ಕ್ಯಾರಿಯರ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಅವಳು ಕಾರಿನಿಂದ ಕೆಳಗಿಳಿದಳು. ತಲೆಎತ್ತಿ ಕೊಂಡು ತನ್ನ ಪರಿಚಿತ ಸ್ಥಳವನ್ನೊಮ್ಮೆ ವೀಕ್ಷಿಸಿ ನಿಧಾನವಾಗಿ ನಡೆಯತೊಡಗಿದಳು. ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಮುಳುಗುವ ತಯಾರಿಯಲ್ಲಿದ್ದ. ಆಗ ತಾನೇ ಬಂದು ಹೋದ ತುಂತುರು ಮಳೆ ನೆಲವನ್ನು ಒದ್ದೆ ಮಾಡಿತ್ತು. ಡಾಮರಿನ ರಸ್ತೆಯ ಹೊಂಡಗಳಲ್ಲಿ ನಿಂತ ಕೆಂಪು ನೀರಿನ ಮೇಲೆ ವಾಹನಗಳು ಹಾದು ಹೋಗುವಾಗ ದಾರಿಹೋಕರ ಮೈ ಮೇಲೆ ಪನ್ನೀರಿನ ಅಭಿಷೇಕವಾಗುತ್ತಿತ್ತು. ಇದಾವುದರ ಪರಿವೆಯಿಲ್ಲದೆ ಅವಳು ಡಾಮರು ರಸ್ತೆಯ ಬದಿಯ ಮಣ್ಣಿನ ಹಾದಿಯಲ್ಲಿ ನಡೆಯುತ್ತಿದ್ದಳು. ಮಣ್ಣು ತೇವದಿಂದ ಕೂಡಿದ್ದು ಅವಳ ಚಪ್ಪಲಿಗಳು “ಚರ್-ಚರ್” ಎಂದು ಶಬ್ಧವನ್ನು ಕೊಡುತ್ತಿತ್ತು. ಸ್ವಲ್ಪ ಮುಂದೆ ನಡೆದು ಅವಳು ಎಡಕ್ಕೆ ತಿರುಗಿದಳು. ಅವಳ ಎದುರಿಗೆ ವಿಶಾಲವಾದ, ಭವ್ಯವಾದ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ತಲೆಎತ್ತಿ ನಿಂತಿತ್ತು. ಅವಳು ಅಪಾರ್ಟ್‌ಮೆಂಟ್ನ ಒಂದು ಶಾಪಿಂಗ್ ಪ್ರವೇಶಿಸಿದಳು. ತನಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ತನ್ನ ಕ್ಯಾರಿಯರ್ ಬ್ಯಾಗಿಗೆ ಸೇರಿಸಿಕೊಂಡಳು. ಅಲ್ಲಿಂದ ಅವಳು ಲಿಫ್ಟ್ ಮುಖಾಂತರ ೪ನೇ ಅಂತಸ್ತಿನ ತನ್ನ ಫ್ಲ್ಯಾಟಿಗೆ ಬಂದಳು. ಆ ಅಂತಸ್ತನಲ್ಲಿದ್ದ ಇತರ ಪ್ಲಾಟಿನ ಮಹಿಳೆಯರು ಎಂದಿನಂತೆ ತಮ್ಮ ಮನೆಬಾಗಿಲಿನ ಎದುರು ನಿಂತುಕೊಂಡು ಹರಟೆ ಹೊಡೆಯುತ್ತಿದ್ದರು. ಅವಳು ಅವರತ್ತ ಒಂದು ಶುಷ್ಕ ಮುಗುಳ್ನಗೆ ಬೀರಿದಳು. ಮಹಿಳೆಯೊಬ್ಬರ ಕಂಕುಳಲ್ಲಿದ್ದ ಸುಮಾರು ಎರಡು ವರ್ಷದ ಮಗುವೊಂದು ಅವಳನ್ನು ಕಂಡೊಡನೆ “ಚಾಕಿ….. ಚಾಕಿ” ಎಂದು ಕೊಗತೊಡಗಿತು. ಅವಳು ನಗುತ್ತಾ ತನ್ನ ಕ್ಯಾರಿಯರ್ ಬ್ಯಾಗ್ನಿಂದ ಚಾಕಲೇಟು ತಗೆದು ಮಗುವಿಗೆ ಕೊಟ್ಟುಗಲ್ಲ ಹಿಂಡಿದಳು. ಕೀಯಿಂದ ಮನೆಯ ಬೀಗ ತೆಗೆದು ಮನೆಯ ಒಳಹೊಕ್ಕು ಬಾಗಿಲು ಹಾಕಿಕೊಂಡಳು.
ಕ್ಯಾರಿಯರ್ ಬ್ಯಾಗನ್ನು ಮೇಜಿನ ಮೇಲಿಟ್ಟು ಪಕ್ಕದಲ್ಲಿದ್ದ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡಳು. ಸ್ವಲ್ಪ ಆರಾಮವಾದಂತೆನಿಸಿ ಹಾಗೆಯೇ ಹಿಂದಕ್ಕೆ ಒರಗಿಕೊಂಡು ಕಣ್ಣುಮುಚ್ಚಿಕೊಂಡಳು. ವಾತಾವರಣ ತುಂಬಾ ತಂಪಾಗಿದ್ದು ಅವಳು ಫ್ಯಾನ್ ಹಾಕುವ ಗೋಜಿಗೆ ಹೋಗಲಿಲ್ಲ. ಇಡೀ ಮನೆಯೇ ಮೌನದಿಂದ ಕೂಡಿತ್ತು. ನೀರವ ಮೌನ ಮತ್ತು ಅವಳಿಗೆ ಆ ಮೌನ ಹಿತವಾಗಿತ್ತು. ಅವಳು ಮೌನವನ್ನೇ ಇಪ್ಟಪಡುತ್ತಿದ್ದಳು. ಗೋಡೆ ಗಡಿಯಾರದ “ಟಿಕ್…..ಟಿಕ್” ಶಬ್ದ ಮಾತ್ರ ಆ ಮೌನವನ್ನು ಭೇದಿಸುತ್ತಿತ್ತು. ಗಡಿಯಾರದ ಆ “ಟಿಕ್…..ಟಿಕ್” ಶಬ್ದ ಅವಳ ಜೀವನ ಸಂಗಾತಿಯಾಗಿತ್ತು. ಆ ಶಬ್ದ ಕೇಳದಿದ್ದರೆ ಅವಳಿಗೆ ಏನೋ ಕಳಕೊಂಡಂತೆ ಭಾಸವಾಗುತ್ತಿತ್ತು. ಇಡೀ ಮನೆಯಲ್ಲಿ ಗೋಡೆಗಡಿಯಾರದ “ಟಿಕ್…..ಟಿಕ್” ಶಬ್ಧ, ಆಗೊಮ್ಮೆ ಈಗೊಮ್ಮೆ ಪಕ್ಕದ ಮನೆಯಿಂದ ಮಿಕ್ಸಿ ಹಾಕಿದ ಶಬ್ಧ, ಟಿ. ವಿ. ಕಾರ್ಯಕ್ರಮದ ಶಬ್ಧ ಕೇಳಿ ಬರುತ್ತಿತ್ತು. ಕೆಲವೊಮ್ಮೆ ದಂಪತಿಗಳು ಮಾತಾಡುವ, ನಗಾಡುವ, ಮಕ್ಕಳು ಕಿರುಚುವ ಶಬ್ಧ ಕೇಳಿ ಬರುತಿತ್ತು. ಆದರೆ ಅವಳು ಇದಾವುದರ ಬಗ್ಗೆ ತಲೆಕಡಿಸಿಕೊಳ್ಳದೆ ತನ್ನ ಆತ್ಮೀಯ ಶಬ್ಧ “ಟಿಕ್….ಟಿಕ್” ಬಗ್ಗೆ ಮಾತ್ರ ಗಮನವನ್ನು ಹರಿಸುತ್ತಿದ್ದಳು. ಯಾಕೆಂದರೆ ಆ ಶಬ್ಧ ಎಂದೂ ನಿಂತದಿಲ್ಲ ಮತ್ತು ಅವಳ ಕಳೆದು ಹೋದ ಬದುಕಿನ ಸುತ್ತೆಲ್ಲಾ ಅವಳೊಂದಿಗೆ ಜೊತೆಯಾಗಿತ್ತು.
ಒಂದೈದು ನಿಮಿಷ ವಿಶ್ರಾಂತಿ ಮುಗಿಸಿ ಅವಳು ಕಣ್ಣು ತೆರೆದಳು. ಕತ್ತಲು ನಿಧಾನವಾಗಿ ವರಾಂಡವನ್ನು ಆವರಿಸಿತ್ತು. ಅವಳು ಎದ್ದು ನಿಂತು ವರಾಂಡದ ಹಾಗೂ ಅಡುಗೆ ಕೋಣೆಯ ಸ್ವಿಚ್ ಹಾಕಿದಳು. ಫ್ರಿಜ್‌ನ ಬಾಗಿಲು ತೆರೆದು ನೋಡಿದಳು. ಹಣ್ಣು ಹಂಪಲು, ಹಾಲು, ತರಕಾರಿ, ಕೋಲ್ಡ್‌ಡ್ರಿಂಕ್ಸ್‌ಗಳಿಂದ ಫ್ರಿಜ್ ತುಂಬಿಯೇ ಇತ್ತು. ಅದಾವುದರ ಬಗ್ಗೆ ಅವಳಿಗೆ ಇಷ್ಟ ಇರಲಿಲ್ಲ. ರಾತ್ರಿಗೆ ಅಡುಗೆ ತಯಾರು ಮಾಡುವುದು ಬೇಡವಾಗಿ ಕಂಡಿತು. ಏನೋ? ಹಸಿವು ಇರಲಿಲ್ಲ. ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಒಂದು ಕಪ್ ನೆಸ್‌ಕೆಫೆ ಮಾಡಿಕೊಂಡು ಅವಳು ಪುನಃ ವರಾಂಡಕ್ಕೆ ಬಂದು ಆರಾಮ ಕುರ್ಚಿಯಲ್ಲಿ ಕುಳಿತು ಕಾಫಿ ಹೀರ ತೊಡಗಿದಳು.
ಅವಳ ಕಣ್ಣು ವರಾಂಡದ ಗೋಡೆ ಸುತ್ತ ತಿರುಗತೊಡಗಿತು. ಅಲ್ಲಲ್ಲಿ ತೂಗು ಹಾಕಿದ ಪೋಟೋಗಳು ಅವಳನ್ನು ನೋಡಿ ನಗುತ್ತಿದ್ದವು. ತುಂಬಾ ಬೆಲೆಬಾಳುವ ಆ ಪೋಟೋಗಳನ್ನು ಅವಳು ಹಣಕೊಟ್ಟು, ಖರೀದಿಸಿದ್ದಳು. ಈಗ ಅವುಗಳಿಗೂ ಪ್ರಾಯವಾಗಿವೆ. ಮೊದಮೊದಲು ತಿಂಗಳಿಗೊಮ್ಮೆ ಅವುಗಳನ್ನು ಒರಸಿ ಶುಚಿಯಾಗಿಡುತ್ತಿದ್ದಳು. ಈಗ ಕೆಲವು ವರ್ಷಗಳಿಂದ ಆ ಕೆಲಸವೂ ನಿಂತು ಹೋಗಿದ್ದು ಜೇಡರ ಬಲೆಗಳು, ಹುಳುಹುಪ್ಪಡಿಗಳು, ಜಿರಳೆಗಳು ಆ ಪೋಟೋಗಳ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ್ದುವು. ಲೋಕದ ರೂಢಿಯೇ ಹೀಗೆ. ನಮ್ಮ ಅಸಹಾಕತೆಯ ದುರ್ಲಾಭ ಪಡೆಯುವವರೇ ಜಾಸ್ತಿ. ಅವಳು ವರಾಂಡದಲ್ಲಿರುವ ಬೆಲೆಬಾಳುವ ಮೇಜು, ಕುರ್ಚಿ, ಸೋಫಾಗಳತ್ತ ಗಮನ ಹರಿಸಿದಳು. ಎಷ್ಟೋ ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಿ ತನಗೆ ಇಷ್ಟವಾದ ಡಿಸೈನ್‌ಗಳ ಪರ್ನಿಚರ್ ಮಾಡಿಸಿದ್ದಳು. ಈಗ ಯಾವುದರ ಮೇಲೂ ಆಸಕ್ತಿಯಿಲ್ಲ. ಶೋಕೇಸ್ನಲ್ಲಿಟ್ಟ ಪಿಂಗಾಣಿ ಪಾತ್ರೆಗಳು, ಊಟದ ಬಟ್ಟಲುಗಳು, ತಟ್ಟೆಗಳು, ಚಮಚಗಳು, ವಿವಿಧ ಡಿಸೈನಿನ ಗ್ಲಾಸುಗಳು ಯಾವುದೇ ಉಪಯೋಗವಿಲ್ಲದೆ ಬಂಧಿಯಾಗಿದ್ದುವು. ಒಂದು ಸಣ್ಣ ಕುಟುಂಬಕ್ಕೆ ಬೇಕಾದ ಎಲ್ಲಾ ಸಾಧನಗಳು ವರಾಂಡ, ಕಿಚನ್‌ರೂಂ ಹಾಗೂ ಬೆಡ್‌ರೂಂಗಳನ್ನು ತುಂಬಿಕೊಂಡಿದೆ. ಆದರೇನು ಪ್ರಯೋಜನ? ಕೊನೆಗೂ ಈ ಮನೆ ಕುಟುಂಬ ಕಾಣಲೇ ಇಲ್ಲ. ಸುಖವನ್ನು ಹುಡುಕುತ್ತಾ ಹೋದ ನನಗೆ ದುಃಖಗಳ ಸರಮಾಲೆ ಅಪ್ಪಿಕೊಂಡದ್ದು ತಿಳಿಯಲೇ ಇಲ್ಲ. ಹೌದು. ಈ ಎಲ್ಲಾ ಯಾತನೆಯ ಮೂಲಕವೇ ತನಗೀಗ ಸತ್ಯದ ಸಾಕ್ಷಾತ್ಕಾರ ಆಗುತ್ತಿದೆ. ಆದರೆ ಕಾಲ ಮಿಂಚಿ ಹೋಗಿದೆ. ಅವಳ ಕಣ್ಣಾಲಿಗಳು ತುಂಬಿದವು. ಈ ಕಣ್ಣೀರನ್ನು ತಡೆಯಲು ತಾನು ನಗಲೇಬೇಕು. ಒಂದು ಸಣ್ಣ ಒಣ ನಗೆಯೊಂದಿಗೆ ಅವಳು ಎದುರು ನಿಂತು ಬಾತ್ ರೂಂ ಕಡೆ ಸಾಗಿದಳು.
ಬಾತ್‌ರೂಮಿನ ಲೈಟ್ ಹಾಕಿ ಬೇಸಿನ್ನಲ್ಲಿ ಮುಖತೊಳೆದುಕೊಂಡು ಕನ್ನಡಿ ನೋಡಿದಳು. ತಲೆ ಜೋರಾಗಿ ಸಿಡಿಯುತ್ತಿತ್ತು. ಬಹುಶಃ ಮೈಗೆ ಸ್ನಾನ ಮಾಡಿದರೆ ಆರಾಮವಾಗಬಹುದು. ಅವಳು ಬಾತ್ರೂಮಿನ ಬಾಗಿಲನ್ನು ಓರೆ ಮಾಡಿದಳು. ಅಷ್ಟೇ. ಇಡೀ ಮನೆಯಲ್ಲಿ ಒಬ್ಬಳೇ ಇರುವಾಗ ಚಿಲಕ ಸಿಕ್ಕಿಸುವ ಅವಶ್ಯಕತೆಯೇನು? ಅವಳು ಮೈಮೇಲಿನ ವಸ್ತ್ರವನ್ನು ಕಳಚಿದಳು. ಒಮ್ಮೆ ಕನ್ನಡಿಯಲ್ಲಿ ತನ್ನ ದೇಹವನ್ನು ನೋಡಿಕೊಂಡಳು. ಮೊದಲಿನ ಮಾದಕತೆಯಿರಲಿಲ್ಲ. ಯೌವನ ಕೈಕೊಟ್ಟಿದೆ. ದೇಹದ ಕಸುವು ಜಾರುತ್ತಾ ಇದೆ. ಕುತ್ತಿಗೆಯ ಅಡಿಯಲ್ಲಿ ನೆರಿಬಿದ್ದ ಚರ್ಮವನ್ನು ಒಮ್ಮೆ ಎಳೆದು ನೋಡಿದಳು. ಹಾಗೆಯೇ ಬಿಳಿಮಿಶ್ರಿತ ತಲೆಕೂದಲ ಮೇಲೆ ಕೈಯಾಡಿಸಿದಳು. ದೀರ್ಘವಾದ ನಿಟ್ಟುಸಿರು ಹೊರಹೊಮ್ಮಿತು. ಹೌದು. ತನ್ನದು ಹೋರಾಟವಿಲ್ಲದ ನೀರಸ ಜೀವನ. ಮಾಗುತ್ತಿರುವ ಯೌವನವನ್ನು ಎಷ್ಟು ಬಚ್ಚಿಟ್ಟುಕೊಂಡರೆ ಏನು ಪ್ರಯೋಜನ? ಆದರೆ ಕಾಲ ಮಾತ್ರ ಸತ್ಯವನ್ನು ಮತ್ತೆ ಮತ್ತೆ ತೆರೆದ ಬೆಳಕಿನಲ್ಲಿ ತಂದು ನಿಲ್ಲಿಸುತ್ತದೆ. ಬಾತ್‌ರೂಮಿನ ಗೋಡೆಯ ಮೂಲೆಯಿಂದ “ಲೊಚ…ಲೊಚ” ಶಬ್ಧ ಕೇಳಿತು. ಅವಳು ಶಬ್ಧ ಬಂದ ಕಡೆ ನೋಡಿದಳು. ಎರಡು ಹಲ್ಲಿಗಳು ಮೈಥುನ ಕ್ರಿಯೆಯಲ್ಲಿ ತೊಡಗಿದ್ದವು. ಅವಳು ಮುಖ ಕೆಳಗೆ ಮಾಡಿ ಶವರ್ ತಿರುಗಿಸಿದಳು. ಈ ಹಿಂದೆ ಆ ಕ್ರಿಯೆಯನ್ನು ನೋಡುವುದೆಂದರೆ ತನಗೆ ಅದೆಷ್ಟು ಸಂತೋಷವಾಗುತ್ತಿತ್ತು? ಈಗ ಅದರ ಬಗ್ಗೆ ಆಸಕ್ತಿಯೇ ಕಳೆದು ಹೋಗಿದೆ. ಹೌದು. ಕಳೆದ ಸಮಯ, ಜಾರಿ ಹೋದ ಅವಕಾಶ ಮತ್ತೆಂದೂ ಬಾರದು. ನನ್ನ ಬದುಕಿನಲ್ಲಿ ಅದದ್ದು ಇದೇನೆ. ಒಂದು ಸಣ್ಣ ತಪ್ಪು ಹೆಜ್ಜೆ ನನ್ನ ಬದುಕನ್ನೇ ಬರಡುಗೊಳಿಸಿತು. ಅವಳು ಸ್ನಾನ ಮುಗಿಸಿ ಬಾತ್‌ರೂಮಿನಿಂದ ಹೊರಬಂದಳು.
ಅವಳು ವರಾಂಡದ ಹಿಂಬದಿಯ ಬಾಗಿಲು ತೆರೆದು ಸಿಟ್‌ಔಟ್‌ಗೆ ಬಂದು ನಿಂತುಕೊಂಡಳು. ತಂಪಾದ ಗಾಳಿ ಮೈ ಮನ ಎರಡಕ್ಕೂ ಹಿತ ನೀಡಿತು. ಅವಳು ಸಿಟ್‌ಔಟ್‌ನಿಂದ ರಸ್ತೆಯನ್ನು ದಿಟ್ಟಸಿದಳು. ಈಗಾಗಲೇ ರಸ್ತೆಯ ದೀಪಗಳು ಬೆಳಗುತ್ತಿದ್ದು ಶಾಪ್‌ಗಳು ಜನರಿಂದ ತುಂಬಿತ್ತು. ರಸ್ತೆಯಲ್ಲಿ ಎಂದಿಗಿಂತ ಹೆಚ್ಚು ಜನರು ಓಡಾಡುತ್ತಿದ್ದರು. ಹೂ ಮಾರುವವಳಿಗೆ ವ್ಯಾಪಾರ ಭರದಿಂದ ಸಾಗುತ್ತಿತ್ತು. ಕೆಲವರು ಹೊಸ ಉಡುಗೆ-ತೊಡುಗೆ ಧರಿಸಿಕೊಂಡು ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗುತ್ತಿದ್ದರು. ನಾಳೆ ಕಂಪೆನಿಗೆ ರಜೆ. ದೀಪಾವಳಿ. ಎಲ್ಲರೂ ಸಡಗರ ಸಂಭ್ರಮದಿಂದಿದ್ದರೆ ತನಗೆ ಮಾತ್ರ ಯಾವುದೂ ಇಲ್ಲ. ಸುಖವೂ ಇಲ್ಲ, ದುಃಖವೂ ಇಲ್ಲ. ಯಾಂತ್ರಿಕ ಜೀವನ. ದುಃಖ ಪೀಡಿತಳ ಜೀವನದಲ್ಲಿ ನಗುವನ್ನು ಅರಸುವುದು ಮೂರ್ಖತನ. ವಿಮಾನದ ಜೋರಾದ ಶಬ್ದದಿಂದ ಅವಳು ಮುಖ ಮೇಲೆತ್ತಿ ಆಕಾಶ ನೋಡಿದಳು. ವಿಮಾನವೊಂದು ತನಗೆ ಅಭಿಮುಖವಾಗಿ ಬರುತ್ತಿತ್ತು. ಅದರ ಬಣ್ಣ ಬಣ್ಣದ ಲೈಟುಗಳು ಅವಳನ್ನು ಆಕರ್ಷಿಸಿತು. ರಾತ್ರಿಯಲ್ಲಿ ಹಲವಾರು ವಿಮಾನಗಳು ಆಕಾಶದಲ್ಲಿ ಹಾರಾಡುತ್ತವೆ. ಎಷ್ಟೋ ಜನರು ಏನೇನೋ ಕನಸುಗಳನ್ನು ಹೊತ್ತು ಕೊಂಡು ಬರುತ್ತಾರೆ. ಹೋಗುತ್ತಾರೆ. ಅವಳು ಅಲೋಚಿಸತೊಡಗಿದಳು. ತಾನಂದು ಮನಸ್ಸು ಮಾಡುತ್ತಿದ್ದರೆ ಇದೇ ರೀತಿ ವಿಮಾನದಲ್ಲಿ ಹಾರಾಡಿಕೊಂಡು ವಿದೇಶದಲ್ಲಿರುತ್ತಿದ್ದೆ. ಈಗ ಬೆಟ್ಟದಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕುತ್ತಿದ್ದೇನೆ. ಇದು ಜೀವನವೇ? ಹೋರಾಟವಿಲ್ಲದೆ ನೀರಸದಲ್ಲಿ ಅಂತ್ಯಗೊಳ್ಳುತ್ತದೆ. ಈಗ ಕಾಲನ ಶಿಕ್ಷೆಗೆ ಒಳಗಾಗಿದ್ದೇನೆ. ಕಾಲ ಶಿಕ್ಷಿಸಿದಷ್ಟು ಶಿಕ್ಷೆ ಮನುಷ್ಯ ನಿರ್ಮಿಸಿದ ಕಾನೂನಿನಿಂದ ಕೊಡಲಾಗುವುದಿಲ್ಲ. ಈ ಶಿಕ್ಷೆಯನ್ನು ನಾನು ಅನುಭವಿಸಲೇಬೇಕು. ಅನಿವಾರ್ಯವೂ ಕೂಡಾ. ಅವಳಿಂದ ಜಾಸ್ತಿ ಹೊತ್ತು ಹೊರಗೆ ನಿಲ್ಲಲಾಗಲಿಲ್ಲ. ಭಾರವಾದ ಹೃದಯದಿಂದ ಸಿಟ್‌ಔಟ್‌ನಿಂದ ಹೊರಗೆ ಬಂದು ಬಾಗಿಲು ಮುಚ್ಚಿದಳು.
