ಉಷೆಯ ಕಾಲ ಸೋಂಕಿನಿಂದ
ಬಾನು ತಳಿತಿದೆ;
ನಿಶೆಯ ಮಡಿಲನುಳಿದು ಜಗವು
ಜೀವಗೊಳುತಿದೆ;
ಕತ್ತಲಂಜುತೋಡುತಿಹುದು,
ಬೆಳಕು ತಿರೆಯ ತುಂಬುತಿಹುದು;
ನಾಡು ಮೇಡು ಕಾಡೊಳೆಲ್ಲು
ಸೊಗವು ಮೂಡಿ ಬರುತಿದೆ.

ತರುಗಳಿನಗೆ ಮಂಜುಹನಿಗ-
ಳರ್‍ಘ್ಯ ಹಿಡಿದಿವೆ;
ಅಲರ ಸುರಿದು ಸ್ವಾಗತವನು
ಬಾಗಿ ಬಯಸಿವೆ;
ಪಿಕದ ತೂರ್‍ಯ ಮೊಳಗುತಿಹುದು,
ಪದ್ಮಗಂಧ ಪಸರಿಸಿಹುದು,
ಖಗಗಳುಲಿವ ವಿವಿಧ ಸ್ವನದ
ಮೇಳ ತೋಪ ತುಂಬಿದೆ.

ಗರಿಯ ತಿದ್ದೆ ಬೆಡಗಿ ಶುಕಿಯು
ಕೊರಲ ಕೊಂಕಿದೆ;
ಇನಿಯಳೊಡನೆ ಪಾರಿವಾಳ
ಬೇಟ ಹೂಡಿದೆ ;
ಮೀಂಗಳೆದ್ದು ನೆಗೆಯುತಿಹುವು,
ತೆರೆಗಳೆದ್ದು ಕುಣಿಯುತಿಹುವು,
ವಿಶ್ವಶಿವದ ಪಥದೊಳಡಿಯ-
ನಿಟ್ಟು ಸೃಷ್ಟಿ ನಗುತಿದೆ.

ಮನುಜ?- ಮನುಜನೇನುಗೈವ-
ನಿಂಥ ಸಮಯದಿ?
ಜಗವು ಜೀವಗೊಳುತಲಿಂತು
ನಲಿವ ಉದಯದಿ?
ಬೆಳಕು ಬಾಳ ಬಿಚ್ಚುತಿರಲು,
ಜೀವ ಕರ್‍ಮಕೇಳುತಿರಲು,
ಆತ್ಮವಂತ, ಕರಣಪಟುವು-
ಏನ ಗೈವನುದಯದಿ?

ಹಕ್ಕಿ ಹೂಗಳಂತೆ ತಾನೂ
ಎದ್ದು ನಲಿವನೊ?
ಮಿಕ್ಕ ಸೃಷ್ಟಿಯಂತೆ ತಾನೂ
ನಲವಿಗೇಳ್ವನೊ?
ವಿಶ್ವಶಿವದ ಮರ್‍ಮವರಿತು,
ಆತ್ಮಕರ್‍ಮ ಧರ್‍ಮವರಿತು,
ಬಾಳ ಬಟ್ಟೆ ಕಂಡು, ದೃಢದಿ
ಹಾದಿ ನಡೆಯಲೇಳ್ವನೊ ?

ಇರುಳಿನತಿಗೆ ಬಳಲಿ ಬೆಳಗ
ಮಲಗಿ ಕಳೆವನೊ?
ಮಾಗದಳಲಿಗೆದ್ದು ಕಣ್ಣ-
ನೀರ ಮಿಡಿವನೊ ?
ಶಿವವ ಜರೆವ ಸ್ವಾರ್‍ಥಗಳನು
ಪಾಪಕೊಯ್ವ, ಮೋದಗಳನು
ಅರಸಿ, ಕರ್‍ಮತುಮುಲದೊಳಗೆ
ಸಿಲುಕಿ, ಅಂಜಿ, ಸುಯ್ವನೊ?

ದೀನ ಮನುಜನೇನು ಬಲ್ಲ
ಕರ್‍ಮ ಧರ್‍ಮವ?
ಕರಣದಾಳು ಬಲ್ಲನೇನು
ಶಿವದ ಮರ್‍ಮವ?
ಸೊಗದ ಹೊನ್ನಿನುದಯದಲ್ಲಿ
ಸೃಷ್ಟಿ ನಲಿವ ವೇಳೆಯಲ್ಲಿ
ಮನುಜಗೊಬ್ಬಗಲ್ತೆ ಶರಣು-
ಹೊಂದಿ ನುತಿಪ ಕಜ್ಜವು!

ವಿಶ್ವದೊಡೆಯ ದುರಿತಗಳನು
ದೂರ ಮಾಡಿಸೈ.
ಆವುದೆಮ್ಮ ಶಿವವೊ, ತಂದೆ,
ಅದನು ಕರುಣಿಸೈ.
ಜ್ಞಾನದೀಪ ಹೊತ್ತಿಸೈ,
ಬಾಳ ಬಟ್ಟೆ ಕಾಣಿಸ್ಯೆ,
ಆತ್ಮಶಿವಕೆ – ನಿನ್ನ ಇಚ್ಛೆ-
ಗೆನ್ನ ಬಾಳ ಹೊಂದಿಸೈ.
*****