-ಹಿರಿಯನಾದ ಧೃತರಾಷ್ಟ್ರನಿಗೆ ಗಾಂಧಾರದೇಶದ ಗಾಂಧಾರಿಯನ್ನು ವಿವಾಹ ಮಾಡಿದ ನಂತರ ಭೀಷ್ಮನು, ಯುವರಾಜನಾದ ಪಾಂಡುವಿಗೆ ಯದುವಂಶದ ಶೂರಸೇನನ ಮಗಳೂ ಕುಂತೀಭೋಜನ ಸಾಕುಮಗಳೂ ಆದ ಪೃಥೆಯೆಂಬ ಪೂರ್ವನಾಮದ ಕುಂತಿಯನ್ನು ತಂದು ಮದುವೆ ಮಾಡಿದನು. ಆದರೆ, ಅವಳಿಗೆ ಪಾಂಡುವಿನಿಂದ ಮಕ್ಕಳಾಗದಿರಲು, ಹೇರಳ ಧನಕನಕಗಳನ್ನು ಉಡುಗೊರೆಯಾಗಿ ನೀಡಿ ಭುವನಸುಂದರಿಯೆಂದು ಖ್ಯಾತಳಾಗಿದ್ದ ಮದ್ರದೇಶದ ರಾಜಕುಮಾರಿ ಮಾದ್ರಿಯನ್ನು ತಂದು ಮದುವೆ ಮಾಡಿದ. ಆದರೆ ಅವಳಿಗೂ ಮಕ್ಕಳಾಗಲಿಲ್ಲ! ಕುರುವಂಶಕ್ಕೆ ವಾರಸುದಾರರಿಲ್ಲವಾದರೆಂದು ಭೀಷ್ಮಾದಿಗಳು ಚಿಂತಾಕ್ರಾಂತರಾದರು-
ಪಾಂಡುರಾಜನಿಗೆ ಇಬ್ಬರು ಹೆಂಡಿರು ಕುಂತಿ-ಮಾದ್ರಿಯರು ಸವತಿಯರು
ಮಕ್ಕಳ ಫಲವನು ಪಡೆಯಲಿಬ್ಬರೂ ವ್ಯರ್ಥಪ್ರಯತ್ನವ ಮಾಡಿದರು
ಪಾಂಡುವಿನಲ್ಲಿಯೆ ಲೋಪವು ಇದ್ದಿತು ಬಲಿಪಶುವಾದರು ನಾರಿಯರು
ಗಂಡನಾಗಿರುವ ಷಂಡ ಪಾಂಡುವಲಿ ಸುಖವನ್ನು ಪಡೆಯದೆ ಉಳಿದವರು!
ಮಕ್ಕಳಿಲ್ಲದಂತಹ ಮಡದಿಯರನು ಬಂಜೆಯೆಂದು ಕರೆವುದು ಲೋಕ
ಮಕ್ಕಳಾಗದಿರಲವನೂ ಕಾರಣ ಅರಿಯಲಿಲ್ಲೇಕೆ ಈ ತನಕ?
ಮಕ್ಕಳಿಲ್ಲದಿರೆ ಮೋಕ್ಷವು ದೊರಕದು ಎಂಬುದು ಪುರುಷರ ಹುಸಿವಾದ
ಮಕ್ಕಳಾಗುವುದು ಬಿಡುವುದು ಎಂಬುದು ದೇವರಲೀಲೆಯು, ಪ್ರತಿವಾದ
ಏನೇ ಆಗಲಿ ಎಲ್ಲಾ ಹಾನಿಗೆ ಹೆಣ್ಣನ್ನೇ ಹೊಣೆ ಮಾಡುವರು
ಕಳ್ಳ ಮನಸ್ಸಿನ ಪುರುಷರು ಈ ಪರಿ ಹೆಣ್ಣನು ಹಳ್ಳಕೆ ದೂಡುವರು!
ಎರಡನೆ ಹೆಂಡತಿ ಮಾದ್ರಿಯಲ್ಲಿಯೂ ಕುರುವಂಶದ ಕುಡಿ ಮೂಡದಿರೆ
ಭೀಷ್ಮನು ಚಿಂತಿಸಿ ಪಾಂಡುರಾಜನನು ಕೇಳಿದ- “ನಿನಗೇನಾಯ್ತು ದೊರೆ?”