ಪಕ್ಕದ ಮನೆಯಿಂದ ಮಕ್ಕಳ ಕೇಕೆ, ದೊಡ್ಡವರ ನಗು, ಹರಟೆ ಕೇಳಿ ಬರುತ್ತಿತ್ತು. ಬಹುಶಃ ಈಗ ಅವರ ಮನೆಯ ಸಿಟ್‌ಔಟ್, ಮುಂಬಾಗಿಲ ಸುತ್ತೆಲ್ಲಾ ಹಣತೆಯನ್ನು ಬೆಳಗಿರಬೇಕು. ತರಹ ತರಹದ ತಿಂಡಿ ತಿನಿಸುಗಳನ್ನು ಮೆಲ್ಲುತಿರಬಹುದು. ದೇವರ ಪೋಟೊಗಳಿಗೆ ವಿಶೇಷ ಅಲಂಕಾರ ಮಾಡಿರಬೇಕು. ತನಗೆ ಇದಾವುದೂ ಇಲ್ಲ. ಯಾರಿಗಾಗಿ ಮಾಡಬೇಕು? ಹೌದು. ತಾನು ಅಸ್ತಿಕಳೂ ಅಲ್ಲ, ನಾಸ್ತಿಕಳೂ ಅಲ್ಲ. ಒಂದು ತರಹದ ನಿರುಪದ್ರವಿ ಜೀವಿ ಎನ್ನಬಹುದೇ? ಅವಳು ಬೆಡ್‌ರೂಂ ಹೊಕ್ಕು ಲೈಟು ಹಾಕಿದಳು. ಸುಮಾರು ಐದುವರೆ ಅಡಿ ಅಗಲದ ಆ ವಿಶಾಲವಾದ ಮಂಚ ಅವಳನ್ನು ಆಹ್ವಾನಿಸಿತು. ಅವಳು ಮಂಚದ ಮೇಲೆ ಒರಗಿಕೊಂಡಳು. ತನ್ನ ಪಕ್ಕದಲ್ಲಿದ್ದ ಇನ್ನೊಂದು ತಲೆದಿಂಬನ್ನು ಕೈಗೆತ್ತಿಕೊಂಡು ತನ್ನ ಎದೆಯ ಮೇಲೆ ಹಾಕಿಕೊಂಡಳು. ಏನೋ! ಹಾಯೆನಿಸಿತು. ಗೋಡೆ ಗಡಿಯಾರ ಬಿಟ್ಟರೆ ಅವಳ ರಾತ್ರಿಯ ಸಂಗಾತಿ ಆ ತಲೆದಿಂಬು ಮಾತ್ರ. ಬೆಡ್ ಮೇಲೆ ಒರಗಿಕೊಂಡು ಅವಳು ಗೋಡೆಯನ್ನು ವೀಕ್ಷಿಸಿದಳು. ಇಲ್ಲಿಯೂ ಕೆಲವು ಪೋಟೋಗಳು ಗೋಡೆಯನ್ನು ಅಲರಿಕರಿಸಿದ್ದವು. ಈ ಪೋಟೋಗಳನ್ನು ತುಂಬಾ ಮುತುವರ್ಜಿಯಿಂದ ಆಯ್ಕೆ ಮಾಡಿದ್ದಳು. ಒಂದು ಕಡೆ ಮೊಸರು ಕಡಿಯುವ ಬಾಲಕೃಷ್ಣನ ಚಿತ್ರ ಇದ್ದರೆ ಇನ್ನೊಂದು ಕಡೆ ಹಿಮಗಳಿಂದ ಆವೃತ್ತವಾದ ಬೆಟ್ಟಗುಡ್ಡಗಳ ಚಿತ್ರ. ಮತ್ತೊಂದು ಕಡೆ ಮರಿಹಕ್ಕಿಗಳಿಗೆ ಆಹಾರ ತಿನಿಸುವ ತಾಯಿ ಹಕ್ಕಿಯ ಚಿತ್ರ. ಇತ್ಯಾದಿ ಇತ್ಯಾದಿ ಚಿತ್ರಗಳು. ಅವಳ ಕಣ್ಣು ಒಂದು ಫೋಟೋದತ್ತ ಗಕ್ಕನೆ ನಿಂತಿತು. ತದೇಕ ಚಿತ್ತದಿಂದ ಆ ಪೋಟೋವನ್ನು ವೀಕ್ಷಿಸಿದಳು. ಅದು “ರಾಧೇ ಶ್ಯಾಂ” ಚಿತ್ರವಾಗಿತ್ತು. ಶೃಂಗಾರಮಯವಾದ ಚಿತ್ರ. ದೀಪಾವಳಿಯ ಶುಭಾಶಯಗಳೊಂದಿಗೆ ಅವನು ಆ ವರ್ಣಚಿತ್ರವನ್ನು ಕಳುಹಿಸಿದ್ದ. ಅದರೊಂದಿಗೆ ಒಂದು ಪತ್ರ ಕೂಡಾ. ಪತ್ರ ಬಂದ ತಿಂಗಳು, ವರ್ಷ ಅವಳಿಗೆ ಇಂದಿಗೂ ನೆನಪಿದೆ. ಅಕ್ಟೋಬರ್ ೧೯೮೨!
