(ಹಾಡು)
ಭಾರತ ಭಾಗ್ಯ ವಿಧಾತಾ
ತಾತಾತಾ
ಸ್ವರಾಜ್ಯಮೆಮಗೆ ದಾತಾ
ತಾತಾತಾ ||ಪಲ್ಲ||
ಅನಾಧರ ನಾಥಾ
ಪತಿತರ ನೇತಾ
ಮದಾಂಧರ ಜೇತಾ
ಪರತಂತ್ರರ ತ್ರಾತಾ ||೧||
ನೋಡೈ ನಿಮಿರೆಮೆಯೊಡೆಯಾ
ನಮ್ಮ ತನುಮನ ಕ್ಷುಧೆಯಾ
ನಗೆಯಮೃತದ ಜೀಯಾ
ಕೇಳ್ನಿರಾಶೆಯ ಸೆಲೆಯಾ ||೨||
ಭಾರತದ ಗದ್ಗದ
ದಿಂದುದಿಸಿ ಮೊರೆವುದ
ತಾರಮಗೆ ಸ್ನೇಹದ
ತವ ಶಂಖ ನಿನಾದ ||೩||
ಮೊಲೆ ಮಡಿಲ ಶಿಶುಗಳ
ಮಲತಾಯ ಜೋಗುಳ
ಗಳಿನೆಮ್ಮೊಳು ಭೇದಗಳ
ವಿಧಿ ಪಾಡಿದಳಗ್ಗಳ ||೪||
ಕಲಿಸೆಮಗೆ ಸತ್ಯಮೊಂದು
ಇಸ್ಲಾಮಂತೆಯೆ ಹಿಂದು
ತಾಯ್ಮೊಲೆಗಳಿವೆಂದು
ಮೊಲೆ ಕೊಡುವ ತಾಯೊಂದು ||೫||
ನಮ್ಮ ಸುತ್ತಲು ನೀಡಂ
ಹುಯ್ವವೆರಕೆಯ ಹಾಡಂ;
ತೆರೆ ಸುಯ್ಗಳ ಗೂಡಂ,
ಕೊಡು ಗಗನದ ಬೀಡಂ ||೬||
ಪಡು ತೂಗುತಿದೈ ತಿಮಿರಂ
ಕಾವೆವು ನಾವಿನ್ನೆವರಂ
ಜಗದಂಬಿಗ ಹಾಯ್ಸಿವರಂ
ನಿಲುನೇಸರ ತವರಂ ||೭||
ಬಡತನವೆ ಧನವೆಮಗೆ
ಕೊಡಲಾಪೆವೇಂ ನಿನಗೆ?
ಕಂಬನಿಗಳಂದುಗೆ
ಚಾಚುವೆವು ನಿನ್ನಡಿಗೆ ||೮||
ಸ್ವರಾಜ್ಯ ಪಿಪಾಸೆ
ಜಗಕೆ ಹಾಲಿನ ಬಾಸೆ
ಯಪ್ಪಂತೆ ಕರುಣಿಸೆ,
ಸುರಿಗು ಶಾಂತಿಯ ಸೇಸೆ ||೯||
*****