(ಮತ್ತೇಭ ವಿಕ್ರೀಡಿತ)
ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ|
ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ|
ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ|
ಕಡುಗಲ್ತೀವಿದರಣ್ಯಮಂ ಪುಗಿಸಿದಂ – ಕೈಗೂಡಿಸಲ್ ಪಂತವಂ ||೧||
ಮನುವಿಂದಿನ್ನೆವರಂ ಮಹಾವಿಭವದಿಂ ಸಾಮ್ರಾಜ್ಯಮಂಗೈದ ಪ|
ತ್ತನಮಂ ನಿಟ್ಟಿಸುತೊರ್ಮೆ ನಿಂದರಿನಿಸುಂ; ಮೇಣೊರ್ಮೆಯೋಕೋರ್ವರುಂ|
ನನೆಗೂಸಂ ನೆರೆ ನೋಡಿ ನೋಡಿ, ನುಡಿದರ್ ನೇತ್ರಂಗಳಿಂ ಮತ್ತೆ ಮಾ
ನಿನಿ ತನ್ನಂಬಕದಿಂದೆ ಬಿಳ್ದ ಪನಿಮುತ್ತಂ ಮಾಜಿದಳ್ ಸೀರೆಯಿಂ ||೨||
“ಎಲೆ! ಪ್ರಾಣೇಶ್ವರಿ! ತಕ್ಕುದಲ್ತು ದುಗುಡಂ ಪ್ರಸ್ತಾನದಾರಂಭದೊಳ್|
ಪಲವುಂ ದಂದುಗಮಂತು ರೋಗರುಜೆಯುಂ, ಸಂಕಷ್ಟ ಕಷ್ಟಂಗಳುಂ|
ಸತಿ ಎಮ್ಮುದರಣಾರ್ಥಮಾಗಿ, ಪ್ರಭು ತಾಂ ಕೈಗಾಯ್ದ ಸೌಭಾಗ್ಯಮಂ|
ದೊಲಿದುಂ ತಾಳ್ವುದು – ಭಕ್ತರಕ್ಷಣದೊಳುಂ ‘ದೈವೀ ವಿಚಿತ್ರಾಗತೀ!’” ||೩||
ಎನಸುಂ ಸಂತವಿಡುತ್ತೆ ಚಂದ್ರಮತಿಯಂ, ಮುದ್ದಾಡುತಂ ಬಾಲನಂ,|
ಜನಪಂ ಕೊಂಡು ತಳರ್ದನೆಲ್ಲ ನೆಲಮುಂ ಕಣ್ಮುಂದೆ ಪರ್ಬಿತ್ತು ದೇ|
ವನ ಹಸ್ತಾಬ್ಜದ ಛಾಯೆಯಿರ್ಪುದೆನುತಂ, ನಲ್ಲಳ್ಗೆ ಕೈಗೊಟ್ಟು, ಮೆ|
ಲ್ಲನೆ ಪೋದಂ, ತಡಗಾಲ ಪಜ್ಜೆ ತೊಡರಲ್, ಶಂಕವಂ ರಾಜ್ಯದಿಂ| ||೪||
*****
(ಸುವಾಸಿನಿ ಏಪ್ರಿಲ್ ೧೯೦೩, ಪುಸ್ತಕ ೨, ಅಂಕ ೧೦, ಪುಟ ೨೧೭)