ಈ ಪತ್ರ ನಿನಗೆ ಅಶ್ಚರ್ಯಕೊಡಬಹುದು. ಆದರೆ ಸಿಕ್ಕಿಯೇ ಸಿಗುತ್ತದೆ ಎಂಬ ಭರವಸೆ ನನಗಿದೆ. ದೀಪಾವಳಿಯ ಶುಭಾಶಯಗಳೊಂದಿಗೆ ಒಂದು ಸಣ್ಣ ಉಡುಗೊರೆಯನ್ನು ಕಳುಹಿಸಿದ್ದೇನೆ. ನಿನಗೆ ಇಷ್ಟೆವಾಗಬಹುದೆಂಬ ನಿರೀಕ್ಷೆ ನನಗಿದೆ. ನೀನು ಹೇಗಿದ್ದೀ… ಪ್ರಥಮ ಸಲ ನಿನ್ನನ್ನು ಭೇಟಿಯಾದಾಗಲೇ ನಿನ್ನ ಮೋಡಿ ಮಾಡುವ ಕಣ್ಣುಗಳಿಗೆ ನಾನು ಸೋತಿದ್ದೆ. ಮುಂದೆ ನಡೆದ ಬೆಳವಣಿಗೆ ನಿನಗೆ ಗೊತ್ತೇ ಇದೆ. ನಂದಿ ಬೆಟ್ಟದಲ್ಲಿ ಕಳೆದ ಸುಂದರ ಸಂಜೆಗಳು ನಿನಗೆ ಖಂಡಿತ ನೆನಪಿರಬಹುದು. ಆ ಸಂಜೆಗಳು ಬಹುವಾಗಿ ನನ್ನನ್ನು ಕಾಡುತಿರುತ್ತದೆ. ನಾನಿಲ್ಲಿ ಒಂಟಿ. ಕಡಲಿನಾಚೆಗಿನ ಈ ದೇಶ ಒಂದು ಅದ್ಭುತ. ಇಲ್ಲಿಯ ಜನಜೀವನ, ಹಬ್ಬ ಹರಿದಿನ ಎಲ್ಲಾ ಒಂದು ವಿಶಿಷ್ಟ ಅನುಭವ. ಮನಮೋಹಕ ಬೆಟ್ಟಗುಡ್ಡಗಳು, ನದಿಗಳು, ಅಚ್ಚುಕಟ್ಟಿನ ರಸ್ತೆಗಳು, ಸೌಜನ್ಯದಿಂದ ಕೂಡಿದ ಸ್ನೇಹ ಜೀವಿ ನಾಗರೀಕರು ಎಲ್ಲವೂ ಖುಷಿಗೊಡುತ್ತದೆ. ಆದರೆ ಒಂಟಿ ಬದುಕಿನ ಮೇಲೆ ಒಮ್ಮೊಮ್ಮೆ ನಿರಾಶೆಯ ಛಾಯೆ ಮೂಡುತ್ತದೆ. ಆದರೆ ನಾನು ಆಶಾವಾದಿ. ತೊಡಕುಗಳಲ್ಲಿ ಸುಸಂಧಿಯನ್ನು ಹುಡುಕುವವನು. ಈ ಸುಂದರ ಜಗತ್ತಿನಲ್ಲಿ ನಾವು ಪ್ರತೀ ಕ್ಷಣವೂ ಬದಲಾವಣೆಯನ್ನು ಹೊಂದುತ್ತಲೇ ಇದ್ದೇವೆ. ಇಂದು ಇಲ್ಲದ್ದು ನಾಳೆ ಇರಬಹುದು. ನಾಳಿನ ಭರವಸೆಯೊಂದಿಗೆ ಇಂದು ನಮ್ಮ ಕೈಯಲ್ಲಿದೆ. ಐಟಿ ಬಿಟಿ ಎಂದು ಹೇಳಿಕೊಂಡು ಅಲ್ಲಿಯೇ ಅಯುಷ್ಯವನ್ನು ಕಳೆಯಬೇಡ. ಅಲ್ಲಿಗಿಂತಲೂ ಮಿಗಿಲಾದ ಸುಂದರ ಜಗತ್ತು ಬೇರೆ ಇದೆ ಎಂದು ತಿಳಿದುಕೋ. ಇಲ್ಲಿ ಅಲ್ಲಿಗಿಂತ ಹತ್ತು ಪಟ್ಟು ಗಳಿಸಬಹುದು. ನಾವಿಬ್ಬರೂ ಸೇರಿಕೊಂಡು ದುಡಿಯೋಣ. ನಿನ್ನ ಸ್ವಾತಂತ್ರ್ಯಕ್ಕೆ ನಾನು ಖಂಡಿತಾ ಅಡ್ಡಿ ಬರುವುದಿಲ್ಲ ಎಂಬ ಭರವಸೆ ಕೊಡುತ್ತೇನೆ. ಭವಿಷ್ಯದ ಶಂಕೆಯನ್ನು ಕಲ್ಪಿಸಿಕೊಂಡು ದುಃಖ ಪಡಬೇಡ. ಮುಂದೆ ಸಂಕಟಗಳು ಬರಬಹುದೇ ಎಂದು ಆಲೋಚಿಸುವುದು ಮೂರ್ಖತನ. ಧನಾತ್ಮಕವಾಗಿ ಚಿಂತನ ಮಾಡು. ಹೇಳು. ನನ್ನ ಬರಡಾದ ಬದುಕಿಗೆ, ಬಾಳಸಂಗಾತಿಯಾಗಿ ಬರುವೆಯಾ? ನಿನಗಾಗಿ ನನ್ನ ಹೃದಯ ಸದಾ ತೆರೆದೇ ಇದೆ. ದಯವಿಟ್ಟು ಭೂತಕಾಲದ ಗಾಯಗಳನ್ನು ವರ್ತಮಾನದೊಡನೆ ಬೆಸೆಯಬೇಡ. ನಾಳಿನ ಭರವಸೆಯೊಂದಿಗೆ ಒಂದು ದಿಟ್ಟ ಹೆಜ್ಜೆ ಇಡು. ಸುಖ ದುಃಖಗಳಲ್ಲಿ ನಿನ್ನೊಡನೆ ಜೊತೆ ಜೊತೆಯಾಗಿರುವ. ಕಾಣದ ಶಕ್ತಿಯ ಆಣೆಹಾಕಿ ನಾನೀ ಮಾತನ್ನು ಹೇಳಲಾರೆ. ಅದು ನಿನಗೂ ಗೊತ್ತಿದೆ. ನನ್ನ ಮನಸಾಕ್ಷಿಯೇ ನನ್ನ ದೇವರು. ನನ್ನ ಒಂಟಿತನದ ನೋವನ್ನು ನಿನ್ನಲ್ಲಿ ಬಿಚ್ಚಿಟ್ಟು ಮನಸ್ಸು ಹಗುರ ಮಾಡಿಕೊಂಡಿದ್ದೇನೆ. ನೀನು ನನ್ನನ್ನು ನಿರಾಶೆಗೊಳಿಸಲಾರೆ ಎಂಬ ವಿಶ್ವಾಸ ನನಗಿದೆ. ನಿನ್ನ ಉತ್ತರದ ನಿರೀಕ್ಷೆಯಲ್ಲಿದ್ದೇನೆ…..”
