ಶಂಡೀಗಿ ಕಡೆದಾರಲ್ಲ; ದೊಡ್ಡ ಶರಣ್ಯಾರು ನೆರದಾರಲ್ಲ|
ಒಡ್ಡಿ ಬಾಜೆಂತ್ರೀಲಿ ಪುರವಂತನಾಡಸ್ತ ಐಸೀರಿಲೊಂಟ್ಹಾರಲ್ಲ ||೧||
ಹಡದೀಯ ಹಾಸ್ಯಾರಲ್ಲ| ಮ್ಯಾಲ ಮದುಮಕ್ಕಳ ನಡಿಸ್ಯಾರಲ್ಲ|
ಖನ್ನಿ ಪಾರ್‍ವತಿದೇವಿಗಿ ಎಣ್ಣಿ ಪತ್ತಽಲುಡಿಸಿ ಸೋಬಾನ ಪಾಡ್ಯಾರಲ್ಲ ||೨||
ಗಡಗಡ ಗದ್ದವುರುಸ್ತ| ನಮ ಶಿವಗ ಬಿದರೀನ ಮಳೆ ಆದಾವ|
ಬರುವ ಅಬ್ಬರಣಿ ತೆಳಗ ಸರುವರಿಗಿ ಗಿರಿರಾಜಾ ಸರುವೆಲ್ಲ ನನಗೆಂದಾನ ||೩||
ಗಡಗಡ ಗದ್ದವುರಸ್ತ| ನಮ ಶಿವಗ ಬಿದರೀನ ಮಳಿ ಆದಾವ|
ಆಡೀದ ವಾಕ್ಯಕ ಮದವಿ ಸಮರಮದಿಂದ ಬೀಡೀಕಿ ಮನಿ ಕೊಟ್ಟಾರ ||೪||
*****
ಐರಾಣಿಯನ್ನು ತಂದ ಮೇಲೆ ಮುತ್ತೈದೆಯರು, ಒಂದು ಮಡಿಬಟ್ಟೆಯ ಮೇಲೆ ನಂದಿಯ ಮೂರ್ತಿಯೊಂದನ್ನು ಇಟ್ಟು, ಕಡಲೆಯ ಹಿಟ್ಟನ ಮುದ್ದೆಯನ್ನು ಕೈಯಲ್ಲಿ ಹಿಡಿದು, ದುಂಡುದುಂಡು ಗುಳಿಗೆಗಳನ್ನು ಮಾಡಿ ಆ ಮೂರ್ತಿಯ ಮೇಲೆ ಮಳೆಗರೆದಂತೆ ಎಸೆಯುವರು. ಆ ಕಾರಣದಿಂದಲೇ ಈ ದಿನದ ವಿಧಾನಕ್ಕೆ “ನಂದಮಾಕ (ನಂದಿಮುಖ)”ದ ದಿವಸನೆನ್ನುವರು. ಈ ಸಂಬಂಧದ ಹಾಡು ಇದು.
ಶಬ್ದಪ್ರಯೋಗಗಳು:- ಒಡ್ಡಿ=ಒಡ್ಡು ಳ್ಳ (ಐಸಿರಿಯ). ಪುರವಂತ ನಾಡು=ದೇವರ ಮುಂದೆ ವೀರಕುಣಿತವನ್ನು ಕುಣಿಯುವುದು. ಹಡದಿ=ಮಡಿ ಬಟ್ಟೆ. ಖನ್ನಿ=ಕನ್ಯೆ. ಅಬ್ಬರಣಿ=ಆರ್ಭಟ. ಬಿದುರಿನ ಮಳೆ=ಬಿರುಮಳೆ. ಸಮರಮ=ಸಂಭ್ರಮ.