ಅಡುಗೆಕೋಣೆ, ಸಾಹಿತ್ಯ ಎನ್ನುವುದನ್ನು ರೂಢಿಗತವಾಗಿ ಮಹಿಳಾ ಸಾಹಿತ್ಯದ ಬಗ್ಗೆ ಬಳಸುತ್ತಾ ಬಂದಿರುವ ವಿಮರ್ಶಾ ಲೋಕ ಕುವೆಂಪು ಚಿತ್ರಿಸಿದ ಅಡುಗೆ ಮನೆಯ ಚಿತ್ರಣಗಳನ್ನು ವಿಶೇಷವಾಗಿ ಗಮನಿಸುತ್ತದೆ. ಒಬ್ಬ ಲೇಖಕ ಎಷ್ಟು ಸೂಕ್ಷ್ಮವಾಗಿ ಅಡುಗೆಕೋಣೆಯನ್ನು ಗಮನಿಸಿದ್ದಾನೆ ಎಂದು ಕಾನೂರು ಹೆಗ್ಗಡಿತಿ ಹಾಗು ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಅಡುಗೆ ಕೋಣೆಯ ಚಿತ್ರಣಗಳೇ ಸಾಕ್ಷಿ. ಕುವೆಂಪು ಅವರ ಕಾದಂಬರಿಗಳಲ್ಲಿ ಬರುವ ಊಳಿಗಮಾನ್ಯ ವ್ಯವಸ್ಥೆಯ ಸಾಮಾಜಿಕ ಸಂರಚನೆಯಲ್ಲಿ ಗಂಡು ಹೆಣ್ಣಿನ ಸ್ಥಳಗಳು ಅಪೂರ್‍ವವಾಗಿಯೇ ಭಿನ್ನವಾಗುತ್ತವೆ. ಕುವೆಂಪು ಕಂಡ ಶ್ರೇಣೀಕರಣದ ವಸಾಹತುಕಾಲದ ಜಗತ್ತಿನಲ್ಲಿ ಅಧಿಕಾರದ ಬಿಳಿಲುಗಳು ಎಲ್ಲೆಲ್ಲಿಯೊ ಹರಡಿಕೊಂಡು ಪಿತೃಪ್ರಧಾನತೆಯ ಸಂಕೇತವಾದ ಎಲ್ಲ ಬಗೆಯ ಅಧಿಕಾರಗಳನ್ನು ಯಾವ ಎಗ್ಗ ಇಲ್ಲದೆ ಬಳಸುತ್ತಿದ್ದವು. ಅಲ್ಲಿ ಅಧಿಕಾರದ ಪ್ರಶ್ನೆಯೇ ಮುಂಚೂಣಿಯಲ್ಲಿರುತ್ತಿದ್ದು ಅದರ ಜುಟ್ಟು ಊಳಿಗಮಾನ್ಯ ವ್ಯವಸ್ಥೆಯ ಯಜಮಾನನ ಕೈಯಲ್ಲಿರುತ್ತಿತ್ತು. ಜಗುಲಿ ಮತ್ತು ಹಿತ್ತಿಲುಗಳ ಅಗಾಧವಾದ ಅಂತರವು ಸೇರದೆ ಇರುವ ರೇಖೆಗಳೇನೂ ಆಗಿರಲಿಲ್ಲ. ಅವು ಸೇರುತ್ತಿದ್ದ ಬಿಂದುಗಳು ಮಾತ್ರ ಸೂಚ್ಯವಾಗಿ ಇರುತ್ತಿದ್ದವು. ಈ ಅಧಿಕಾರಗಳನ್ನು ಮನೆಯ ಗಂಡು ಹೆಣ್ಣಿನ ಕಿವಿಗಳಲ್ಲಿ ಯಾರೂ ಗೋಪ್ಯವಾಗಿಯೇ ಉಸುರಿ ಕಳುಹಿಸಿರುತ್ತಿದ್ದರು ಎನ್ನಿಸುವಂತೆ ಅವು ಚಲಾವಣೆಯಾಗುತ್ತಿದ್ದವು.
