ಹಸಿರು ಬಳ್ಳಿ ಛಪ್ಪರ ಕಂಡಾಗ
ನೆನಪಗುತ್ತಾಳೆ ನನಗೆ ಅಮ್ಮ
ಅವಳೇ ಕಟ್ಟಿದ್ದ ಛಪ್ಪರದ ಮೇಲೆ
ಹಾಗಲ, ಹೀರೇ, ಪಡುವಲ ಬಳ್ಳಿ
ಕುಂಬಳಕಾಯಿ ಚಳ್ಳವರೆಯ ಹಸಿರು
ಮನೆಮುಂದೆ ದಟ್ಟ ಹಸಿರು ಹಂದರ
ನೆರಳಿತ್ತು ಮನೆಯ ಹಿಂದೆ ಮುಂದೆ
ಬರೀ ಹಸಿರೇ ಹಸಿರಿತ್ತು.
ಅಮ್ಮನ ಆ ಮನೆಗೀಗ
ಸೊಸೆಯ ಆಗಮನವಾಗಿದೆ
ಮಾಡರ್ನ್ ಸೊಸೆ ಹೇಳುತ್ತಾಳೆ
“ರೀ ನನಗೆ ಶೋ ಗಿಡ ಇಷ್ಟ”
ಮಗ ಕ್ಯಾಕ್ಟಸ್, ಪಾಪಾಸು ತಂದ
ಅದಕ್ಕಿಟ್ಟ ಸಮೃದ್ಧ ನೀರು, ಗೊಬ್ಬರ
ಎಲೆಯಿಲ್ಲ, ಕಾಯಿಯಿಲ್ಲ ನೆರಳಿಲ್ಲ
ಎತ್ತರ ನೋಡಿ ಮಗ ಸಂಭ್ರಮಿಸಿದ.
ಅಮ್ಮ ನನ್ನ ತಲೆತುಂಬ ಎಣ್ಣೆ ಹಚ್ಚಿ
ಹೇನು ತೆಗೆದು, ಸೀರ್ ಒರೆದು
ನೇರ ತಲೆಮಧ್ಯೆ ಬೈತಲೆ ತೆಗೆದು
ದಿಮ್ಮನೆ ಬಿಗಿದು ಎರಡು ಜಡೆ ಮಡಿಚಿಕಟ್ಟಿ
ಮೂರು ದಿನವಾದರೂ ಹಾಳಾಗದಂತೆ
ಹೆಣೆದ ಜಡೆ ಮೇಲೆ ರಿಬ್ಬನ್ನು
ಕಟ್ಟಿದ್ದ ನನ್ನ ಅಮ್ಮ
ನನಗೀಗಲೂ ನೆನೆಪಾಗುತ್ತಾಳೆ.
ಸುಖದ ಸಮಯದಲ್ಲಿ ನಮಗೆ
ಸಾವಿರಾರು ಬಂದುಗಳು ಮಗಳೇ
ದುಃಖದಲ್ಲಿ ಯಾರೂ ಬರುವುದಿಲ್ಲ
ಇದೇ ಈ ಜಗದ ನಿಯಮ
ತಿಳಿದುಕೋ ಮುದ್ದು ಮಗಳೇ
ನಿನ್ನ ಕಾಲ ಮೇಲೆ ನೀ ನಿಂತು
ಬದುಕುವುದ ಕಲಿತುಕೋ
ಹಂಗಿನ ಅನ್ನ ತಿನ್ನಬೇಡ ಮಗಳೇ
ಎಂದು ಬುದ್ಧಿ ಹೇಳುತ್ತಿದ್ದ ಅಮ್ಮ
ನನಗೀಗಲೂ ನೆನಪಗುತ್ತಾಳೆ.
ಅಮ್ಮ ಬದುಕಿದ್ದಾಳೆ ಇಲ್ಲಿಯೇ
ನನ್ನ ಪಡಸಾಲೆಯ ಮುಂದೆಯೇ
ಅಲ್ಲಿ ನನ್ನ ಮನೆ ಮುಂದಿನ ಛಪ್ಪರದಲಿ
ನಾನು ಬೆಳೆಸಿದ್ದೆ; ಅವರೇ, ಕುಂಬಳಕಾಯಿ
ಹೀರೇ, ಹಾಗಲಕಾಯಿ-ಹಸಿರನ ಮಧ್ಯೆ
ಅಮ್ಮನ ನೆರಳಿದೆ ನೋಡು
ಅಣ್ಣ-ಅತ್ತಿಗೆಯರಿಗೆ ಇದು ಕಾಣದಿರಬಹುದು
ನನ್ನ ಮನೆ ಮುಂದಿನ ಹಂದರದಲಿ
ಹಸಿರು ಜೀವ ಚೇತನ ಕಂಡಾಗ
ನನಗೆ ಅಮ್ಮ ನೆನಪಾಗುತ್ತಾಳೆ.
*****