ಅವನ ಉಡುಗೊರೆಯ ಪೋಟೋದತ್ತ ಮತ್ತೊಮ್ಮೆ ಕಣ್ಣು ಹಾಯಿಸಿದಳು. ಈ ಪೋಟೋವನ್ನು ಮೊದಮೊದಲು ತಿಂಗಳಿಗೊಮ್ಮೆ ಒರಸಿಡುತ್ತಿದ್ದಳು. ನಂತರ ವರ್ಷಕ್ಕೊಮ್ಮೆಯಾಯಿತು. ಈಗ ಮುಟ್ಟದೆ ಎಷ್ಟೋ ವರ್ಷಗಳು ಸಂದಿವೆ. ಧೂಳು ಜೇಡರ ಬಲೆ, ಹುಳು ಹುಪ್ಪಡಿಗಳು ತುಂಬಿ ಹೋಗಿವೆ. ಶ್ಯಾಮನ ಮುಖದ ಮೇಲೆ ಪಂಗಸ್ ಬಂದಿದೆ. ಇನ್ನೊಂದು ಬದಿಯಿಂದ ರಾಧೆಯ ಮುಖವನ್ನು ನೀರಿನ ಪಸೆ ಮೆತ್ತಿಕೊಂಡಿದೆ. ಅವಳಿಗೆ ಮುರಿದ ಆ ಪೋಟೋವನ್ನು ನೋಡಲಾಗಲಿಲ್ಲ. ದೃಷ್ಟಿಯನ್ನು ಬೇರೆ ಕಡೆ ಹಾಯಿಸಿದಳು. ಕಣ್ಣು ತೇವಗೊಂಡಿತು. ನಾನು ಆ ಪತ್ರಕ್ಕೆ ಉತ್ತರಿಸಿದ್ದೇನೆಯೇ? ಹೌದು. ಉತ್ತರಿಸಿದ್ದೇನೆ. ಮರುದಿನವೇ ಉತ್ತರಿಸಿದ್ದ. ಆದರೆ ಅಂಚೆಗೆ ಹಾಕಲಿಲ್ಲ. ಅಂಚೆ ಕಾಣದ ಆ ಪತ್ರ ಈಗಲೂ ನನ್ನೊಂದಿಗೆ ಇದೆ.
ಅವಳು ಎದ್ದು ನಿಂತಳು. ಮಂಚದ ಬದಿಯಲ್ಲಿದ್ದ ಸ್ಟೀಲ್ ಕಪಾಟಿನ ಮೇಲ್ಛಾಗಕ್ಕೆ ಕೈ ಹಾಕಿದಳು. ತುಂಬಾ ಎಟಕಿಸಿದ ಮೇಲೆ ಏನೋ ಹರಿದಂತಾಗಿ ಹೆದರಿ ಕೈಯನ್ನು ಹಿಂದಕ್ಕೆ ಎಳೆದುಕೊಂಡಳು. ಒಂದು ದೊಡ್ಡ ಜೇಡ ಅಲ್ಲಿಂದ ನಿಧಾನವಾಗಿ ಇಳಿದು ಮಂಚದ ಅಡಿಭಾಗಕ್ಕೆ ಹೋಯಿತು. ಅವಳು ಪುನಃ ಕಪಾಟಿನ ಮೇಲೆ ಕ್ಕೆಹಾಕಿ ಬಟ್ಟೆಯ ಕಟ್ಟವನ್ನು ಕೆಳಗಿಳಿಸಿದಳು. ನೆಲದ ಮೇಲೆ ಬಟ್ಟೆಯ ಕಟ್ಟವನ್ನು ಎಷ್ಟೋ ನಿಧಾನವಾಗಿ ಇಟ್ಟರೂ, ಸ್ವಲ್ಪ ಧೂಳು ಅವಳ ಮೂಗಿನ ಒಳಗೆ ಹೋಯಿತು. ಅವಳ ಮೂಗಿನಿಂದ ಒಂದು ಒಂಟಿ ಸೀನು ಹೊರಬಂತು. ಅವಳು ಬಟ್ಟೆಯ ಮೇಲಿನ ಧೂಳನ್ನು ಒರೆಸುವ ಗೋಜಿಗೆ ಹೋಗಲಿಲ್ಲ. ಅಲ್ಲದೆ ಬಟ್ಟೆಯನ್ನು ಮೆತ್ತಿಕೊಂಡ ಜೇಡರ ಬಲೆಯನ್ನೂ ತಗೆಯಲು ಹೋಗಲಿಲ್ಲ. ತನ್ನ ಎರಡೂ ಕೈಗಳ ತುದಿಬೆರಳಿನಿಂದ ಬಟ್ಟೆಯ ಕಟ್ಟನ್ನು ಬಿಚ್ಚತೊಡಗಿದಳು. ಬಟ್ಟೆಯೊಳಗೆ ಒಂದು ಕಪ್ಪಗಿನ ಪರ್ಸು ಇತ್ತು. ಅವಳು ಆ ಪರ್ಸನ್ನು ನೇರ ನಿಲ್ಲಿಸಿ ಅದರ ಜಿಪ್ ತೆರೆದಳು. ಆ ಪರ್ಸಿನ ಒಳಗೆ ಒಂದು ಹಳೆಯ ಡೈರಿ ಇತ್ತು. ಅವಳು ಆ ಡೈರಿಯನ್ನು ಕೈಗೆತ್ತಿಕೊಂಡು ಅದರ ಹಾಳೆಯನ್ನು ತಿರುವಿದಳು. ಹಾಳೆಯ ಮಧ್ಯದಲ್ಲಿ ಸುಮಾರು ೮ ಇಂಚು ಉದ್ದ ಮತ್ತು ೪ ಇಂಚು ಅಗಲದ ಪಿಂಕ್ ಬಣ್ಣದ ಒಂದು ಕವರಿತ್ತು. ಅವಳು ಆ ಕವರನ್ನು ಕೈಗೆತ್ತಿಕೊಂಡಳು. ಅದು ತನ್ನ ನೈಜ ಬಣ್ಣವನ್ನು ಕಳೆದುಕೊಂಡು ಸತ್ವ ಹೀನವಾಗಿ, ಹರಿದು ಹೋಗುವ ಸ್ಥಿತಿಯಲ್ಲಿತ್ತು. ಅವಳು ಅದಕ್ಕೆ ಅಂಟಿಸಿದ ಸ್ಟಾಂಪನ್ನು ನೋಡಿದಳು. ಆ ಸ್ಟಾಂಪಿನ ಚಂದ ಇನ್ನೂ ಮಾಸಿರಲಿಲ್ಲ. ಕವರಿನ ಎರಡೂ ಬದಿಯನ್ನು ನೋಡಿದಳು. ಅವನಿಗೆ ಬರೆದ ವಿಳಾಸವನ್ನು ಓದಿಕೊಂಡಳು. ತನ್ನ ವಿಳಾಸವನ್ನು ಕೂಡಾ ಅಚ್ಚುಕಟ್ಟಾಗಿ ಬರೆದಿದ್ದಳು. ಕವರ್ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಅವಳಿಗೆ ಅದರೊಳಗೆ ಪತ್ರ ಬರೆದಿಟ್ಟ ನೆನಪು ಖಾತ್ರಿಯಾಗಿತ್ತು. ನಡುಗುವ ಕೈಯಿಂದ ಅವಳು ಕವರಿನ ಒಂದು ಬದಿಯನ್ನು ಹರಿದು ಪತ್ರವನ್ನು ಹೊರತೆಗೆದಳು. ಅಕ್ಟೋಬರ್ ೩೦-೧೯೮೨!
