ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ”
ಎಂದಳು ಹೆಂಡತಿ.
“ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎಂದು ಗಂಡನವಾದ.
ಒಂದು ತಾಸು ಜಗಳಾಡಿದರು. ಯಾರೂ ಉಣ್ಣಲಿಲ್ಲ. ಕಡೆಯಲ್ಲಿ ಒಂದು ನಿರ್ಧಾರಕ್ಕೆ ಬಂದರು – “ಯಾರು ಹೂಂ ಅಂತಾರೊ ಅವರು ಒಂದು
ತಿನ್ನಬೇಕು. ಸುಮ್ಮನೆ ಮನಗಿದವರಿಗೆ ಎರಡು.”
ನಾಯಿ ಬಂದು ಮಾಲಾದಿ ತಿನ್ನ ಹತ್ತಿತು. ನಾಯಿಯನ್ನು ಹೊಡೆಯುವರಾರು? ಹೊಡೆದರೆ ಹೂಂ ಅನ್ನಬೇಕಾಗುತ್ತದೆ. ಹೂಂ ಅಂದವರಿಗೆ ಒಂದಽ ಉಂಡಿ. ಅದಕ್ಕಾಗಿ ಅವನೂ ಹೂಂ ಅನಲಿಲ್ಲ. ಅವಳೂ ಹೂಂ ಅನಲಿಲ್ಲ. ಹಾಗೇ ಮಲಗಿದರು.
ಹೊತ್ತು ಹೊರಟಿತು. ಸೂರ್ಯನು ಮಾರು ಮೇಲೆ ಏರಿ ಬಂದನು. ಅವರ ಮುಚ್ಚಿದ ತಟ್ಟಿ ಮುಚ್ಚಿದ ಹಾಗೆಯೇ ಇತ್ತು. ನೆರೆಹೊರೆಯವರು ತಟ್ಟಿ
ಬಡಿದರು. ಹೂಂ ಅನಲಿಲ್ಲ; ಹಾಂ ಅನಲಿಲ್ಲ. ನಾಲ್ಕು ಮಂದಿ ನೆರೆದರು. ತಟ್ಟಿ ಮುರಿದರು. ಒಳಗೆ ಹೊಕ್ಕರು. ಇಬ್ಬರಿಗೂ ಮಾತಾಡಿಸಿ ನೋಡಿದರು. ಅಗಳಾಡಿಸಿ ನೋಡಿದರು. ಮಿಸುಕಲೇ ಇಲ್ಲ ಯಾರೂ.
ಇಬ್ಬರೂ ಸತ್ತಿದ್ದಾರೆಂದು ನಿರ್ಧರಿಸಿ ಕುಳ್ಳುಕಟ್ಟಿಗೆಗಳನ್ನು ಹೊತ್ತೊಯ್ದು ಸುಡುಗಾಡಿನಲ್ಲಿ ಒಗೆದು ಬಂದರು. ಇಬ್ಬರನ್ನೂ ನಾಲ್ಕು ನಾಲ್ಕು ಜನ ಹೊತ್ತರು.
ಇಬ್ಬರೊಳಗಾರೂ ಹೂಂ ಅನಲಿಲ್ಲ. ಹೂಂ ಅಂದರೆ ಒಂದೇ ಉಂಡಿ ಅಲ್ಲವೇ?
ಕುಳ್ಳು ಕಟ್ಟಿಗೆಯ ತಾಳಿಯ ಮೇಲೆ ಹೆಣ ಒಗೆದರು. ಉರಿ ಹಚ್ಚಿದರು. ಚೌಕೀದಾರನನ್ನು ಅಲ್ಲಿ ನಿಲ್ಲಿಸಿ ಮಂದಿಯೆಲ್ಲ ತಂತಮ್ಮ ಮನೆಗೆ ಹೋದರು.
ಬೆಂಕಿ ಹೊತ್ತಿದಂತೆ ಮೈಯೆಲ್ಲ ಸುಡುತ್ತ ಬಂತು. ಇಬ್ಬರಲ್ಲಿ ಒಬ್ಬರೂ ಸೋಲಲಿಲ್ಲ. ಕಿರಿ ಬೆರಳೊಂದು ಛಟ್ ಎಂದು ಸಿಡಿದು ಬಂದು ಬಿತ್ತು. “ಥೂ ! ನೀನೇ ಎರಡು ಉಂಡಿ ತಿನ್ನು” ಎಂದನು ಗಂಡ. ಮೈಮೇಲಿನ ಬಟ್ಟೆಬರೆಗಳೆಲ್ಲ ಸುಟ್ಟಿದ್ದರಿಂದ ಇಬ್ಬರೂ ಬರಿ ಬತ್ತಲೆಯೇ ಜಿಗಿದು ಕಡೆಗೆ ಬಂದರು. “ದೆವ್ವ ಬಂದವೆಂದು ಚೌಕಿದಾರ ಓಡಿಹೋದನು.
ಊರ ಗೌಡನು ತನ್ನ ಅರಿವೆ ಒಗೆದು ತರಲಿಕ್ಕೆ ಅಗಸನಿಗೆ ಹೇಳಿದನು. ಆದರೆ ಅಗಸನು ಹಳ್ಳಕ್ಕೆ ಹೋಗಲು ಸಿದ್ದನಾಗಲಿಲ್ಲ. ಹಳ್ಳದ ದಂಡೆಯಲ್ಲಿಯೇ
ಸುಡುಗಾಡು ಇತ್ತು. ದೆವ್ವ ಬೆನ್ನುಹತ್ತುವವೆಂದು ಚೌಕಿದಾರನು ಉರಲ್ಲೆಲ್ಲ ಹೇಳಿದ್ದನು. ಗೌಡನು ಅಗಸನಿಗೆ ಒತ್ತಾಯದಿಂದ ಅರಿವೆಗಳನ್ನು ಕೊಟ್ಟು ತಾನೂ ಕುದುರೆ ಹತ್ತಿ ಬೆನ್ನ ಹಿಂದೆ ಹೋದನು. ಬಟ್ಟಿ ಒಗೆದು ದಡದಲ್ಲಿ ಒಣಹಾಕಲಾಯಿತು. ಆ ಬಟ್ಟೆಗಳನ್ನು ತೆಗೆದುಕೊಳ್ಳಲು ಇಬ್ಬರೂ ಆ ಗಂಡಹೆಂಡತಿ ಓಡುತ್ತ ಬಂದರು.
“ಅಯ್ಯಯ್ಯೋ ದೆವ್ವ ಹಿಡಿಯುತ್ತವೆ” ಎನ್ನುತ್ತ ಅಗಸ ಮತ್ತು ಗೌಡ ಇಬ್ಬರೂ ಓಡಿದರು. ಅಂದು ಆ ಗಂಡ ಹೆಂಡತಿ ಅಗಸನ ಬಟ್ಟೆ ಹಾಕಿಕೊಂಡು ಬಂದಂದಿನಿಂದ ಹಾರುವರು, ಲಮಾಣಿಗರಾದರಂತೆ.
*****