(ಒಂದು ಕತೆ)
ಚೆಲುವು ಹಿರಿಯದೊ-ಹೃದಯ-
ದೊಲವು ಹಿರಿಯದೊ?
ಚೆಲುವಿನಲಿಯೆ ಒಲವು ಇಹುದೊ?
ಒಲವಿನಲಿಯೆ ಚೆಲುವು ಇಹುದೊ?
ಎಳೆಯ ಚೆನ್ನನೊಬ್ಬನಿಂದು
ಕೆಲೆದು ಕುಣಿದು ಆಡಿ .ಹಾಡಿ,
ಕುಳಿತ ಜನರ ಕಣ್-ಮನಗಳ
ಸೆಳೆದುಕೊಂಡ ಸೊಬಗನೂಡಿ.
ನೆರೆದ ಮಂದಿಯಲ್ಲಿ ಒಂದು
ಕರಿಯ ಕೂಸನೆತ್ತಿಕೊಂಡ
ಗರತಿಯೊಬ್ಬಳವನ ಮಚ್ಚಿ,
ಕರೆದಳು ಬಳಿ ಆಗಿ ಹುಚ್ಚಿ.
ಗದ್ದವಿಡಿದು ಮೈಯ ತಡಹಿ
ಮುದ್ದನೀಯುತಿರಲು, ತನ್ನ
ಮೊದ್ದು ಕೂಸು ಕೂಗಿ ಅಳಲು,
ಇದ್ದುದಿದ್ದ ಹಾಗೆ ಅವಳು :
‘ಅಮ್ಮ, ನನ್ನ ಹಡೆದ ತಂದೆ!
ಸುಮ್ಮನಾಗು ಸೊಗಡ ಕಣಿ!
ಅಳುವೆಯೇಕೆ ಕಣ್ಣ ಮಣಿ,
ಮೆಲುಮಾತಿನ ಅರಸುಗಿಣಿ!’
‘ಏತಕಳುವೆ ನನ್ನ ಕಂದ,
ನಿಲ್ಲಿಸಳುವ ನಗುವ ಚಂದ!
ಕೊರಳ ಹೊನ್ನ ಸರದ ರನ್ನ!
ತೊಳೆದ ಮುತ್ತೆ, ಹೊಳೆವ ಚಿನ್ನ!’
ಎಂದು ಮಗುವನೆದೆಯೊಳಿಟ್ಟು
ಒಂದೆಸವನೆ ಮುತ್ತು ಕೊಟ್ಟು
ಕಂದನನ್ನು ಸಂತವಿಟ್ಟು
ನಲಿವ ಪಡೆದಳು.
ಅಂದದೋರಿದೆಳೆಯ ಕಂದ
ಬಂದು ಬಳಿಗೆ ನಿಂದು ಇರಲು
ಮುಂದೆ ಕರೆದು ಮುದ್ದನಿಡಲು
ಮರೆತೆ ನಡೆದಳು.
* * *
ಚೆಲುವು ಹಿರಿಯದೋ-ಹೃದಯ-
ದೊಲವು ಹಿರಿಯದೊ ?
ಚೆಲುವಿನಲಿಯೆ ಒಲವು ಇಹುದೊ ?
ಒಲವಿನಲಿಯೆ ಚೆಲುವು ಇಹುದೊ ?
*****