ಮೊದಲು ಆಕಾಶವಿತ್ತು,
ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು
ಆದರೆ ಕಾಲುಗಳಿರಲಿಲ್ಲ
ಬ್ರಹ್ಮಾಂಡದ ಮೇಲೆ
ತೇಲಾಡುತ್ತಿತ್ತು
ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ
ಜಗವೆಲ್ಲ ಖಾಲಿ ಇತ್ತು ನೀನು ಕಂಡೆ
ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು,
ಹೊಳಪಿತ್ತು, ನಗುವಿತ್ತು, ಅಳುವಿತ್ತು
ನೀನು ತಂದೆ:
ಮೌನಕ್ಕೆ ಜೀವ ತುಂಬುವ ಅರ್ಥ
ನಿನ್ನ ಬಗೆಗಣ್ಣಲ್ಲಿ ನೂರಾರು ನವಿಲು
ಎಲ್ಲಾ ನವಿಲುಗಳು ಬಿಟ್ಟು ಹೋಗಿವೆ ತಮ್ಮ ನವಿಲುಗರಿ
ನಿನ್ನ ಹಣೆ ಮೇಲೆ ನಿಲ್ಲವುದೆ ಗರಿಯ ಗುರಿ ?
ತಿಳಿಯಲಿಲ್ಲ
ನೀನು ಹೊರಟೆ
ನಿನ್ನ ನಗು ಅಳೆದಿದ್ದು ಊರವಿಸ್ತಾರ
ನೀನು ಈಗಲೂ ನಗುವೆ. ಯಾವ ಆರ್ಥ ?
ನೀ ಕಟ್ಟಿದೂರು ಇದು ಬೆಂಗಳೂರು
ಇಲ್ಲಿ ಕಾಮನ ಬಿಲ್ಲುಗಳಿವೆ ನವಿರಾಗಿ ನೆಡುವ
ನೂರಾರು ಮುಳ್ಳುಗಳಿವೆ ಇಲ್ಲಿ
ನಾನು ಬಂದೆ. ಇಲ್ಲಿ ನಾನು ಕಂಡೆ.
ತಿಳಿಯಬಾರದ್ದನ್ನೂ ತಿಳಿಯಬೇಕಾದ್ದನ್ನೂ
ತಿಳಿದುಕೊಂಡೆ.
ಈಗ ಹೇಳಿಬಿಡುವೆ
ಉದ್ಯಾನಗಳ ನಗರಿ-ನಿನ್ನ ಪ್ರೀತಿಸುವೆ
ನನ್ನ ಗೆಳೆಯರನೆಲ್ಲ ಕೈ ಮಾಡಿ ಕರೆವೆ
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ
ನಿನ್ನ ಮೈ ಸುಡುವ ಸೂರ್ಯ
ತನ್ನ ಮ್ಮೆ ತೊಳೆವ ಊರು
ಅವನ ಅವಿತಿಟ್ಟುಕೊಳುವ
ನನ್ನೂರ ವಿಸ್ತಾರ ಕಡಲು-
ನನ್ನೂರ ಅತಿಸಹಜ ಚೆಲುವು-
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ.
*****