೧. ಚರಮ ಗೀತೆ
ಜಗದಿ ಕತ್ತಲು ಮುಸುಕಿ ಮುಂದರಿಯದಾಯ್ತಿಂದು
ನಡಯಿಸುವ ತಂದೆ ನೀ ಮರೆಯಾಗೆ ನಮ್ಮಿಂದ
ನಾವು ತಬ್ಬಲಿಯಾಗಿ ಬಾಳಲೆ೦ತಿನ್ನಕಟ!
ಜೀವಾತ್ಮ ತೋಲಗಿರುವ ದೇಹದಂತೆ!
ಗಾಂಧಿಗುಂ ಜರೆಯುಂಟೆ-ಮೃತಿಯುಂಟೆ-ಅಳಿವುಂಟೆ
ಎಂದೆಮ್ಮನಾಶ್ಚರ್ಯಗೊಳಿಸಿ ನೀನೊಮ್ಮೆಗೇ
ಮೂಗುವಡಿಸೀ ಜಗವ ಪಯಣಗೈವರೆ ತಾತ
ಸ್ವಾತಂತ್ರ ಸಂಗ್ರಾಮದೇಕವೀರ !!
ಹೃದಯ ಬರಡಾಯ್ತಮಮ ಶೂನ್ಯ ಮಾಯ್ತೀ ಲೋಕ
ತುಂಬಿದೀ ಭರತಪದ ಬರಿದಾಯ್ತು ಬದುಕುಳಿದು
ಭಾರತಿಯ ನಡುನೀರಿನಲಿ ಬಿಟ್ಟು ನಡೆವರೇ
ಓ ಮಹಾತ್ಮನೆ ಜ್ಯೋತಿಯಾರಿಸುವರೆ !!
ಭಾರತಿಯ ಹಿರಿದೆನಿಸಿ ನಲಿಸುವವರಾರಿನ್ನು
ಮೆರೆದಹಿಂಸಾವ್ರತದಿ ಬೆಳಕಿತ್ತ ಭಾಸ್ಕರನೆ
ಅಸ್ತಮಿಸುತೆಲ್ಲಿರುವೆ ಪುಣ್ಯಮೂರುತಿ ನಿನ್ನ
ದಿವ್ಯ ದರ್ಶನವಿತ್ತು ಮುಗುಳುನಗೆಯ !!
ನೊಂದು ಬೆಂದಿತು ಹೃದಯ ಶೋಕವೊಂದೇ ತುಂಬಿ
ದುಃಖಸಾಗರಮಾಯ್ತು ಭರತಭೂಮಿಯ ನೆಲವು
ಭಕ್ತಪದ ಸಮ್ರಾಟ ನುಡಿ ಬಾರೆಲೈ ತಂದೆ,
ಕಣ್ಣೀರಿನಿಂದೊರೆವೆ ಚರಮ ಗೀತೆ!
೨ ಜಗಜ್ಜನಕ ಗಾ೦ಧಿಜೀ
ಭರತರಾಷ್ಟ್ರದ ಜನಕ ಗುರುವರ | ದೇವನನುಪಮ ಯೋಗಿಯೆ
ಸರುವ ಹೃದಯವ ಹೊಕ್ಕು ಸತ್ಯದ | ಮರ್ಮವರುಹಿದ ತ್ಯಾಗಿಯೆ
ಹಿರಿಯ ಸ್ವಾತಂತ್ರ್ಯವನು ಬೋಧಿಸಿ | ಮನವನರಳಿಸಿ ಕೆರಳಿಸಿ
ಧರುಮದರ್ಥವ ತಿಳುಹಿ ಮತಗಳ | ನೊಂದು ಮಾಡಿದ ಮಹಋಷಿ.
ವಿನಯ ಸತ್ಯ ಪ್ರೇಮ ಸಹನ | ತ್ಯಾಗಮೌದಾರ್ಯ೦ಗಳ
ಘನತೆ ಪೌರುಷ ಧೃತಿ ನಿವೇಕ ವಿ| ಚಾರ ನಿರ್ಮಲ ಗುಣಗಳ
ಮುನಿ ವಿರಾಜಿತ ಮನ ಸುಶೋಭಿತ | ಯೋಗಿ ಹೃದಯದ ನಗೆಗಳ
ವನಧಿ ಗಾಂಧಿಮಹಾತ್ಮ ನಿನ್ನನು | ತಿಳಿವರಾರೀ ಬಗೆಗಳ.
ಜೀವಕೆಲ್ಲಕೆ ಕೊಟ್ಟು ಚೇತನ | ಸಕಲ ಹೃದಯವ ಸೇರಿದೆ
ನೋವನೊಪ್ಪಿದೆ ಸಾವನಪ್ಪಿದೆ | ಜಡ ಶರೀರವ ತೂರಿದೆ.
