ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ
ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ
ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು
ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು.
ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ಪಡೆದೆ
ಖೇದ ಮೋದಗಳನೆರಡು ತೋಳಿನಲಿ ತೂಗಿ ತೂಗಿ ಹಿಡಿದೆ
ಇಗೊ ಇತ್ತ ಮೃತ್ಯು ಅಗೊ ಅತ್ತ ಅಮೃತ ಎರಡಕ್ಕು ನಡುವೆ ಇರುವೆ
ನೋವು ಸಾವುಗಳ ಕವಳ ಮಾಡಿ ಹಿಗ್ಹಿಗ್ಗಿ ಬಾಯಿದೆರೆವೆ.
ಘನನಿಬಿಡವಾಗಿ ಆಲಿಂಗಿಸೆನ್ನ ತುಸು ಕೂಡ ತೆರವು ಬೇಡ
ಬಾನಗಲ ನಿನ್ನ ಎದೆ ಹರವುಗೊಳಿಸಿ ಹೃದಯವನೆ ತುತ್ತು ಮಾಡ
ಓ ಭೀಮಕಾಯ ನಿರ್ಮಾಯ ಮುಖವೆ ಹಿಂಜರಿವುದೇಕೆ ಇನ್ನು ?
ಮೂರ್ಚ್ಛೆಮುಸುಕು ತೆರೆದೆರಗಿ ಬಾರ ಕ್ರೀಡೆಯಲ್ಲಿ ಇದುವೆ ಚೆನ್ನು.
ತೊಟ್ಟು ಕೂಡ ಬಿಡದಂತೆ ಸವರಿ ಹಿಗ್ಗನ್ನು ಹುಡುಕಿ ಕುಡಿವೆ
ಕಚ್ಚು ಚುಚ್ಚು ಎದೆ ಹೊಚ್ಚು ಬಿಚ್ಚು; ಮೆಚ್ಚಿದ್ದ ಮಾಡಿ ಬಿಡುವೆ
ನರಸಿಂಹನಂತೆ ಬಸಿರನ್ನೆ ಹೊಕ್ಕು ಕರುಳುಗಳ ಮಾಲೆ ಸೂಡಿ
ಮಧುಮಾಸ ಮತ್ತಮಧುಕರನ ಹಾಗೆ ರಸ ಸರಸ ವಿರಸಮಾಡಿ
ಏನು ತಾನು ಮಾಡಿದರು ನಾನು ದಾನವನ ಹಾಗೆ ಹೀರಿ
ಅಭಿಮಾನಿ ದೈವ ಬರುವೊಲು ಸದೈವ ಆನಂದ ಮೇರೆ ಮೀರಿ
ಮಾನವನ ಮೈಯೆ ಯಾತಕ್ಕು ಸೈಯೆ, ನಾನಿರುವೆ ಪ್ರೇಮದಂತೆ
ಶಿವ-ರತಿಯ ತಕ್ಕೆಯಲಿ ನಲಿನ ಉಲಿವ ಚಿರಬಾಲ ಕಾಮನಂತೆ.
ನಾ ಬೇಡಲೇನು ನೀ ಕೊಡುವದೇನು ? ವ್ಯಾಪಾರ ಸಾಕು ಬಲ್ಲೆ
ಆ ದೈವದತ್ತ ಈ ಮೊಗದ ಮುತ್ತ ಸುತ್ತುತ್ತಲಿರುವೆ ಇಲ್ಲೆ
ಅರಸಾದರೇನು ಆಳಾದರೇನು ಆನಂದ ಭೋಗದಲ್ಲಿ
ಬಾಳಾದರೇನು ಹಾಳಾದರೇನು ಈ ಪೂರ್ಣಯೋಗದಲ್ಲಿ.
ಅಧಃಪಾತದಲಿ ನೆರೆದು ಬರುವೆ ಗಂಗಾವತಾರದಂತೆ
ಜೀರ್ಣವಸ್ತ್ರದಲಿ ಮಿಂಚಿ ತೆರೆವೆ ಸುರ ಸುಮನ ಹಾರದಂತೆ
ಮೂರ್ತ ಮೃತ್ಯುಮುಖರಂಗದಲ್ಲಿ ನರ್ತಿಸುವೆ ಅಮರನಂತೆ
ತೊತ್ತುಳಿದರೂನು ಥಥ್ಥಳಿಸಿ ಹೊಳೆವೆ ಸಂಜೀವ ಭ್ರಮರನಂತೆ.
*****