ಗಾಣದಲ್ಲಿ ಸಿಲುಕಿದ ಎಳ್ಳು
ನೋಯದೆ ಎಣ್ಣೆಯ ಬಿಡುವುದೆ
ಕಾಯದಲ್ಲಿ ಸಿಲುಕಿದ ಜೀವ
ನೋಯದ ಕರಣಂಗಳ ಬಿಡುವನೆ
ಭಾವದಲ್ಲಿ ಸಿಲುಕಿದ ಭ್ರಮೆ
ನೋಯದೆ ವಿಕಾರವ ಬಿಡುವುದೆ
ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ
ನಿಃಕಳಂಕ ಮಲ್ಲಿಕಾರ್ಜುನಾ
ವೇದ ಎಂದರೆ ಜ್ಞಾನವಂತೆ. ವೇದನೆ ಎಂದರೆ ನೋವು. ನೋಯದೆ ಜ್ಞಾನವಿಲ್ಲ. ವೇದನೆ ಇಲ್ಲದೆ ವೇದವಿಲ್ಲ. ಜೀವ ಮತ್ತು ದೇಹ ಬೇರೆ ಎಂದುಕೊಳ್ಳುವುದಾದರೆ ಎಳ್ಳಿನೊಳಗಿರುವ ಎಣ್ಣೆಯಂತೆ. ಗಾಣಕ್ಕೆ ಸಿಕ್ಕಿ ನೋಯದೆ ಎಣ್ಣೆ ಬಾರದು. ದೇಹ ನೋವಿಗೀಡಾಗದೆ ಜ್ಞಾನ ಸಿಗದು. ಮನಸ್ಸು, ಮಾತು, ದೇಹ ಇವು ಕರಣಗಳು. ಇವುಗಳ ಮಿತಿ ತಿಳಿಯುವುದು ನೋವಿನಿಂದಲೇ.
ಭಾವಗಳು ಭ್ರಮೆಗೆ ಕಾರಣ. ನಮಗೆ ಇಷ್ಟವಾದದ್ದು, ಪ್ರಿಯವಾದದ್ದು, ಅವು ಮಾತ್ರವೇ ಒಳ್ಳೆಯದು ಎಂದು ತಿಳಿಯುವುದು, ಅವನ್ನೇ ಆಶಿಸುವುದು, ಹೊಂದಲು ಬಯಸುವುದು ಇವೆಲ್ಲ ಸಹಜವೆಂದು ತೋರಿದರೂ ನಿಜವಾಗಿ ಭ್ರಮೆಗಳೇ. ಭ್ರಮೆಗಳು ಹುಟ್ಟುವುದೇ ಇಷ್ಟ, ಇಷ್ಟವಿಲ್ಲ, ಬೇಕು, ಬೇಡ, ಇತ್ಯಾದಿ ಭಾವಗಳಿಂದ. ನೋವಿನಿಂದ ಮಾತ್ರವೇ ಇಂಥ ಭ್ರಮೆ ಇಲ್ಲವಾಗುವುದು. ನೋವನ್ನು ತಿಳಿಯದಿದ್ದರೆ ಜ್ಞಾನದ ಲೇಪ ಇಲ್ಲ. ಲೇಪ ಅಂದರೆ ಮುಲಾಮು ಕೂಡ ಹೌದು. ನೋವಿಗೆ ಔಷಧ ತಿಳಿವಳಿಕೆಯೊಂದೇ.
`ನನಗೇ ಯಾಕೆ ಈ ಕಷ್ಟ, ಈ ನೋವು?’ ಎಂದು ಸಾವಿರ ಸಲ ಅಂದುಕೊಂಡಿರುತ್ತೇವೆ. ಅಂದುಕೊಂಡಿರುತ್ತೇವೆ, ಅಷ್ಟೆ. ಆ ನೋವನ್ನೇ ತಿಳಿವಳಿಕೆಯ ಲೇಪಮಾಡಿಕೊಳ್ಳುವುದು ಅಗತ್ಯ ಎಂದು ಮೋಳಿಗೆ ಮಾರಯ್ಯನ ಈ ವಚನ ಹೇಳುತ್ತದೆ.
*****