ಸಾವೇರಿ
೧
ನೀಕೊಡುವುದೆಂದು ಮನೆ-
ಯಾಕೆಯಧಿಕಾರವನು?
ಸಾಕಿದೇಕಾಕಿನಿಯ ಕಾಕುಬಾಳು!
ಹಾಕುತಿದೆ ಬರೆಯ ಮೊದ-
ಲೇ ಕೊರಗುತಿರುವೆದೆಗೆ
ಲೋಕದಾ ಜನರ ಬಡತನದ ಗೋಳು.
೨
ನಿರುಕಿಸಿದರೆತ್ತಲೂ
ತಿರಿವವರ ತಂಡಗಳು
ಕುರುಡ-ಕುಂಟರು, ಕರುಣಗೀತದವರು!
ಕೊರೆವ ಚಳಿ ಬಿರುಬಿಸಿಲಿ-
ನರಿವಿಲ್ಲದಲೆ-ಕೂಳು-
ದೊರೆಯದಿದ್ದರು ದುಡಿವ ಜೀತದವರು!
೩
ಹಸಿವು ಹಸಿವೆಂಬುಲುಹು
ದೆಸೆಯ ಮುತ್ತಿದೆ, ಜನದ
ಬಸಿರ ಬೇಗೆಗೆ ಹಸಿರೆ ಬಾಡುತಿಹವು;
ಹಸುಳೆಗಳು ಹಡೆದವರ
ಗಸಣಿಗಳೆಯಲಿಕೆಂದು
ಮಸಣದಲಿಯೇ ವಸತಿ ಮಾಡುತಿಹವು!
೪
ನೋಡುತಿಹೆನೆಲ್ಲವನು
ನೀಡು-ನೋಟಗಳಿಂದೆ,
ಮಾಡುವೆನದೇನು..! ಬಿಸುಸುಯ್ಯುದೊಂದೆ;
ನಿನ್ನೆಲ್ಲ ಹೊನ್ನು ಹಣ
ನನ್ನದಾಗಿದ್ದರೂ
ಚೆನ್ನ! ಬರಿಗೈ-ಬಡವಿಯಿರುವೆನಿಂದೆ.
೫
ಒಡೆಯ ನೀನೊಲಿದು ನಿ-
ನ್ನೊಡವೆಯೆಲ್ಲವ ನನ್ನ
ಒಡೆಯತನಕೊಪ್ಪಿಸಿ ಅದೆಂದು ಕೊಡುವೆ?
ಕೊಡಲು ತಿರೆಯನೆ ತಿನುವ
ಬಡತನದ ಭೂತವನು
ಹೊಡೆದು ಹಸಿವಿನ ಪಿಡುಗ ತೊಡದೆ ಬಿಡುವೆ!
ದೈನ್ಯದಾ ದನಿಯ ಕರುಣದ ಮೊರೆಯ ಕೂಗ
ಇನ್ನೊಮ್ಮೆ ಕೇಳದಂತಾಗಿಸುವೆನಾಗ.
*****