ಹಿರಿಯನ ಮಾತಿಗೆ ಪಾಂಡುವು ನೊಂದನು ಹೇಗೆ ಹೇಳುವುದು ಹಿರಿಯನಿಗೆ
ಅರಮನೆಯಲ್ಲಿನ ಅತಿಭೋಗಕ್ಕೆ ಬಲಿಯಾದುದನ್ನು ಆತನಿಗೆ
ಹಿರಿಯನಾಗಿ ಕುರುವಂಶದ ಹಿತವನು ಬಯಸುತಿರುವ ಹಿರಿಯಣ್ಣನಿಗೆ
ಮರೆಮಾಚುತ ತಾನಿರುವುದು ಸರಿಯೆ? ಎಂದು ಚಿಂತಿಸುತ ಮರುಘಳಿಗೆ
ಪಾಂಡುವು ಮೆಲ್ಲಗೆ ಹೇಳಿದ ತನ್ನಲಿ ಲೋಪವು ಇರುವುದು ಎನ್ನುತಲಿ
ಶಂತನು ವಂಶವು ಮುಂದಕೆ ಬೆಳೆಯದೆ ನಿಂತಿತು ಎಂದನು ವಿನಯದಲಿ!
ಭೀಷ್ಮನು ವಿಚಾರ ಮಾಡುತ ಹೇಳಿದ “ಕುಮಾರ! ಚಿಂತೆಯ ಮಾಡದಿರು
ಮಕ್ಕಳು ಇಲ್ಲೆಂದೆನ್ನುವ ಕೊರಗಿಗೆ ನಿನ್ನ ಮನಸ್ಸನು ದೂಡದಿರು
ಹಿಮವತ್ಪರ್ವತ ತಪ್ಪಲ ಬಯಲಲಿ ಸಿದ್ಧರು ಸಾಧಕರಿದ್ದಾರೆ
ಮಕ್ಕಳ ಫಲಕ್ಕೆ ಚಿಕಿತ್ಸೆ ನೀಡುವ ವೈದ್ಯರು ಅವರೊಳಗಿದ್ದಾರೆ
ಅವರನು ಸಂಧಿಸಿ ವಿಷಯವ ತಿಳಿಸುತ ಸೂಕ್ತ ಚಿಕಿತ್ಸೆಗೆ ಒಳಗಾಗು
ತೀರ್ಥಯಾತ್ರೆ ಎನ್ನುವ ನೆಪ ಹೇಳುತ ಮಡದಿಯರೊಂದಿಗೆ ನೀ ಹೋಗು
ಫಲಿಸದೆ ಹೋದರೆ ನಿಯೋಗದಿಂದಲಿ ಮಕ್ಕಳ ಪಡೆದುಕೊ, ನೀನಲ್ಲಿ
ಕುರುವಂಶಕೆ ಇದು ಹೊಸತೇನಲ್ಲ, ಬೇಗನೆ ಹಿಂದಕೆ ಬಾ ಇಲ್ಲಿ”
ಭೀಷ್ಮನ ಮಾತನು ಪಾಲಿಸಿ ಪಾಂಡುವು ರಾಜ್ಯವ ಅಣ್ಣನಿಗೊಪ್ಪಿಸುತ
‘ಬೇಗನೆ ಬರುವೆನು ಪಾಲಿಸುತಿರುವುದು’ ಹೇಳಿದನವನಿಗೆ ವಂದಿಸುತ
ಧೃತರಾಷ್ಟ್ರನಿಗಿದು ಬಯಸದೆ ದೊರಕಿದ ಭಾಗ್ಯವಾಗಿತ್ತು ಬದುಕಿನಲಿ
ಅಂಗವಿಕಲತೆಗೆ ಮನ್ನಣೆ ದೊರಕಿತು ಎಂದು ಹರ್ಷಿಸಿದ ಮೊದಲಿನಲಿ!
ಹಿರಿಯನಾದರೂ ಒಲಿಯದಿದ್ದಂಥ ಪಟ್ಟವು ದೊರಕಿತು ಎನ್ನುತ್ತ
ಕುರುವಂಶದ ದೊರೆ ತಾನಾದೆನು ಎಂದನು ಮನಸಿನಲ್ಲಿಯೇ ಉಬ್ಬುತ್ತ
ಮಡದಿ ಗಾಂಧಾರಿ ಒಲಿಯುವಳೆನ್ನುವ ಆಸೆಯು ಮೂಡಿತು ಮನದಲ್ಲಿ
ಬಿಡದೆ ಅವಳ ಮನ ಗೆಲ್ಲಬೇಕೆಂದು ಬಗೆದನಂದು ಆ ದಿನದಲ್ಲಿ
ಮಡದಿಯ ಮನವನು ಅರಿತುಕೊಂಡಿದ್ದ ಕುರುಡುತನವಿದೆಯೆ ಹೃದಯಕ್ಕೆ
ಬದುಕಿನಲ್ಲಿ ಎದುರಾಗುವ ಘಟನೆಗೆ ಮಿಡಿಯುವಂಥ ಎದೆ ಬಡಿತಕ್ಕೆ
ಪಾಂಡುವು ಮಕ್ಕಳ ಪಡೆಯಲು ಹೊರಟನು ಎಂಬುದು ಅವನಿಗೆ ಗೊತ್ತಾಯ್ತು
ತನಗೂ ಮಕ್ಕಳು ಇಲ್ಲೆಂದೆಂಬುದು ಈಗ ಅವನಿಗೂ ಅರಿವಾಯ್ತು!
