ಒಲಿದವರ ಕೊಲುವಡೆ
ಮಸೆದ ಕೂರಲಗೇಕೆ
ಅವರನೊಲ್ಲೆನೆಂದಡೆ ಸಾಲದೆ
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ
ಗಜೇಶ ಮಸಣಯ್ಯನ ವಚನ. ನಾವು ಪ್ರೀತಿಸಿದವರನ್ನು ಕೊಲ್ಲುವುದಕ್ಕೆ ಮಸೆದು ಹರಿತಮಾಡಿದ ಕತ್ತಿ ಯಾಕೆ ಬೇಕು, `ನೀನು ನನಗೆ ಬೇಡ’ ಅನ್ನುವ ಮಾತೇ ಸಾಕು. ಹಾಗೆಯೇ ಮಹಾಲಿಂಗ ಗಜೇಶ್ವರನ ಶರಣರಿಂದ ಬೇರೆಯಾದರೆ ಸಾಕು, ನನ್ನ ಸ್ಥಿತಿ ತುಪ್ಪದಲ್ಲಿ ನಂದಿಸಿದ ಕಿಚ್ಚಿನಂತಾಗುತ್ತದೆ.
ಪ್ರಿಯಜನರ ವಿರಹವನ್ನು ಕುರಿತು ಹೇಳುವ ತೀವ್ರವಾದ ಮಾತುಗಳು ಇವು. ಮಹಾಲಿಂಗ ಗಜೇಶ್ವರನಿಗೆ ಪ್ರಿಯರಾದವರನ್ನು ದೂರಮಾಡಿಕೊಂಡರೂ ಬೆಂಕಿಯನ್ನು ಆರಿಸಲೆಂದು ತುಪ್ಪ ಹಾಕಿದಂತಾಗುವಾಗ, ಇನ್ನು ಅವನಿಂದಲೇ ದೂರವಾಗಿ ಹೇಗೆ ಉಳಿಯಲಿ? ಅವನು ನನ್ನನ್ನು ಬೇಡವೆಂದರೆ ಏನು ಮಾಡಲಿ?
ಈ ಆತಂಕ ತೀವ್ರವಾಗಿ, ಆದರೆ ಸರಳ ನೇರ ನುಡಿಗಳಲ್ಲಿ ವ್ಯಕ್ತವಾಗಿದೆ.
*****