ಭಾವಿತಾತ್ಮನೆ ಬಂದ ಭೂಮಿ ಪ | ವಿತ್ರಮಾಯ್ತು ತ್ಯಾಗದೆ
ಆವ ಘನತೆಯ ಮಹಿಮೆಯಿಂದಲಿ | ನಿನ್ನ ಪಡೆದೆವೊ ಪುಣ್ಯದೆ.
ಲೋಕ ವೈಭವ ನಿನ್ನ ಸುಸ್ವಾ | ಗತಿಸಿ ಕರೆದರೆ ನೋಡದೆ
ಸಾಕು ಹರಿಜನ ಸೇವೆಯೆಂದೇ | ಉಸಿರು ಮೀಸಲು ಮಾಡಿದೆ.
ಬೇಕು ಮನಸಾ ವಾಚ ಕರ್ಮದೊ | ಳೊಂದೆ ಕೃತಿ ಧೃತಿಯೆನ್ನುತೆ
ಏಕಕಂಠದೊಳೊರದೆ ಶ್ರದ್ದಾ | ಸಹನೆ ಪಾವನಮೆನ್ನುತೆ.
ನೀರು-ನಲಮಾಕಾಶ-ಗಾಳಿಯು | ನಿರುತ ಪಾವನವಾದುದು
ಶೌರ್ಯ ಶಮೆ ದಮೆ ತಪಸು ಶೌಚಾ | ಚಾರ ಜೋತಿಯ ಪಡದುದು
ಆರು ಬಳಗಂ ನಿನ್ನದಾವುದು | ಎಲ್ಲ ಲೋಕವ ಸೇರ್ದುದು !
ಆರು ನಿನ್ನವರಲ್ಲ ಧರೆಯಲಿ ? | ನಿನ್ನದಲ್ಲದದಾವುದು?
ಸಿರಿ ಸರಸ್ವತಿ ಶಕ್ತಿ ನಿನಗೂಲಿ | ದಿಹರು ತಾವ್ನಲಿಯುತ್ತಲಿ
ಹರಿಹರಾದಿ ವಿರಿಂಚಿ ಧರ್ಮರು | ಹರಸುತಲಿವರು ಮುದದಲಿ
ವರ ಕುಬೇರನು ತೊತ್ತು ಶಕ್ರನು | ವಿಭವ ತೊರೆದನು ಒಲ್ಲದೆ
ಚರಣಸೇವೆಯ ಮಾಡಿ ನಿಂದರು | ಎಲ್ಲ ಜನಪದಮೂಲದೆ.
ಜಗದ ಹಿತವಂ ಬಗೆದು ನಿನ್ನನೆ | ಮರೆತೆ ಗುಂಡಿಗೆ ನೀಗಿದೆ
ಒಗೆದು ನಶ್ವರದೇಹ ಸೂಕ್ಷ್ಮದಿ | ಎಲ್ಲ ಹೃದಯವ ಸೇರಿದೆ.
ಭಾರತಿಗೆ ನವಜನ್ಮವೀಯುತ | ಸುಪ್ರಕಾಶದಿ ಬೆಳಗಿದೆ.
ಆರತಿಯನೆತ್ತುತಲಿ ಕಣ್ಮರೆ | ಯಾದೆ ಪೂರಣಗೊಳಿಸದೆ.
ಎಲ್ಲ ಜಗವಂ ಸೆಳೆದು ಸಮ್ರಾಟ್ | ಮಕುಟ ತಾಳಿದೆ ಕಾಣದೆ
ಒಲ್ಲೆನೆಂದರು ಬಿಡದು ನಿನ್ನ೦ | ಲೋಕ ಮೆಚ್ಚಿಹ ಪ್ರೇಮದೆ
ರಾಜತಂತ್ರ ವಿವೇಕ ಪರಮಾ| ರ್ಥಗಳು ಭಕ್ತಿ ವಿರಾಗವು
ರಾಜಿಸುತ್ತಿವೆ ಸುಪ್ರಕಾಶದಿ | ನಿನ್ನ ಹೃದಯವ ನೀಗವು.
ಧರೆಯ ಧನ್ವಂತರಿಯೆ ನೀನೆ | ಲ್ಲಿರಲು ನಮ್ಮನು ನೋಳ್ಪುದು
ಕರೆದು ಕೃಪೆಯಂ ಪೊರೆ ಜಗತ್ತನು | ಅಭಯಹಸ್ತವ ತೋರ್ವುದು.
ಹಿರಿಯ ನೀನವತಾರ ಪುರುಷಂ | ಎಂದು ಲೋಕವೆ ಪೇಳ್ವುದು
ಇರಲಿ ನಿನ್ನೀ ಸ್ಮರಣೆ ಸಂತತ | ಎಲ್ಲರೊಳು ಸಮಭಾವದಿ.
*****
೩೦-೧-೧೯೪೮