ತೀರದ ದೂರದ ಆಸೆಯು ಅವನಲಿ ಮೂಡುತಲಿದ್ದಿತು ಎದೆಯಲ್ಲಿ
ಮನದಲಿ ಮಂಡಿಗೆ ತಿನ್ನುತ ಕುಳಿತನು ಮಡದಿಯ ನೆನೆಯುತ ಅವನಲ್ಲಿ!
ಅಂದದ ಚೆಂದದ ಹೆಂಡತಿಯಿದ್ದರೆ ಬದುಕು ಬಹಳ ಸುಂದರವಾಗಿ
ಅಂದಚೆಂದಗಳ ಸಂಗಡ ಉತ್ತಮ ಗುಣಗಳ ಹೆಂಡಿರು ಇರಲಾಗಿ
ಸುಂದರ ಬದುಕಿಗೆ ಬೆಂಬಲವಾಗಿಯೆ ಸಂತತ ನಿಲುವಳು ಸೊಗಸಾಗಿ
ಅಂದಚೆಂದಗಳ ಅಂಗೀಕರಿಸುತ ಬಂಧುರವಿರುವುದು ಹಿತವಾಗಿ
ಇತ್ತ ಪಾಂಡುರಾಜನು ಹೊರಟಿದ್ದನು ತೀರ್ಥ ಪ್ರಯಾಣದ ನೆಪದಲ್ಲಿ
ಮತ್ತೆ ಮರಳಿ ಹಿಂದಕ್ಕೆ ಲಾಭದಲಿ ಬರುವೆನೆಂಬ ನಂಬಿಕೆಯಲ್ಲಿ
ಭೀಷ್ಮನು ಎಲ್ಲ ವ್ಯವಸ್ಥೆಯ ಮಾಡಿದ ಪಾಂಡು ಪ್ರಯಾಣಕೆ ಒಲವಿಂದ
ಹಿರಿಯ ಸತ್ಯವತಿಯನ್ನು ಒಪ್ಪಿಸಿದ ತನ್ನ ಹಿರಿತನದ ಬಲದಿಂದ
ಪಾಂಡುಮಾತೆ ಅಂಬಾಲಿಕೆ, ಅಂಬಿಕೆ ಮಗನನು ಹರಸುತ ಕಳುಹಿದರು
ತೀರ್ಥಯಾತ್ರೆಗೆಂದೇ ತಿಳಿದಿದ್ದರು. ಹಸ್ತಿನಾಪುರದ ಪುರಜನರು
ಮಡದಿಯರೊಂದಿಗೆ ಪಾಂಡುವು ನಡೆದನು ಹಿಮವತ್ಪರ್ವತ ತಪ್ಪಲಿಗೆ
ಉತ್ತರದಲ್ಲಿನ ಎತ್ತರವಾಗಿಹ ಪರ್ವತಸಾಲಿನ ಮಡಿಲೆಡೆಗೆ!
ಭೋಗಿಯಾದರೂ ರೋಗಿಯಾದರೂ ಯೋಗದೆಡೆಗೆ ಮನ ಮಾಡಿದನು
ಸಕಲ ಸಾಮ್ರಾಜ್ಯ ಭೋಗಭಾಗ್ಯಗಳ ತೃಣವಾಗಿಸುತಲಿ ದೂಡಿದನು
ಮಾನ್ಯನಿರಲಿ ಸನ್ಮಾನ್ಯನಿರಲಿ ಸಾಮಾನ್ಯನಾದರೂ ಇಲ್ಲೊಂದೇ
ಸಾಧಕನಾಗಲಿ ಸದ್ಗುರುವಾಗಲಿ ಸಮಾನತೆಗೆ ಎಲ್ಲರೂ ಒಂದೇ
ಚಿಂತಿಸಿ ಪಾಂಡುವು ವಂಚನೆಯಿಲ್ಲದೆ ವಹಿಸಿದನೆಲ್ಲವ ಅಣ್ಣನಿಗೆ
ಅರ್ಹನಲ್ಲೆಂದು ಕಡೆಗಣಿಸಿದವಗೆ ಅರ್ಹತೆ ನೀಡಿದ ಪಾಲನೆಗೆ!
ಧೃತರಾಷ್ಟ್ರನು ತಾ ಕುರುಡನಾದರೂ ವಹಿಸಿಕೊಂಡ ಸಾಮ್ರಾಜ್ಯವನು
ಮಡದಿ ಆಗ ಮಹಾರಾಣಿಯಾದಳು ಧಾರೆಯನೆರೆದಳು ಪ್ರೀತಿಯನು!
ಹೆಣ್ಣು ಯಾವಾಗ ಹೇಗೆ ಒಲಿಯುವಳೊ, ಗಂಡು ತಾನೆಂದು ಅರಿಯುವನು?
