ಈ ನೋವಿನ ಬದುಕಿನಲ್ಲಿ
ಬರೀ ಬುದ್ಧಿಯ ವಿಚಾರಗಳಿಂದ
ಉಪಯೋಗವಿಲ್ಲ ದೇವರೇ ಈ
ಮೂಳೆಯೊಳಗೆ ಇಳಿಯುವ,
ಹಲ್ಲು ಉದುರಿಸುವ ಚಳಿಯಿಂದ ನನಗೆ
ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ
ಹೊದೆಯಬೇಕಾಗಿದೆ.
ಒಂದು ಮಧುರ ಹಾಡು ಮತ್ತೆ
ಮಬ್ಬಾದ ಚಿಕ್ಕಿಗಳ ಹೊಳಪು
ಈ ಜಗದ ಹುಚ್ಚರ ಸಂತೆಯಲಿ ಸಂತನಂತೆ
ನಿಲ್ಲುವ ಮಹಾ ಮೋಹಿಯ ಕಡು ಬಡತನದ
ಕಡಲಗಾಳಿ ಎದುರಿಸುವ, ಚಡಪಡಿಕೆಯ ಮುಪ್ಪು
ಸಾವರಿಸುವ ಶಕ್ತಿ ನೀ ನನ್ನೊಳಗೆ ತುಂಬಬೇಕಾಗಿದೆ.
ನಿಕೃಷ್ಟವಾದ ಬೌದ್ಧಿಕ ದ್ವೇಷ ಒಳಸುಳಿ
ರೋಷ ತುಂಬಿದ ಬಿರುನುಡಿ, ಜಂಜಡದ
ಗುದ್ದುಗಳು, ನನಗೆ ತಾಕದಂತೆ ಮತ್ತೆ
ಮಾಯದ ಗಾಯಗಳು ಕೀವು ತುಂಬದಂತೆ
ಹಸಿರು ಮರದಲ್ಲಿ ಪುಟ್ಟ ಹಕ್ಕಿಗಳ ಕಾಪಾಡಿದಂತೆ
ನನ್ನ ಮನಸ್ಸಿನಲಿ ಮಗುವಿನ ಮುಗ್ಧತೆ
ನೀ ಅರಳಿಸಬೇಕಾಗಿದೆ.
ಕೊನೆಗೆ ಹಿತವಾಗಿ ನಿನ್ನ ತಣ್ಣನೆಯ ಕೈಗಳು
ಕಣ್ಣುಗಳು ಮುಚ್ಚಲಿ, ಮತ್ತೆ ನನ್ನ ಈ ಪುಟ್ಟ
ಮನೆಯ ಚಾಪೆಯಲಿ ಮಲಗಿದಾಗಲೇ ಆ
ಪುರುಷ ಸಾವು ತಬ್ಬಲಿ, ಹೃದಯ ಅರಳಿದ
ಹಗುರ ಭಾವದಲಿ ನಾ ನೀಲಿ ಆಕಾಶಕ್ಕೆ
ನಿನ್ನ ಜೊತೆಗೂಡಿ ಹಾರಬೇಕಾಗಿದೆ.
*****