“…ನಿನ್ನ ಒಡೆಲಾಳದ ಮಾತುಗಳು ನನ್ನ ಮನ ಕಲಕಿವೆ. ನಾವು ಜೀವನದಲ್ಲಿ ಯಶಸ್ಸು ಗಳಿಸುವುದು, ನಾವು ಇತರರಲ್ಲಿ ತೋರುವ ವಿಶ್ವಾಸ ಔದಾರ್ಯಗಳಿಂದಲೇ. ನಿನ್ನ ಬಗ್ಗೆ ನನಗೆ ವಿಶ್ವಾಸ ಇದೆ. ತುಂಬಾ ಆಲೋಚಿಸಿ ಈ ಪತ್ರ ಬರೆಯುತ್ತಿದ್ದೇನೆ. ಅಲೋಚನೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ಇದು ನನ್ನ ನಂಬಿಕೆ. ನಿನ್ನ ಒಂಟಿತನಕ್ಕೆ ವಿದಾಯ ಹಾಡಲು ನಿನ್ನ ಬಾಳಸಂಗಾತಿಯಾಗಿ ಬರಲು ನಿರ್ಣಯಿಸಿದ್ದೇನೆ. ಇಲ್ಲಿಯ ಕೆಲಸಕ್ಕೆ ರಾಜೀನಾಮೆ ನೀಡಿ ಇನ್ನು ಕೆಲವೇ ವಾರದೊಳಗೆ, ಗಗನದಲ್ಲಿ ಹಾರಿಕೊಂಡು ಬಂದು ನಿನ್ನನ್ನು ಸೇರಿಕೊಳ್ಳುವೆ. ಅಲ್ಲಿಯವರೆಗೆ ತಾಳು. ಖುಷಿ ತಾನೇ?…..
ಈ ಒಂದು ಪತ್ರವನ್ನು ಅಂದು ಅಂಚೆಗೆ ಹಾಕುತ್ತಿದ್ದರೆ ನಾನಿಂದು ಒಂಟಿ ಮುದುಕಿಯಾಗಿ ಉಳಿಯುತ್ತಿರಲಿಲ್ಲ. ಕೊನೆಯ ಕ್ಷಣದ ಒಂದು ತಪ್ಪು ನಿರ್ಣಯ ನನ್ನ ಬದುಕನ್ನು ಮಣ್ಣು ಮಾಡಿತು. ಭಾರವಾದ ಹೃದಯದಿಂದ ಅವಳು ಆ ಪತ್ರವನ್ನು ಕವರಿನ ಒಳಗೆ ಹಾಕಿದಳು. ಕವರನ್ನು ಡೈರಿಯ ಹಾಳೆಯ ಮಧ್ಯದಲ್ಲಿಟ್ಟಳು. ಡೈರಿಯನ್ನು ಆ ಕಪ್ಪು ಪರ್ಸಿನ ಒಳಗಿಟ್ಬು ಜಿಪ್ ಎಳೆದಳು. ಪರ್ಸು ಅದೇ ಧೂಳು ತುಂಬಿದ ಬಟ್ಟೆಯ ಮೇಲಿಟ್ಟು ತನ್ನ ಎರಡೂ ಕೈಗಳ ಬೆರಳಿನಿಂದ ಬಟ್ಟೆಯನ್ನು ಕಟ್ಟಿದಳು. ಬಟ್ಟೆಯ ಕಟ್ಟನ್ನು ಎತ್ತಿ ಕಪಾಟಿನ ಮೇಲಿಟ್ಟಳು. ಹಿಂತಿರುಗಿ ಬಂದು ಮಂಚದ ಮೇಲೆ ಬೋರಲಾಗಿ ಮಲಗಿದಳು. ತನ್ನ ದೃಷ್ಟಿ ಯಾವುದೇ ಕಡೆ ತಿರುಗದಂತೆ ಪಕ್ಕದಲ್ಲಿದ್ದ ತಲೆದಿಂಬನ್ನು ಎತ್ತಿ ಕೊಂಡು ತಲೆಯ ಮೇಲಿಟ್ಟಳು. ಗಡಿಯಾರದ “ಟಿಕ್…..ಟಿಕ್” ಶಬ್ಧದೊಂದಿಗೆ ಉಮ್ಮಳಿಸಿ ಬಿಕ್ಕಿ ಬಿಕ್ಕಿ ಅಳುವ ಶಬ್ಧ ಮೇಲೈಸಿ, ಮನೆಯೆಲ್ಲಾ ತುಂಬಿತ್ತು.
*****