ಹೆಣ್ಣಿನ ಮನವನು ಅರಿತವನಾದರೆ ಜೀವನವನ್ನೇ ಜಯಿಸುವನು!
ಬೆಟ್ಟಗುಡ್ಡಗಳ ನಾಡಿನ ಮಡದಿಯ ಒಲಿಸಲು ರಾಜ್ಯವು ಬೇಕಾಯ್ತು
ಪಟ್ಟದರಾಣಿಯು ಎಂಬ ಪಟ್ಟವನು ಪ್ರೀತಿಗೆ ಬೆಲೆ ತೆರಬೇಕಾಯ್ತು
ಅಂಗವಿಕಲತೆಯು ಅಡ್ಡಿಯಾಗುವುದೆ ಸಾಮ್ರಾಜ್ಯದ ಬಲವಿರುವಾಗ
ಅಂಧನಾದವನ ಮನಮಂದಿರದಲ್ಲಿ ಒಲವು ತುಂಬಿಕೊಂಡಿರುವಾಗ
ಈಗಲಾದರೂ ಹೆಂಡತಿ ಒಲಿದಳು ಎಂದು ಅವನು ಸಂಭ್ರಮಿಸಿದನು
ಅಂದಿನಿಂದ ಅವಳೊಂದಿಗೆ ಅರಸನು ಸಕಲ ಸುಖವ ಅನುಭವಿಸಿದನು!
ಪಾಂಡುವಾದರೋ ಹೆಂಡಿರ ಸಂಗಡ ಕಾಡುಮೇಡುಗಳ ಅಲೆದಾಡಿ
ಸಿದ್ಧರೆಲ್ಲಿಹರು ಎನ್ನುತ ಎಲ್ಲೆಡೆ ಬೆಟ್ಟಗುಡ್ಡದಲಿ ಹುಡುಕಾಡಿ
ಹಿಮವತ್ಪರ್ವತ ತಪ್ಪಲಿನಲ್ಲಿ ಹಿತವಾದುದನ್ನು ಅರಸುತ್ತ
ಸಮಚಿತ್ತತೆಯಲಿ ಪ್ರಿಯಸತಿಯರಿಗೆ ಪ್ರೀತಿಯ ಮಳೆಯನು ಸುರಿಸುತ್ತ
ನಂಬಿ ಬಂದಿರುವ ಮಡದಿಯರಿಬ್ಬರು ಅವನ ಹೃದಯವನು ಗೆದ್ದವರು
ಗಂಡನ ಮಾತೇ ವೇದವಾಕ್ಯವು ಎಂದು ಅವನೊಡನೆ ಇದ್ದವರು
ಮಕ್ಕಳಿಲ್ಲದಿರೆ ಮೋಕ್ಷವು ದೊರೆಯದು ಎಂಬ ಮಾತನ್ನು ನೆನೆಯುತ್ತ
ಮಕ್ಕಳ ಭಾಗ್ಯವ ಪಡೆಯಬೇಕೆಂದು ನಿಶ್ಚಯ ಮನದಲಿ ತಾಳುತ್ತ
ಶತಶೃಂಗವನ್ನು ನೆನೆಯುತ ಆ ಕಡೆ ತನ್ನ ಪಾದವನು ಬೆಳೆಸಿದನು
ಮಡದಿಯರಿಬ್ಬರ ಸಂಗಡ ನಡೆಯುತ ಪಾದರಕ್ಷೆಗಳ ಸವೆಸಿದನು!
ಪರಿವಾರವು ಅವರೊಂದಿಗೆ ಇದ್ದಿತು ಸೌಕರ್ಯಗಳನು ಒದಗಿಸಲು
ಊಟೋಪಚಾರವು ಸಾಗುತಲಿದ್ದಿತು ಕೊರತೆಯೇನಿರದೆ ಹಗಲಿರುಳು
ಭೀಷ್ಮನು ವ್ಯವಸ್ಥೆ ಮಾಡಿಸುತಿದ್ದನು ಎಲ್ಲ ಕಷ್ಟ ನಿವಾರಿಸುತ
ಬೇಕಾದುದೆಲ್ಲವ ಕಳುಹಿಸುತಿದ್ದನು ಕತ್ತೆಯ ಬೆನ್ನಿಗೆ ಏರಿಸುತ
ವಾರದಲೊಮ್ಮೆಗೆ ಪಯಣದ ವಿವರವು ತಲುಪುತ್ತಿದ್ದಿತು ಭೀಷ್ಮನನು
ಎಲ್ಲಾ ಹೊಣೆಯನು ತಾನೇ ಹೊರುತಲಿ ಸಲುಹುತಿದ್ದ ಕುರುವಂಶವನು!