‘ಕಾನೂರು ಹೆಗ್ಗಡಿತಿ’ಯ ಅಧಿಕಾರ ಕೇಂದ್ರಗಳು ಶುರುವಾಗುವುದೇ ಪಡಸಾಲೆಯ ಮತ್ತು ಕಡೆಗೋಲು ಕಂಬದ ತಾವುಗಳಲ್ಲಿ. ‘ಕಾನೂರು ಹೆಗ್ಗಡಿತಿ’ಯಲ್ಲಿ ಹಿತ್ತಿಲು ಮತ್ತು ಜಗುಲಿಗಳ ಲೋಕಗಳು ವಿಭಿನ್ನವಾದ ಎರಕದಿಂದ ಕೂಡಿದವು ಎಂಬುದನ್ನು ಚೆನ್ನಾಗಿಯೆ ವಿವರಿಸಲಾಗಿದೆ. ನೇಗಿಲುಗಳು ಗಂಡಸಿನ ಕಾರ್ಯಕ್ಷೇತ್ರವನ್ನು ಸೂಚಿಸಿದರೆ ಇಲ್ಲಿ ಬರುವ ರಾಷ್ಟ್ರೀಯತೆಯ ಸೂಚಕಗಳಾದ ದೇಶಮಾತೆಯ ಹಾಗು ದೇಶಭಕ್ತರ ಚಿತ್ರಪಟಗಳು ಮನೆಯ ಗಂಡಸರ ಕ್ಷೇತ್ರದ ಅತಿ ವ್ಯಾಪ್ತಿಯನ್ನು ಸೂಚಿಸುತ್ತಿವೆ. ಮನೆಯ ಮುಂದಿನ ಚಿತ್ರಣಕ್ಕಿಂತ ವಿಭಿನ್ನವಾಗಿ ಹಿಂದಿನ ಹಿತ್ತಿಲ ಚಿತ್ರವಿದೆ. ಈ ವಿವರಗಳಲ್ಲಿ ಹಿತ್ತಿಲಲ್ಲಿ ಬದುಕುತ್ತಿದ್ದವರು ಯಾರು ಎಂಬುದು ಸ್ಪಷ್ಟವಿದೆ. ಅವರು ಉಪಯೋಗಿಸುವ ಸಾಮಾನುಗಳ ಮೇಲೆಯೇ ಅವರ ಜೀವನ ವಿಧಾನವನ್ನು ಅರಿಯಬಹುದಾಗಿದೆ.
ಸಾಮಾನ್ಯವಾಗಿ ಅಡುಗೆ ಕೋಣೆ ಮಾತಿನ ಕೋಣೆಯಾದಂತೆ ಮೌನದ ಕೋಣೆಯೂ ಹೌದು. ಅಲ್ಲಿ ಮಾತು ಮೌನಗಳ ವೈರುಧ್ಯವು ತಾನೇ ತಾನಾಗಿರುತ್ತದೆ. ಒಂದೊ ಹೆಂಗಸರ ಜಗಳಗಳಿಂದ ಅಡುಗೆಕೋಣೆಯ ಅಸ್ತಿತ್ವವು ಕಾಣುತ್ತಿದ್ದರೆ ಇನ್ನೊಂದೆಡೆ ಮೌನದಲ್ಲಿ ಇರುವ ಉರಿಯುವ ಒಲೆ, ಪಾತ್ರೆ ಪಡಗಗಳು, ಕಡೆಗೋಲು ಕಂಬಗಳು ಅನೇಕಾನೇಕ ಆಖ್ಯಾನಗಳನ್ನು ತಮ್ಮೊಳಗೆ ಹುದುಗಿಸಿಕೊಂಡು ಚರಿತ್ರೆಯ ನೀರವತೆಯನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡಂತೆ ಇವೆ. ಅವು ಹೆಣ್ಣಿನ ಎರಡು ಗುಣ ಲಕ್ಷಣಗಳನ್ನು ಬಣ್ಣಿಸುವಂತಿವೆ. ವಾಚಾಳಿತನ ಇಲ್ಲವೇ ಮೌನದ ನಡುವಿನ ಸಂಕಟಗಳನ್ನೂ ಅವು ಹೇಳುತ್ತಲಿವೆ. ಅದರಲ್ಲಿ ಕುವೆಂಪು ಚಿತ್ರಣದಲ್ಲಿ ಸುಂದರವಾಗಿ ಮೂಡಿ ಬರುವ ‘ಕಡೆಗೋಲು ಕಂಬದ ಸಾಕ್ಷಿಯಲ್ಲಿ’ ಅಧ್ಯಾಯ. ‘ಕಾನೂರು ಹೆಗ್ಗಡತಿ’ಯ ಲೋಕದಲ್ಲಿ ಅಡಗಿಕೊಂಡಂತಿದ್ದ ಅಡುಗೆಕೋಣೆಯ ವಿಶಿಷ್ಟತೆ ಹಾಗು ಅಲ್ಲಿನ ಲೋಕದ ಮೇಲೆ ಬೆಳಕು ಚೆಲ್ಲುತ್ತದೆ. ಅಡುಗೆಕೋಣೆಯ ಕತ್ತಲು ಜಗತ್ತನ್ನೂ ಅಲ್ಲಿರುವ ಸ್ತ್ರೀಕುಲದ ಜೀವನ ಚಟುವಟಿಕೆಗಳನ್ನೂ ಅಲ್ಲಿ ವಿವರಿಸಲಾಗಿದೆ.
ಅಡುಗೆ ಮನೆಯೊಳಗೆ ಹೆಂಗಸರು ತಮ್ಮ ಅಸ್ತಿತ್ವಗಳಿಗಾಗಿ ಹೊಡೆದಾಡಬೇಕಿತ್ತು. ಅಡುಗೆಮನೆ ಎಂಬುದು ಅಲ್ಲಿದ್ದ ಪ್ರತಿ ಹೆಂಗಸಿಗೂ ಪ್ರತಿಷ್ಠೆಯ ಕಣ, ಅಲ್ಲಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಅವರಿಗೆ ಜೀವನ್ಮರಣದ ಪ್ರಶ್ನೆ, ಹೊಸದಾಗಿ ಸೊಸೆಯಾಗಿ ಮನೆಗೆ ಬಂದ ಸುಬ್ಬಮ್ಮನಿಗೆ ಕಾನೂರಿನ ಮನೆಯಲ್ಲಿ ತನ್ನ ಅಸ್ತಿತ್ವ ಸ್ಥಾಪನೆಯೇ ದೊಡ್ಡ ಸಂಗತಿಯಾಗಿದ್ದರೆ ಓರಗಿತ್ತಿ ನಾಗಮ್ಮನವರಿಗೆ ತಮ್ಮ ಹಿರಿತನವನ್ನು ಉಳಿಸಿಕೊಂಡು ಅಳಿದ ತಮ್ಮ ಗಂಡನ ಅಸ್ತಿತ್ವವನ್ನು ಮಗನ ಮೂಲಕ ಸ್ಥಾಪಿಸಬೇಕೆನ್ನುವ ಒಳ ಆಸೆ. ಇನ್ನು ಪುಟ್ಟಮ್ಮನಿಗೆ ತನ್ನ ತಂದೆಯ ಮನೆಯ ಅಧಿಕಾರದ ಸವಾಲು ಅದರಲ್ಲಿಯೂ ಹೊಸ ಮಲತಾಯಿಯೊಡನೆ ಹೋರಾಡಿ ಅಸ್ತಿತ್ವ ಕಾಪಾಡಿಕೊಳ್ಳುವ ಆತಂಕ. ಈ ಸಂದಿಗ್ಧಗಳು ಅವರ ದಿನನಿತ್ಯದ ಕೆಲಸ ಕಾರ್‍ಯಗಳಲ್ಲಿ ಮಾತು ವರ್ತನೆಗಳಲ್ಲಿ ಇಣುಕುತ್ತಲೇ ಇರುತ್ತದೆ. ಅವರ ಒಳಜಗಳಗಳು ಕ್ಷುಲ್ಲಕವಾಗಿ ಕಾಣುತ್ತಿದ್ದರೂ ಅವುಗಳೊಳಗೆ ಅಸ್ತಿತ್ವದ ಅಳಿವು ಉಳಿವಿನ ಮಹಾಸಮರಗಳೇ ಅಡಗಿದ್ದವು.
