ಕುರಿಯಮಾತು

ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ
ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ
ಅವಳ ಕಿಡಿ ನಮ್ಮೊಳಗೆ
ನಲಿಯುತಿದೆ ಒಳಗೊಳಗೆ.

ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ
ನರರೆಂಬ ಸೋದರರು- ಪ್ರೇಮ ತೊರೆದವರಂತೆ
ಬಲಿಯೀವರೆಮ್ಮನ್ನು
ಕೇಳುವವರಾರಿನ್ನು.

ಪರದೇಶಿ ಕುರಿಗಳಾವ್, ಎಮ್ಮ ನೆತ್ತರು ಮಾಂಸ
ಸವಿಯಂತೆ, ಬಯಸುವಳು-ಕೂಲಿಸುತ್ತ ಅವಳಂಶ
ಮಾತು ಬಾರದ ಜಂತು
ಪ್ರಾಣ ಕೊಡುತಿಹುದೆಂತು.

ಕರುಣದಿಂ ಕಣ್ಣೀರ- ಸುರಿಸುವಳ ದೂರುವರು
ಸಹೃದಯೆಯ ಕಲುಹೃದಯಳಂ ಮಾಡಿ ತೋರುವರು
ಎಮ್ಮ ಹೆಣ ತಿನ್ನುವರು
ರಕ್ತಮಂ ಕುಡಿಯುವರು.

ಚೋರ ಕರ್ಮಿಗಳಲ್ಲಿ- ಪ್ರಾಣಹಿಂಸಕರಲ್ಲ
ಹಸಿ ಹುಲ್ಲು ಎಲೆ ತರಗು- ಇದು ನರರ ಸ್ವತ್ತಲ್ಲ
ಸೊಪ್ಪುಸದೆ ದೇವಿಯದು
ಹರಿವ ಜಲ ತಾಯಿಯದು.

ಮತಿಯುಂಟು ಹಿತರುಂಟು- ಬಂಧು ಬಾಂಧವರುಂಟು
ಪರಮಾತ್ಮನರಿವುಂಟು-ಕಷ್ಟಸುಖದರಿವುಂಟು
ನಮಗಾರು ದಿಕ್ಕಿಲ್ಲ
ತಂದೆತಾಯಿಗಳಿಲ್ಲ.

ನಿಮ್ಮ ಕುಲ ಬಾಯ್ತುತ್ತು – ಮೂಕಜಂತುಗಳರರೆ
ತಾಯ್ಬೆಳಸಿ ಸಲಹಿರುವ- ಈ ದೇಹ ನಿಮಗೆ ಸೆರೆ
ನಾವಿರಲು ನಿಮಗಾಗಿ
ಕೂಲಲೇಕೆ ಮರೆಯಾಗಿ.

ಎಮ್ಮ ಮೈ ರೋಮಗಳು- ತೊಗಲು ಮಾಂಸವು ರಕ್ತ
ನಿಮಗೆರವು ಮಾಡಿದಳು- ಜನಕ ಇದುವೇ ಭುಕ್ತ
ಎಮ್ಮ ಕೊರಳನು ಕೊಯ್ವ
ಕಟುಕರಾದಿರಿ ಹೊಯ್ವ.

ಕುತ್ತಿಗೆಯ ಕೊಯ್ವಾಗ- ನಿಮಗಾಗಿ ಮರುಗುವೆವು
ಅತ್ತಲಾ ಹೈಮವತಿ- ಕರವಾಳ ಮಸೆಯುವಳು
ನಿಮ್ಮಸುವ ಸೆಳೆಯುವಳು
ಆಮೇಲೆ ಕುಣಿಯುವಳು.

ನರಕುರಿಯು ನೀವಂತ- ಕುರಿಜನ್ಮ ನಿಮಗಂತೆ
ನರರಾವು ಮುಂದಂತೆ- ನಿಮ್ಮನುಳಿಸುವೆವಂತೆ
ಇಂತಬ್ಬೆ ಹೇಳುವಳು
ಕಣ್ಣೀರ ಹರಿಸುವಳು.

ಹಿಡಿಕಾಳು ಬಯಸಿಲ್ಲ- ನಿಮ್ಮಿಂದ ಬದುಕಿಲ್ಲ
ಕೆಡಕುಗಳ ಮಾಡಿಲ್ಲ- ಬಲ್ಲಳಿದನವಳೆಲ್ಲ
ನಿಮಗಾಗಿ ಆ ರೂಪ
ತಾಳಿದಳು ಬಹು ಕೋಪ.

ನಮ್ಮಿಂದ ನಿಮ್ಮಿರವು-ನಿಮ್ಮಿಂದ ನಾವಲ್ಲ
ನಮ್ಮ ಮುಕ್ತಿಗೆ ಮಾತೆ-ಹೊಣೆಯಂತೆ ನೀವಲ್ಲ
ಕೋಪದಲಿ ಸಾಯದಿರಿ
ಪಾಪದೊಳು ಬೀಳದಿರಿ.

ನಮ್ಮ ಕೊಂದರೆ ವ್ಯಾಧಿ-ಮಾರಿ ರೂಪದಿ ಬಂದು
ನಿಮ್ಮ ತನು ಕುರಿಹೆಣವು-ಬಿದ್ದಂತೆ ನೆಲೆ ನಿಂದು
ಬಲಿಗೊಳ್ವುದರಿಯುವಿರಿ
ಸೆಳೆವುದನು ಕಾಣುವಿರಿ.

ತಾಯಿಯಂ ಪೂಜಿಸಿರಿ-ಫಲಪುಷ್ಪಚಯಗಳಿಂ
ಆ ವಿಮಲೆ ಕಾಯುವಳು-ನಲಿದೆಲ್ಲ ಕರಗಳಿಂ
ಕಾಯಬೇಹುದಹಿಂಸೆ
ಪಾಪವದುವೇ ಹಿಂಸ.

ಸಾವೆವೆಂಬಾ ದುಃಖ-ನಮಗಿಲ್ಲ ಲೋಕದಲಿ
ಕೊಲ್ಲದಿರಿ ಕುರಿಗಳಂ-ಸೋದರರೆ ಮೋಸದಲಿ
ನಿಮಗೆಮಗೆ ಹೈಮವತಿ
ತಾಯಹುದು ಗುಣವಂತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಪಡಿಯಚ್ಚು
Next post ಗುಂಡನ ದಿನಚರಿ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…