ಪಾಂಡುವಿಗೊಂದೇ ಚಿಂತೆಯು ಮನದಲಿ ಪುತ್ರನೊಬ್ಬ ತನಗಿರಬೇಕು
ಕುರುವಂಶಕ್ಕೆ ವಾರಸುದಾರನು, ಬಂದರಷ್ಟೆ ಅವನಿಗೆ ಸಾಕು
ಹಗಲೂ ಇರುಳೂ ಇದೇ ಚಿಂತೆಯಲಿ ಮುಳುಗಿರುತಿದ್ದನು ದಿನನಿತ್ಯ
ತುಡುಗು ಯೌವನದಿ ದುಡುಕಿದುದಕ್ಕೆ ಕೊರಗುತ್ತಿದ್ದನು, ಇದು ಸತ್ಯ!
ವಂಶೋದ್ಧಾರವು ಇಲ್ಲದೆ ಹೋದರೆ ಹಿಂಸೆಯು ಮನಸಿಗೆ ಹಗಲಿರುಳು
ವಂಶಕೆ ವಾರಸುದಾರರು ದೊರೆಯದೆಯಿದ್ದರೆ ಇರುವುದೆ ಬಿರಿಮುಗುಳು?
ವಂಶೋದ್ಧಾರಕೆ ತನ್ನಯ ಅಂಶದ ಸುತನಿರಬೇಕಿದೆ ಲೋಕದಲಿ
ವಂಶವು ಬೆಳೆಯದು ಸುತನಿರದಿದ್ದರೆ ಜಾಗವು ದೊರಕದು ನಾಕದಲಿ
ದಿನಗಳು ಉರುಳುತಲಿದ್ದವು ಅವನಲ್ಲಿ ಯಾವುದೆ ಬದಲಾವಣೆಯಿರದೆ
ಷ್ಟಗಳೆಲ್ಲಾ ಒಟ್ಟಿಗೆ ಬರುವುವು ಒಂದೇ ಸಮದಲ್ಲಿ ಬಿಡುವಿರದೆ
ಇಷ್ಟವಿದ್ದರೂ ಇರದೆ ಇದ್ದರೂ ಬಂದದ್ದನು ಒಪ್ಪಲೆಬೇಕು
ಇಷ್ಟವಾದರೂ ಕಷ್ಟವಾದರೂ ಒಪ್ಪುವಂಥ ಮನವಿರಬೇಕು
ನಾವುಗಳೇನೋ ಮಾಡಲು ಹೋದರೆ ವಿಧಿಯಾಟವು ಬೇರಿಹುದಲ್ಲಿ
ಇಲ್ಲದೆಹೋದರೆ ಮಾನವಜೀವಿಯ ಹಿಡಿಯಲಾಗುವುದೆ ಜಗದಲ್ಲಿ?
ಒಂದಿನ ಪಾಂಡುವು ಕಾಡಿನ ಮಾರ್ಗದಿ ಮರದಡಿ ನೆರಳಲಿ ಮಲಗಿರಲು
ಕೆಟ್ಟದಾದ ಕನಸೊಂದನು ಕಂಡನು ಮಡದಿಯರಿಬ್ಬರು ಜೊತೆಗಿರಲು
ಕನಸಲಿ ಪಾಂಡುವು ಬೇಟೆಯನಾಡುತ ಮುಂದಕೆ ಮುಂದಕೆ ಸಾಗಿರಲು
ಎರಡು ಹರಿಣಗಳು ಸರಸವಾಡುತಲಿ ಅವನೆದುರಲ್ಲಿಯೇ ಸುಳಿದಿರಲು
ರಾಜರ ಬೇಟೆಯ ರಾಜಸ ಗುಣವದು ಪಾಂಡುವನ್ನು ಪ್ರಚೋದಿಸಲು
ಗುರಿಯನು ಇರಿಸುತ ಹೂಡಿದ ಬಾಣವು ಜೋಡಿ ಹರಿಣಗಳ ಛೇದಿಸಲು
ಜೋಡಿಯಾಗಿದ್ದ ಹರಿಣ-ಹರಿಣಿಗಳು ಹಸಿರು ನೆಲದಲ್ಲಿ ಕೆಳಗುರುಳಿ
ಹೊರಳತೊಡಗಿದವು ಮಾನವರಂತೆಯೆ ‘ಅಯ್ಯಯ್ಯೋ!’ ಎನ್ನುತ ನರಳಿ
ಮರುಕ್ಷಣ ಹರಿಣವು ಮುನಿದಂಪತಿಗಳ ರೂಪವನಲ್ಲಿಯೆ ತಾಳಿದವು
ಮಾನವರೂಪದಿ ಮರುದನಿಗೊಡುತಲಿ ನೆತ್ತರ ಮಡುವಲ್ಲಿ ನರಳಿದವು.
ಮುನಿಗಳು ಹರಿಣಗಳಾಗುವುದೇನಿದು ಎಂತಹ ವಿಚಿತ್ರವೆನ್ನುತ್ತ
ಅಚ್ಚರಿಯಿಂದಲಿ ನೋಡಿದ ಪಾಂಡುವು, ಸಾಯುವ ಮುನಿದಂಪತಿಯತ್ತ!