ಅದೇ ರೀತಿ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲೇ ಅಡುಗೆಮನೆಯ ಜಗಳ ತಾರಕ್ಕೇರಿರುವುದು ಕಾಣುತ್ತದೆ. ಜಟ್ಟಮ್ಮ ಲಕ್ಕಮ್ಮ, ನೀ ಮುಂಡೆ ನೀ ಮುಂಡೆ! ನೀ ರಂಡೆ ನೀ ರಂಡೆ! ಎಂಬ ಜಗಳದ ವರದಿಯಿಂದಲೇ ಕ್ಷೋಭೆಗೊಂಡ ಅಡುಗೆಮನೆ ಕಾಣುತ್ತದೆ. ಅತ್ತಿಗೆ ನಾದಿನಿಯರಾದ ಜಟ್ಟಮ್ಮ, ಲಕ್ಕಮ್ಮರಿಗೆ ಅಡುಗೆ ಕೋಣೆಯ ಒಡೆತನದಲ್ಲಿಯೇ ಅವರವರ ಅಸ್ತಿತ್ವಗಳಿವೆ. ಅಡಿಕೆಯನ್ನು ಸಾಬರಿಗೆ ಮಾರುವುದರಿಂದ ಹಿಡಿದು ಪ್ರತಿಯೊಂದು ಕ್ರಿಯೆಯಲ್ಲಿಯೂ ಅವರು ಅಧಿಕಾರದ ಕೇಂದ್ರ ಅಡುಗೆ ಕೋಣೆಯೇ. ಈ ಅಡುಗೆ ಕೋಣೆಯೇ ಒಂದರ್ಥದಲ್ಲಿ ಹೆಂಗಸರ ಜೀವನವನ್ನು ರೂಪಿಸುವಂತಿದೆ. ಮನೆಯ ಮುಂದಿನ ಗಾಂಭೀರ್‍ಯವು ಅಡುಗೆಕೋಣೆಯಲ್ಲಿ ಕರಗಿ ಅಸ್ತಿತ್ವಗಳ ಅಧಿಕಾರಗಳ ಸಂಘರ್‍ಷವು ತಾರಕಕ್ಕೇರಿರುವುದು ಕಾಣುತ್ತದೆ. ಚಂದ್ರಯ್ಯ ಗೌಡರ ದರ್ಬಾರು ನಡೆಯುತ್ತಿದ್ದಾಗ ಅಡುಗೆ ಕೋಣೆಯೊಳಗಿನ ಜಗಳವು ಆಂತರಿಕವಾಗಿರುವ ಅಸ್ಮಿತೆಗಳ ತಾಕಲಾಟ ಎನ್ನುವಂತೆ ತೋರುತ್ತದೆ. ಒಂದರ್ಥದಲ್ಲಿ ಅಡುಗೆ ಕೋಣೆಯಲ್ಲಿ ನಡೆಯುವ ಜಗಳವು ಮುಂದಲ ಮನೆಯಲ್ಲಿ ನಡೆಯುವ ಗಂಡಸರ ಅಧಿಕಾರ ಕೇಂದ್ರಗಳ ಒಂದು ಮಟ್ಟ ಕನ್ನಡಿ ಅಷ್ಟೇ. ಅಧಿಕಾರಗಳ ಸವಾಲು ಹೊರಜಗುಲಿಯಲ್ಲಿ ದೊಡ್ಡ ಪ್ರಮಾಣದ್ದಾದರೆ ಒಳಮನೆಯ ಜಗಳಗಳು ಅದರ ಕಿರು ಅನುಭವಗಳು. ಒಟ್ಟಾರೆ ಪಿತೃಪ್ರಧಾನತೆಯ ಅಧಿಕಾರವು ಹೆಂಗಸರ ಒಳಲೋಕಗಳಲ್ಲಿ ಸಾಂಕೇತಿವಾಗಿ ಪ್ರತಿಫಲಿಸುತ್ತದೆ. ಆದುದರಿಂದಲೇ ಗಡಿಗೆಯಲ್ಲಿ ಮಾಡಿದ ಪಲ್ಯ ತಳಹತ್ತಿ, ಎತ್ತಿ ಕುಕ್ಕುವಾಗಿನ ರಭಸಕ್ಕೆ ಒಳಗಿನ ಗಸಿಯೆಲ್ಲ ಸೋಸಿ. ನೆಲದ ಮೇಲೆ ಹರಿಯು ತೊಡುಗುತ್ತದೆ. ಮನೆಯ ಒಳಗಿನ ಅಂತರಂಗವೋ ಎಂಬಂತಿದ್ದ ಅಡುಗೆ ಕೋಣೆಯ ಸಾಮರಸ್ಯ ಕದಡಿದುದೇ ಮುಂದಿನ ಮನೆ ಒಡೆಯುವ ಕ್ರಿಯೆಗೆ ಚಾಲನೆ ಕೊಡುವಂತಹ ಸಂಕೇತವಾಗುತ್ತದೆ.
ಹಿತ್ತಿಲು ಮತ್ತು ಜಗುಲಿಗಳ ಅಧಿಕಾರವು ಉಚ್ಛಜಾತಿ/ವರ್ಗಗಳನ್ನು ಬಾಧಿಸಿದಷ್ಟು ಕೆಳವರ್ಗದವರಿಗೆ ಕಾಡುವುದಿಲ್ಲ. ಅಲ್ಲಿ ಇರುವ ಜಾಗವೇ ಕಿರಿದಾದ ಕಾರಣ ಇರುವ ಕಿರುಜಾಗವನ್ನೇ ಅಡುಗೆಕೋಣೆ, ಮಲಗುವ ಕೋಣೆ ಇತ್ಯಾದಿಗಳೆಲ್ಲವೂ ಆಗಬೇಕಿರುತ್ತದೆ. ಸಮಾನತೆ ಇಲ್ಲಿ ಬೇಡವೆಂದರೂ ಸ್ಥಾಪನೆಯಾಗುತ್ತದೆ! ಐತ-ಪೀಂಚಲು ಅವರ ಮಲಗುವ ಕೋಣೆ, ಅಡುಗೆ ಕೋಣೆ, ಪ್ರಾಣಿಗಳ ಮಲಗುವ ತಾಣ ಎಲ್ಲವೂ ಒಂದೇ ಆಗಿರುತ್ತದೆ. ಅವರ ಬಿಡಾರದಲ್ಲಿ ಹೊಲೆಯರ ತಿಮ್ಮಿಗೂ ಜಾಗವಿದೆ! ಹಾಗೆ ನೋಡಿದರೆ ಸಮಾನತೆ ಎನ್ನುವುದು ಸಾಧಿತವಾಗುವುದೇ ಕೆಳವರ್ಗದಲ್ಲಿ ಎನ್ನಿಸುವಂತಿದೆ. ಇದೇ ಕುವೆಂಪು ಸಾಹಿತ್ಯದ ವಿಶೇಷತೆ.
*****