ್ಣ ಅಸಾಧ್ಯ ಸಿಂಬಳ ಬುರಕನಾಗಿದ್ದರೆ, ಹುಣಸಿಕ್ಕ ತಡೆಯಿಲ್ಲದೆ ತುರಿಸುವ ಹುರುಕಲಿಯಾಗಿದ್ದನು. ಸಿಂಬಳ ಹಣಿಕೆ ಹಾಕಿದಾಗೊಮ್ಮೆ ಸಂಕಣ್ಣ ಸರಕ್ಕನೇ ಮೂಗೇರಿಸಿ, ಅಂಗಿಯ ತೋಳಿನಿಂದ ಒರೆಸಿಕೊಳ್ಳುವನು.
ಬಲಧಾರೆಯನ್ನು ಬಲತೋಳಿನಿಂದ, ಎಡಧಾರೆಯನ್ನು ಎಡತೋಳಿನಿಂದ ಒರೆಸಿಕೊಂಡು ಅಂಗಿಯ ತೋಳತುದಿಗಳೆರಡೂ ಕಟುರಾಗಿದ್ದವು. ಅದರಂತೆ ಹುಣಸಿಕ್ಕನು ಕೈಬೆರಳ ಸಂದುಗಳಲ್ಲಿ ತುರಿಕೆಯೆದ್ದರೆ ಕೈಗೆ ಕತ್ತರಿ ಮಾಡಿ ತಿಕ್ಕಾಡುವದರಿಂದ ತೊಗಲೆಲ್ಲ ಕೆತ್ತಿಹೋಗಿ ನೆತ್ತರು ಸುರಿಯುವದು.
ಮೇಳದವರು ಅಟ್ಟಹೂಡಿ ತಾವು ಕಲಿತ ಬಯಲಾಟವನ್ನು ಆಡುವದಕ್ಕೆ ಅಣಿಯಾದರು. ಸಂಕಣ್ಣ – ಹುಣಿಸಿಕ್ಕರನ್ನು ಕರೆದು, ಇಂದಿನ ರಾತ್ರಿಯಾದರೂ ಹೇಸಿತನಕ್ಕೆ ಆಸ್ಪದ ಕೊಡದೆ, ಚೊಕ್ಕಾಗಿರಬೇಕೆಂದು ಅವರಿಗೆ ಕಟ್ಟಪ್ಪಣೆ ಮಾಡಿದರು. ನಿಮ್ಮ ಹೇಸಿತನ ಕಂಡುಬಂದರೆ, ನಿಂತಕಾಲಮೇಲೆ ಅಟ್ಟದಿಂದ ಇಳಿಸಿ ನಿಮ್ಮನ್ನು ಮನೆಗೆ ಕಳಿಸುವೆವು ಎಂದು ಹೆದರಿಕೆ ಹಾಕಿದರು. ಆ ಲಕ್ಷ್ಮಣರೇಖೆಯಲ್ಲಿಯೇ ಅಂದಿನ ಇರುಳನ್ನು ಕಳೆಯುವೆವೆಂದು ಅವರಿಬ್ಬರೂ ಮಾತುಕೊಟ್ಟರು.
ಹಳ್ಳಿಯವರೆಲ್ಲ ಉಂಡುಂಡುಬಂದು ಬಯಲಲ್ಲಿ ಸೇರಿದರು. ತಡಮಾಡಿದರೆ ದೂರದಲ್ಲಿಯೇ ಕುಳಿತುಕೊಳ್ಳಬೇಕಾಗುವದೆಂದು ಜನರು ಬೇಗಬೇಗನೆ ಬಂದರು.
ಬಯಲು ತುಂಬುವ ಹೊತ್ತಿಗೆ ಗಣಪತಿ ಸ್ತೋತ್ರವು ಆರಂಭವಾಯಿತು. ಅರ್ಧ ರಾತ್ರಿ ಕಳೆಯುವ ಹೊತ್ತಿಗೆ ಕಥೆ ಭರತಿಗೆ ಬಂತು. ಜನರೆಲ್ಲ ನಿಸ್ತಬ್ಬರಾಗಿ, ಬಿಟ್ಟ ಕಣ್ಣುಗಳಿಂದ ನೋಡುತ್ತ ಕುಳಿತುಕೊಂಡಿದ್ದರು. ಪಾತ್ರಧಾರಿಗಳಿಗೆ ತುಸು ವಿಶ್ರಾಂತಿಯೂ ಬೇಕಾಗಿತ್ತು. ಆ ಸಂದರ್ಭದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಕಣ್ಣ ಹುಣಸಿಕ್ಕ ಮಾತಾಡಿಕೊಂಡು ಒಂದು ಅಡ್ಡಸೋಗು ತರುವುದಕ್ಕೆ ಸಿದ್ಧತೆ ಮಾಡಿದರು.
“ಏನು ಯಮನೂರು ಜಾತ್ರೆಯೋ ಸಂಕಾ ! ಜನದಟ್ಟಣೆ ಏನು ಹೇಳಲಿ?”
“ಬನಶಂಕರಿ ಜಾತ್ರೆ ಅದಕ್ಕೂ ಗಡಚು. ಆ ನುಗ್ಗಾಟದಲ್ಲಿ ಒಳ್ಳೊಳ್ಳೆಯವರು ಜಬ್ಬಾಗಿ ಹೋಗುತ್ತಿದ್ದರು.”
“ಅಷ್ಟೊಂದು ಜನ ಸುಮ್ಮನೆ ಒಂದೆಡೆಗೇ ನಿಂತಿರಲಿಲ್ಲ. ಅತ್ತಿಂದ ಇತ್ತ, ಇತ್ತಿಂದ ಅತ್ತ ಬರುತ್ತಲೇ ಇತ್ತು; ಹೋಗುತ್ತಲೇ ಇತ್ತು” ಎಂದು ಹೇಳುವ
ಸಮಯದಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಅಂಗಿಯ ತೋಳುಗಳಿಂದ ಒಳಿತಾಗಿ ಮೂಗು ಒರೆಸಿಕೊಂಡನು ಸಂಕಣ್ಣ.
ಥೂ ಥೂ ಥೂ ! ಒಂದು ಹೆಜ್ಜೆ ಮುಂದೆ ಸಾಗೇನೆಂದರೆ ತಿಕ್ಕಾಟ ಮುಕ್ಕಾಟ ! ತಿಕ್ಕಾಟ ಮುಕ್ಕಾಟ !” ಎನುತ್ತ ಕೈ ಬೆರಳುಗಳ ಕತ್ತರಿಮಾಡಿ ತಿಕ್ಕಿ ತಿಕ್ಕಿ ಹುರುಕಿನ ತುರಿಕೆಯನ್ನು ತಮ್ಮಣಿಗೊಳಿಸಿಕೊಂಡನು ಹುಣಸಿಕ್ಕ.
ಈ ರೀತಿ ಅಡ್ಡಸೋಗು ಮುಗಿಸಿ ಅವರಿಬ್ಬರೂ ಒಳಗೆ ಬಂದು ಹಿಮ್ಮೇಳದವರನ್ನು ಕೂಡಿಕೊಂಡರು. ಮುಂದಿನ ಅರ್ಧರಾತ್ರಿಯನ್ನು ಅವನು ಮಾತುಕೊಟ್ಟಂತೆ ಕಳೆಯುವುದಕ್ಕೆ ಸಾಧ್ಯವಾಯಿತು. ಮೇಳದವರಿಗೆ ಜಾತ್ರೆಯ ಗದ್ದಲದ ಅರ್ಥವಾಗದೆ ಇರಲಿಲ್ಲ.
*****