ಕಿಂದಮನೆನ್ನುವ ಆ ಮುನಿ ನುಡಿದನು- “ಪಾಂಡುರಾಜ, ದುಡುಕಿದೆ ನೀನು
ಹರಿಣ ರೂಪದಲ್ಲಿ ವಿಹರಿಸುತಿದ್ದೆವು ಮಾಡಿದೆವಾದರೂ ನಿನಗೇನು?
ಯಾರ ತಂಟೆಗೂ ಬಾರದೆ ನಾವ್ಗಗಳು ನಮ್ಮಷ್ಟಕ್ಕೆ ನಾವಿರುವಾಗ
ಕಾರಣವಿಲ್ಲದೆ ನಮ್ಮಯ ಜೀವಕೆ ಹೂಡಿದೆ ಬಾಣವ ನೀನೀಗ
———
ಆ ಕಾಡಿನಲ್ಲಿ ಒಬ್ಬ ಋಷಿಯೂ ಅವನ ಪತ್ನಿಯೂ ವಾಸವಾಗಿದ್ದರು. ಇಬ್ಬರ ನಡುವೆ ಗಾಢವಾದ ಪ್ರೇಮವಿದ್ದಿತು. ಋಷಿಯು ಸ್ಥೂಲಪ್ರೇಮದ ಎಲ್ಲ ಆಯಾಮಗಳನ್ನು ಆನಂದಿಸಿ ನೊಡಲು ಅಪೇಕ್ಷಿಸಿದನು. ಯಾವ ಮುಜುಗರವಿಲ್ಲದೆ ಪ್ರಕೃತಿಸಹಜವಾಗಿ ಹಾಗೆ ಆನಂದಿಸುವುದು ಪ್ರಾಣಿಶರೀರದಲ್ಲಿರುವಾಗ ಮಾತ್ರವೇ ಸಾಧ್ಯವೆಂದು ನಿರ್ಧರಿಸಿ, ಋಷಿಯೂ ಅವನ ಪತ್ನಿಯೂ ಎರಡು ಜಿಂಕೆಗಳಾಗಿ ರೂಪಾಂತರಗೊಂಡು ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಒಂದು ದಿನ, ಎರಡು ಜಿಂಕೆಗಳೂ ಏಕಭಾವದಲ್ಲಿ ಪ್ರಪಂಚವನ್ನೇ ಮರೆತಿದ್ದಾಗ, ಪಾಂಡುವು ಅವುಗಳನ್ನು ನೋಡಿದನು. ಎಂಥ ಬೇಟೆಯ ಅವಕಾಶ! ಎರಡು ಪ್ರಾಣಿಗಳು ಒಟ್ಟಿಗೆ ಇರುತ್ತ ತಮ್ಮನ್ನು ತಾವು ಮರೆತಿರುವಾಗ ಅವುಗಳಿಗೆ ತೊಂದರೆ ಕೊಡಬಾರದೆಂಬ ಸಹಜ ನಿಯಮವು ಬೇಟೆಯ ಆಸೆಯಲ್ಲಿ ಅವನಿಗೆ ಮರೆತೇ ಹೋಯಿತು. ಬಾಣವನ್ನು ಹೂಡಿ ಪ್ರಯೋಗಿಸಿದಾಗ ಗಂಡು ಜಿಂಕೆಗೆ ಪ್ರಾಣಾಂತಿಕವಾಗಿ ಪೆಟ್ಟಾಯಿತು. ಅದು ವಿಲವಿಲನೆ ಒದ್ದಾಡುತ್ತ, ಮಾನವ ಭಾಷೆಯಲ್ಲಿ, “ಋಜುತ್ವಕ್ಕಾಗಿ ಲೋಕವಿಖ್ಯಾತವಾಗಿರುವ ವಂಶದಲ್ಲಿ ಹುಟ್ಟಿದ ನೀನು ಹೇಗೆ ಇಂಥ ಪಾಪವನ್ನು ಮಾಡಿದೆ? ನಾವಿಬ್ಬರೂ ಮೈಮರೆತಿದ್ದವೆಂಬುದನ್ನು ನೋಡಿಯೂ ನಿನಗೆ ನಮ್ಮನ್ನು ಹೊಡೆಯಲು ಮನಸ್ಸು ಹೇಗೆ ಬಂದಿತು? ಪತ್ನಿಯೊಡನೆ ವಿಹರಿಸುತಿದ್ದ ನಾನು ಕಿಂದಮನೆಂಬ ಋಷಿ, ನಿನ್ನನ್ನು ಶಪಿಸುತ್ತೇನೆ. ನಿನ್ನ ಪತ್ನಿಯೊಂದಿಗೆ ಸುಖದಲ್ಲಿದ್ದಾಗಲೇ ನಿನಗೆ ಮರಣವು ಈಗ ನನಗೆ ಬಂದ ಹಾಗೆಯೇ ಬರಲಿ!” ಎಂದು ವಿಲಾಪಿಸಿ ತನ್ನ ಹೆಂಡತಿಯೊಂದಿಗೆ ಪ್ರಾಣಬಿಟ್ಟಿತು. ಪಾಂಡುವು ಎಷ್ಟು ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಪಾಂಡುವಿಗೆ ತನ್ನ ದುರ್ವಿಧಿಯಿಂದ ತಪ್ಪಿಸಿಕೊಳ್ಳುವ ಮಾರ್ಗವೇ ತಿಳಿಯದಾಯಿತು. (ಮಹಾಭಾರತ ಕಥಾಸಂಗ್ರಹ : ಡಾ.ಎಚ್.ರಾಮಚಂದ್ರಸ್ವಾಮಿ)
———
ಬೇಟೆಯಾಡುವುದು ಜೀವ ತೆಗೆಯುವುದು ರಾಜರಲ್ಲಿ ಇರುವಂಥ ಚಟ
ಇಂತಹ ವ್ಯಸನವ ಹೊಂದಿದವರಿಂದ ತಪ್ಪುವುದೆಂದಿಗೆ ಈ ಕಾಟ?
