ನಡೆವುದೆಂದರೆ ಹೀಗೆ….
ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ
ಗಿರಗಿರನೆ ಗುಂಡಗೆ
ಬುಗುರಿಹುಳದ
ಇಡೀ ದೇಹವೇ
ವೃತ್ತಾಕಾರ ತಿರುಗುತ್ತಾ
ಗಾಳಿಯಿಲ್ಲದೆಯೂ ಗಿರಗಟ್ಟೆ.
ತಿರುಗುತ್ತಲೇ ಒಂದಿಷ್ಟು ಮುಂದೆ
ಯಾರಿಗೆ ಗೊತ್ತು?
ಹಿಂದಕ್ಕೂ ಆಗಿರಬಹುದು ಆ ನಡಿಗೆ!
ಅದರ ದಾರಿಯುದ್ದಕ್ಕೂ
ಕಲ್ಲು ಮುಳ್ಳು.
ಗುಡುಗುಡಿಸುತ್ತಾ
ಅದನೇರಿ ಇಳಿದು
ತನ್ನ ಸುತ್ತಲೇ ತಾನು
ಗಿರಿಗಿಟ್ಟಲೆ ಆಡಿ
ಖುಷಿಯ ಚಪ್ಪಾಳೆ.
ಬೆನ್ನು ಕೆಳಗಾಗಿ
ಬಿದ್ದು ಕೊಂಡು
ತೊಪ್ಪೆಯ ಗುಪ್ಪೆಯಿಂದ
ಜೊಯ್ಯನೆ ಜಾರಾಟ
ದೇಹವೇ ಪಾದವಾಗಿ
ಬೆನ್ನು ಸವೆಸಿ ಗಿರ್ರನೆ
ಸುತ್ತುತ್ತಾ ಸುತ್ತುತ್ತಾ
ಅಷ್ಟ ದಿಕ್ಕಿಗೂ ನಮಸ್ಕಾರ.
ತೇವದ ಮೆದು
ಮಣ್ಣು ಸ್ಪರ್ಶಿಸಿದೊಡನೇ
ಇಡೀ ದೇಹ ತನ್ನ
ಹೊರ ಕವಚದೊಳಗೆ
ಎಳೆದು ಮುದುರಿಸಿ
ಇಡಿಕಿರಿದು ತುರುಕಿ
ಒಮ್ಮೆ ದೇಹ
ಠರ್ರನೆ ಗುಂಡಗೆ ತಿರುಗಿಸಿ
ಹದ ಮಾಡಿಕೊಂಡು
ದೇಹವೇ ತಾನಾಗಿ
ಸೊಯ್ಯನೊಮ್ಮೆ ಸುತ್ತಿ
ಮಣ್ಣು ಕುಳಿ ಮಾಡಿ
ಅದರೊಳಗೆ ಕಣ್ಣು ಕಿವಿಮುಚ್ಚಿ
ಕಿರ್ರೋ ಧ್ವನಿ ಕೆಲ ಕ್ಷಣ
ಮತ್ತೆ ಗಾಢ ನಿಶ್ಯಬ್ಧ
ದೇಹ ಉರುಟುವ
ಸದ್ದೂ ಇಲ್ಲ!
ಸತ್ತೇ ಹೋಯ್ಯ್ತೋ ಏನೋ?
ಎಷ್ಟು ಕಾಲ ಕಳೆಯಿತೋ ಹೀಗೇ…
ಕೊನೆಗೊಮ್ಮೆ
ಬುಗುರಿಹುಳು
ಮಲ್ಲೊಳಗಿಂದೆದ್ದು
ಹಾರಿತು ಪುರ್ರನೆ
ತನ್ನ ಹೊಸ ರೆಕ್ಕೆ ಬಡಿಯುತ್ತಾ….
ಹೊಸ ಧ್ಯಾನಕ್ಕೆ?
*****