ನನ್ನ ಜೀವ ಮನ ಹಿಗ್ಗಿ ಹಿಗ್ಗಿ ಆಕಾಶಕಿಂತ ಅಗಲ
ಆವರಣರಹಿತದಾಕಾಲ ಮುಳುಗಿ ಉಂಡಿತ್ತು ಹರ್ಷ ಮಿಗಿಲ
ಮೈಯ ಪಿಂಡ ಉಡುಗಿತ್ತು ಉಳಿದು ಜಲಲಿಪಿಯ ರೇಷೆಯಾಗಿ
ಆತ್ಮದೇಕಾಂತ ಚಿಂತೆಯಲ್ಲಿ ಸ್ಮೃತಿ ಮಾತ್ರ ಶೇಷವಾಗಿ.
ಬಣ್ಣ ಹಾರಿ ಅಡಗಿತ್ತು ವಿಶ್ವ ಸುತ್ತೆಲ್ಲ ಸೆರಗು ಹರಿದು.
ಶುಭ್ರತೆಯ ಏಕಸಾಮ್ರಾಜ್ಯದಲ್ಲಿ ಬೆಳಕೊಂದೆ ಚೆಲ್ಲವರಿದು
ಅಮೃತ ಮೂರ್ತಿ ನಟರಾಜನೊಂದು ಸೌಂದರ್ಯ-ಶಾಲೆಯಾಗಿ
ಅಮಿತದಾನಂದ ಪಡೆದ ವೈಶಾಲ್ಯದೊಡನೇ ವಿಶಾಲನಾಗಿ
ಹರ್ಷಪುಲಕ ಉಬ್ಬುಬ್ಬಿ ಹಬ್ಬಿ ಬ್ರಹ್ಮಾಂಡದುದ್ದ ಠಾವ.
ಬೆಳಕಿನಲ್ಲಿ ಇಂಗಿತ್ತು ಬುದ್ಧಿ, ಹಿರಿಹಿಗ್ಗಿನಲ್ಲಿ ಭಾವ
ನಿರ್ಭ್ರಾಂತೆ ಶಾಂತ ಸುಸ್ತಬ್ಬದಾಂತ ಪರಿಣಾಮ ಆಲಿಸುವದು
ಸನಾತನದ ಆ ಶಾಂತಿ ಶಾಸನವ ತಾನೆ ಪಾಲಿಸುವದು.
ಅನಿರ್ವಾಚ್ಯದಾ ರಾಜ್ಯದಲ್ಲಿ ಬದುಕುವೆನು ಬಾಳಹಬ್ಬ
ಪ್ರಕೃತಿಯಾಟ ಮುಗಿದಿಹುದು ಈಗ ತಾ ಪುರುಷನೊಬ್ಬನೊಬ್ಬ.
*****