ಸಾಧು ಜಂತು ಅಮಾಯಕ ಜೀವಿಯು ಬಲಿಯಾಗುತ್ತವೆ ಲೋಕದಲಿ
ಅವುಗಳ ವೇದನೆ ಕೇಳುವವರಾರು? ಜೀವದಯೆಯಿರುವ ಹೃದಯದಲಿ
ಕ್ರೂರಪ್ರಾಣಿಗಳು ಹಸಿವು ಇಲ್ಲದಿರೆ ಕೊಲ್ಲವು ಬೇರೆಯ ಪ್ರಾಣಿಗಳ
ಕ್ರೂರಿ ಮಾನವನು ತೆಗೆಯುವುದೇತಕೆ ಇತರೆ ಜೀವಿಗಳ ಪ್ರಾಣಗಳ
ಜೀವಿಗೆ ಜೀವವ ತುಂಬುವ ಶಕ್ತಿಯು ಇಲ್ಲದಾಗಿರಲು ನಿನಗಿಲ್ಲಿ
ಜೀವವ ತೆಗೆಯುವ ಹಕ್ಕನು ಕೊಟ್ಟವರಾರು ನಿನಗೆ ಈ ಸೃಷ್ಟಿಯಲಿ?
ತಪ್ಪುಮಾಡಿರುವ ಶಿಕ್ಷೆಯ ತಪ್ಪದೆ ನಿನ್ನ ಜೀವನದಿ ಅನುಭವಿಸು
ಹೆಣ್ಣಿನ ಸಂಗಡ ಸರಸದಿ ತೊಡಗಿದ ಸಮಯದಲ್ಲಿ ಪ್ರಾಣವ ತ್ಯಜಿಸು”
ಶಾಪ ನೀಡಿ ಮುನಿ ಜೀವವ ಬಿಟ್ಟನು ಮಡಿದ ಪತ್ನಿಯನ್ನು ಸೇರಿದನು
ತಾಪದಿಂದ ಪರಿತಾಪವಪಡುತಲಿ ಪಾಂಡುವು ಚಿಂತೆಗೆ ಜಾರಿದನು!
ಅಯ್ಯಯ್ಯೋ! ಇದು ಎಂತಹ ಘೋರವು ಪಾಂಡುರಾಜನಿಗೆ ಬಂದಿತ್ತು
ಅಯ್ಯೋ! ಅನ್ನುವರಾರೂ ಇಲ್ಲದ ಸ್ಥಿತಿಯನ್ನು ಅವನಿಗೆ ತಂದಿತ್ತು
ಮನಸಿನಂತೆಯೇ ಕನಸು ಎನ್ನುವರು ನನಸಾಗುವುದೆನ್ನುವ ಭಯವು
ಭಯವು ಮನವನ್ನು ಆವರಿಸಿದ್ದರೆ ಮನೋರೋಗವೇ ಪ್ರತಿದಿನವೂ
ಆದರೂ ಧೈರ್ಯ ತಂದುಕೊಳ್ಳುವರು, ಶಕ್ತಿಯು ದೊರೆವುದು ಎನ್ನುತ್ತ
ಶಕ್ತಿ ಯುಕ್ತಿಗಳು ವಿಧಿಯ ತಡೆಯುವುವೆ ನುಗ್ಗಿ ಬರುತಿರಲು ತಮ್ಮತ್ತ?
ಕತ್ತಲಿನಲ್ಲೂ ಮೆತ್ತಗೆ ದಾಳಿಯ ನಡೆಸುವ ಕನಸುಗಳಿಗೆ ತಡೆಯು
ಹೊತ್ತು ಮೂಡಿದರೆ ಕತ್ತಲು ಕಳೆವುದು ಎಂಬ ಭಾವ ಉತ್ತಮ ನಡೆಯು
ಸತ್ವವು ಇಲ್ಲದ ಕನಸನು ನೆನೆಯುತ ಕೊರಗುವುದೇತಕೆ ಮನಸಿನಲಿ
ನಿತ್ಯವು ಮುತ್ತುವ ಕನಸುಗಳೆಂದರೆ ತೆರಪು ಇರಬೇಕು ಬದುಕಿನಲಿ
ಪಾಂಡುರಾಜನೂ ಕಂಡ ಕನಸನ್ನು ನೆನೆದು ಮನದಲ್ಲಿ ನಡುಗಿದ್ದ
ಬಂದ ಉದ್ದೇಶ ಈಡೇರುವುದೆ? ಆಂದೋಳನದಲ್ಲಿ ಮುಳುಗಿದ್ದ
ಇಬ್ಬರು ಹೆಂಡಿರು ಜೊತೆಯಲಿದ್ದರೂ, ತಬ್ಬಿತು ಶಾಪವು ರಾಜನನು
ತಬ್ಬಿಬ್ಬಾಗುತ ಕಣ್ಣನು ತೆರೆದನು ಬಲವಂತದ ಪರಿವ್ರಾಜಕನು!
ಕಂಡುದು ಕನಸೋ ನಿಜವೋ ಎಂಬುದು ಗೊಂದಲವಾಯಿತು ಅವನಲ್ಲಿ
ಕಂಡುದು ನಿಜವೇ ಎಂದೆಸಿತ್ತು ಅಚ್ಚಾಗಿದ್ದಿತು ಮನದಲ್ಲಿ
ಮರೆಯಬೇಕೆಂದು ಪ್ರಯತ್ನಿಸಿದರೂ ಯಾಕೋ ಮರೆಯಲು ಆಗಿಲ್ಲ
ಮರೆವು ಮನುಜನಿಗೆ ದೇವನಿತ್ತ ವರ ಆದರೂ ಮರೆಯಲಾಗಿಲ್ಲ
ಮರೆಯಲಾಗದಂತಹ ಘಟನೆಗಳು ಮನುಜನ ಮನವನು ಕಾಡುವುವು
ಸರಿಯೇನೆಂಬುದನರಿಯದ ತೆರದಲಿ ನಿತ್ಯವೂ ದಾಳಿ ಮಾಡುವುವು
ಪಾಂಡುರಾಜನೂ ಇಂತಹ ದಾಳಿಗೆ ಒಳಗಾಗಿದ್ದನು, ಬಿಟ್ಟಿಲ್ಲ
ಬಂಡೆಯಂತೆ ಅವನೆದೆಯ ಏರಿತ್ತು ಬಿಡುಗಡೆಯೆಂತೋ ಗೊತ್ತಿಲ್ಲ
ನೊಂದು ಬೆಂದಿರುವ ಅವನ ಬಾಳಿನಲಿ ಶುಭ ಸೂಚನೆಯೂ ಸಿಗಲಿಲ್ಲ
ಅಂದು ಮೊದಲಾಗಿ ಮುಂದುವರೆದಿತ್ತು ಅವನನೆಂದಿಗೂ ಬಿಡಲಿಲ್ಲ!
ಪಾಂಡು ಸುತ್ತಲೂ ನೋಡತೊಡಗಿದನು ಭಯವಾವರಿಸಿದ ಮನದಲ್ಲಿ
ಮಡದಿಯರಿಬ್ಬರು ಹತ್ತಿರದಲ್ಲಿಯೇ ಕುಳಿತಿದ್ದರು ಅವನೆದುರಲ್ಲಿ
ರಾಜನು ಹೇಳಿದ ಮಡದಿಯರೊಂದಿಗೆ, ಕಂಡಂತಹ ದುಃಸ್ವಪ್ನವನು
ಮುನಿದಂಪತಿ ಗತಜೀವರಾಗುತ್ತ ನೀಡಿದಂಥ ಆ ಶಾಪವನು
‘ಕನಸಲಿ ಕಂಡುದು ಎಲ್ಲವು ಬದುಕಲಿ ಎಂದೂ ನನಸಾಗುವುದಿಲ್ಲ
ಕಾರಣವಿಲ್ಲದೆ ಕಡ್ಡಿಯು ಕದಲದು ಎಂಬುದು ಹುಸಿಯಾಗುವುದಿಲ್ಲ’
ಮಡದಿಯರವನಿಗೆ ಧೈರ್ಯವ ಹೇಳುತ ಮುಂದಕೆ ಸಾಗಿದರಡವಿಯೊಳು
ಆದರೂ, ಕನಸು ನಿತ್ಯವೂ ಅವನನು ಕಾಡುತಲಿದ್ದಿತು ಹಗಲಿರುಳು!
*****